ಬುಧವಾರ, ನವೆಂಬರ್ 13, 2019
21 °C
ಗೆದ್ದರೂ ಸಚಿವರಾಗುವ ಅವಕಾಶ ಸಿಕ್ಕಿದ್ದು ಅಪರೂಪ

ಮಹಿಳೆಯರಿಗೆ ಇಲ್ಲಿ ಗೆಲುವು ದುಬಾರಿ

Published:
Updated:

ಕೋಲಾರ: ವಿಭಜನೆಗೆ ಮುಂಚಿನಿಂದಲೂ ಈ ಜಿಲ್ಲೆಯಲ್ಲಿ ಮಹಿಳೆಯರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದ್ದು ಕಡಿಮೆ. ಅಪರೂಪಕ್ಕೆ ಸಿಕ್ಕಿ ಗೆದ್ದವರಿಗೂ ಸಚಿವರಾಗುವ ಅವಕಾಶ ಸಿಕ್ಕಿದ್ದೂ ಅಪರೂಪ.  ಅಂಥವರ ಪೈಕಿ 1989ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದ ರೇಣುಕಾ ರಾಜೇಂದ್ರನ್ ಎಲ್ಲರಿಗಿಂತಲೂ ಅದೃಷ್ಟವಂತರಾಗಿದ್ದರು. ಏಕೆಂದರೆ ಅವರಿಗೆ ಸಚಿವರಾಗುವ ಅವಕಾಶವೂ ದೊರಕಿತ್ತು.ಉಳಿದಂತೆ 1999ರಲ್ಲಿ ಕಾಂಗ್ರೆಸ್‌ನಿಂದ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದ ಕೆ.ವಿ.ಅನಸೂಯಮ್ಮ ನಟರಾಜ್ ಮತ್ತು ಗೌರಿಬಿದನೂರು ಕ್ಷೇತ್ರದಲ್ಲಿ 1994ರಲ್ಲಿ ಜನತದಾಳದಿಂದ ಆಯ್ಕೆಯಾಗಿದ್ದ ಎನ್.ಜ್ಯೋತಿರೆಡ್ಡಿ ಅವರಿಗೆ ಹೆಚ್ಚಿನ ಅವಕಾಶಗಳು ದೊರಕಲಿಲ್ಲ. ಜ್ಯೋತಿರೆಡ್ಡಿ ಅವರಿಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷೆಯಾಗುವ ಅವಕಾಶವಿತ್ತಷ್ಟೇ. ಚಿಂತಾಮಣಿ ಮತ್ತು ಬಂಗಾರಪೇಟೆ ಕ್ಷೇತ್ರಗಳಲ್ಲಿ ಇದುವರೆಗೂ ಮಹಿಳೆಯರು ಸ್ಪರ್ಧಿಸಿರುವ ಉದಾಹರಣೆಗಳೇ ಇಲ್ಲ.2007ರ ಆ.23ರಂದು ಕೋಲಾರದಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾದ ಚಿಕ್ಕಬಳ್ಳಾಪುರಕ್ಕೆ ಸೇರಿದ ಐದು ಕ್ಷೇತ್ರಗಳಲ್ಲಿ 1983ರಿಂದ ಮಹಿಳೆಯರು ಚುನಾವಣೆ ಕಣಕ್ಕೆ ಇಳಿದಿದ್ದು 2004ರ ಚುನಾವಣೆವರೆಗೆ 22 ಮಂದಿ ಸ್ಪರ್ಧಿಸಿದ್ದಾರೆ.ಈಗಿನ ಕೋಲಾರ ಜಿಲ್ಲೆಗೆ ಸೇರಿದ ಕ್ಷೇತ್ರಗಳಲ್ಲಿ 1951ರಿಂದ ಇಲ್ಲೆವರೆಗೆ ನಡೆದಿರುವ 13 ವಿಧಾನಸಭೆ ಚುನಾವಣೆಗಳ ಪೈಕಿ ಯಾವೊಂದರಲ್ಲೂ ಮಹಿಳೆಯರಿಗೆ ಆಯ್ಕೆಯಾಗುವ ಅವಕಾಶ ಲಭ್ಯವಾಗಿಲ್ಲ.ಎಲ್ಲ ಕ್ಷೇತ್ರಗಳಲ್ಲೂ ಪುರುಷರದೇ ಪಾರುಪತ್ಯ ಮುಂದುವರಿದಿದೆ. ಕೆಲವೊಮ್ಮೆ ಸ್ಪರ್ಧಿಸಿದ ಮಹಿಳೆಯರು ಗೆಲುವು ಪಡೆಯಲೂ ಸಾಧ್ಯವಾಗದೆ 2, 3, 10ನೇ ಸ್ಥಾನ ಪಡೆದಿರುವ ನಿದರ್ಶನಗಳೂ ಜಿಲ್ಲೆಯಲ್ಲಿವೆ. ಮಹಿಳೆಯರನ್ನು ಅಭ್ಯರ್ಥಿಯನ್ನಾಗಿಸುವಲ್ಲಿ ಮತ್ತು ಅವರನ್ನು ಗೆಲ್ಲಿಸುವಲ್ಲಿ ಯಾವುದೇ ಪಕ್ಷವೂ ಮುತುವರ್ಜಿ ವಹಿಸದಿರುವುದು ಎದ್ದು ಕಾಣುವ ಸಂಗತಿ. ನಾಲ್ವರನ್ನು ಹೊರತುಪಡಿಸಿದರೆ, ಉಳಿದ ಮಹಿಳೆಯರೆಲ್ಲರೂ ಪಕ್ಷೇತರರಾಗಿಯೇ ಸ್ಪರ್ಧಿಸಿರುವುದು ಮತ್ತು ಅತಿ ಕಡಿಮೆ ಮತಗಳನ್ನು ಪಡೆದಿರುವುದು ಈ ಅಂಶವನ್ನು ಸಮರ್ಥಿಸುತ್ತದೆ.ಮಾಲೂರಿನಲ್ಲಿ ಇದುವರೆಗೆ ಒಬ್ಬ ಮಹಿಳೆ ಮಾತ್ರ  ಸ್ಪರ್ಧಿಸಿದ್ದರೆ ಕೋಲಾರ, ಕೆಜಿಎಫ್, ಮುಳಬಾಗಲು ಮತ್ತು ಶ್ರೀನಿವಾಸಪುರದಲ್ಲಿ ಕೆಲವು ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧಿಸಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ ಇದುವರೆಗೆ ಒಬ್ಬ ಮಹಿಳೆಯೂ ಸ್ಪರ್ಧಿಸಿಲ್ಲ. ಸ್ಪರ್ಧಿಗಳ ಪೈಕಿ ಇಬ್ಬರು ಮಹಿಳೆಯರು ಮಾತ್ರ ಎರಡನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.ವಿಶೇಷ ಎಂದರೆ, ಬೇತಮಂಗಲ ಕ್ಷೇತ್ರದಿಂದ 1983ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಕ್ಷ್ಮಮ್ಮ ನಾರಾಯಣರಾಜು ಕಾಂಗ್ರೆಸ್ ಅಭ್ಯರ್ಥಿ ಸಿ.ವೆಂಕಟೇಶಪ್ಪ ಅವರ ವಿರುದ್ಧ 20,152 ಮತ ಗಳಿಸಿ ಎರಡನೇ ಸ್ಥಾನದಲ್ಲಿ ನಿಂತರೆ, ಅವರ ಜೊತೆಗೆ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಪಿ.ನಾರಾಯಣಮ್ಮ 4525 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.ಮಾಲೂರು: 1978ರ ಚುನಾವಣೆಯಲ್ಲಿ ಮಾಲೂರಿನಿಂದ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ  ಲಕ್ಷ್ಮಿದೇವಿ ರಾಮಣ್ಣ ಎಂಬುವವರು ಅದುವರೆಗಿನ ಚುನಾವಣೆ ಇತಿಹಾಸದಲ್ಲಿ ಎರಡನೇ ಸ್ಥಾನ ಪಡೆದು ಗಮನ ಸೆಳೆದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ  ಪಿ.ಎನ್.ರೆಡ್ಡಿ ವಿರುದ್ಧ ತೀವ್ರ ಪೈಪೋಟಿ ನೀಡಿದ್ದ ಅವರು, 14866 ಮತಗಳನ್ನು ಪಡೆದಿದ್ದರು. ಒಟ್ಟಾರೆ ಮತಗಳ ಪ್ರಮಾಣದಲ್ಲಿ ಅವರು ಶೇ 28.51ರಷ್ಟು ಮತ ಗಳಿಸಿ ದಾಖಲೆ ನಿರ್ಮಿಸಿದ್ದರು.ಮುಳಬಾಗಲು: 1985ರಲ್ಲಿ ನಡೆದ ಚುನಾವಣೆಯಲ್ಲಿ ಮುಳಬಾಗಲಿನಿಂದ ಸ್ಪರ್ಧಿಸಿದ್ದ ಎಂ.ವಿ.ಪ್ರಮೀಳಮ್ಮ ಈ ದಾಖಲೆಯನ್ನು ಮುರಿದರು. ಸಿಪಿಎಂನಿದ್ದ ಸ್ಪರ್ಧಿಸಿ ಗೆದ್ದ ಆರ್.ವೆಂಕಟರಾಮಯ್ಯ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಮೀಳಮ್ಮ 20608 ಮತ ಪಡೆದಿದ್ದರು. ಒಟ್ಟಾರೆ ಮತಗಳ ಶೇ.30.41ರಷ್ಟು ಮತ ಪಡೆದಿದ್ದ ಅವರು, ಕಣದಲ್ಲಿದ್ದ 11 ಅಭ್ಯರ್ಥಿಗಳನ್ನು ಹಿಂದಿಕ್ಕಿ ಎರಡನೇ ಸ್ಥಾನ ಗಳಿಸಿದರು. ಅದೇ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಲ್ಲಮ್ಮ 156 ಮತ ಗಳಿಸಿ 9ನೇ ಸ್ಥಾನದಲ್ಲಿದ್ದರು.

2008ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 29 ಅಭ್ಯರ್ಥಿಗಳ ಪೈಕಿ ಏಕೈಕ ಮಹಿಳೆಯಾದ ಎಂ.ಜಿ.ಶಾಂತಕುಮಾರಿ ಪಕ್ಷೇತರರಾಗಿ ಸ್ಪರ್ಧಿಸಿ 349 ಮತ ಪಡೆದು 24ನೇ ಸ್ಥಾನ ಪಡೆದಿದ್ದಾರೆ.ಕೆಜಿಎಫ್: 1985ರ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಂ.ಚಂದ್ರಗಾಂಧಿಯವರೂ ಕೇವಲ 36 ಮತ ಪಡೆದು ಕೊನೆಯ 10ನೇ ಸ್ಥಾನದಲ್ಲಿ ನಿಂತಿದ್ದರು. 1994ರ ಚುನಾವಣೆಯಲ್ಲಿ ಬೇತಮಂಗಲ ಕ್ಷೇತ್ರದಿಂದ ಆರ್‌ಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ಜಯಲಕ್ಷ್ಮಿ 18 ಅಭ್ಯರ್ಥಿಗಳ ಪೈಕಿ 10ನೇ ಸ್ಥಾನ ಪಡೆದಿದ್ದರು. 1999ರ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ನಿರ್ಮಲಾ 446 ಮತ ಪಡೆದು 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2008ರ ಚುನಾವಣೆಯಲ್ಲಿ ಕೆಜಿಎಫ್‌ನಿಂದ ಸ್ಪರ್ಧಿಸಿದ್ದ 14 ಅಭ್ಯರ್ಥಿಗಳ ಪೈಕಿ ವಿ.ಕಲಾವತಿ 308 ಮತ ಪಡೆದು 9 ಸ್ಥಾನ ಗಳಿಸಿದ್ದರು.ಕೋಲಾರ:  1989ರ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮುನಿವೆಂಕಟಮ್ಮ 95 ಮತ ಪಡೆದು 15ನೇ ಸ್ಥಾನದಲ್ಲಿ ನಿಂತಿದ್ದರು. 1994ರ ಚುನಾವಣೆಯಲ್ಲಿ ವೇಮಗಲ್ ಕ್ಷೇತ್ರದಿಂದ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕಾಟಮ್ಮ 82 ಮತ ಪಡೆದು 9ನೇ ಸ್ಥಾನ ಗಳಿಸಿದ್ದರು. 1999ರಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದ ಅವರು  6ನೇ ಸ್ಥಾನ ಪಡೆದಿದ್ದರು. 2004ರಲ್ಲಿ ಕೋಲಾರ ಕ್ಷೇತ್ರದಲ್ಲಿ 2ನೇ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು 340 ಮತ ಪಡೆದು ಮತ್ತೆ 6ನೇ ಸ್ಥಾನದಲ್ಲೇ ಉಳಿದರು.ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿ ಮೊದಲ ಬಾರಿಗೆ 1999ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ನಾರಾಯಣಮ್ಮ 376 ಮತ ಗಳಿಸಿ ಐದನೇ ಸ್ಥಾನ ಪಡೆದಿದ್ದರು. 2004ರಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು 613 ಮತ ಪಡೆದು ನಾಲ್ಕನೇ ಸ್ಥಾನ ಪಡೆದಿದ್ದರು.ಈಗಿನ ಸನ್ನಿವೇಶ: ಜಿಲ್ಲೆಯಲ್ಲಿ ಈ ಬಾರಿ ಕೆಲವು ಮಹಿಳೆಯರು ಪ್ರಬಲ ಆಕಾಂಕ್ಷಿಗಳಾಗಿ ಹೊರಹೊಮ್ಮಿರುವುದು ವಿಶೇಷ. ಮುಳಬಾಗಲು ಮೀಸಲು ಕ್ಷೇತ್ರದಿಂದ ಜೆಡಿಎಸ್‌ನ ಮಂಗಮ್ಮ ಮುನಿಸ್ವಾಮಿ, ಕೆಜಿಎಫ್ ಕ್ಷೇತ್ರದಿಂದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಗಳು ರೂಪಕಲಾ, ಬಿಜೆಪಿಯಿಂದ ಮುತ್ಯಾಲಮ್ಮ ಆಕಾಂಕ್ಷಿಗಳಾಗಿದ್ದಾರೆ.

ಪ್ರತಿಕ್ರಿಯಿಸಿ (+)