ಬುಧವಾರ, ನವೆಂಬರ್ 20, 2019
25 °C
ಉತ್ತರ ಪ್ರದೇಶದಲ್ಲಿ ಮಗು ಕೊಲೆ- ಭುಗಿಲೆದ್ದ ಆಕ್ರೋಶ

ಮಹಿಳೆಯರಿಗೆ ಪೊಲೀಸ್ ಥಳಿತ

Published:
Updated:

ಲಖನೌ: ಆರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸೆಗಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ಪೊಲೀಸರು ನಿರ್ದಯವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಅಲೀಗಡ ನಗರದಲ್ಲಿ ಗುರುವಾರ ನಡೆದಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕಲ್ಲುತೂರಾಟ ನಡೆಯಿತು. ವಾಹನಗಳು ಜಖಂಗೊಂಡವು. ಆಗ ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.ಪ್ರತಿಭಟನಾ ನಿರತ ಮಹಿಳೆಯರು ಮತ್ತು ಮಕ್ಕಳ ಮೇಲೆ  ಪೊಲೀಸರು ಅಮಾನುಷವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ. ಮುಷ್ಠಿಯಿಂದ ಗುದ್ದಿ- ಒದ್ದಿದ್ದಾರೆ. ಪೊಲೀಸ್ ಉಪಅಧೀಕ್ಷಕರೊಬ್ಬರು ಮಹಿಳೆಗೆ ಲಾಠಿಯಿಂದ ಹೊಡೆದ ದೃಶ್ಯ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡಿದೆ. ಪೊಲೀಸರ ಈ ದೌರ್ಜನ್ಯವನ್ನು ವಿರೋಧ ಪಕ್ಷಗಳು ಕಟುವಾಗಿ ಖಂಡಿಸಿವೆ.ಪೊಲೀಸರ ನಡೆಸಿದ ದೌರ್ಜನ್ಯದ ಚಿತ್ರೀಕೃತ ದೃಶ್ಯಗಳ ಆಧಾರದ ಮೇಲೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಕ ಅರುಣ್ ಕುಮಾರ್ ಅವರು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ, ಡಿಎಸ್‌ಪಿ ಅವರನ್ನು ವರ್ಗಾವಣೆ ಮಾಡಿದ್ದಾರೆ. ಘಟನೆ ಬಗ್ಗೆ ವಿಚಾರಣೆಗೆ ಆದೇಶಿಸಲಾಗಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಶವವನ್ನು ಅಲೀಗಡ ನಗರದಲ್ಲಿ ಮುಚ್ಚಿಡಲಾಗಿತ್ತು. ಶವ ಪತ್ತೆಯಾದ ಬಳಿಕ ರೊಚ್ಚಿಗೆದ್ದ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು ಆಗ ಈ ದೌರ್ಜನ್ಯ ನಡೆದಿದೆ.ಮಗುವಿನ ಪೋಷಕರು ಅಲಿಗಡದ ಹೊರಭಾಗದಲ್ಲಿರುವ ಬನ್ನಾದೇವಿ ಪ್ರದೇಶದ ನಿವಾಸಿಗಳು. ಮಗು ರಾತ್ರಿ ಪೋಷಕರೊಂದಿಗೆ ನಿದ್ರಿಸುತ್ತಿತ್ತು. ಬೆಳಿಗ್ಗೆಯ ಹೊತ್ತಿಗೆ ನಾಪತ್ತೆಯಾಗಿತ್ತು. ನಂತರ ಮಗುವಿನ ಶವವು ಪತ್ತೆಯಾಯಿತು. ಮಗುವಿನ ಮೇಲೆ ಅತ್ಯಾಚಾರ ಎಸೆಗಿ ಕೊಲೆ ಮಾಡಲಾಗಿದೆ ಎಂದು ಮಗುವಿನ ಪೋಷಕರು ಮತ್ತು ಕುಟುಂಬದವರು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)