ಗುರುವಾರ , ಜೂನ್ 24, 2021
23 °C

ಮಹಿಳೆಯರಿಗೆ ರಕ್ಷಣೆ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಮಹಿಳೆಯರು ಮನೆಯಲ್ಲಿ ಒಂಟಿಯಾಗಿರಲು ಭಯ ಪಡುವ ಸ್ಥಿತಿ ಉಂಟಾಗಿದೆ. ಬೆಂಗಳೂರು ಪೂರ್ವ ವಿಭಾಗದಲ್ಲೇ ಕಳೆದ ಒಂದು ವಾರದಲ್ಲಿ ನಾಲ್ಕು ಕೊಲೆ ಪ್ರಕರಣಗಳು ನಡೆದಿವೆ. ಅದರಲ್ಲೂ ಎರಡು ಕೊಲೆಗಳು ಅತ್ಯಂತ ಹೆಚ್ಚು ರಕ್ಷಣೆ ಹೊಂದಿ­ರುವ ವಸತಿ ಪ್ರದೇಶಗಳಲ್ಲಿ ನಡೆದಿರುವುದು ನಗರದಲ್ಲಿ ಕೊಲೆಗಡುಕರಿಗೆ ಕಾನೂನಿನ ಭಯವಿಲ್ಲ ಎನ್ನುವುದನ್ನು ಸೂಚಿಸುವಂತಿದೆ.ಸೋಮವಾರ ಸಿ.ವಿ.ರಾಮನ್‌ ನಗರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಸತಿ ಸಮುಚ್ಚಯದಲ್ಲಿ ವಿಜ್ಞಾನಿಯೊಬ್ಬರ ಪತ್ನಿಯನ್ನು ದುಷ್ಕರ್ಮಿಯೊಬ್ಬ ಮನೆಯಲ್ಲಿ ಹಾಡಹಗಲೇ  ಕತ್ತು ಕೊಯ್ದು  ಕೊಂದಿ­ದ್ದಾನೆ. ಈ ಮಹಿಳೆಯಿಂದ ಆರೋಪಿ, ಹಣ ವಸೂಲಿ ಮಾಡುತ್ತಿದ್ದನೆಂದೂ, ಹಣ ಕೊಡದಿದ್ದುದಕ್ಕಾಗಿ ಯೋಜಿತ ರೀತಿಯಲ್ಲಿ ಕೊಲೆ ಮಾಡಿರುವು­ದಾಗಿಯೂ  ಪೊಲೀಸರು ತಿಳಿಸಿದ್ದಾರೆ.ಇದಕ್ಕೂ ಮುನ್ನ ಮಾರ್ಚ್‌ 4ರಂದು  ಎಲೆ­ಕ್ಟ್ರಾನಿಕ್ಸ್ ಮತ್ತು ರಾಡಾರ್‌ ಅಭಿವೃದ್ಧಿ ಸಂಸ್ಥೆಯ (ಎಲ್‌ಆರ್‌ಡಿಇ) ನಿವೃತ್ತ ವಿಜ್ಞಾನಿ ಪಟ್ಟಾಭಿರಾಮನ್‌ ನಾಯ್ಡು ಮತ್ತು ಅವರ ಪತ್ನಿ ಇಂದಿರಾ ಅವ­ರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದಾರೆ.  ಅದರ ಮರುದಿನವೇ ಕೆ.ಆರ್‌.ಪುರ ಬಳಿಯಲ್ಲಿ ಬಿಜೆಪಿಯ ಮಹಾನಗರ ಪಾಲಿಕೆ ಸದಸ್ಯೆ ಆರ್‌.ಮಂಜುಳಾದೇವಿ ಅವರ ಪತಿ ಶ್ರೀನಿವಾಸ್‌ ಎಂಬು­ವರನ್ನು ಹಗಲಿ­ನಲ್ಲೇ  ಕ್ಷೌರದ ಅಂಗಡಿಯಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಯಿತು.ಬೆಂಗಳೂರು ಕಾನೂನು ಸುವ್ಯವಸ್ಥೆಯನ್ನು ಹೊಂದಿರುವ ಸುರಕ್ಷಿತ ನಗರ ಎಂಬ ನಂಬಿಕೆಯನ್ನು ಈ ಸರಣಿ ಕೊಲೆಗಳು ಹುಸಿ ಮಾಡುವಂತಿವೆ. ಮಹಾನಗರದಲ್ಲಿ ಮಹಿಳೆಯರ ಪ್ರಾಣಗಳು ಸುರಕ್ಷಿತವಲ್ಲ ಎನ್ನುವ ಅಭಿಪ್ರಾಯವನ್ನು ಈ ಪ್ರಕರಣಗಳು ಮೂಡಿಸಿವೆ. ಎರಡು ಪ್ರಕರಣಗಳಲ್ಲಿ ಪೊಲೀಸರು ಚುರುಕಿನಿಂದ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹವೇ. ಆದರೆ ಈ ರೀತಿ ಕೊಲೆಗಳು ಹಾಡ­ಹಗಲೇ ನಡೆಯುವುದು ಏನನ್ನು ಸೂಚಿಸುತ್ತದೆ? ಅದರಲ್ಲೂ ಅತ್ಯಧಿಕ ಭದ್ರತೆ ಇರುವ ವಸತಿ ಸಮುಚ್ಚಯಗಳಲ್ಲಿ ನಡೆದಿರುವ ಕೊಲೆಗಳು, ನಗರದ ಭದ್ರತಾ ವ್ಯವಸ್ಥೆಯಲ್ಲಿ  ಲೋಪಗಳಿವೆ ಎನ್ನುವುದು ಸ್ಪಷ್ಟಪಡಿಸಿವೆ. ಪ್ರತಿದಿನ ವಿವಿಧೆಡೆಗಳಿಂದ ಸಾವಿರಾರು ಜನರು ಬೆಂಗಳೂರಿಗೆ ವಲಸೆ ಬರು­ತ್ತಾರೆ. ಅತ್ಯಧಿಕ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ದುಡಿಯುವಂತಹ ಔದ್ಯೋ­ಗಿಕ ವಾತಾವರಣವೂ ಇಲ್ಲಿದೆ.ಮಹಿಳೆಯರ ಸುರಕ್ಷೆಗೆ ಇನ್ನಷ್ಟು ಪರಿಣಾಮ­ಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎನ್ನುವುದನ್ನು ಈ ಘಟನೆಗಳು ಬಿಂಬಿಸಿವೆ. ಪೊಲೀಸ್‌ ವ್ಯವಸ್ಥೆಯ ಬಗ್ಗೆ ಕ್ರಿಮಿನಲ್‌ಗಳಲ್ಲಿ ಸ್ವಲ್ಪವೂ ಭಯವಿಲ್ಲದ ವಾತಾವರಣ ಸೃಷ್ಟಿಯಾಗುವುದು ಅಪಾಯದ ಮುನ್ಸೂಚನೆ. ಡಿಆರ್‌ಡಿಒ ವಸತಿ ಸಮುಚ್ಚಯದ ಪ್ರಕರಣದಲ್ಲಿ ಕೊಲೆಯಾದ ಮಹಿಳೆಯ ಪರಿಚಿತನೇ ಹಣಕ್ಕಾಗಿ ಪೀಡಿಸಿ ಕೊಲೆ ಎಸಗಿರುವ ಹಿನ್ನೆಲೆಯಲ್ಲಿ, ಒಂಟಿ ಮಹಿಳೆಯರೂ ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ಇಂತಹ ಪ್ರಕರಣ­ಗಳಿದ್ದಲ್ಲಿ ಒಂಟಿ ಮಹಿಳೆಯರು ಆರಂಭದಲ್ಲೇ ಮನೆಯವರಿಗೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸರೂ ಸಾರ್ವಜನಿಕರಿಗೆ ಸೂಕ್ತ ತಿಳಿವಳಿಕೆಯನ್ನು ನೀಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.