ಮಹಿಳೆಯರು ಎಷ್ಟು ಸುರಕ್ಷಿತ?

7

ಮಹಿಳೆಯರು ಎಷ್ಟು ಸುರಕ್ಷಿತ?

Published:
Updated:
ಮಹಿಳೆಯರು ಎಷ್ಟು ಸುರಕ್ಷಿತ?

ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಈ ಪೈಶಾಚಿಕ ಕೃತ್ಯಕ್ಕೆ  ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಹಲವಾರು ಗಂಭೀರ ವಿಷಯಗಳ ಮೇಲೆ ಬೆಳಕು ಚೆಲ್ಲಿವೆ. ನಮ್ಮ ವ್ಯವಸ್ಥೆ, ಭದ್ರತೆ, ಕಾನೂನು ಪಾಲನೆಯಲ್ಲಿನ ಲೋಪದೋಷಗಳು ಬೆತ್ತಲಾಗಿವೆ. ಮೌಲ್ಯಗಳು ಹಾಗೂ ಸಂವೇದನಾಶೀಲತೆಯನ್ನು ಪ್ರಶ್ನಿಸುವಂತಾಗಿದೆ.ಈ ಪ್ರಕರಣದಿಂದ, ರಾಜಧಾನಿ ದೆಹಲಿ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮಲ್ಲಿ ಆಪತ್ತಿನಿಂದ ಪಾರು ಮಾಡುವ ಸೌಲಭ್ಯ ಇಲ್ಲ; ಆಡಳಿತದ ಪ್ರತಿಕ್ರಿಯೆ; ಪೊಲೀಸರ ದುರಹಂಕಾರ, ಪ್ರಜಾಪ್ರಭುತ್ವದಲ್ಲಿನ ವಸಾಹತುಶಾಹಿ ಧೋರಣೆ; ನ್ಯಾಯದಾನ ಹಾಗೂ ತನಿಖೆಯಲ್ಲಿ ಪಾರದರ್ಶಕತೆಯ ಕೊರತೆ; ಅಧಿಕಾರದ ದುರುಪಯೋಗ, ಘನತೆಯನ್ನು ಕಡೆಗಣಿಸುವುದು; ಮಾಧ್ಯಮಗಳ ವೈಫಲ್ಯ, ವಿಶ್ವಾಸವೃದ್ಧಿ ಕ್ರಮಗಳಲ್ಲಿ ಅಂತರ ... ಹೀಗೆ  ವ್ಯವಸ್ಥೆಯ ಲೋಪ ದೋಷಗಳ ಪಟ್ಟಿ ಬಹುದೀರ್ಘವಾಗಿ ಮುಂದುವರಿಯುತ್ತದೆ.ವಾಸ್ತವಿಕ ಅಂಕಿ ಅಂಶಗಳು ಪವಿತ್ರವಾದದ್ದು. ರಾಜಧಾನಿಯಲ್ಲಿ ಆಕ್ರೋಶದ ಕೂಗು ಮುಗಿಲು ಮುಟ್ಟಿದೆ. ಇಂಥ ಸಂದರ್ಭದಲ್ಲಿ  ಸಾರ್ವಜನಿಕರಿಗೆ ನಿಜಾಂಶವನ್ನು ಮನವರಿಕೆ ಮಾಡಿಕೊಡುವುದು ಸರ್ಕಾರದ ಹೊಣೆಗಾರಿಕೆ. ಈಗಾಗಲೇ ಜಾರಿಯಲ್ಲಿರುವ ನೀತಿ-ನಿಯಮಗಳು, ಅನುಷ್ಠಾನಕ್ಕೆ ತರುತ್ತಿರುವ ಕಾಯ್ದೆಗಳು ಹಾಗೂ ಹೊಸದಾಗಿ ರಚನೆಯಾಗುತ್ತಿರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಬೇಕಾಗಿರುವುದು ಸರ್ಕಾರ ಹೊಣೆಗಾರಿಕೆಯಾಗಿದೆ.ಹಿಂಸೆ ಹಾಗೂ ಮೌನ ಇವೆರಡೂ ಅನ್ಯಾಯವನ್ನು ಕೆರಳಿಸುವಂತಹವು. ದೆಹಲಿಯ ಘಟನೆಯನ್ನೇ ತೆಗೆದುಕೊಳ್ಳೋಣ. ಇದು ಸಾಧ್ಯವಾಗಿದ್ದಾದರೂ ಹೇಗೆ ಎಂದು ಜನರು ಕೇಳುತ್ತಿಲ್ಲ. ವಿವಿಧ ಕಡೆ ಇಂಥ ನೀಚ ಕೃತ್ಯಗಳು ಮರುಕಳಿಸುತ್ತಿರುವುದು ಯಾಕೆ? ದಿನೇ ದಿನೇ ಹೆಚ್ಚುತ್ತಿರುವ ಈ ಅಪರಾಧಕ್ಕೆ ಈಗ ನೀಡುತ್ತಿರುವ ಶಿಕ್ಷೆ ಸಾಕೇ? ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಬೇರೆ ಮಾರ್ಗೋಪಾಯಗಳನ್ನು ನಾವು ಮರೆತುಬಿಟ್ಟಿದ್ದೀವಾ?-ಹೀಗೆ ಸಾರ್ವಜನಿಕರು ಕೇಳುವ ಪ್ರಶ್ನೆಗಳ ಪಟ್ಟಿ ಉದ್ದವಾಗಿದೆ.ಅಪರಾಧ ಮತ್ತು ಅದಕ್ಕೆ ನೀಡುವ ಶಿಕ್ಷೆಯ ಮಧ್ಯೆ ಒಂದು ನಿರ್ಣಾಯಕ ಅಂಶ ಅಡಕವಾಗಿದೆ. ಅದು ನ್ಯಾಯದಾನ. ನಮ್ಮ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಶಿಕ್ಷೆಯ ಪ್ರಮಾಣ  ಶೇ 26ರಷ್ಟು ಮಾತ್ರ . ಕಳಂಕದ ಭಯ, ಪುರಾವೆಗಳನ್ನು ನೀಡುವಾಗ ಅನುಭವಿಸುವ ಮಾನಸಿಕ ಯಾತನೆ- ಇವೇ ಮುಂತಾದ ಕಾರಣಗಳಿಗೆ ಹೆಚ್ಚಿನ ಪ್ರಕರಣಗಳು ದಾಖಲಾಗುವುದೇ ಇಲ್ಲ. ಹಾಗಾಗಿ ಅತ್ಯಾಚಾರಕ್ಕೊಳಗಾದ ಶೇ 75ರಷ್ಟು ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ. ಅಂತಹ ಹೆಣ್ಣುಮಕ್ಕಳು ಹಾಗೂ ಕುಟುಂಬ ವರ್ಗದವರಿಗೆ ಯಾತನೆಯಲ್ಲಿ ದಿನ ದೂಡುವುದು ಅನಿವಾರ್ಯವಾಗುತ್ತದೆ. ಆದರೆ ಅತ್ಯಾಚಾರಿ, ಮತ್ತೊಂದು ಅಪರಾಧಕ್ಕೆ ಸಿದ್ಧನಾಗಿ ಸಮಾಜದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿರುತ್ತಾನೆ.ಅತ್ಯಾಚಾರ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗೆ ವೈದ್ಯಕೀಯ ವರದಿಗಳು ಬಹು ಮುಖ್ಯ. ಆದರೆ, ಅತ್ಯಾಚಾರಕ್ಕೆ ಒಳಗಾದ ಮಹಿಳೆಯಿಂದ  ವೈದ್ಯಕೀಯ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಏಕರೂಪದ ವಿಧಾನವೇ ನಮ್ಮಲ್ಲಿ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲುಎಚ್‌ಒ) ಅಂಕಿ ಅಂಶವನ್ನು ಆಧರಿಸಿ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ (ಯುಎನ್‌ಎಚ್‌ಸಿಆರ್)ಯು ಸಿದ್ಧಪಡಿಸಿರುವ ಇತ್ತೀಚಿನ ವರದಿ ಈ ಕುರಿತು ಬೆಳಕು ಚೆಲ್ಲುತ್ತದೆ. ವರದಿ ಹೇಳುವ ಪ್ರಕಾರ  ಮೂರನೇ ಒಂದರಷ್ಟು ಮಹಿಳೆಯರಲ್ಲಿ ಮಾತ್ರ ಎದ್ದು ಕಾಣುವ ಗಾಯದ ಗುರುತು ಕಾಣಿಸುತ್ತದೆ. ಹೀಗಿದ್ದೂ, ಈಗಲೂ ನಮ್ಮಲ್ಲಿ ವೈದ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರು ರೂಢಿಗತ ಮಾದರಿಗೆ ಕಟ್ಟು ಬೀಳುತ್ತಾರೆ. ವೈದ್ಯಕೀಯ ಹಾಗೂ ವಿಧಿವಿಜ್ಞಾನ ಪುರಾವೆಗಳು ಸಾಕಷ್ಟಿದ್ದರೂ, ಆರೋಪಿ ಪರ ವಕೀಲರ `ಸ್ಥಾನಮಾನ' ಹಾಗೂ ಶುಲ್ಕವನ್ನು ಆಧರಿಸಿ ನ್ಯಾಯ ಸಿಗುವ ಸಂದರ್ಭಗಳೇ ಹೆಚ್ಚು.`ಪ್ರಚೋದನಕಾರಿ ಉಡುಪು ಅತ್ಯಾಚಾರಕ್ಕೆ ಆಹ್ವಾನ ನೀಡುತ್ತದೆ' ಎಂದು ಹೆಣ್ಣುಮಕ್ಕಳನ್ನು ದೂಷಿಸಲಾಗುತ್ತದೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಕೂಡ ಕಳೆದ ಜನವರಿಯಲ್ಲಿ ಇಂಥದ್ದೇ ಹೇಳಿಕೆ ನೀಡಿದ್ದರು. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಮಹಿಳೆಯರು ಪುರುಷರಿಗೆ ಸರಿಸಮಾನರು. ಸ್ವಿಟ್ಜರ್ಲೆಂಡ್‌ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಗುವುದಕ್ಕಿಂತ ಮುಂಚೆಯೇ ಮಹಿಳಾ ಪ್ರಧಾನಿಯನ್ನು ಕಂಡ ದೇಶ ನಮ್ಮದು. ಪುರುಷರಂತೆಯೇ ಮಹಿಳೆಯರಿಗೂ ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಹಾಗೂ ಹೊಣೆಗಾರಿಕೆ. ಇದು ನಮ್ಮ ಗೌರವದ ಪ್ರಶ್ನೆಯೂ ಹೌದು. ಆದರೆ ಪಿತೃಪ್ರಧಾನ ವ್ಯವಸ್ಥೆಯು ಮಹಿಳಾ ಸಮಾನತೆಯನ್ನು ಒಪ್ಪಿಕೊಳ್ಳುವುದಿಲ್ಲ. ಮಹಿಳೆ ವಿರುದ್ಧದ ಲೈಂಗಿಕ ಹಿಂಸಾಚಾರದ ಮೂಲವೂ ಇದೇ. ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೊಡುವ ಕೆಲವು ಸಲಹೆಗಳು ಹೇಗಿರುತ್ತವೆ ಎಂದರೆ, ಅವು ಮಹಿಳೆಯರಿಗೆ ರಕ್ಷಣೆ ಕೊಡುವ ಬದಲು ಅವರ ಸ್ವಾತಂತ್ರ್ಯವನ್ನು ನಿಗ್ರಹಿಸುತ್ತವೆ. ಗುಡಗಾಂವ್‌ನಲ್ಲಿ ಸರಣಿ ಅತ್ಯಾಚಾರಗಳು ವರದಿಯಾದಾಗ, ದುಡಿಯುವ ಮಹಿಳೆಯರು ರಾತ್ರಿ ಎಂಟು ಗಂಟೆ ಬಳಿಕ ಮನೆಯಲ್ಲಿಯೇ ಇರಬೇಕು ಎಂದು ಸಲಹೆ ನೀಡಲಾಯಿತು. ` ಬೆರಳೆಣಿಕೆಯಷ್ಟು ಪ್ರಯಾಣಿಕರು ಇರುವ ಬಸ್ ಹತ್ತ ಬೇಡಿ, ರಾತ್ರಿ ವೇಳೆ ಹೊರಗೆ ಹೋಗಬೇಡಿ' ಎಂಬುದು ಆಂಧ್ರ ಸಾರಿಗೆ ಸಚಿವರು ಮಹಿಳೆಯರಿಗೆ ನೀಡಿರುವ ಕಿವಿ ಮಾತು .`1953ರಿಂದ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಕೊಲೆ ಹಾಗೂ ಇತರ ಅಪರಾಧ ಕೃತ್ಯಗಳನ್ನೂ ಮೀರಿಸಿದ್ದು, ಶೇ 873ರಷ್ಟು ಹೆಚ್ಚಾಗಿವೆ' ಎಂದು  ಪೊಲೀಸ್ ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದ ಅಂಕಿ ಅಂಶ ಹೇಳುತ್ತದೆ. ಲೈಂಗಿಕ ದೌರ್ಜನ್ಯ, ಪತಿಯ ಅಥವಾ ಆತನ ಸಂಬಂಧಿಗಳ ಕಿರುಕುಳ, ಅಪಹರಣ, ಮಾರಾಟ ಸೇರಿದಂತೆ 2011ರಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧ ಪ್ರಕರಣಗಳ ಸಂಖ್ಯೆ 2,61,000ಕ್ಕೂ ಹೆಚ್ಚು. ಇಂಥ ಘೋರ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತನಿಖೆಗೆ ಒಳಪಡಿಸದಿರುವುದು  ಹಾಗೂ ದೌರ್ಜನ್ಯ ತಡೆಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಸ್ವತಂತ್ರ ಭಾರತದಲ್ಲಿ ದಶಕಗಳಿಂದಲೂ ಚರ್ಚೆಯ ವಿಷಯವಾಗಿದೆ.ಲೈಂಗಿಕ ದೌರ್ಜನ್ಯ ತುಂಬಾ ಸಂಕೀರ್ಣವಾದ ಅಪರಾಧ. ಮನೆ, ಶಾಲೆ, ಪೊಲೀಸ್ ಠಾಣೆ, ಹಳ್ಳಿ, ನಗರ...ಹೀಗೆ ಎಲ್ಲಿ ಬೇಕಾದರೂ ಈ ಕೃತ್ಯ ನಡೆಯುತ್ತದೆ. ಸಂಬಂಧಿಕರು, ಅಪ್ಪ, ಅಜ್ಜ, ಚಿಕ್ಕಪ್ಪ, ಸ್ನೇಹಿತ, ಶಿಕ್ಷಕ, ನಂಬಿದ ಚಾಲಕನಿಂದಲೂ ಅತ್ಯಾಚಾರ ನಡೆಯಬಹುದು. ಎರಡು ಅಥವಾ ಮೂರು ವರ್ಷದ ಕಂದಮ್ಮನಿಂದ ಹಿಡಿದು 70 ವರ್ಷದ ವಯೋವೃದ್ಧೆ ಕೂಡ ಈ ದುಷ್ಕೃತ್ಯಕ್ಕೆ ಬಲಿಯಾಗುತ್ತಾಳೆ. ಪರಿಸ್ಥಿತಿ ಹೀಗಿರುವಾಗ ಮಹಿಳೆಯರಿಗೆ ಸುರಕ್ಷಿತ ಭಾವನೆ ಬರುವುದಾದರೂ ಹೇಗೆ?ಸಮಾಜದಲ್ಲಿ, ಅದರಲ್ಲಿಯೂ ಮಹಿಳೆಯರ ಕಾರ್ಯ ನಿರ್ವಹಣೆಯಲ್ಲಿ ಆದ ಬದಲಾವಣೆಯಿಂದ ಇಂಥ ದುಷ್ಕೃತ್ಯಗಳು ಹೆಚ್ಚಾಗುತ್ತಿವೆ ಎನ್ನುತ್ತಾರೆ ಸಮಾಜ ಶಾಸ್ತ್ರಜ್ಞರು. ನಮ್ಮ ದೇಶದಲ್ಲಿ ಶಿಕ್ಷಿತರು ಹಾಗೂ ಪ್ರತಿಷ್ಠಿತರಲ್ಲಿಯೂ ಹೆಣ್ಣುಮಕ್ಕಳ ಬಗ್ಗೆ ಅಸಡ್ಡೆ ಮನೆ ಮಾಡಿದೆ.  ಎಷ್ಟೋ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಭಾರತೀಯ ಪುರಾಣ ಹಾಗೂ ಇತಿಹಾಸದಲ್ಲಿ ಪುರುಷರಿಗೆ ಸರಿಸಾಟಿಯಾದ ಪ್ರಭಾವಿ ಮಹಿಳೆಯರ ಉಲ್ಲೇಖವಿದೆ. ಯುದ್ಧ ಮಾಡಿದವರು, ಕುಟುಂಬಗಳನ್ನು ಕಟ್ಟಿದವರು...ಹೀಗೆ ಅದೆಷ್ಟೋ ಧೀರ ವನಿತೆಯರು ಹುಟ್ಟಿದ ನೆಲ ನಮ್ಮದು. ಆದರೆ ಇಂದು ಏನಾಗಿದೆ? ಮಹಿಳೆ ಅಧಿಕಾರ ವಂಚಿತಳಾಗಿದ್ದಾಳೆ. ಲಿಂಗ ತಾರತಮ್ಯಕ್ಕೆ ಒಳಗಾಗಿದ್ದಾಳೆ.ಹಾಗಾದರೆ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ ತಡೆಗೆ ಪರಿಹಾರ ಹುಡುಕುವುದಾದರೂ ಹೇಗೆ? ಸಾಮೂಹಿಕ ಪ್ರಜ್ಞೆ ಜಾಗೃತಗೊಳಿಸುವ ಕೆಲಸ ಆಗಬೇಕು. ಮಹಿಳೆಯರನ್ನು ಕೀಳಾಗಿ ನೋಡುವ ಮನೋಭಾವ ಹೋಗಬೇಕು.

(ಲೇಖಕರು ನಿವೃತ್ತ ಐಪಿಎಸ್ ಅಧಿಕಾರಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry