ಭಾನುವಾರ, ಜೂನ್ 13, 2021
20 °C

ಮಹಿಳೆಯರು ರಾಜಕೀಯವಾಗಿ ಸಬಲರಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಹಿಳೆಯರು ರಾಜಕೀಯವಾಗಿ ಸಬಲರಾಗದ ಹೊರತು ಸಾಮಾಜಿಕ, ಆರ್ಥಿಕ ಮತ್ತು ಲೈಂಗಿಕ ಶೋಷಣೆಗಳಿಂದ ಮುಕ್ತರಾಗಲು ಸಾಧ್ಯವಿಲ್ಲ. ಎಲ್ಲ ಮಹಿಳಾ ಸಂಘಟನೆಗಳು ಈ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು~ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸಲಹೆ ನೀಡಿದರು.ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ದುಡಿಯುವ ಮಹಿಳೆ: ಸಮಕಾಲೀನ ತಲ್ಲಣಗಳು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಜಿಲ್ಲಾ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ದೊರೆಯುವಂತೆ ಸಂಸತ್‌ನಲ್ಲಿಯೂ ಇದಕ್ಕೆ ಸೂಕ್ತ ಅವಕಾಶ ನೀಡಬೇಕು. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಸೈದ್ದಾಂತಿಕ ಹೋರಾಟದೊಂದಿಗೆ ಕಾನೂನುರೀತ್ಯ ಚಳವಳಿ ನಡೆಸಬೇಕು~ ಎಂದರು.`ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ~ ಕುರಿತು ವಿಚಾರ ಮಂಡಿಸಿದ ವಕೀಲೆ ಹೇಮಲತಾ ಮಹಿಷಿ, `ಸಾಮಾಜಿಕ ಸಮಸ್ಯೆಗಳಿಗೆ ಒತ್ತು ನೀಡುವಂತೆ ದುಡಿಯುವ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿವಿಧ ಆಯಾಮಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸುವ ಅಗತ್ಯವಿದೆ~ ಎಂದು ಹೇಳಿದರು.`ಸುಪ್ರೀಂಕೋರ್ಟ್ ನೀಡಿರುವ ಮಾರ್ಗದರ್ಶಿ ಸೂತ್ರದ ಪ್ರಕಾರ ದುಡಿಯುವ ಮಹಿಳೆಯರ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ಪ್ರತಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ದೂರು ಸಲಹಾ ಸಮಿತಿಯನ್ನು ರಚಿಸಬೇಕು. ಇದರಲ್ಲಿ ಬಹುಪಾಲು ಮಹಿಳೆಯರೇ ಇರಬೇಕೆಂಬ ನಿಯಮವಿದೆ. ಆದರೆ ಅದನ್ನು ಹಲವು ಕಂಪೆನಿಗಳು ಪಾಲಿಸುತ್ತಿಲ್ಲ~ ಎಂದರು.`ಮಹಿಳೆಯರು ಭಾವಜೀವಿಗಳು ಎಂಬ ನಿಲುವನ್ನು ಬದಲಾಯಿಸುವ ಅಗತ್ಯವಿದೆ. ಸಂದರ್ಭ ಮತ್ತು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವ ಚಾಕಚಕ್ಯತೆಯನ್ನು ಅಳವಡಿಸಿಕೊಂಡಾಗ ಮಾತ್ರ ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯವಿದೆ~ ಎಂದರು.`ಆರ್ಥಿಕ ಸ್ವಾತಂತ್ರ್ಯ ಮಾತ್ರ ಮಹಿಳೆಯರನ್ನು ಎಲ್ಲ ಸಮಸ್ಯೆಗಳಿಂದ ಬಿಡುಗಡೆ ಮಾಡಲು ಸಾಧ್ಯವಿದೆ. ಕಚೇರಿಗಳಲ್ಲಿ ನಡೆಯುವ ಲೈಂಗಿಕ ಕಿರುಕುಳಕ್ಕೆ ಮಹಿಳೆಯರು ಯಾವುದೇ ಕಾರಣಕ್ಕೂ ಅಂಜದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು~ ಎಂದು ಮನವಿ ಮಾಡಿದರು.ಸಮಿತಿಯ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷ ವಿ.ಜೆ.ಕೆ.ನಾಯರ್ ಇತರರು ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.