ಮಹಿಳೆಯರ ಮಳಿಗೆ

7

ಮಹಿಳೆಯರ ಮಳಿಗೆ

Published:
Updated:
ಮಹಿಳೆಯರ ಮಳಿಗೆ

ಏರೋ ಇಂಡಿಯಾ 2013ರಲ್ಲಿ ವೈಮಾನಿಕ ಪ್ರದರ್ಶನದಷ್ಟೇ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಮತ್ತೊಂದು ಕೇಂದ್ರ ಎಚ್‌ಎಎಲ್ ಫ್ಯಾಮಿಲಿ ವೆಲ್‌ಫೇರ್ ಸಂಘಟನೆಯ ಮಳಿಗೆ.ಎಚ್‌ಎಎಲ್ ಅಧಿಕಾರಿಗಳ ಪತ್ನಿಯರೇ ಸೇರಿಕೊಂಡು ನಡೆಸುತ್ತಿರುವ ಸಂಘಟನೆಯಿದು. `ಎಚ್' ಮಳಿಗೆಯಲ್ಲಿ 25ಕ್ಕೂ ಅಧಿಕ ಬಗೆಬಗೆಯ ಪ್ಲಾಸ್ಟಿಕ್ ಹಾಗೂ ಲೋಹದ ವಿಮಾನಗಳು, ಟೋಪಿ ಹಾಗೂ ಟಿ-ಶರ್ಟ್‌ಗಳು ಇವೆ. ಪ್ರದರ್ಶನಕ್ಕೆ ಭೇಟಿ ನೀಡಿದವರು ಮುಗಿಬಿದ್ದು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಮೀರಜ್, ಮಿಗ್, ಜಾಗ್ವರ್, ಸಾರಂಗ್ ಸೇರಿದಂತೆ ಯುದ್ಧ, ನಾಗರಿಕ ವಿಮಾನಗಳು, ಹೆಲಿಕಾಪ್ಟರ್‌ಗಳು ಇತ್ಯಾದಿ ಈ ಮಳಿಗೆಯಲ್ಲಿ ಲಭ್ಯ. ಸಾಮಾನ್ಯ ವಿಮಾನದ ಗಾತ್ರದ ಒಂದನೇ 50ರ ಅನುಪಾತದ ಅಳತೆಯಲ್ಲಿರುವ ವಿಮಾನಗಳು,  50 ರೂಪಾಯಿಯ ಪುಟ್ಟ ವಿಮಾನದಿಂದ ಹಿಡಿದುರೂ ಐದು ಸಾವಿರದವರೆಗಿನ ಬಗೆಬಗೆಯ ಸ್ಥಿರ ಹಾಗೂ ರಿಮೋಟ್ ಚಾಲಿತ ವಿಮಾನಗಳು ಇಲ್ಲಿ ಲಭ್ಯ.ಇವುಗಳಲ್ಲಿ ಕೆಲವು ಎಚ್‌ಎಎಲ್ ತಂಡವೇ ಅಭಿವೃದ್ಧಿಪಡಿಸಿದವು. ಕೆಲವನ್ನು ಹೊರಗುತ್ತಿಗೆ ಆಧಾರದಲ್ಲಿ ತರಿಸಿಕೊಂಡು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಪ್ರದರ್ಶನಗಳಲ್ಲಿ ಮಳಿಗೆ ನಡೆಸುವ ಈ ತಂಡ ವರ್ಷದ ಉಳಿದ ದಿನಗಳಲ್ಲಿ ಎಚ್‌ಎಎಲ್‌ನಲ್ಲಿರುವ ವಸ್ತು ಸಂಗ್ರಹಾಲಯ ಹೆರಿಟೇಜ್ ಕೇಂದ್ರದ ಬಳಿ ಶಾಶ್ವತ ಮಳಿಗೆಯನ್ನು ನಡೆಸುತ್ತದೆ. ವಾರ್ಷಿಕರೂ 50ಲಕ್ಷದಷ್ಟು ವಹಿವಾಟು ನಡೆಸುವ ಈ ಸಂಘಟನೆ, ಬಂದ ಹಣವನ್ನು `ವಾತ್ಸಲ್ಯ' ಎಂಬ ಅವಕಾಶವಂಚಿತ ಮಕ್ಕಳ ಶಾಲೆಗೆ, ಕಿವಿ ಕೇಳದ, ಮಾತು ಬಾರದ ಮಕ್ಕಳ ಕಲ್ಯಾಣ ಮತ್ತಿತರ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತದೆ. ತಂಡದ ಮುಖ್ಯಸ್ಥೆ ಸುಮನ್ ಚಮೋಲಾ ಹಾಗೂ ಪ್ರೀತಿ ತ್ಯಾಗಿ ಅವರನ್ನು ಒಳಗೊಂಡಂತೆ ಹನ್ನೊಂದು ಸದಸ್ಯರಿದ್ದಾರೆ.

ಜತೆಗೆ ಎಚ್‌ಎಎಲ್ ಅಧಿಕಾರಿಗಳ ಪತ್ನಿಯರ ಒಟ್ಟು 80 ಮಂದಿಯ ದೊಡ್ಡ ತಂಡ ಈ ಕಾಯಕದಲ್ಲಿ ತೊಡಗಿಕೊಂಡಿದೆ. 40 ಮಹಿಳೆಯರಿಗೆ ಉದ್ಯೋಗ ನೀಡಿರುವ ಈ ಸಂಘಟನೆಯು ವಿಮಾನ, ಟೋಪಿಗಳನ್ನು ಮಾತ್ರವಲ್ಲದೇ ಹಪ್ಪಳ, ಚಟ್ನಿಪುಡಿ, ಪೈಲಟ್‌ಗಳ ದಿರಿಸು, ಡೊಗ್ರಿ ಇತ್ಯಾದಿಯನ್ನು ತಯಾರಿಸುತ್ತಿದೆ.ಮಳಿಗೆಯಲ್ಲಿ ಸಂಘಟನೆಯ ಮಹಿಳೆಯರ ಉತ್ಸಾಹಕ್ಕೆ ಸಾಟಿ ಇಲ್ಲ. ಖರೀದಿದಾರರ ಉತ್ಸಾಹಕ್ಕೆ ಸ್ಪಂದಿಸುತ್ತಾ ಗ್ರಾಹಕರ ಬೇಕು ಬೇಡಗಳ ಪೂರೈಕೆಯಲ್ಲಿ ಈ ಮಹಿಳೆಯರು ನಿರತರಾಗಿದ್ದಾರೆ. ಬೇರೆ ಮಳಿಗೆಯತ್ತ ಸುಮ್ಮನೆ ಒಂದು ನೋಟ ಬೀರುವ ಮಂದಿ, ಈ ಮಳಿಗೆಯಲ್ಲಿ ಒಂದಿಷ್ಟು ಹೊತ್ತು ಕಳೆದು, ಮನೆಗೆ ಹಾಗೂ ಮಕ್ಕಳಿಗೆ ಬೇಕೆನಿಸಿದ ವಿಮಾನಗಳನ್ನು ಕೊಡಿಸುವಲ್ಲಿ ತಲ್ಲೆನರಾಗಿದ್ದಾರೆ.ರೂ 50, 120, 250, 400ರ ಆಟಿಕೆ ವಿಮಾನಗಳು ಮಾರಾಟವಾಗುತ್ತಿರುವುದೇ ಹೆಚ್ಚು ಎಂದ ತಂಡದ ಸದಸ್ಯರು, ಕೆಲವರು ಎರಡು, ಐದು ಸಾವಿರ ರೂಪಾಯಿಯ ದುಬಾರಿ ಮಾದರಿಗಳನ್ನೂ ಖರೀದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry