ಮಹಿಳೆಯರ ಮೇಲೆ ದೌರ್ಜನ್ಯ: ಆತಂಕ

7

ಮಹಿಳೆಯರ ಮೇಲೆ ದೌರ್ಜನ್ಯ: ಆತಂಕ

Published:
Updated:

ರಾಮನಗರ : ಹೆಣ್ಣು ನಿರಾಂತಕವಾಗಿ ಬದುಕುವ ವಾತಾವರಣ ಇಂದಿನ ಸಾಮಾಜಿಕ ವಾತಾವರಣದಲ್ಲಿ ಇಲ್ಲವಾಗುತ್ತಿದೆ ಎಂದು ನಗರದ ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಎನ್.ಅನಿತಾ ಅವರು ವಿಷಾದಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಲೈಂಗಿಕ ಕಿರುಕುಳ ನಿವಾರಣಾ ಸಮಿತಿಯ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ `ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ~ ವಿಷಯದ ಕುರಿತು ಅವರು ಮಾತನಾಡಿದರು. ಸ್ತ್ರೀ ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಉದ್ಯೋಗಸ್ಥ ಮಹಿಳೆಯರಿಗೆ ಲೈಂಗಿಕ ಕಿರುಕುಳ ನಿರಂತರವಾಗಿ ನಡೆಯುತ್ತಲೇ ಇವೆ. ಇವು ಇಂದಿನ ಸಮಾಜದ ಬಹುದೊಡ್ಡ ಕಂಟಕಗಳಾಗಿ ಬೆಳೆದು ನಿಂತಿವೆ.

 21ನೆಯ ಶತಮಾನದ ಈ ಸಂದರ್ಭದಲ್ಲೂ ಸ್ತ್ರೀ ಸಮುದಾಯ ನೆಮ್ಮದಿಯಾಗಿ ಬದುಕುವ ಪರಿಸರ ನಿರ್ಮಾಣವಾಗಿಲ್ಲ.

 

ವಿದ್ಯಾವಂತ ಪುರುಷ ಸಮೂಹ ಸಹ ಮಹಿಳೆಯರನ್ನು ಗೌರವದಿಂದ ಕಾಣುವ ಪ್ರವೃತ್ತಿಯನ್ನು ರೂಢಿಸಿಕೊಂಡಿಲ್ಲ. ಇದು ನಿಜವಾಗಿಯೂ  ಸಾಮಾಜಿಕ ದುರಂತ ಎಂದು ಅವರು ಕಳವಳ ವ್ಯಕ್ತಪಡಿಸಿದರು.ವಿದ್ಯಾವಂತ ಪುರುಷರು ನೈತಿಕ ನೆಲೆಯಲ್ಲಿ ಹೆಣ್ಣಿಗೆ ರಕ್ಷಣೆ ನೀಡಬೇಕು. ಆದರೆ ಅದರ ಬದಲಾಗಿ ಅವರೇ ರಾಕ್ಷಸರಂತೆ ವರ್ತಿಸುತ್ತಾ ಮಗ್ಗುಲ ಮುಳ್ಳಾಗಿ ಹಿಂಸಿಸುತ್ತಿರುವುದು ಶೋಚನೀಯ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮಗಳು ಜರುಗಿ ಸ್ಥಳದಲ್ಲೇ ತಪ್ಪಿತಸ್ಥರನ್ನು ಅಮಾನತುಗೊಳಿಸುವ ಕಾನೂನು ಜಾರಿಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಕುಟುಂಬದ ಒಳಗೂ ಸಹ ಹೆಣ್ಣು ಶಾಂತಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ವರದಕ್ಷಿಣೆಯ ಬಿಸಿ ಕೌಟುಂಬಿಕ ಪರಿಸರದಲ್ಲಿ ಇನ್ನೂ ತಣ್ಣಗಾಗಿಲ್ಲ. ಎರಡು ಮನಸ್ಸುಗಳನ್ನು ಬೆಸೆಯಬೇಕಾದ ಮದುವೆ ಎಂಬ ಅನುಬಂಧ ವ್ಯಾಪಾರದ ಮಾಧ್ಯಮವಾಗಿದೆ. ಇದರಿಂದ ಹೆಣ್ಣಿನ ಭಾವನೆಗಳಿಗೆ ಬೆಲೆಯಿಲ್ಲವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಹೆಣ್ಣು ಧೈರ್ಯ ತಾಳಬೇಕು. ಅನ್ಯಾಯ ದೌರ್ಜನ್ಯದ ವಿರುದ್ಧ ಅಂಜಿಕೆಯಿಲ್ಲದೆ ಪ್ರತಿಭಟಿಸಬೇಕು. ಹಿಂಜರಿಕೆ ಇಲ್ಲದೆ ಮನ್ನುಗ್ಗಿದಾಗ ಮಾತ್ರ ಈ ಸಮಾಜದಲ್ಲಿ ಬದುಕಲು ಸಾಧ್ಯ. ಹೆಣ್ಣು ಸುಶಿಕ್ಷಿತಳಾಗಿ ಕಾನೂನು ಕಟ್ಟಳೆಗಳನ್ನು ಅರಿತುಕೊಂಡು ವಿವೇಕದಿಂದ ಕಾರ್ಯ ಪ್ರವೃತ್ತಳಾದರೆ ಇಂತಹ ದೌರ್ಜನ್ಯಗಳಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತಿ ಪಡೆಯಬಹುದು ಎಂದು ಅವರು ತಿಳಿಸಿದರು.ಸಮಿತಿಯ ಸಂಚಾಲಕಿ ಡಾ.ಟಿ.ಡಿ.ಕನಕ ಮಾತನಾಡಿ, ಇತ್ತೀಚೆಗೆ ಹೆಣ್ಣನ್ನು ಗೌರವದಿಂದ ಕಾಣುವ ಮನೋಭಾವ ಕಾಣೆಯಾಗುತ್ತಿದೆ. ಆಕೆಯನ್ನು ಕೇವಲ ಭೋಗದ ವಸ್ತುವಾಗಿ ನೋಡುವ ಪ್ರವೃತ್ತಿ ಬೆಳೆಯುತ್ತಿರುವುದು ದುರದೃಷ್ಟಕರ. ಆಕೆಯಲ್ಲೂ ಒಂದು ಭಾವನೆಯಿದೆ ಎಂಬ ಸಾಮಾನ್ಯ ಸತ್ಯವನ್ನು ಈ ಸಮಾಜ ತಿಳಿಯುವಂತಾಗಬೇಕು. ಆ ಮೂಲಕ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳಗಳು ನಿಲ್ಲುವಂತಾಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಂ.ಎಸ್. ಮಹದೇವ ಮೂರ್ತಿ ಮಾತನಾಡಿ, ಹೆಣ್ಣು ಧೈರ್ಯ, ಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು. ತಮಗೆ ದೊರಕಿರುವ ಮೀಸಲಾತಿ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ತಾವು ಅಬಲೆಯರಲ್ಲ ಸಬಲೆಯರು ಎಂಬುದನ್ನು ನಿರೂಪಿಸಬೇಕು.ಶಿಕ್ಷಣದ ಮೂಲಕ ಸಾಮಾಜಿಕ ಶಕ್ತಿಯನ್ನು ಪಡೆದುಕೊಂಡು ಎಲ್ಲ ರೀತಿಯಲ್ಲೂ ಪುರುಷರಿಗೆ ಸರಿಸಮಾನರಾಗಿ ಬದುಕಬೇಕು. ಇದರಿಂದ ಸಮಾಜದಲ್ಲಿರುವ ವರದಕ್ಷಿಣೆ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಉದ್ಯೋಗಸ್ಥ ಮಹಿಳೆಯರ ಮೇಲಿನ ಲೈಂಗಿಕ ದಬ್ಬಾಳಿಕೆ ಮೊದಲಾದ ಸಮಸ್ಯೆಗಳನ್ನು ಹಂತಹಂತವಾಗಿ ನಿವಾರಣೆ ಮಾಡಬಹುದು ಎಂದು ಅವರು ತಿಳಿಸಿದರು.ವಿಚಾರ ಸಂಕಿರಣದಲ್ಲಿ ಸಹಾಯಕ ಪ್ರಾಧ್ಯಾಪಕಿಯರಾದ ಲೋಲಾಕ್ಷಿ, ಎನ್.ಎಚ್.ವೀಣಾ, ಎಚ್.ಆರ್.ಅನುರಾಧಾ, ಬಿ.ಆರ್.ಶೋಭಾ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry