ಶನಿವಾರ, ಡಿಸೆಂಬರ್ 7, 2019
21 °C

ಮಹಿಳೆಯರ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದಾಳಿಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು ಹಾಗೂ ವಿದ್ಯಾರ್ಥಿನಿಯರು ನಗರದ ಪುರಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಹಿರಿಯ ನಟ ಎಚ್.ಜಿ.­ಸೋಮಶೇಖರ್‌ರಾವ್, ‘ದೇಶದಲ್ಲಿ ಪ್ರತಿದಿನ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಹಾಗೂ ಪ್ರಜ್ಞಾವಂತರು ಈ ದೌರ್ಜನ್ಯದ ವಿರುದ್ಧ ಹೋರಾಡಬೇಕು’ ಎಂದರು.‘ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾನೂನುಗಳಿವೆ. ಆದರೆ, ಕಾನೂನುಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಮಹಿಳೆ ದ್ವಿತೀಯ ದರ್ಜೆಯ ಪ್ರಜೆ ಎಂಬ ಮನೋಭಾವ ದೂರಾ­ಗಬೇಕು. ಇಲ್ಲವಾದರೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ತಮ್ಮ ಮೇಲಾಗುವ ದೌರ್ಜನ­ಗಳನ್ನು ಮಹಿಳೆಯರು ಸಹಿಸಿಕೊಳ್ಳದೇ ಪ್ರತಿಭಟನೆಯ ಗುಣ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಮಾತನಾಡಿ, ‘ದೆಹಲಿ ಅತ್ಯಾಚಾರ ಪ್ರಕರಣದ ನಂತರ ರಚಿಸಲಾದ ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರ­ಸ್ಸುಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ವಿಳಂಬ ಮಾಡು­ತ್ತಿದೆ. ಪ್ರತಿ ಬಾರಿ ಅತ್ಯಾಚಾರ ನಡೆದಾಗಲೂ ಅಪರಾಧಿಗಳನ್ನು ದೂಷಿಸುವ ಬದಲಿಗೆ ಬಲಿಪಶುವಾದ ಹೆಣ್ಣುಮಕ್ಕಳ ಉಡುಪಿನ ಬಗ್ಗೆ ಚರ್ಚೆ ನಡೆಯುತ್ತದೆ. ಇದು ಸರಿಯಲ್ಲ’ ಎಂದರು.‘ಅತ್ಯಾಚಾರ ಪ್ರಕರಣಗಳಲ್ಲಿ ಬಾಲಾರೋಪಿ ಎಂದೋ, ಮೇಲ್ಜಾತಿಯವರೆಂದೋ ಅಥವಾ ಮಧ್ಯ ವಯಸ್ಕರೆಂದೋ ಕಾರಣ ನೀಡಿ  ಆರೋಪಿಗಳಿಗೆ ಅನುಕಂಪ ತೋರಲಾಗುತ್ತಿದೆ.  ಇಂತಹ ಪುರುಷ ಪ್ರಧಾನ ಧೋರಣೆಗಳ ವಿರುದ್ಧ ಗಂಭೀರ ಹೋರಾಟದ ಅಗತ್ಯವಿದೆ’ ಎಂದು ಹೇಳಿದರು.ಎಸ್‌ಯುಸಿಐ ರಾಜ್ಯ ಘಟಕದ ಕಾರ್ಯದರ್ಶಿ ಕೆ.ರಾಧಾಕೃಷ್ಣ ಮಾತನಾಡಿ, ‘ಸಮಾಜದಲ್ಲಿ ಕೋಮು, ಜಾತಿ ಅಥವಾ ಇನ್ನಾವುದೇ ಗಲಭೆಗಳು ನಡೆದಾಗ ಹೆಣ್ಣು ಮಕ್ಕಳೇ ಬಲಿಪಶುಗಳಾಗುತ್ತಾರೆ. ಜಾಗತೀಕರಣ, ಉದಾರೀಕರಣ ನೀತಿಗಳ ಜಾರಿಯ ನಂತರ ಇಂತಹ ಘೋರ ಆಕ್ರಮಣಗಳ ಸಂಖ್ಯೆ ಹೆಚ್ಚಿದೆ. ಸಮಾಜದಲ್ಲಿ ಹೋರಾಟದ ಸಂಸ್ಕೃತಿ ಬೆಳೆಯಬೇಕು’ ಎಂದರು.ಅಖಿಲ ಭಾರತ ಯುವಜನ ಸಂಘಟನೆಯ ಅಧ್ಯಕ್ಷ ಡಾ.ಬಿ.ಆರ್.ಮಂಜುನಾಥ್, ‘ದೆಹಲಿ ಅತ್ಯಾಚಾರ ಪ್ರಕರಣ­ದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಲು ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಹೋರಾಟವೇ ಮುಖ್ಯ ಕಾರಣ. ದೌರ್ಜನ್ಯಗಳ ವಿರುದ್ಧ ಹೋರಾಡುವ ಮನೋಭಾವ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಉಮಾ, ‘ಇಂದು ಶಿಕ್ಷಣವೂ ಸಹ ಮಾರಾಟದ ವಸ್ತುವಾಗಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಪ್ರತಿನಿಧಿಸಲಾಗುತ್ತಿದೆ. ಇವುಗಳ ವಿರುದ್ಧ ಪ್ರಬಲ ಹೋರಾಟ ನಡೆಯಬೇಕಿದೆ’ ಎಂದರು

ಪ್ರತಿಕ್ರಿಯಿಸಿ (+)