ಮಹಿಳೆಯರ ರಕ್ಷಣೆಗೆ ಎಲೆಕ್ಟ್ರಾನಿಕ್ ಉಂಗುರ

7

ಮಹಿಳೆಯರ ರಕ್ಷಣೆಗೆ ಎಲೆಕ್ಟ್ರಾನಿಕ್ ಉಂಗುರ

Published:
Updated:
ಮಹಿಳೆಯರ ರಕ್ಷಣೆಗೆ ಎಲೆಕ್ಟ್ರಾನಿಕ್ ಉಂಗುರ

ದಾವಣಗೆರೆ: ಅತ್ಯಾಚಾರ, ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸಲು ಎಲೆಕ್ಟ್ರಾನಿಕ್ ರಕ್ಷಣಾ ಉಂಗುರ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ.ಕೇವಲ ಅತ್ಯಾಚಾರ ಮಾತ್ರವಲ್ಲ. ಕೌಟುಂಬಿಕ ಹಿಂಸೆಯಿಂದಲೂ ಮಹಿಳೆಯರು ರಕ್ಷಣೆ ಪಡೆಯಬಹುದು. ಉಂಗುರವನ್ನು ಪ್ರಯೋಗಕ್ಕಿಳಿಸಿದರೆ ಎದುರಾಳಿ ಹೆಜ್ಜೇನು ಕುಟುಕಿದ ಅನುಭವಕ್ಕೊಳಗಾಗಿ ವಿಪರೀತ ಉರಿಯಿಂದ ನರಳುತ್ತಾನೆ. ನಿಯಂತ್ರಣ ಕೊಠಡಿಗೆ ರಕ್ಷಣೆಗೆ ಮೊರೆ ಇಡುವ ಮಾಹಿತಿಯೂ ರವಾನೆಯಾಗುತ್ತದೆ.ನಗರದ ಹೋಟೆಲ್ ಉದ್ಯಮಿ, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಬಬ್ಬೂರಿನ ಇಮ್ರಾನ್ ಖಾನ್ ಅವರು  ಇಂಥದ್ದೊಂದು ಉಂಗುರ ಆವಿಷ್ಕರಿಸಿ, ಪೇಟೆಂಟ್ ಪಡೆಯುವ ಸಿದ್ಧತೆಯಲ್ಲಿದ್ದಾರೆ.ಉಂಗುರದಲ್ಲೇನಿದೆ?: ಪುಟ್ಟ ಉಂಗುರದೊಳಗೆ ಮೈಕ್ರೊ ಟ್ಯಾಂಕ್, ಬೆರಳಚ್ಚು ಗುರುತಿಸುವ ಗ್ರಾಹಕ, ಮೈಕ್ರೊ ಪಂಪ್ ಹಾಗೂ ಎರಡು ಪುಟ್ಟ ಸೂಜಿ. ಒಳಗೊಂದು ಎಲೆಕ್ಟ್ರಾನಿಕ್ ಸರ್ಕಿಟ್. ಮೈಕ್ರೊ  ಟ್ಯಾಂಕ್‌ನಲ್ಲಿ 1 ಮಿಲಿ ಲೀಟರ್ ಫಾರ್ಮಿಕ್ ಆ್ಯಸಿಡ್ ಸಂಗ್ರಹಿಸಲಾಗುತ್ತದೆ.ಮಹಿಳೆ ದಾಳಿಗೆ ಒಳಗಾದಾಗ ಬೆರಳ ಉಂಗುರವನ್ನು ಎದುರಾಳಿ ಕಡೆಗೆ ಹಿಡಿದು ತಳಭಾಗವನ್ನು ಅದುಮಿದರೆ ಸಾಕು. ಎರಡು ಸೂಜಿಗಳು ತಕ್ಷಣವೇ ಹೊರಬಂದು ಎದುರಾಳಿಯ ದೇಹದೊಳಗೆ ಫಾರ್ಮಿಕ್ ಆ್ಯಸಿಡ್ ದ್ರಾವಣವನ್ನು ಸ್ರವಿಸುತ್ತವೆ. ಇದರಿಂದ ಎದುರಾಳಿಗೆ ಹೆಜ್ಜೇನು ಕಡಿತದ ಅನುಭವವಾಗುತ್ತದೆ. ಇದೇ ವೇಳೆಗೆ ಎಲೆಕ್ಟ್ರಾನಿಕ್ ಸರ್ಕಿಟ್, ಜಿಪಿಆರ್‌ಎಸ್ ಸಹಾಯದಿಂದ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗುತ್ತದೆ. ದ್ರಾವಣವನ್ನು 20 ಮಂದಿಗೆ ಪ್ರಯೋಗಿಸಬಹುದು. ಒಂದು ಬಾರಿಗೆ 50 ಮೈಕ್ರೊ ಲೀಟರ್‌ನಷ್ಟು ದ್ರಾವಣ ಹೊರಬರುತ್ತದೆ. ಉಂಗುರ ದುರುಪಯೋಗವಾಗುವುದನ್ನು ತಪ್ಪಿಸಲು ಬೆರಳಚ್ಚು ಗ್ರಾಹಕ ಅಳವಡಿಸಲಾಗಿದೆ. ಇದರಿಂದಾಗಿ ಉಂಗುರ ಬೇರೆಯವರು ಬಳಸಲು ಸಾಧ್ಯವಾಗಲಾರದು. ಸದ್ಯ ಈ ಉಂಗುರ ಪೇಟೆಂಟ್ ಹಂತದಲ್ಲಿದೆ. ಸರ್ಕಾರದ ಅನುಮತಿ ದೊರೆತರೆ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ಇಮ್ರಾನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.ವೆಚ್ಚವೆಷ್ಟು?: ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ ಅದರ ತಾಂತ್ರಿಕ ವ್ಯವಸ್ಥೆಗೆ ಪ್ರತಿ ಉಂಗುರಕ್ಕೆ ಸುಮಾರು 30 ರೂಪಾಯಿ ತಗಲುತ್ತದೆ. ಉಳಿದಂತೆ ಉಂಗುರದ ಲೋಹದ ಮೇಲೆ ಅವಲಂಬಿತ. ಯಾವುದೇ ಲೋಹದ ಉಂಗುರವನ್ನು ತಯಾರಿಸಿ ಅದರಲ್ಲಿ ಈ ತಾಂತ್ರಿಕತೆ ಅಳವಡಿಸಬಹುದು.ಈ ದ್ರಾವಣ ದೇಹ ಸೇರುವುದರಿಂದ ಯಾವುದೇ ಹಾನಿಯಿಲ್ಲ. ಬದಲಾಗಿ ವ್ಯಕ್ತಿಯ ರೋಗನಿರೋಧಕ ಶಕ್ತಿ  ವೃದ್ಧಿಸಲಿದೆ. ಬಳಕೆಗೆ ಮುನ್ನ ಸೂಕ್ತ ತರಬೇತಿ, ಉಂಗುರದ ನೋಂದಣಿ, ನಿಯಂತ್ರಣ ವ್ಯವಸ್ಥೆ ಜತೆ ಸಂಪರ್ಕ ಹೊಂದಿದ ಬಳಿಕ ಬಳಕೆದಾರರಿಗೆ ನೀಡಬಹುದು ಎಂದರು.ಇಮ್ರಾನ್ ಖಾನ್ ಬಿ. ಫಾರ್ಮಾ, ಎಂಬಿಎ ಪದವೀಧರರು. ಔಷಧಿ ಉತ್ಪನ್ನ, ಆರೋಗ್ಯ ರಕ್ಷಣೆ ಸಾಮಗ್ರಿ ಮಾರುಕಟ್ಟೆ ನಿರ್ವಹಣೆಯಲ್ಲಿ ಪರಿಣತರು. ಮಾಹಿತಿಗೆ ಮೊಬೈಲ್: 96111 77645 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry