ಮಹಿಳೆಯರ ಸುರಕ್ಷತೆಗೆ ಮಾರ್ಗಸೂಚಿ

7
ಉಪ ಮುಖ್ಯಮಂತ್ರಿ ಆರ್.ಅಶೋಕ್

ಮಹಿಳೆಯರ ಸುರಕ್ಷತೆಗೆ ಮಾರ್ಗಸೂಚಿ

Published:
Updated:
ಮಹಿಳೆಯರ ಸುರಕ್ಷತೆಗೆ ಮಾರ್ಗಸೂಚಿ

ಬೆಂಗಳೂರು: `ದೆಹಲಿಯಲ್ಲಿ ನಡೆದಂಥ ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ಘಟಿಸದಂತೆ ಮುನ್ನೆಚ್ಚರಿಕೆ ವಹಿಸಲು ಇನ್ನೆರಡು ದಿನಗಳಲ್ಲಿ ಮಾರ್ಗದರ್ಶಿ ಸೂಚಿಗಳನ್ನು ಸಿದ್ಧಪಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ತಿಳಿಸಿದರು.ವಿಧಾನಸೌಧದಲ್ಲಿ ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಉದ್ಯೋಗಿಗಳಿದ್ದಾರೆ. ಸಾಫ್ಟ್‌ವೇರ್ ಕಂಪೆನಿಗಳು, ಕಾಲ್ ಸೆಂಟರ್‌ಗಳು ಹಾಗೂ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳು ಸೇರಿದಂತೆ ಖಾಸಗಿ ಕ್ಷೇತ್ರದಲ್ಲಿ ಲಕ್ಷಾಂತರ ಮಹಿಳೆಯರು ದುಡಿಯುತ್ತಿದ್ದಾರೆ. ಇವರಿಗೆ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಮಹಿಳೆಯರು ಕೆಲಸ ಮಾಡುವ ಸ್ಥಳ, ಸಂಚರಿಸುವ ರಸ್ತೆಗಳು, ಸಂಚಾರದ ಅವಧಿ ಹಾಗೂ ಪ್ರಯಾಣಕ್ಕೆ ಬಳಸುವ ವಾಹನಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ನಗರ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಲಾಗಿದೆ' ಎಂದರು.`ಮಹಿಳೆಯರ ನೆರವಿಗಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೊಸದಾಗಿ ಸಹಾಯವಾಣಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ದಿನದ 24 ಗಂಟೆಗಳೂ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಅನುಮಾನಾಸ್ಪದವಾಗಿ ಯಾರಾದರೂ ತಮ್ಮನ್ನು ಹಿಂಬಾಲಿಸುತ್ತಿದ್ದರೆ, ತಮ್ಮ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದರೆ ಮಹಿಳೆಯರು ಈ ಸಹಾಯವಾಣಿಗೆ ಕರೆ ಮಾಡಬಹುದು' ಎಂದರು.`ಅತ್ಯಾಚಾರ ಪ್ರಕರಣಗಳ ಆರೋಪಿಗೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಗೂಂಡಾ ಕಾಯ್ದೆಗೆ ತಿದ್ದುಪಡಿ ತರಲು ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು. ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಎಲ್ಲ ರಾಜ್ಯಗಳ ಗೃಹ ಸಚಿವರ ಸಭೆ ಕರೆಯಲು ಕೇಂದ್ರ ಗೃಹ ಸಚಿವರನ್ನು ಕೋರಿರುವುದಾಗಿ' ಎಂದರು.`ನಗರದ ಆಟೊ, ಕ್ಯಾಬ್‌ಗಳ ಚಾಲಕರ ಸಂಪೂರ್ಣ ಮಾಹಿತಿ ಪಡೆಯುವ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಚಾಲಕರು ತಮ್ಮ ಭಾವಚಿತ್ರ ಸೇರಿದಂತೆ ತಮ್ಮ ಹಿನ್ನೆಲೆಯ ಸಂಪೂರ್ಣ ಮಾಹಿತಿಯನ್ನು ಹತ್ತಿರ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಇಲ್ಲವಾದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಟ್ರಾವೆಲ್ಸ್ ಏಜೆನ್ಸಿಗಳು ತಮ್ಮ ಚಾಲಕರ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ಕಡ್ಡಾಯವಾಗಿ ನೀಡಬೇಕು' ಎಂದು ತಿಳಿಸಿದರು.`ಸದ್ಯ ಎಲ್ಲ ಬಸ್, ಟೆಂಪೊ, ಟ್ಯಾಕ್ಸಿಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಮುಂದೆ ಈ ವ್ಯವಸ್ಥೆಯನ್ನು ಆಟೊಗಳಿಗೂ ವಿಸ್ತರಿಸಲಾಗುವುದು ಎಂದರು.ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರೊಂದಿಗೆ ಸಭ್ಯವಾಗಿ ವರ್ತಿಸುವ ಬಗ್ಗೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮಹಿಳೆಯರೊಂದಿಗೆ ಬಸ್‌ಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಅಂಶವನ್ನೂ ಮಾರ್ಗದರ್ಶಿ ಸೂಚಿ ಒಳಗೊಂಡಿರಲಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry