ಶುಕ್ರವಾರ, ಜೂನ್ 18, 2021
26 °C

ಮಹಿಳೆಯರ ಹಕ್ಕು ಬಲಪಡಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: `ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದಾಗ ದೇಶದ ಮಹಿಳಾ ಕಾನೂನುಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ~ ಎಂದು ರಾಜ್ಯ ಮಹಿಳಾ ಆಯೋಗದ  ಅಧ್ಯಕ್ಷೆ ಸಿ. ಮಂಜುಳಾ ಅಭಿಪ್ರಾಯಪಟ್ಟರು.

ಗಿರಿಯಮ್ಮ ಕಾಲೇಜಿನಲ್ಲಿ ಸೋಮವಾರ ನಡೆದ ಯುಜಿಸಿ ಪ್ರಾಯೋಜಿತ, ರಾಜ್ಯಶಾಸ್ತ್ರ ವಿಭಾಗದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಈಚೆಗೆ ಅನೇಕ ಯುವತಿಯರು ಕೌಟುಂಬಿಕ ಜೀವನದ ಒತ್ತಡಗಳನ್ನು ನಿರ್ವಹಣೆ ಮಾಡಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ಹೆಚ್ಚಾಗಿದೆ. ಜೀವನ ಅಮೂಲ್ಯವಾದುದು, ಕ್ಷಣ ಹೊತ್ತಿನ ಸಿಟ್ಟು ಅಥವ ದುಡುಕಿನ ನಿರ್ಧಾರ ಜೀವ ಹಾನಿಗೆ ಕಾರಣವಾಗುತ್ತದೆ. ಲಿಂಗ ಭೇದವಿಲ್ಲದೇ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪಾಲಕರೂ ಬದಲಾಗಬೇಕಾದುದು ಪ್ರಸ್ತುತದ ಅನಿವಾರ್ಯ ಎಂದರು.ಮಹಿಳಾ ಹಕ್ಕುಗಳೆಲ್ಲಾ ಮಾನವ ಹಕ್ಕುಗಳು ಎಂಬುದು ನೂತನ ವ್ಯಾಖ್ಯಾನ. ಮಹಿಳೆಯರಿಗೆ ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಶಕ್ತಿಯನ್ನು ಗಳಿಸಿಕೊಳ್ಳಲು ಮಹಿಳಾಪರ ಕಾನೂನುಗಳು ಸಹಕಾರಿಯಾಗಿವೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು. ಶೋಷಿತ ಮಹಿಳೆಯರಿಗೆ ನ್ಯಾಯ ದೊರಕುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಾನವ ಹಕ್ಕುಗಳು ಪರಿಣಾಮಕಾರಿಯಾಗಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ ಎಂದರು.ಪ್ರಾಸ್ತಾವಿಕ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ನಿರ್ದೇಶಕ ಡಾ.ಎಚ್.ಎಂ. ರಾಜಶೇಖರ್,  ಸಹಿಷ್ಣುತೆ ಇಲ್ಲದೆಡೆ ಪ್ರಜಾಪ್ರಭುತ್ವ ಇರಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಇಲ್ಲದೆಡೆ ಮಾನವ ಹಕ್ಕುಗಳಿಗೆ ಗೌರವವಿರುವುದಿಲ್ಲ. ವ್ಯಕ್ತಿಯ ಜೀವನದಲ್ಲಿ ಸಮಾನತೆ, ಸ್ವಾತಂತ್ರ್ಯ ಹಾಗೂ ಆತ್ಮಗೌರವಕ್ಕೆ ಧಕ್ಕೆ ಬಂದಾಗ ಮಾನವ ಹಕ್ಕುಗಳು ನೆರವಿಗೆ ಬರುತ್ತವೆ ಎಂದರು.ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ, ಮಾನವ ಹಕ್ಕುಗಳ ಆಯೋಗ ಮತ್ತು ಮಹಿಳಾ ಆಯೋಗಕ್ಕೆ ವಿಶೇಷ ಅಧಿಕಾರಗಳನ್ನು ನೀಡಿಲ್ಲ. ಇದರಿಂದಾಗಿ ಪ್ರಕರಣಗಳಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಲು ಅನೇಕ ತಾಂತ್ರಿಕ ದೋಷಗಳು ತಡೆ ಒಡ್ಡುತ್ತಿವೆ. ಇದನ್ನು ಬಳಸಿಕೊಂಡು ಆರೋಪಿಗಳು ಆರೋಪದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ ಎಂದರು.`ಮಾನವ ಹಕ್ಕುಗಳು ಮತ್ತು ಬಸವ ತತ್ವ~, `ಮಾನವ ಹಕ್ಕುಗಳು ಮತ್ತು ಮಹಿಳೆ~ ಮತ್ತು `ಮಾನವ ಹಕ್ಕುಗಳು ಮತ್ತು ಮಕ್ಕಳು~ ಎಂಬ ವಿಷಯ ಕುರಿತು ವಿಚಾರ ಮಂಡನೆ ನಡೆಯಿತು.ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶಾರದೇಶಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಎಸ್.ಎಚ್. ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಎಸ್.ಎಚ್. ಪಟೇಲ್, ಉಚ್ಚ ನ್ಯಾಯಾಲಯದ ವಕೀಲ ನಾಗಪ್ಪ ತುಕಾಯಿ, ದಾವಣಗೆರೆ ಎವಿಕೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಿ.ಎಚ್. ಮುರಿಗೇಂದ್ರಪ್ಪ, ಆಡಳಿತ ಮಂಡಳಿ ನಿರ್ದೇಶಕ ಜಿ. ಸುರೇಶಗೌಡ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಿ.ಜಿ. ಪರಮೇಶ್ವರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.