ಗುರುವಾರ , ನವೆಂಬರ್ 21, 2019
27 °C
ಸಂಸದೀಯ ಸಮಿತಿ ಚಾಟಿ ಏಟು

ಮಹಿಳೆಯರ ಹಕ್ಕು ರಕ್ಷಿಸದ ಆಯೋಗ

Published:
Updated:

ನವದೆಹಲಿ (ಪಿಟಿಐ): ದೇಶವ್ಯಾಪಿ ಪ್ರತಿಭಟನೆಗೆ ಕಾರಣವಾದ ಕಳೆದ ವರ್ಷ ದೆಹಲಿಯಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿರುವ ಸಂಸದೀಯ ಸಮಿತಿ, ಮಹಿಳೆಯರ ಹಕ್ಕುಗಳ ಸಂರಕ್ಷಣೆಯ ವಿಷಯದಲ್ಲಿ ಆಯೋಗ ಕ್ರಿಯಾಶೀಲವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದೆ.ದೆಹಲಿ ಅತ್ಯಾಚಾರ ಘಟನೆಯ ನಂತರ, ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ದೇಶದ ವಿವಿಧ ಭಾಗಗಳಲ್ಲಿ ಸಾಮೂಹಿಕ ಪ್ರತಿಭಟನೆಗಳು ನಡೆದವು. ಇಷ್ಟಾದರೂ ಸಹ ಮಹಿಳಾ ರಕ್ಷಣೆ ವಿಷಯದಲ್ಲಿ ಎನ್‌ಸಿಡಬ್ಲ್ಯೂ ಪ್ರಧಾನ ಪಾತ್ರವಹಿಸಲಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸ್ಥಾಯಿ ಸಮಿತಿ ವರದಿಯಲ್ಲಿ ಟೀಕಿಸಲಾಗಿದೆ. ಗುರುವಾರ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು.ಜನಾಂಗೀಯ ಆಧಾರಿತ ಹಿಂಸೆ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಸಾವು, ಗೌರವದ ಹೆಸರಿನಲ್ಲಿ ಕೊಲೆ, ಪಿತ್ರಾರ್ಜಿತ ಆಸ್ತಿ ಹಂಚಿಕೆಯಲ್ಲಿ ತಾರತಮ್ಯ ಮತ್ತಿತರ ವಿಷಯಗಳಲ್ಲಿ ಅಪರಾಧಗಳು ಹೆಚ್ಚುತ್ತಿರುವುದರಿಂದ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಸಮಿತಿ, ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಎನ್‌ಸಿಡಬ್ಲ್ಯೂ ತನ್ನ ಕಾರ್ಯವ್ಯಾಪ್ತಿ ಬದಲಾಯಿಸಿಕೊಳ್ಳುವ ಮೂಲಕ ಮಹಿಳಾ ದೌರ್ಜನ್ಯ ತಡೆಯಲು  ಗರಿಷ್ಠ ಶ್ರಮವಹಿಸಬೇಕು ಎಂದು ಸಲಹೆ ಮಾಡಿದೆ.`ಅತ್ಯಾಚಾರ ಇಲ್ಲವೆ ಲೈಂಗಿಕ ಕಿರುಕುಳಕ್ಕೆ ಒಳಗಾದವರಿಗೆ ಪರಿಹಾರ ನೀಡುವ ಕಾರ್ಯಕ್ರಮಗಳಿಗೆ ಮಾತ್ರ ಮಹತ್ವ ನೀಡದೆ ಇಂತಹ ಅಪರಾಧಗಳು ಪುನರಾವರ್ತನೆಯಾಗದಂತೆ ಮಹಿಳೆಯರು ತೊಡಗಿಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಸಮಿತಿ ಸಲಹೆ ನೀಡಿದೆ.ಮಹಿಳೆಯರ ಗೌರವಾನ್ವಿತ ಬದುಕಿಗೆ ಸಂಬಂಧಿಸಿದಂತೆ ಅಂಗನವಾಡಿಗಳಲ್ಲಿರುವ ತೊಂದರೆಗಳನ್ನು ಪರಿಹರಿಸಲು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ, ಈ ಕುರಿತು ಮಹಾಲೇಖಪಾಲರ ವರದಿಯಲ್ಲೂ ಉಲ್ಲೇಖಿಸಲಾಗಿದೆ ಎಂದು ಸಮಿತಿ ಅತೃಪ್ತಿ ವ್ಯಕ್ತಪಡಿಸಿದೆ.

ಪ್ರತಿಕ್ರಿಯಿಸಿ (+)