ಬುಧವಾರ, ನವೆಂಬರ್ 13, 2019
23 °C

`ಮಹಿಳೆಯ ಸಾಮರ್ಥ್ಯವೇ ಮಾನದಂಡವಾಗಲಿ'

Published:
Updated:

ಹಾವೇರಿ:  ಮಹಿಳೆಯರನ್ನು ಕೇವಲ ಸೌಂದರ್ಯದ ಮಾನದಂಡದ ಮೇಲೆ ಗುರುತಿಸುವ ಪ್ರವೃತ್ತಿ ಬದಲಾಗುವುದರ ಜತೆಗೆ ಮಹಿಳೆರ ಸಾಮರ್ಥ್ಯದ ಮೇಲೆ ಅವರ ಸ್ಥಾನಮಾನ ಗುರುತಿಸುವ ಕೆಲಸ ಆಗಬೇಕಿದೆ' ಎಂದು ಜನವಾದಿ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಹೇಳಿದರು.ನಗರದ ಶಿವಶಕ್ತಿ ಪ್ಯಾಲೇಸ್ ಸಮುದಾಯ ಭವನದಲ್ಲಿ ಇತ್ತೀಚೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ವಿದ್ಯಾರ್ಥಿನಿಯರ 6ನೇ ಸಮಾವೇಶದ 2ನೇ ಗೋಷ್ಠಿಯಲ್ಲಿ `ವರ್ತಮಾನದ ತಲ್ಲಣಗಳು ಮತ್ತು ಮಹಿಳೆ' ಎಂಬ ವಿಷಯ ಕುರಿತು ಅವರು ಮಾತನಾಡಿದರು.ಮಗ ಮತ್ತು ಮಗಳ ನಡುವೆ ತಾರತಮ್ಯ ನೀತಿ ಬದಲಾಗಬೇಕಿದೆ. ಕುಟುಂಬ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಜಾರಿಯಾದಾಗ ಮಾತ್ರ ಸಮಾನತೆ ಬರುತ್ತದೆ ಎಂದು ಹೇಳಿದರು.ಸಾಂತ್ವನ ಕೇಂದ್ರದ ಮುಖ್ಯಸ್ಥೆ ಪರಿಮಳಾ ಜೈನ ಮಾತನಾಡಿ, `ಗ್ರಾಮೀಣ ಸಮಾಜ ವ್ಯವಸ್ಥೆಯ ಬಗ್ಗೆ ಹೆಮ್ಮೆ ಪಡಬೇಕು. ಅನ್ಯ ಸಂಸ್ಕೃತಿಯ ಸೋಕಿಗೆ ಗುರಿಯಾಗದಂತೆ ನಾವುಗಳು ತಮ್ಮತನ ಕಾಪಾಡಿಕೊಳ್ಳಬೇಕು ಎಂದರು.ವಿಷಯ ಪ್ರತಿಪಾದನೆ ಪ್ರತಿಕ್ರಿಯೆ ನೀಡಿದ ನಾಗರಾಜ ನಡುವಿನಮಠ ಅವರು, ಮಹಿಳಾ ಸಮಾನತೆ ಬಗ್ಗೆ ನಾವೇಲ್ಲ ಪುರುಷ ಸಮುದಾಯ ದೊಡ್ಡ ಪ್ರಮಾಣದ ಧ್ವನಿಯಲ್ಲಿ ಮಾತನಾಡಬೇಕು ಎಂದು ತಿಳಿಸಿದರು.ಸವಣೂರಿನ ಸರ್ಕಾರಿ ಕಾಲೇಜಿನ ಪ್ರೊ. ಎಸ್.ಎನ್.ನಾಯಕ ಮಾತನಾಡಿ, `ಜಾತಿ ವ್ಯವಸ್ಥೆಯ ಕರಾಳ ನೆರಳಲ್ಲಿ ನರಳುತ್ತಿರುವ ಸ್ತ್ರೀಗೆ ಆ ಸಂಕೋಲೆಯಿಂದ ಹೊರಬರಲು ಎಸ್‌ಎಫ್‌ಐ ಸಮಾವೇಶ ದಾರಿದೀಪವಾಗಿದೆ ಎಂದು ಅಭಿಪ್ರಾಯಪಟ್ಟರು.3ನೇ ಗೋಷ್ಠಿಯಲ್ಲಿ ;ಹೆಣ್ಣು ಮಕ್ಕಳ ಶಿಕ್ಷಣ ಆರೋಗ್ಯ ಹಾಗೂ ಕಾನೂನು' ಕುರಿತು ವಿಷಯ ಮಂಡಿಸಿದ ಕವಯತ್ರಿ ರೂಪಾ ಹಾಸನ ಅವರು, ಹೆಣ್ಣು ಎರಡು ಹೆಜ್ಜೆ ಮುಂದೆ ಬಂದಿದ್ದಾಳೆ ಎಂದು ನಾವು ಎಷ್ಟೇ ಹೇಳಿದರೂ ನಿತ್ಯ ನಾಲ್ಕು ಹೆಜ್ಜೆ ಹಿಂದೆ ಸರಿಯುವ ವಾತಾವರಣ ಸಮಾಜದಲ್ಲಿದೆ ಎಂದರು.ಮಹಾರಾಷ್ಟ್ರದ ಸಾವಿತ್ರಿಬಾಯಿ ಪುಲೆ ದೇಶದ ಮೊದಲ ಶಿಕ್ಷಕಿ. ಅವರ ನೆನಪಿನ ದಿನವನ್ನು ಸಮಾವೇಶದ ದಿನವನ್ನಾಗಿ ಭಾರತ ಸರ್ಕಾರ ಆಚರಿಸಲು ಮುಂದಾಗ ಮಾತ್ರ ದೇಶದ ಅಕ್ಷರ ಕ್ರಾಂತಿಯ ಮಹಿಳೆಗೆ ಸೂಕ್ತ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಸಾವಿತ್ರಿ ಮುಜುಮದಾರ ಮಾತನಾಡಿ, ಪುರುಷ ಸಮಾಜ ಸ್ತ್ರೀಯರು ನೋಡುವ ದೃಷ್ಠಿಕೋನ ಬದಲಾಗಬೇಕಿದೆ. ಭ್ರೂಣಹತ್ಯೆ, ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಗಳು ಸಮಾಜದಲ್ಲಿ ಇನ್ನೂ ಅಲ್ಲಲ್ಲಿ ಕಂಡು ಬರುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತರುವ ಪ್ರಯತ್ನವಾಗಬೇಕಿದೆ ಎಂದರು.ಗೋಷ್ಠಿಯಲ್ಲಿ ಡಾ.ಶೈಲಜಾ ಗೊಡ್ಡೆಮ್ಮಿ, ಹನುಮಂತಗೌಡ ಗೊಲ್ಲರ, ಕೆ.ಸಿ.ಕುಲಕರ್ಣಿ, ವಿಜಯಲಕ್ಷ್ಮೀ, ಸುಕನ್ಯಾ, ಅರ್ಪಿತಾ, ಅಂಜಲಿ ಹಾಗೂ ಗೌತಮಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)