ಶುಕ್ರವಾರ, ಏಪ್ರಿಲ್ 16, 2021
23 °C

ಮಹಿಳೆಯ ಸೇವೆಗೆ ಬೆಲೆ ಕಟ್ಟುವುದು ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ:‘ಮಹಿಳೆ ಸಲ್ಲಿಸುವಂತಹ ನಿಸ್ವಾರ್ಥ ಸೇವೆ ಜಗತ್ತಿನಲ್ಲೆಲ್ಲೂ ಸಿಗದು. ಈ ಸೇವೆಗೆ ಬೆಲೆ ಕಟ್ಟುವುದು ಕೂಡ ಅಸಾಧ್ಯ. ಮಹಿಳೆ ತನ್ನ ಸೇವೆಗೆ ಮರಳಿ ಬಯಸುವ ಪ್ರತಿಫಲ ಮುಗುಳ್ನಗೆ ಮಾತ್ರ’ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಶೋಕ್ ಜಿ. ನಿಜಗಣ್ಣವರ್ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಡಿಕೇರಿ ಇನ್ನರ್‌ವ್ಹೀಲ್ ಕ್ಲಬ್, ರೋಟರಿ ಮಿಸ್ಟಿ ಹಿಲ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಜಗತ್ತಿನಲ್ಲಿ ಅಂತರರಾಷ್ಟ್ರೀಯ ಸಂಘ- ಸಂಸ್ಥೆಗಳು ನಡೆಸಿದ ಸಮೀಕ್ಷೆ ಪ್ರಕಾರ, ಪುರುಷನಿಗೆ ಸರಿ ಸಮಾನವಾಗಿ ದುಡಿಯುವ ಮಹಿಳೆಗೆ ಸಿಗುವ ಆದಾಯ ಶೇ 10ಕ್ಕಿಂತ ಕಡಿಮೆ ಇದೆ. ಹಾಗೆಯೇ, ಸಮಾಜದಲ್ಲಿ ಆಕೆಗೆ ಶೇ 2ರಿಂದ 3ರಷ್ಟು ಮಾತ್ರ ಆಸ್ತಿ ದಕ್ಕಿದೆ. ಉಳಿದಂತೆ, ಶೇ 95ರಷ್ಟುಆಸ್ತಿ ಪುರುಷರ ಪಾಲಾಗಿದೆ. ಇದೀಗ ಕಾಲ ಬದಲಾಗಿದ್ದು, ಮಹಿಳೆಯರಿಗೂ ಸೌಲಭ್ಯ ಒದಗಿಸುವಂತಹ ಕಾನೂನುಗಳು ರೂಪುಗೊಂಡಿವೆ’ ಎಂದು ಹೇಳಿದರು.‘ಕುಟುಂಬದ ನೆಮ್ಮದಿಯಲ್ಲಿ ಮಹಿಳೆಯ ಪಾತ್ರವೇ ಮುಖ್ಯ. ಕುಟುಂಬಕ್ಕಾಗಿ ಆಕೆ ಮಾಡುವ ತ್ಯಾಗವನ್ನು ಗುರುತಿಸುವವರು ಮಾತ್ರ ಕಡಿಮೆ. ಬೆಳಿಗ್ಗೆ ಎದ್ದಾಗಿನಿಂದ ಪ್ರತಿ ಮಹಿಳೆ ಮಾಡುವ ಸೇವೆಯನ್ನು ಗಮನಿಸಿದರೆ ಅದಕ್ಕೆ ಬೆಲೆ ಕಟ್ಟಲಾಗದು. ಮಹಿಳೆಯ ನಿಸ್ವಾರ್ಥ ಸೇವೆ ಗಮನಿಸಿ ಗೌರವಿಸುವಂತಾದಲ್ಲಿ ಸಮಾಜದಲ್ಲಿ ತೊಂದರೆಯೇ ಇರದು. ಆದರೆ, ನ್ಯಾಯಾಲಯಗಳಲ್ಲಿ ದಾಖಲಾಗುವ ಶೇ 50ರಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಮಹಿಳೆಯೇ ಕಾರಣಳಾಗಿದ್ದಾಳೆ’ ಎಂದು ವಿಷಾದ ವ್ಯಕ್ತಪಡಿಸಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಧೀಶರಾದ ಹೇಮಾವತಿ ಮಾತನಾಡಿ, ‘ಸಾಕಷ್ಟು ಮಹಿಳೆಯರು ಉನ್ನತ ಹುದ್ದೆಯಲ್ಲಿದ್ದರೂ ಕುಟುಂಬ ನಿರ್ವಹಣೆಯಲ್ಲಿ ವಿಫಲರಾಗುತ್ತಿದ್ದಾರೆ. ಆ ಮೂಲಕ ಕುಟುಂಬದ ಸದಸ್ಯರು ದಾರಿತಪ್ಪಲು ಕಾರಣಳಾಗುತ್ತಿದ್ದಾಳೆ. ಇದರಿಂದ ಸಮಾಜದಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಅಧಿಕವಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.‘ಎರಡು-ಮೂರು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾಗಿ ಆರು ತಿಂಗಳಲ್ಲೇ ವಿಚ್ಛೇದನ ಕೊಡುವಂತಹ ಪರಿಸ್ಥಿತಿ ಸಮಾಜದಲ್ಲಿ ಕಾಣುತ್ತಿದ್ದೇವೆ. ಅನೇಕ ಹೆಣ್ಣು ಮಕ್ಕಳಲ್ಲಿ ನಾನು ಎನ್ನುವ ಭಾವನೆ ಅಧಿಕ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಗಮನಕೊಟ್ಟು ಸಲಹಬೇಕು. ಆಕೆಯನ್ನು ಸುಶಿಕ್ಷಿತಳನ್ನಾಗಿ ಮಾಡುವುದರೊಂದಿಗೆ ಕೌಟುಂಬಿಕ ನಿರ್ವಹಣೆಗೆ ಅನುಕೂಲವಾಗುವ ಸಂಸ್ಕಾರ ಗುಣವನ್ನೂ ಬೆಳೆಸಬೇಕು’ ಎಂದು ಸಲಹೆ ಮಾಡಿದರು.ಜಿ.ಪಂ. ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಮಾತನಾಡಿ, ‘ಕೇವಲ ಅಡಿಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಸಮಾಜದ ಎಲ್ಲಾ ಸ್ತರದಲ್ಲಿ ಗುರುತಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿದ್ದಾಳೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ಮಾತನಾಡಿ, ‘ಮಹಿಳೆ ಹಾಗೂ ಪುರುಷ ದೈಹಿಕ ಭಿನ್ನತೆ ಹೊಂದಿರುವುದು ಪ್ರಕೃತಿ ಸಹಜವಾದುದು. ಆಕೆಯ ದೈಹಿಕ ಭಿನ್ನತೆಯನ್ನು ದೌರ್ಬಲ್ಯವನ್ನಾಗಿಸಿ ಎರಡನೇ ದರ್ಜೆಯಲ್ಲಿಡುವುದು ಸಮಂಜಸವಲ್ಲ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಮಹಿಳೆಯ ಸ್ಥಾನ ಅನನ್ಯವಾದುದು. ಪ್ರೀತಿ, ಪ್ರೇಮ, ಮಮತೆ, ತ್ಯಾಗ, ಅನುಕಂಪ, ಸಹೃದಯತೆ ತೋರುವುದರಲ್ಲಿ ಪುರುಷನಿಗಿಂತ ಹೆಚ್ಚುಗಾರಿಕೆ ಹೆಣ್ಣಿನದು. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ದೇವತೆ ಸ್ಥಾನ ನೀಡಲಾಗಿದೆ’ ಎಂದು ಹೇಳಿದರು.ವಕೀಲರಾದ ಮೀನಾಕುಮಾರಿ ‘ಕಾನೂನು ಅರಿವು’ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆನಡಾ ಹಾಗೂ ಕೊಯಮತ್ತೂರಿನಲ್ಲಿ ನೆಲೆಸಿರುವ ಠುಕ್ರೇಲ್ ಕುಟುಂಬ, ದುಬೈ ಹಾಗೂ ಮುಂಬೈನಲ್ಲಿ ನೆಲೆಸಿರುವ ಲಾಖಿ ಕುಟುಂಬ ತಲಾ 1 ಲಕ್ಷ, ಕೆನಡಾದ ಶಾಯಿಸ್ತಾ ಮತ್ತು ರಿಯಾಜ್ ಲೇಸ್ಮೆನ್ ನೀಡಿರುವ 10 ಸಾವಿರ ರೂಪಾಯಿ, ರೋಟರಿ ಸಂಸ್ಥೆಯ ಶಶಿ ಮೊಣ್ಣಪ್ಪ ನೀಡಿದ 20 ಸಾವಿರ ರೂಪಾಯಿಗಳ ನೆರವನ್ನು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಸ್ವೀಕರಿಸಿದರು.ನಗರಸಭೆ ಉಪಾಧ್ಯಕ್ಷೆ ವಸಂತ ಕೇಶವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿಶೆಣೈ, ದಾನಿ ಗಂಗಾ ಇನಾ ಬಾಸಿನ್, ಪತಿ ಪ್ರದೀಪ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷ ಬೊಳ್ಳು ಮಾದಪ್ಪ ಉಪಸ್ಥಿತರಿದ್ದರು. ಶಿಶು ಕಲ್ಯಾಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೀತಾಲಕ್ಷ್ಮಿ ರಾಮಚಂದ್ರ ಸ್ವಾಗತಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.