ಬುಧವಾರ, ಜೂನ್ 16, 2021
23 °C

ಮಹಿಳೆ ಇಲ್ಲದೆ ಅಭಿವೃದ್ಧಿ ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆ ಇಲ್ಲದೆ ಅಭಿವೃದ್ಧಿ ಅಸಾಧ್ಯ

ಬೆಂಗಳೂರು: `ದೇಶದ ಸುಸ್ಥಿರ ಆರ್ಥಿಕ ಪ್ರಗತಿಯಾಗಬೇಕಾದರೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಮಹಿಳೆಯರನ್ನು ಹೊರಗಿಟ್ಟು ಸುಸ್ಥಿರ ಅಭಿವೃದ್ಧಿ ನಿರೀಕ್ಷೆ ಸಾಧ್ಯವಿಲ್ಲ~ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಉನ್ನತ ಶಿಕ್ಷಣ ಖಾತೆಯ ರಾಜ್ಯ ಸಚಿವೆ ಡಿ.ಪುರಂದೇಶ್ವರಿ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಮ್ಮ ಮಹಿಳಾ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಕರ್ನಾಟಕದ ಮೊದಲ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಮುಂದಿನ 20ರಿಂದ 30 ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಬೇಕಾದರೆ ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ಕಡಿಮೆಯಾಗಬೇಕು. ಅಂತೆಯೇ ಮಹಿಳೆಯೂ ಪ್ರಗತಿ ಸಾಧಿಸಬೇಕಾಗಿದೆ~ ಎಂದು ಅವರು ಪ್ರತಿಪಾದಿಸಿದರು.ದುರಭಿಮಾನ ಬೇಡ: `ಕಮ್ಮ~ ಜನಾಂಗದ ಹೆಸರಿನಲ್ಲಿ ಬ್ಯಾಂಕ್ ಸ್ಥಾಪಿಸಿರುವ ಬಗ್ಗೆ ಪ್ರಸ್ತಾಪಿಸಿದ ಅವರು, `ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲರಿಗೂ ತಮ್ಮ ತಮ್ಮ ಜಾತಿಯ ಬಗ್ಗೆ ಅಭಿಮಾನವಿರಬೇಕು. ಆದರೆ, ದುರಭಿಮಾನ ಬೇಡ~ ಎಂದರು.ನಿವೃತ್ತ ಮುಖ್ಯ ಆದಾಯ ತೆರಿಗೆ ಆಯುಕ್ತ ಎಂ. ನರಸಿಂಹಪ್ಪ, ತಮಿಳುನಾಡಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಟಿ. ರಾಧಾಕೃಷ್ಣನ್, ಐಸಿಎಐ ಮಾಜಿ ಅಧ್ಯಕ್ಷ ಟಿ.ಎನ್. ಮನೋಹರನ್, ನಗರ ಉಪ ಪೊಲೀಸ್ ಕಮಿಷನರ್ ಮುವ್ವ ಚಂದ್ರಶೇಖರ್, ಉದ್ಯಮಿ ಸಿ.ಎನ್. ಗೋವಿಂದರಾಜು ಉಪಸ್ಥಿತರಿದ್ದರು.ಬ್ಯಾಂಕ್‌ನ ಚೇರ‌್ಮನ್ ಬಿ. ಸುಭಾಷಿಣಿ ಸ್ವಾಗತಿಸಿದರು. ಅಧ್ಯಕ್ಷ ಎಸ್. ಗುರಪ್ಪ ಬ್ಯಾಂಕಿನ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.ಎನ್‌ಟಿಆರ್ ಮಗಳಾಗಿಯೇ ಹುಟ್ಟಬೇಕು...`ಮಾನವ ರೂಪದಲ್ಲಿ ಜನಿಸುವ ಎಷ್ಟೇ ಮರು ಜನ್ಮಗಳಿದ್ದರೂ ನಾನು ಎನ್‌ಟಿಆರ್ ಮಗಳಾಗಿಯೇ ಹುಟ್ಟಬೇಕು. ಕೇವಲ ಒಂದಲ್ಲ, ಅನೇಕ ಜನ್ಮಗಳ ಪುಣ್ಯದಿಂದ ನಾನು ಆ ಮಹಾನಟನ ಮಗಳಾಗಿ ಹುಟ್ಟಿದ್ದೇನೆ~ ಎಂದು ಕೇಂದ್ರ ಸಚಿವೆ ಪುರಂದೇಶ್ವರಿ ಹೇಳಿದರು.`ತೆಲುಗುತನವನ್ನು ಮೊದಲು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಎನ್‌ಟಿಆರ್‌ಗೇ ಸಲ್ಲಬೇಕು. ತಂದೆಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗದಿದ್ದರೂ ಬುದುಕಿದ್ದಷ್ಟು ದಿನ ಗುಣಮಟ್ಟದ ಜೀವನವನ್ನೇ ನಮಗೆ ಕಲಿಸಿದರು~ ಎಂದು ತಂದೆ ನಂದಮೂರಿ ತಾರಕ ರಾಮರಾವ್ ಅವರನ್ನು ಸ್ಮರಿಸಿ ಭಾವುಕರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.