ಮಹಿಳೆ ಎಂಬ ಕಾರಣಕ್ಕೆ ನಾಟಕ ನಿಲ್ಲಲಿಲ್ಲ

7

ಮಹಿಳೆ ಎಂಬ ಕಾರಣಕ್ಕೆ ನಾಟಕ ನಿಲ್ಲಲಿಲ್ಲ

Published:
Updated:
ಮಹಿಳೆ ಎಂಬ ಕಾರಣಕ್ಕೆ ನಾಟಕ ನಿಲ್ಲಲಿಲ್ಲ

`ಬದುಕಿನ ಬಹುಭಾಗ ಪುರುಷ ಪಾತ್ರದ ಅಭಿನಯದಲ್ಲೇ ಕಳೆದು ಹೋಯಿತು. ಈಗ ಹಿಂತಿರುಗಿ ನೋಡಿದರೆ ಹೇಗನಿಸುತ್ತೆ~. 86 ವರ್ಷದ ಹಿರಿಯ ನಟಿ ಸ್ತ್ರೀ ನಾಟಕ ಮಂಡಳಿಯ ಆರ್. ನಾಗರತ್ನಮ್ಮನವರಿಗೆ ತೀರಾ ಇತ್ತೀಚೆಗೆ ಈ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕವರು, `ಸಂತೋಷ ಇದೆ, ಬಹಳ ಖುಷಿ ಇದೆ.

ಪುರುಷ ಪಾತ್ರದಲ್ಲೇ ಹೆಚ್ಚು ಕಾಣಿಸಿಕೊಂಡಿದ್ದರಿಂದ ಈ ಸಂತೋಷ ಇನ್ನೂ ಅಧಿಕ! ಬಾಲ ನಟಿಯಾಗಿ ನಾಟಕ ಕಂಪೆನಿ ಸೇರಿದ ನಾನು ಒಂದೆರಡು ದಶಕ ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿರಬಹುದು. ಹಾಗೇ ಮುಂದುವರಿದಿದ್ದರೆ ನೂರರಲ್ಲಿ ನಾನೂ ಒಬ್ಬಳಾಗಿ ಬಿಡ್ತಿದ್ದೆ.

ನಂತರದ ಮೂರು ದಶಕ ಕಾಲ ಪುರುಷ ಪಾತ್ರಗಳಲ್ಲಿ ಅಭಿನಯಿಸಿದೆ. ಬರೀ ಸ್ತ್ರೀಯರನ್ನೊಳಗೊಂಡ ನಾಟಕ ಮಂಡಳಿ (1958) ಸ್ಥಾಪಿಸಿದೆ. ಇದರಿಂದಾಗಿ ನಾಡಿನಾದ್ಯಂತ ಹೆಸರಾದೆ. ಜನರ ಮನಸ್ಸಲ್ಲಿ ನಿಲ್ಲೋಕೆ ಸಾಧ್ಯವಾಯಿತು. ಕೇಂದ್ರ ಸರ್ಕಾರದ ಪದ್ಮಶ್ರೀ ವರೆಗೆ ಬಹಳಷ್ಟು ಪ್ರಶಸ್ತಿಗಳು ಬಂದವು. ಪತ್ರಿಕೆಗಳ ಸಹಕಾರ ಸಿಗ್ತು...~ ಎಂದಿದ್ದರು.ಹೌದು, ನಾಗರತ್ನಮ್ಮನವರನ್ನು ಜನ ಗುರುತು ಹಿಡಿಯುತ್ತಿದ್ದುದೇ ಅವರ ಪುರುಷ ಪಾತ್ರಗಳಿಂದ. ಹಿರಿಯ ನಟಿ ಆರ್.ನಾಗರತ್ನಮ್ಮ ಎಂದರೆ ರಂಗಾಸಕ್ತರು ಮಾತ್ರ ಗುರುತು ಹಿಡಿಯುತ್ತಿದ್ದರು. ಸ್ತ್ರೀ ನಾಟಕ ಮಂಡಳಿ ನಾಗರತ್ನಮ್ಮ ಎಂದರೆ ಇನ್ನೂ ಸ್ವಲ್ಪ ಹೆಚ್ಚು ಜನಕ್ಕೆ ಗೊತ್ತಾಗುತ್ತಿತ್ತು.

ಆದರೆ ಭೀಮ, ಕಂಸ, ರಾವಣನ ಪಾತ್ರದ ನಾಗರತ್ನಮ್ಮ ಎಂದರೆ ಯಾರಾದರೂ ಪಕ್ಕನೇ ಗುರುತು ಹಿಡಿಯಬಹುದಾದಷ್ಟು ಆ ಪಾತ್ರಗಳಿಗೆ ಅವರು ಜೀವ ತುಂಬಿದ್ದರು. ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ 86ರ ವಯಸ್ಸಿನ ನಾಗರತ್ನಮ್ಮ ಅವರ ಗಡಸು ಧ್ವನಿ ನಿನ್ನೆ ಮೊನ್ನೆಯವರೆಗೆ ಹಾಗೇ ಇತ್ತು.

ಸ್ತ್ರೀ ನಾಟಕ ಮಂಡಳಿ ಹೆಸರೇ ಹೇಳುವಂತೆ ಅಲ್ಲಿ ಎಲ್ಲರೂ ಮಹಿಳೆಯರು. ಪುರುಷ ಮತ್ತು ಮಹಿಳೆ ಎರಡೂ ಪಾತ್ರಗಳನ್ನು ಅವರು ಮಾಡಬೇಕಿತ್ತು.ಅವರೆಲ್ಲ ಹೆಸರಾಂತ ಕಲಾವಿದರು.ಎಲ್ಲ ಪಾತ್ರಗಳನ್ನು ಮಹಿಳೆಯರೇ ಅಭಿನಯಿಸಿದ್ದು ಕನ್ನಡ ವೃತ್ತಿ ರಂಗಭೂಮಿಯಲ್ಲಿ ಹೊಸದೇನೂ ಅಲ್ಲ. 1904ರಿಂದಲೇ ಇಂತಹ ಪ್ರವೃತ್ತಿ ಆರಂಭವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ದ್ವಿತೀಯ ದರ್ಜೆ ಪ್ರಜೆ! ಆದರೆ ಜಾನಪದ ಹಾಗೂ ವೃತ್ತಿರಂಗಭೂಮಿಯಲ್ಲಿ ಮಹಿಳೆಯ ಸ್ಥಾನ ಪುರುಷನಿಗೆ ಸರಿಸಮಾನವಾದುದು. ಸಂಖ್ಯೆಯ ದೃಷ್ಟಿಯಿಂದ ಅಲ್ಲದಿರಬಹುದು, ಆದರೆ ಸಾಮರ್ಥ್ಯ ಹಾಗೂ ಪ್ರತಿಭೆ ದೃಷ್ಟಿಯಿಂದ ಮಹಿಳೆ ಪುರುಷನ ಸರಿಸಾಟಿಯೇ.ಎರಡು ದಶಕಗಳ ಕಾಲ ನಿರಂತರ, ನಂತರ ಆಹ್ವಾನ ಇದ್ದಾಗ ನಾಟಕ ಪ್ರದರ್ಶಿಸುತ್ತಿದ್ದ ಆರ್. ನಾಗರತ್ನಮ್ಮನವರ ಸ್ತ್ರೀ ನಾಟಕ ಮಂಡಳಿಯು, ಕನ್ನಡ ರಂಗಭೂಮಿಯ ಇಂತಹ ಉನ್ನತ ಪರಂಪರೆಯನ್ನು ಮತ್ತಷ್ಟು ಉಜ್ವಲಗೊಳಿಸಿತು. ಬೆಂಗಳೂರನ್ನು ಕೇಂದ್ರ ಮಾಡಿಕೊಂಡ ನಾಟಕ ಮಂಡಳಿ ಆಹ್ವಾನ ಬಂದ ಊರುಗಳಲ್ಲಿ ತಿಂಗಳು, 15ದಿನ ನಾಟಕ ಪ್ರದರ್ಶನ ನೀಡಿ ಮತ್ತೆ ಬೆಂಗಳೂರಿಗೆ ವಾಪಸ್ ಬರುತ್ತಿತ್ತು.ಸ್ಥಳೀಯ ಕಂಟ್ರಾಕ್ಟರುಗಳು ನಾಟಕದ ವ್ಯವಸ್ಥೆ ಮಾಡಿ ಟಿಕೆಟ್ ಮುಖಾಂತರ ಸಂದ ಹಣದಲ್ಲಿ ಇಂತಿಷ್ಟು ಸಂಭಾವನೆ ಎಂದು ಕೊಡುತ್ತಿದ್ದರು. ಕೆಲವು ಊರುಗಳ ಕಂಟ್ರಾಕ್ಟನ್ನು ಸ್ವತಃ ನಾಗರತ್ನಮ್ಮನವರೇ ವಹಿಸಿಕೊಂಡು ನಿಭಾಯಿಸಿ- ಲಾಭ, ನಷ್ಟ ಎರಡನ್ನೂ ಅನುಭವಿಸ್ದ್ದಿದರು. `ಕೃಷ್ಣಗಾರುಡಿ~, `ಸದಾರಮೆ~, `ಸುಭದ್ರಾ ಪರಿಣಯ~, `ಬೇಡರ ಕಣ್ಣಪ್ಪ~, `ಸಂಸಾರ ನೌಕ~ `ಕೃಷ್ಣಲೀಲಾ~ ಇವೇ ಮುಂತಾದ ನಾಟಕಗಳನ್ನು ಮಂಡಳಿ ಅಭಿನಯಿಸುತ್ತಿತ್ತು.ಪತಿಗಿಲ್ಲದ ಅವಕಾಶ: ಮೈಸೂರಿನ ಕೃಷ್ಣಭಟ್ಟ- ರುಕ್ಮಿಣಮ್ಮ ದಂಪತಿಗೆ 1926ರಲ್ಲಿ ಜನಿಸಿದ ನಾಗರತ್ನಮ್ಮ ಚಿಕ್ಕ ವಯಸ್ಸಿನಲ್ಲೇ ನಾಟಕ ಕಂಪೆನಿ ಸೇರಿ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಿದರು. ಶೇಷಕಮಲ ನಾಟಕ ಮಂಡಳಿಯಲ್ಲಿದ್ದಾಗ ಪಾರ್ಥಸಾರಥಿ ಎಂಬ ಹೆಸರಾಂತ ನಟರೊಂದಿಗೆ ಅವರ ಮದುವೆಯಾಯಿತು.ನಾಗರತ್ನಮ್ಮ ಸ್ತ್ರೀ ನಾಟಕ ಮಂಡಳಿ ಮಾಡಿದ ಮೇಲೆ ಪತಿ ಪಾರ್ಥಸಾರಥಿಯವರಿಗೆ ಅಲ್ಲಿ ನಟನೆಯ ಅವಕಾಶ ಇರಲಿಲ್ಲ! ಆಗ ಅವರು ಬೇರೆ ಬೇರೆ ಕಂಪೆನಿಗಳಲ್ಲಿ ನಟರಾಗಿದ್ದರು. ಮಹಿಳೆ ಎಂಬ ಕಾರಣದಿಂದ ಸ್ತ್ರೀನಾಟಕ ಮಂಡಳಿಯ ಸದಸ್ಯರು ಮದುವೆ, ಮಕ್ಕಳು, ಮನೆ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಿದರು ಎಂಬ ಪ್ರಶ್ನೆ ಪುರುಷ ಕೇಂದ್ರಿತ ಸಮಾಜದಲ್ಲಿ ಸಹಜವಾಗಿ ಒಡಮೂಡುತ್ತದೆ.ನಾಗರತ್ನಮ್ಮ ಅದನ್ನು ಹೇಳುತ್ತ್ದ್ದಿದುದು ಹೀಗೆ; `ಮೂವರು ಮಕ್ಕಳು ನನಗೆ. ತಾತಂದಿರ, ಸಂಬಂಧಿಕರ ಮನೆಗಳಲ್ಲಿ ಅವರು ಬೆಳೆದರು. ಹೆಣ್ಮಕ್ಕಳನ್ನ ಮದುವೆ ಮಾಡಿಕೊಟ್ಟೆ. ಒಬ್ಬಳು ಖ್ಯಾತ ನೃತ್ಯಗಾರ್ತಿ ಉಷಾ ದಾತಾರ್ ಸೊಸೆ. ಮಗ ವಿಜಯ ಎಲ್‌ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ. ಈಗ ನಿವೃತ್ತನಾಗಿದ್ದಾನೆ...~`ನಮ್ಮ ನಾಟಕ ಮಂಡಳಿಯ ಪ್ರೇಮಾ ಅಂತ ಒಬ್ಬಳು ಮೃದಂಗ ಮೇಷ್ಟ್ರನ್ನ ಮದುವೆ ಆದಳು. ಕಲಾವತಿ ಅಂತೂ ಹೆರಿಗೆಗೆ ಹೋದ್ರೆ ಬೇಗ ವಾಪಸ್ ಬಂದುಬಿಡೋಳು. ನಿರ್ಮಲಾ ಚಿಕ್ಕ ಹುಡುಗಿ ಇದ್ದಾಗಲೇ ನಮ್ಮ ಕಂಪನಿ ಸೇರಿದ್ದಳು. ಗಂಡ, ಮಗ ಇದ್ದಾರೆ. ಕೆಲವರಿಗೆ ಬೇಗ ಮಕ್ಕಳಾಗಲಿಲ್ಲ. ಕೆಲವರು ಮದುವೇನೇ ಆಗದೇ ಉಳಿದರು. ಹೆಸರಾಂತ ನಟಿ ನನ್ನ ತಂಗಿ ಆರ್.ಮಂಜುಳಾನೂ ಮದುವೆ ಆಗಲಿಲ್ಲ.

ಈಗ ನನ್ನ ಮನೆಯಲ್ಲೇ ಇದ್ದಾಳೆ. ಅಷ್ಟಕ್ಕೂ ನಾವು ಹೆಣ್ಮಕ್ಕಳನ್ನ ಹೊರಗೆ ಬಿಡ್ತಾ ಇರಲಿಲ್ಲ. ಚೆಲ್ಲು ಚೆಲ್ಲಾಗಿ ಯಾರೂ ಇರಲಿಲ್ಲ. ನಮ್ಮ ನೋವು, ನಲಿವು ಏನಿದ್ದರೂ ರಂಗದ ಒಳಗೆ. ಹೊರಗಡೆ ನೋಡ್ತು ಅಂದ್ರೆ ಕಲೆ ಹೋಯ್ತು ಅಂತಾಲೆ ಅರ್ಥ...!~ಹೌದು ಮಹಿಳೆಯರಿಗೆ ಅವರದೇ ಆದ ಸಂಕಟಗಳಿದ್ದವಲ್ಲ..? `ಅವನ್ನೆಲ್ಲ ನನ್ನ ತಂಗಿ ಮಂಜುಳಾ ಹತ್ರ ಹಂಚಿಕೊಳ್ಳೋರು. ನಾನು ದೊಡ್ಡವಳು ಅಂತ ಭಯ, ಭಕ್ತಿ ಜಾಸ್ತಿ. ನನ್ನ ಹತ್ತಿರ ಏನೂ ಹೇಳ್ತಿರಲಿಲ್ಲ. ಇಂತಾದ್ದೆಲ್ಲ ನನಗೆ ಸಮಸ್ಯೆ ಆಗಿ ಕಾಡಲಿಲ್ಲ. ಕಲೆಕ್ಷನ್ ಇಲ್ಲದೇ ಅಥವಾ ಮಳೆ ಬಂತು ಅನ್ನೋ ಕಾರಣಕ್ಕೆ ಕೆಲವೊಮ್ಮೆ ನಾಟಕ ನಿಂತಿದೆಯೇ ಹೊರತು, ಮಹಿಳೆ ಅನ್ನೋ ಕಾರಣಕ್ಕೆ ನಾಟಕ ನಿಂತಿಲ್ಲ.~ನಾಗರತ್ನಮ್ಮ ಅಂತ್ಯಕ್ರಿಯೆ: 
ಬೆಂಗಳೂರು: ಶನಿವಾರ ರಾತ್ರಿ ನಿಧನರಾದ ಪದ್ಮಶ್ರೀ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ, ಹಿರಿಯ ರಂಗ ಕಲಾವಿದೆ ಆರ್. ನಾಗರತ್ನಮ್ಮ(86) ಅವರ ಅಂತ್ಯಕ್ರಿಯೆ ಬೆಂಗಳೂರಿನ ಹರಿಶ್ಚಂದ್ರಘಾಟ್‌ನಲ್ಲಿ ಭಾನುವಾರ ಮಧ್ಯಾಹ್ನ ನೆರವೇರಿತು.ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ನಾಗರತ್ನಮ್ಮ ಅವರ ಸಂಬಂಧಿ ಹಾಗೂ ಖ್ಯಾತ ನೃತ್ಯಪಟು ಉಷಾ ದಾತಾರ್ ಸೇರಿದಂತೆ ಕನ್ನಡ ರಂಗಭೂಮಿಯ ಹಲವು ಗಣ್ಯರು ಮೃತರ ನಿವಾಸಕ್ಕೆ ತೆರಳಿ ಗೌರವ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry