ಶುಕ್ರವಾರ, ಜೂನ್ 25, 2021
23 °C

ಮಹಿಳೆ ಕೊಲೆ: 13 ಸುಪಾರಿ ಹಂತರಕರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಪಾರಿ ಪಡೆದು ಮಹಿಳೆಯೊಬ್ಬರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ 13 ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.ಎಚ್‌ಎಸ್‌ಆರ್ ಲೇಔಟ್‌ನ ಕೃಷ್ಣಪ್ಪನಗರದ ಬಸಪ್ಪ (22), ರವಿ (25), ಪ್ರಸನ್ನ (20), ಸುನಿಲ್ (23), ಬೆಳ್ಳಂದೂರು ಸಮೀಪದ ಕಸವನಹಳ್ಳಿಯ ಶಂಕರ (24), ಕೋರಮಂಗಲ ಬಳಿಯ ರಾಜೇಂದ್ರನಗರದ ಮನೋಜ್ (23), ದೊಡ್ಡನಾಗಮಂಗಲದ ಅನಿಲ್ (29), ಮಾರತ್‌ಹಳ್ಳಿಯ ಸವಿತಾ (28), ಕೋರಮಂಗಲದ ಮುರುಗ (19), ಜೆ.ಯೇಸು (19), ಸುಬ್ರಮಣಿ  (21), ವಿವೇಕನಗರದ ಕಿಶನ್‌ಕುಮಾರ್ (20) ಮತ್ತು ಆನೇಕಲ್ ತಾಲ್ಲೂಕಿನ ಬಸವಪುರದ ಮುರಳಿ (29) ಬಂಧಿತರು.ಆರೋಪಿಗಳು ರಾಮಮೂರ್ತಿನಗರ ಸಮೀಪದ ಶ್ರೀನಿವಾಸರೆಡ್ಡಿಲೇಔಟ್ ಎರಡನೇ ಅಡ್ಡರಸ್ತೆ ನಿವಾಸಿ ನಿರ್ಮಲಾ (42) ಎಂಬುವರನ್ನು ಫೆ.27ರಂದು ಕೊಲೆ ಮಾಡಿದ್ದರು. ನಿರ್ಮಲಾ, ಆರೋಪಿ ಸವಿತಾ ಅವರ ಪತಿಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ವಿಷಯ ತಿಳಿದು ಕೋಪಗೊಂಡಿದ್ದ ಸವಿತಾ, ನಿರ್ಮಲಾ ಅವರನ್ನು ಕೊಲೆ ಮಾಡುವಂತೆ ಆರೋಪಿ ಅನಿಲ್ ಮತ್ತು ಸಹಚರರಿಗೆ ನಾಲ್ಕು ಲಕ್ಷ ರೂಪಾಯಿ ಮೊತ್ತದ ಸುಪಾರಿ ಕೊಟ್ಟಿದ್ದರು.

 

ಮುಂಗಡವಾಗಿ 20 ಸಾವಿರ ನಗದು ಹಾಗೂ ಸುಮಾರು 1.18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಸಹ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಮಲಾ ಕುಟುಂಬ ಸದಸ್ಯರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದರು.ಅಲ್ಲದೇ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರಿಂದ 1.15 ಲಕ್ಷ ನಗದು, 3.25 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು, ಕಾರು, ಎರಡು ಆಟೊ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಾಗಿದ್ದು, ಅವರ ವಿರುದ್ಧ ಮಡಿವಾಳ, ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಸರಗಳವು ಹಾಗೂ ದರೋಡೆ ಯತ್ನ ಪ್ರಕರಣಗಳು ದಾಖಲಾಗಿವೆ.ಕೆ.ಆರ್.ಪುರ ಉಪ ವಿಭಾಗದ ಎಸಿಪಿ ಡಾ.ಡಿ.ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಕೆ.ವಿ.ಶ್ರೀನಿವಾಸ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಅಗ್ನಿ ಅನಾಹುತ: ಮಹಿಳೆ ಸಾವುಸೀಮೆಎಣ್ಣೆ ಸ್ಟೌನಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿರುವ ಘಟನೆ ಪೀಣ್ಯ ಬಳಿಯ ನಾರಾಯಣಪುರದಲ್ಲಿ ನಡೆದಿದೆ. ನಾರಾಯಣಪುರ ನಿವಾಸಿ ಮಂಜುನಾಥ್ ಎಂಬುವರ ಪತ್ನಿ ರೂಪಾ (21) ಮೃತಪಟ್ಟವರು. ನಾಲ್ಕು ತಿಂಗಳುಗಳ ಹಿಂದೆಯಷ್ಟೇ ಅವರ ವಿವಾಹವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಮಾ.19ರಂದು ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರೂಪಾ ಅವರು ಸ್ಟೌನಲ್ಲಿ ಅಡುಗೆ ಮಾಡುತ್ತಿದ್ದಾಗ ಅವರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಅಕ್ಕಪಕ್ಕದ ಮನೆಯವರು ಅವರನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ಸುಟ್ಟ ಗಾಯಗಳಾಗಿ ಅಸ್ವಸ್ಥಗೊಂಡಿದ್ದ ಅವರು ಶುಕ್ರವಾರ ರಾತ್ರಿ ಮೃತಪಟ್ಟರು. ಪೀಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.ವ್ಯಕ್ತಿ ಸಾವುಮಾವಿನ ಎಲೆ ಕೀಳಲು ಮರಕ್ಕೆ ಹತ್ತಿದ್ದ ವ್ಯಕ್ತಿಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಹನುಮಂತನಗರ ಸಮೀಪದ ಕುಮಾರಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದಿದೆ.

ಮೂರ‌್ನಾಲ್ಕು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯ ಶವ ಕೊಳೆತು ಹೋಗಿದೆ. ಆ ವ್ಯಕ್ತಿಯ ವಯಸ್ಸು ಸುಮಾರು 35 ವರ್ಷ ಮತ್ತು ಅವರ ಗುರುತು ಪತ್ತೆಯಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.