ಸೋಮವಾರ, ಏಪ್ರಿಲ್ 12, 2021
31 °C

ಮಹಿಳೆ ಮುಖಕ್ಕೆ ಆ್ಯಸಿಡ್ ಎರಚಿ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಸಾಲ ಕೊಟ್ಟಿರುವ ಹಣವನ್ನು ವಾಪಸ್ ಕೊಡಿಸಿಕೊಡುವುದಾಗಿ ನಂಬಿಸಿ ಕರೆದೊಯ್ದ ವ್ಯಕ್ತಿಯೊಬ್ಬ ಮಹಿಳೆಯ ಮುಖಕ್ಕೆ ಆ್ಯಸಿಡ್ ಎರಚಿ ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಬಿಳಿಕಲ್ಲುಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಶನಿವಾರ ನಡೆದಿದೆ. ಕಸಬಾ ಹೋಬಳಿ ಚಿಕ್ಕಬೆಟ್ಟಳ್ಳಿ ಗ್ರಾಮದ ನಾಗರಾಜು ಅವರ ಪತ್ನಿ ರತ್ನಮ್ಮ (45) ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆ. ಕಸಬಾ ಹೋಬಳಿ ಕಡವೇಕೆರೆ ದೊಡ್ಡಿ ಗ್ರಾಮದ ಮಂಜುನಾಥ್ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿರುವ ವ್ಯಕ್ತಿ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಘಟನೆಯ ವಿವರ: ಆ್ಯಸಿಡ್ ದಾಳಿಗೆ ತುತ್ತಾಗಿರುವ ಮಹಿಳೆ ರತ್ನಮ್ಮ ಮಂಜುನಾಥನ ದೊಡ್ಡಪ್ಪನಿಗೆ 30 ಸಾವಿರ ರೂಪಾಯಿ ಕೈಸಾಲ ನೀಡಿದ್ದರು. ಸಾಲದ ಹಣವನ್ನು ಕೊಡಿಸುವಂತೆ ಮಂಜುನಾಥನ ದೊಡ್ಡಪ್ಪನನ್ನು ಆಗಾಗ ಕೇಳುತ್ತಲೇ ಇದ್ದರು. ಆದರೆ ಅವರಿಂದ ಸಾಲದ ಹಣ ವಾಪಸು ಬಂದಿರಲಿಲ್ಲ. ರತ್ನಮ್ಮ ತಮ್ಮ ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸುತ್ತಿದ್ದರು. ಶೌಚಾಲಯದ ಕೆಲಸವನ್ನು ಮಂಜುನಾಥನೇ ಮಾಡುತ್ತಿದ್ದುದರಿಂದ ಅವನ ಬಳಿ ಸಾಲದ ಹಣ ವಾಪಸು ಕೊಡದಿರುವ ಬಗ್ಗೆ ಆಕೆ ಆಗಾಗ್ಗೆ ಹೇಳಿಕೊಂಡಿದ್ದರು.

 ಶನಿವಾರ ಬೆಳಿಗ್ಗೆ ಮಂಜುನಾಥ ರತ್ನಮ್ಮಳನ್ನು `ನಮ್ಮ ದೊಡ್ಡಪ್ಪನಿಗೆ ಬ್ಯಾಂಕಿನಿಂದ ಸಾಲ ಮಂಜೂರಾಗಿದ್ದು ಇಂದು ಹಣ ಬಂದಿದೆ. ಬಿಳಿಕಲ್ಲುಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೊಡ್ಡಪ್ಪ ಪೂಜೆ ಮಾಡಿಸುತ್ತಿದ್ದಾರೆ. ಅಲ್ಲಿಯೇ ಹಣವನ್ನು ಕೊಡಿಸುತ್ತೇನೆ ಬಾ~ ಎಂದು ಹೇಳಿ ಆಕೆಯನ್ನು ನಂಬಿಸಿ ತನ್ನ ದ್ವಿಚಕ್ರ ವಾಹನದಲ್ಲೇ ಕರೆದುಕೊಂಡು ಬಿಳಿಕಲ್ಲು ಬೆಟ್ಟಕ್ಕೆ ತೆರಳಿದ್ದಾನೆ. ಕಾಡಿನ ಮಧ್ಯೆ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ ರತ್ನಮ್ಮನ ಮುಖಕ್ಕೆ ಆ್ಯಸಿಡ್ ಎರಚಿ ಆಕೆಯ ಮೈಮೇಲಿದ್ದ ಕಾಸಿನ ಸರ, ಮಾಂಗಲ್ಯ ಸರ, ಓಲೆ, ಝುಮುಕಿ, ಉಂಗುರ, ಕಾಲು ಚೈನುಗಳನ್ನು ಕಿತ್ತುಕೊಂಡು ರತ್ನಮ್ಮ ಸತ್ತಿದ್ದಾಳೆಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಶನಿವಾರ 11 ಗಂಟೆ ಸುಮಾರಿಗೆ ನಡೆದ್ದ್ದಿದರೂ ಬೆಳಕಿಗೆ ಬಂದಿರುವುದು ಭಾನುವಾರ ಮಧ್ಯಾಹ್ನ. ಭಾನುವಾರ ಕಾಡಿಗೆ ದನ ಮೇಯಿಸಲು ತೆರಳಿದ್ದ ಸುಂಡಘಟ್ಟ ಮತ್ತು ಬೆಟ್ಟೇಗೌಡನ ದೊಡ್ಡಿಯವರು ಮಹಿಳೆಯ ನರಳಿಕೆಯ ಧ್ವನಿಯನ್ನು ಕೇಳಿ ತಕ್ಷಣವೇ ಹೋಗಿ ನೋಡಿದಾಗ ಆ್ಯಸಿಡ್ ದಾಳಿಗೆ ಸಿಲುಕಿ ಒದ್ದಾಡುತ್ತಿದ್ದ ರತ್ನಮ್ಮ ಕಂಡು ಬಂದಿದ್ದಾಳೆ.ಕೂಡಲೇ ಅವರು ರತ್ನಮ್ಮನನ್ನು ಗುರುತಿಸಿ ಆಕೆಯ ಮನೆಯವರಿಗ ವಿಷಯ ಮುಟ್ಟಿಸಿದ್ದಾರೆ. ರತ್ನಮ್ಮನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಆ್ಯಸಿಡ್ ದಾಳಿಯಿಂದ ಎರಡು ಕಣ್ಣುಗಳ ದೃಷ್ಟಿ ಹೋಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಆರೋಪಿ ಮಂಜುನಾಥ್ ಒಡವೆಗಳ ಸಮೇತ ಪರಾರಿಯಾಗಿದ್ದಾನೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.