ಬುಧವಾರ, ಜೂನ್ 23, 2021
24 °C

ಮಹಿಳೆ ಮೇಲೆ ನಿರಂತರ ದೌರ್ಜನ್ಯ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ‘ಇತ್ತೀಚಿನ ದಿನಗಳಲ್ಲಿ ಮಹಿಳಾ ಪರವಾದ ಕೂಗು ಎದ್ದಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ.ಟಿ. ಇಂದಿರಾ ವಿಷಾದಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಲ್ಪಕಲಾ ಮಹಿಳಾ ಒಕ್ಕೂಟ, ಧರಣಿ ಯುವತಿ ಮಂಡಳಿಯ  ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಕಾನೂನುಗಳು ಮಹಿಳೆಯ ಪರವಾಗಿದ್ದರೂ ಮಹಿಳೆಯರು ಇಂದಿಗೂ ನೋವು ಅನುಭವಿಸುವುದು ತಪ್ಪಿಲ್ಲ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಡಿ. ಚಂದ್ರೇಗೌಡ ಮಾತನಾಡಿದರು. ರೈತ ಮಹಿಳೆ ಸುಶೀಲಾ, ಒಕ್ಕೂಟದ ಖಜಾಂಚಿ ಚಂದ್ರಮ್ಮ, ಪತ್ರಕರ್ತ ಡಿ.ಬಿ. ಮೋಹನ್‌ಕುಮಾರ್‌, ಅಂಗನವಾಡಿ ನೌಕರರಾದ ಹೂವಮ್ಮ, ಸುನಂದ, ಛಾಯಾದೇವಿ, ರಾಜಲಕ್ಷ್ಮಿ, ಭಾಗ್ಯಮ್ಮ, ಪಾರ್ವತಮ್ಮ, ಅನ್ನಪೂರ್ಣ, ದ್ಯಾವಮ್ಮ, ಯಶೋದಾ ಅವರನ್ನು ಸನ್ಮಾನಿಸಲಾಯಿತು.ರೈತ ಮುಖಂಡ ಭೋಗಮಲ್ಲೇಶ್‌, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಇಂದಿರಮ್ಮ, ಧರಣಿ ಯುವತಿ ಮಂಡಳಿಯ ಅಧ್ಯಕ್ಷೆ ವೈ.ಆರ್‌. ಭಾರತಿಗೌಡ, ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶೋಭಾ ಗಣೇಶ್‌, ಇಂದಿರಮ್ಮ, ತೀರ್ಥಮ್ಮ, ಪ್ರಭಾವತಿ, ಜಯಮ್ಮ ಇದ್ದರು.‘ಕೀಳರಿಮೆ ಬೆಳೆಸಿಕೊಳ್ಳಬೇಡಿ’

ಅರಕಲಗೂಡು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹವೆನಿಸುವ ಸಾಧನೆ ಮೆರೆದಿದ್ದರೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಇನ್ನೂ ಹೋರಾಟ ನಡೆಸಬೇಕಿರುವುದು ವಿಷಾದಕರ ಎಂದು ಶುಭಾ ವಿವೇಕ್‌ ತಿಳಿಸಿದರು.ಇಲ್ಲಿನ ವಿಪ್ರ ಮಹಿಳಾ ಬಳಗ ಶನಿವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ಮುನ್ನೆಡೆದಾಗ ಉನ್ನತ ಸಾಧನೆಗಳನ್ನು ಸಾಧಿಸಬಹುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಎ.ಎನ್‌. ಗಣೇಶ್‌ ಮೂರ್ತಿ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್‌. ಸುಬ್ಬರಾವ್‌, ಬ್ರಾಹ್ಮಣ ಮಹಾಸಭಾದ ಮುಖಂಡರಾದ ಶೇಷಾಚಲಮೂರ್ತಿ, ಎಚ್‌. ಜಿ.ರಮೇಶ್‌, ಮಹಿಳಾ ಬಳಗದ ಮಾಜಿ ಅಧ್ಯಕ್ಷೆ ಗೀತಾ ಮಾತನಾಡಿದರು. ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ನಳಿನಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಧಾ ಸ್ವಾಗತಿಸಿ, ಖಜಾಂಚಿ ಸವಿತ ವಂದಿಸಿದರು. ವಿದ್ಯಾ ಮತ್ತು ತಂಡದವರು ‘ಪರೀಕ್ಷಾ ಸಿದ್ಧತೆ ’ ಎಂಬ ಹಾಸ್ಯನಾಟಕ ಅಭಿನಯಿಸಿದರು.‘ದೌರ್ಜನ್ಯದ ವಿರುದ್ಧ ಹೋರಾಡಿ’

ಚನ್ನರಾಯಪಟ್ಟಣ: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೋರಾಡಬೇಕು ಎಂದು ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಸಿ. ಶಾಮ್‌ಪ್ರಸಾದ್‌  ಹೇಳಿದರು.ತಾಲ್ಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಶನಿವಾರ  ಏರ್ಪಡಿಸಿದ್ದ ’ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಂದು ಅವರು ಮಾತನಾಡಿದರು. ವರದಕ್ಷಿಣೆ ಮತ್ತು  ಲೈಂಗಿಕ ಕಿರುಕುಳ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ದೇಶದಲ್ಲಿ ಪ್ರಜಾತಂತ್ರ ಸರ್ಕಾರವಿದ್ದರೂ, ಕೆಲವರು  ನಾಗರಿಕರಂತೆ ವರ್ತಿಸುತ್ತಿಲ್ಲ. ಮಹಿಳೆಯರು ದೌರ್ಜನ್ಯದ ವಿರುದ್ಧ ಹೋರಾಡುವ ಮನೋಸ್ಥೈರ್ಯ ರೂಢಿಸಿಕೊಳ್ಳಬೇಕು  ಎಂದರು.ಹಿರಿಯ ವಿಭಾಗದ ಸಿವಿಲ್‌ ನ್ಯಾಯಾಧೀಶ ಎಸ್‌.ಟಿ. ದೇವರಾಜ ಮಾತನಾಡಿದರು. ಪ್ರಧಾನ ಸಿವಿಲ್‌ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ, ಸಹಾಯಕ ಸರ್ಕಾರಿ ಅಭಿಯೋಜಕ ಎಂ. ಮೃತ್ಯುಂಜಯ, ವಕೀಲರ ಸಂಘದ ಅದ್ಯಕ್ಷ ವೈ.ಕೆ. ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷ ರಂಗಶೆಟ್ಟಿ, ಕಾರ್ಯದರ್ಶಿ ಎಂ.ಆರ್‌. ನಿಂಗರಾಜು, ಖಜಾಂಚಿ ಎ.ಡಿ. ಕುಮಾರ್‌, ವಕೀಲೆ ಎನ್‌. ಮುತ್ತುಲಕ್ಷ್ಮೀ, ಗಿರಿಜಾ ಪುಟ್ಟಸ್ವಾಮಿಗೌಡ ಇದ್ದರು. ವಕೀಲರಾದ ಸಿ.ಎಲ್‌. ಭಾಗ್ಯ ಸ್ವಾಗತಿಸಿದರು. ವಕೀಲೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.