ಮಹಿಳೆ ಸಂಸ್ಕೃತಿಯ ಅವಿಭಾಜ್ಯ ಅಂಗ: ಭಾಗ್ಯಲಕ್ಷ್ಮಿ

7

ಮಹಿಳೆ ಸಂಸ್ಕೃತಿಯ ಅವಿಭಾಜ್ಯ ಅಂಗ: ಭಾಗ್ಯಲಕ್ಷ್ಮಿ

Published:
Updated:

ಮುಂಡರಗಿ: `ಮಹಿಳೆಯರು ನಮ್ಮ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯ, ಸಮಾಜಗಳ ಅವಿಭಾಜ್ಯ ಅಂಗ. ಮಹಿಳೆಯರ ಬದುಕನ್ನು ಪ್ರತ್ಯೇಕಿಸಿ ಜಗತ್ತಿನ ಯಾವ ಸಂಸ್ಕೃತಿ, ಸಮಾಜ ಹಾಗೂ ಸಾಹಿತ್ಯವನ್ನು ಅಭ್ಯಸಿಸಲು ಸಾಧ್ಯವಿಲ್ಲ~ ಎಂದು ಶಿಂಗಟಾಲೂರಿನ ವೀರಭದ್ರೇಶ್ವರ ಸರಕಾರಿ ಪ್ರೌಢ ಶಾಲೆಯ ಅಧ್ಯಾಪಕಿ ಭಾಗ್ಯಲಕ್ಷ್ಮಿ ಬಿಳಿಮಗ್ಗದ ಹೇಳಿದರು. ತಾಲ್ಲೂಕಿನ ಕಲಕೇರಿ ವಿರುಪಾಪುರ ಗ್ರಾಮದ ಮುದುಕೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಲಭ್ಯವಿರುವ ಜಗತ್ತಿನ ಎಲ್ಲ ಲಿಖಿತ ಸಾಹಿತ್ಯಕ್ಕೆ ಜಾನಪದ ಸಾಹಿತ್ಯವೇ ಮೂಲಾಧಾರ. ನಾಡಿನ ಮಹಿಳೆಯರ ಸಂಕೀರ್ಣ ಬದುಕು, ಅವಳ ಭಾವನಾತ್ಮಕ ಸಂಬಂಧಗಳು ಜನಪದ ಸಾಹಿತ್ಯದ ಮೂಲ ಬೇರುಗಳಾಗಿವೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಆಧುನಿಕ ಮಹಿಳೆಯರು ನಮ್ಮ ಜಾನಪದವು ಚಿತ್ರಿಸಿರುವ ಮಹಿಳಾ ಚಿತ್ರಣವನ್ನು ಅರ್ಥೈಸಿಕೊಳ್ಳುವ ಅಗತ್ಯವಿದೆ~ ಎಂದರು.`ಜಾಗತೀಕರಣದ ಭರಾಟೆಯಲ್ಲಿ ನಮ್ಮ ಪ್ರಾಚೀನ ಸಂಪ್ರದಾಯ ಹಾಗೂ ಆಚರಣೆಗಳು ಕಳೆದು ಹೋಗುತ್ತಿದ್ದು, ಉತ್ಸವ, ಜಯಂತಿ, ಜಾತ್ರೆಗಳು ನಮ್ಮ ಪ್ರಾಚೀನ ಪರಂಪರೆಗಳನ್ನು ಬಿಂಬಿಸುವ ಕಾರ್ಯವನ್ನು ಮಾಡಬೇಕು. ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಪ್ರತೀ ವರ್ಷ ಜಾತ್ರಾ ಮಹೋತ್ಸವದಲ್ಲಿ ಅವಸಾನದ ಅಂಚಿನಲ್ಲಿರುವ ಕುಸ್ತಿ ಸ್ಪರ್ಧೆ ಏರ್ಪಡಿಸುತ್ತಿರುವುದು ಶ್ವಾಘನೀಯ~ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ ಹರ್ಷ ವ್ಯಕ್ತಪಡಿಸಿದರು.`ಇತ್ತೀಚಿನ ವರ್ಷಗಳಲ್ಲಿ ಯುವಕರು ಕೃಷಿಯನ್ನು ಅಲಕ್ಷಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮುಂಬರುವ ದಿನಗಳಲ್ಲಿ ಆಹಾರೋತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಕೃಷಿ ಹಾಗೂ ತೋಟಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಯುವಕರು ಅವುಗಳ ಸದುಪಯೋಗ ಪಡೆದು ಕೃಷಿಯಲ್ಲಿ ಮುಂದೆ ಬರಬೇಕು~ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಹೇಮಗಿರೀಶ ಹಾವಿನಾಳ ಸಲಹೆ ನೀಡಿದರು. ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿಕೊಂಡಿದ್ದರು. ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎಚ್.ಪಾಟೀಲ ಮಾತನಾಡಿದರು. ವೀರಭದ್ರಯ್ಯ ಹಿರೇಮಠ ಮಾತನಾಡಿ, ಮಠದ ಅಭಿವೃದ್ಧಿಗೆ 50 ಸಾವಿರ ರೂಪಾಯಿ ದೇಣಿಗೆ ನೀಡಿದರು. ಜಿ.ಪಂ.ಸದಸ್ಯ ಕಸ್ತೂರೆವ್ವ ಪಾಟೀಲ, ಅಂದಪ್ಪ ಮೇಟಿ, ಕೆ.ಎ.ದೇಸಾಯಿ, ಪಿ.ಎಂ.ಪಾಟೀಲ ವೇದಿಕೆಯ ಮೇಲೆ ಹಾಜರಿದ್ದರು. ಜಯಣ್ಣ ದ್ರಾಕ್ಷಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry