ಮಹಿಳೆ ಸಾವಿಗೆ ಆಕ್ರೋಶ: ಪ್ರತಿಭಟನೆ

7

ಮಹಿಳೆ ಸಾವಿಗೆ ಆಕ್ರೋಶ: ಪ್ರತಿಭಟನೆ

Published:
Updated:

ಆನೇಕಲ್: ಹಾವು ಕಡಿತ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಲು ನಾರಾಯಣ ಹೃದಯಾಲಯದ ಆಸ್ಪತ್ರೆ ವೈದ್ಯರು ನಿರಾಕರಿಸಿ, ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬದ ಸಂಬಂಧಿಗಳು ಆಸ್ಪತ್ರೆಯ ಎದುರು ಶವವಿಟ್ಟು  ಬುಧವಾರ ಪ್ರತಿಭಟನೆ ನಡೆಸಿದರು.ಮೃತರು ಕುಣಿಗಲ್ ತಾಲ್ಲೂಕಿನ ಕಾಚನಹಳ್ಳಿಯ ಜಯಮ್ಮ (45) ಎಂಬುವವರಾಗಿದ್ದು,  ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ತನ್ನ ಮಗನ ಜೊತೆ ವಾಸವಾಗಿದ್ದರು. ಜಯಮ್ಮನಿಗೆ ಮಂಗಳವಾರ ರಾತ್ರಿ ಹಾವು ಕಡಿದಿದ್ದು, ತಕ್ಷಣ ನಾರಾಯಣ ಹೃದಯಾಲಯದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಯ ಸಿಬ್ಬಂದಿ ಬೆಡ್ ಖಾಲಿ ಇಲ್ಲವೆಂದು ನೆಪ ಹೇಳಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು. ಎಷ್ಟೇ ಬೇಡಿಕೊಂಡರೂ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸಲಿಲ್ಲ ಎಂದು ಜಯಮ್ಮನ ಪುತ್ರ ಮೋಹನ್ ಅವರು ಆರೋಪಿಸಿದ್ದಾರೆ.ನಂತರ ಜಯಮ್ಮ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ನಡೆಸಲಾಯಿತು. ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟರು ಎಂದು ಸಂಬಂಧಿಕರು ತಿಳಿಸಿದರು. ಘಟನೆ ಖಂಡಿಸಿ ನಾರಾಯಣ ಹೃದಯಾಲಯದ ಪ್ರವೇಶದ್ವಾರದ ಬಳಿ ಶವವನ್ನಿಟ್ಟು ಕುಟುಂಬದವರು ಹಾಗೂ ಕಾರ್ಮಿಕರು ಬುಧವಾರ ಸಂಜೆಯಿಂದ ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ 8ಗಂಟೆಯಾದರೂ ಪ್ರತಿಭಟನೆ ಮುಂದುವರಿದಿತ್ತು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದರೆಡ್ಡಿ, ಕಾರ್ಮಿಕರ ವಿಮೆ ಸೌಲಭ್ಯ ಸಹ ನಾರಾಯಣ ಹೃದಯಾಲಯದಲ್ಲಿದೆ. ಕಾರ್ಮಿಕರ ಭವಿಷ್ಯ ನಿಧಿ ಕಾರ್ಡ್ ಇದ್ದರೂ  ಸ್ಪಂದಿಸಿಲ್ಲ. ಈಕೆಯ ಸಾವಿಗೆ  ಆಸ್ಪತ್ರೆಯವರು ಕಾರಣರಾಗಿರುವುದು ಖಂಡನೀಯ. ವೈದ್ಯರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.ಕಾರ್ಮಿಕರ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಎಂ.ರಾಮಚಂದ್ರ, ಮುಖಂಡರಾದ ತೋಟಗಿರಿ, ನರೇಂದ್ರ ಬಾಬು, ಶಿವಕುಮಾರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry