ಮಹಿಳೆ ಸಾವು: ಪ್ರತಿಭಟನೆ

7

ಮಹಿಳೆ ಸಾವು: ಪ್ರತಿಭಟನೆ

Published:
Updated:

ಮುಂಡರಗಿ: ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ವೈದ್ಯರು ತಕ್ಷಣ ಚಿಕಿತ್ಸೆ ನೀಡದೆ, ರೋಗಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಮುಂಡವಾಡ ಗ್ರಾಮದ ಜನರು ಗುರುವಾರ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮೃತಳ ಕುಟುಂಬದ ಸದಸ್ಯರೊಂದಿಗೆ ಮುಂಜಾನೆ 11.30ಗಂಟೆಗೆ ಮುಂಡವಾಡ ಗ್ರಾಮದಿಂದ ಟ್ಯಾಕ್ಟರ್‌ನಲ್ಲಿ ಆಗಮಿಸಿದ ಗ್ರಾಮಸ್ಥರು ಆಸ್ಪತ್ರೆಯ ಒಳನುಗ್ಗಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಸಿದರು. ಗ್ರಾಮಸ್ಥರ ಸುಳಿವು ಅರಿತ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಆಕ್ರೋಶಗೊಂಡಿದ್ದ ಗ್ರಾಮಸ್ಥರು ಆಸ್ಪತ್ರೆಯ ವೈದ್ಯರಿಗಾಗಿ ಆಸ್ಪತ್ರೆಯನ್ನೆಲ್ಲ ಜಾಲಾಡಿ, ನಂತರ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಆಸ್ಪತ್ರೆ ವೈದ್ಯಾಧಿಕಾರಿಗಳು ಬರುವವರೆಗೆ ಆಸ್ಪತ್ರೆಯನ್ನು ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.  ಮುಖಂಡರಾದ ಕರಬಸಪ್ಪ ಹಂಚಿನಾಳ, ಹೇಮಗಿರಿಶ ಹಾವಿನಾಳ, ವೈ.ಎನ್.ಗೌಡರ, ಹೇಮಂತಗೌಡ ಪಾಟೀಲ ಮೊದಲಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.   ನಂತರ ಜಿಲ್ಲಾ ನೋಡಲ್ ಅಧಿಕಾರಿ ಡಾ.ಕಬಾಡಿ, ತಹಶೀಲ್ದಾರ ರಮೇಶ ಕೋನರಡ್ಡಿ  ಆಗಮಿಸಿ  ತಪ್ಪಿತಸ್ಥ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry