ಮಹಿ ಪಡೆಯ ಮೇಲೆ ನಿರೀಕ್ಷೆಯ ಭಾರ

7

ಮಹಿ ಪಡೆಯ ಮೇಲೆ ನಿರೀಕ್ಷೆಯ ಭಾರ

Published:
Updated:

ಮಂಗಳೂರು: ಒತ್ತಡದ ಸ್ಥಿತಿಯನ್ನು ನಿಭಾಯಿಸುವ ಹೆಚ್ಚುವರಿ ಹೊಣೆಯನ್ನು ನಾವು ಕಲಿತುಕೊಂಡಿದ್ದೇವೆ ಎಂದು  ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಕೆಲವು ದಿನಗಳ ಹಿಂದೆ ಹೇಳಿದ್ದಾರೆ. ಬರೇ ಪಂದ್ಯಗಳಲ್ಲಿ ಎದುರಾಗುವ ಒತ್ತಡವಷ್ಟೇ ಅಲ್ಲ, ಹತ್ತನೇ ವಿಶ್ವಕಪ್ ಏಷ್ಯ ಉಪಖಂಡದಲ್ಲಿ ನಡೆಯುತ್ತಿರುವುದರಿಂದ ಭಾರತ ತಂಡದ ಮೇಲೆ ಪ್ರೇಕ್ಷಕರ ಅಪೇಕ್ಷೆ, ನಿರೀಕ್ಷೆಗಳ ಒತ್ತಡವೂ ಇದೆ.ದೋನಿ ತಂಡದ ಬಗ್ಗೆ ವೆಸ್ಟ್ ಇಂಡೀಸ್‌ನ ಬ್ರಯಾನ್ ಲಾರಾ ಸೇರಿದಂತೆ ಕೆಲವು ಮಾಜಿ ಹಾಗೂ ಹಾಲಿ ಆಟಗಾರರು ಭರವಸೆಯ ಮಾತುಗಳನ್ನು ಆಡಿದ್ದಾರೆ. ಸ್ವಂತ ನೆಲದ ಮೇಲೆ ಭಾರತದ ತಂಡವನ್ನು ಸೋಲಿಸುವುದು ಕಷ್ಟ ಎನ್ನುವಂತೆ ಭಾರತ ಆಡಿದ್ದೂ ಇದೆ.ಈ ಹಿನ್ನೆಲೆಯಿದ್ದರೂ, ವಿಶ್ವಕಪ್ ಕ್ರಿಕೆಟ್ ಇತಿಹಾಸ ಕೆದಕಿದರೆ ಇದುವರೆಗೆ 9 ಸಂದರ್ಭದಲ್ಲಿ ಆತಿಥ್ಯ ವಹಿಸಿದ ತಂಡ ಗೆದ್ದಿರುವುದು ಒಂದೇ ಬಾರಿ. ಅದೂ ಜಂಟಿ ಆತಿಥ್ಯ ವಹಿಸಿದ್ದಾಗ. 1996ರಲ್ಲಿ ಏಷ್ಯ ಉಪಖಂಡದಲ್ಲಿ ನಡೆದ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿಶ್ವ ಕಪ್ ಗೆದ್ದುಕೊಂಡಿತ್ತು.ಆತಿಥ್ಯ ವಹಿಸಿದ್ದ ತಂಡ ಫೈನಲ್ ತಲುಪಿದ್ದು ಎರಡೇ ಬಾರಿ- 1979ರಲ್ಲಿ ಇಂಗ್ಲೆಂಡ್, 1996ರಲ್ಲಿ  ಶ್ರೀಲಂಕಾ (ಜಂಟಿ ಆತಿಥ್ಯ) ಎಂಬ ಅಂಶವೂ ಗಮನಾರ್ಹ.ಮೊದಲ ಮೂರು (ಪ್ರುಡೆನ್ಶಿಯಲ್) ವಿಶ್ವಕಪ್ ಕ್ರಿಕೆಟ್ ಕೂಟಗಳು ಇಂಗ್ಲೆಂಡ್‌ನಲ್ಲಿ ನಡೆದಿದ್ದವು. ಆಗ ಒಮ್ಮೆ ಮಾತ್ರ ಇಂಗ್ಲೆಂಡ್ ಫೈನಲ್‌ಗೆ ಬಂದಿತ್ತು. ಮೊದಲ ಎರಡು ಸಂದರ್ಭದಲ್ಲಿ (1975, 1979) ಘಟಾನುಘಟಿ ಬ್ಯಾಟ್ಸ್‌ಮನ್ನರು, ಪೇಸ್ ಬ್ಯಾಟರಿ ಹೊಂದಿದ್ದ ವೆಸ್ಟ್ ಇಂಡೀಸ್ ವಿಜಯಿಯಾದರೆ, 1983ರಲ್ಲಿ ಯಾರೂ ನಿರೀಕ್ಷಿಸದಂತೆ ಕಪಿಲ್ ದೇವ್ ಬಳಗ ವಿಜಯಿಯಾಗಿತ್ತು.ಭಾರತ, ಏಷ್ಯ ಉಪಖಂಡದಲ್ಲಿ ನಡೆದ 1987ರ ರಿಲಯನ್ಸ್ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಮಣಿಯಬೇಕಾಯಿತು.ಶತಕ ಬಾರಿಸಿದ್ದ ಇಂಗ್ಲೆಂಡ್ ಆರಂಭ ಆಟಗಾರ ಗ್ರಹಾಂ ಗೂಚ್ ಭಾರತವನ್ನು  ಅರ್ಧ ಪಂದ್ಯ ಮುಗಿದಾಗಲೇ ‘ಸ್ವೀಪ್’ ಮಾಡಿದ್ದರು. ಆದರೆ ಫೈನಲ್‌ನಲ್ಲಿ ಇಂಥ ಒಂದು ಸ್ವೀಪ್, ಉತ್ತಮವಾಗಿ ಆಡುತ್ತಿದ್ದ ಕ್ಯಾಪ್ಟನ್ ಮೈಕ್ ಗ್ಯಾಟಿಂಗ್ ಅವರನ್ನು ಬಲಿತೆಗೆದುಕೊಂಡು, ಆಲನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯಾ ತಂಡ ಕಪ್ ಗೆಲ್ಲಲು ನೆರವಾಯಿತು.ಆಸ್ಟ್ರೇಲಿಯ- ನ್ಯೂಜಿಲೆಂಡ್ ಜಂಟಿ ಆತಿಥ್ಯ ವಹಿಸಿದ್ದ 1992ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮೂರನೇ ಬಾರಿ ಫೈನಲ್ ತಲುಪಿದರೂ, ಅಂತಿಮವಾಗಿ ಕಪ್ ಎತ್ತಿದ್ದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡ. ನಾಲ್ಕು ವರ್ಷಗಳ ನಂತರ ಅರ್ಜುನ ರಣತುಂಗ ತಮ್ಮ ತಂಡ, ಆಸ್ಟ್ರೇಲಿಯ ಪ್ರವಾಸದಲ್ಲಿ ಅನುಭವಿಸಿದ್ದ ನೋವಿಗೆ ಸೇಡು ತೀರಿಸಿಕೊಂಡಿದ್ದರು.ಇನ್ನು 1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಲ್ಯಾನ್ಸ್ ಕ್ಲೂಸ್ನರ್ ಅವರ ಅಬ್ಬರದ ಆಲ್‌ರೌಂಡ್ ಆಟದಿಂದ ದಕ್ಷಿಣ ಆಫ್ರಿಕ ಸೆಮಿಫೈನಲ್ ತಲುಪುವಂತೆ ಮಾಡಿದ್ದರು. ಆದರೆ ಈ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಪ್ರಯಾಸದಿಂದ ಗೆದ್ದ ಆಸ್ಟ್ರೇಲಿಯಕ್ಕೆ ಫೈನಲ್‌ನಲ್ಲಿ ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಬಗ್ಗುಬಡಿಯಿತು.ನಾಲ್ಕು ವರ್ಷಗಳ ನಂತರ- ದಕ್ಷಿಣ ಆಫ್ರಿಕ ಮೊದಲ ಬಾರಿ ವಿಶ್ವಕಪ್ ಆತಿಥ್ಯ ವಹಿಸಿದಾಗ ಭಾರತ ಮತ್ತೊಮ್ಮೆ ಅಮೋಘವಾಗಿ ಆಡಿತು. ರಿಕಿ ಪಾಂಟಿಂಗ್ ಅವರ ಅಬ್ಬರದ ಆಟ ಭಾರತಕ್ಕೆ ಮುಳುವಾಯಿತು. ಆಸ್ಟ್ರೇಲಿಯಾ 2 ವಿಕೆಟ್‌ಗೆ 359 ರನ್ ಹೊಡೆದರೆ, ಭಾರತ 234 ರನ್ನಿಗೆ ಆಟ ಮುಗಿಸಿತು. ಪಾಂಟಿಂಗ್ ಅಜೇಯ 146 ರನ್ ಹೊಡೆದಿದ್ದರು.ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಸತತ ನಾಲ್ಕನೇ ಬಾರಿ ಫೈನಲ್ ತಲುಪಿತು. ಅಂತಿಮ ಹಂತಕ್ಕೆ ಅನಿರೀಕ್ಷಿತವಾಗಿ ಧಾವಿಸಿದ್ದ ಶ್ರೀಲಂಕಾವನ್ನು ಮಳೆ ಪೀಡಿತ ಪಂದ್ಯದಲ್ಲಿ ಸುಲಭವಾಗಿ ಮಣಿಸಿತ್ತು.ಹೀಗೆ ವಿಶ್ವಕಪ್‌ಗಳ ಹಿನ್ನೆಲೆಯನ್ನು ಗಮನಿಸಿದರೆ, ಆತಿಥೇಯ ತಂಡದ ಮೇಲೆ ನಿರೀಕ್ಷೆಯ ಭಾರ ಎಷ್ಟಿದೆ ಎಂಬುದು ವೇದ್ಯವಾಗುತ್ತದೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry