ಬುಧವಾರ, ನವೆಂಬರ್ 13, 2019
17 °C

ಮಹೀಂದ್ರಾ `ಇ2ಒ' ರಾಜ್ಯ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಮಹೀಂದ್ರಾ ರೇವಾದ ಹೊಸ ತಲೆಮಾರಿನ ವಿದ್ಯುತ್ ಚಾಲಿತ ಕಾರು `ಇ2ಒ' ಬುಧವಾರ ಇಲ್ಲಿ ರಾಜ್ಯ ಮಾರುಕಟ್ಟೆ ಪ್ರವೇಶಿಸಿತು.

ಬೆಂಗಳೂರಿನಲ್ಲಿ ಈ ಕಾರಿನ ಎಕ್ಸ್ ಷೋರೂಂ ಬೆಲೆ ರೂ.6.49 ಲಕ್ಷ. ಗೇರ್, ಕ್ಲಚ್ ಇಲ್ಲದ `ಇ2ಒ'ವನ್ನು ಸಂಚಾರ ದಟ್ಟಣೆ ನಡುವೆಯೂ ಆರಾಮವಾಗಿ ಓಡಿಸಬಹುದು. ಬ್ಯಾಟರಿ ಪೂರ್ಣ ಚಾರ್ಜ್ ಆಗಲು 5 ಗಂಟೆ ಬೇಕು. 1 ಯುನಿಟ್ ವಿದ್ಯುತ್‌ಗೆ 10 ಕಿ.ಮೀ.ನಂತೆ  ದಿನಕ್ಕೆ ಸರಾಸರಿ 100 ಕಿ.ಮೀ ಕ್ರಮಿಸಬಹುದು. ತಿಂಗಳಿಗೆ ರೂ.500ರಿಂದ ರೂ.600 ವಿದ್ಯುತ್ ಶುಲ್ಕ ಹೊರತುಪಡಿಸಿ ಇತರೆ ವೆಚ್ಚವಿಲ್ಲ. ನಿರ್ವಹಣೆ ಸುಲಭ. ವರ್ಷಕ್ಕೊಮ್ಮೆ ಮನೆಯಲ್ಲಿಯೇ ಸರ್ವಿಸ್  ಮಾಡಿದರಾಯಿತು ಎಂದು ರೇವಾ ಘಟಕದ ಮುಖ್ಯಸ್ಥ ಚೇತನ್ ಮೇನಿ ಬುಧವಾರ ಇಲ್ಲಿ  ಸುದ್ದಿಗೋಷ್ಠಿಯಲ್ಲಿ ಹೇಳಿದರು.ಹೊಸ ತಂತ್ರಜ್ಞಾನ

ಆಂಡ್ರಾಯ್ಡ, ಐಫೋನ್, ಬ್ಲ್ಯಾಕ್‌ಬೆರಿ ಬಳಕೆದಾರರು `ಆರ್‌ಐಎ' ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ `ಇ2ಒ' ಕಾರನ್ನು ಸ್ಮಾರ್ಟ್‌ಫೋನ್ ಮೂಲಕವೂ ನಿಯಂತ್ರಿಸಬಹುದು. ಕಾರ್ ಲಾಕಿಂಗ್, ಏ.ಸಿ ಆನ್, ಚಾರ್ಜಿಂಗ್‌ಗೆ ಸೂಚನೆ ನೀಡಬಹುದು. ಚಾಲಕನ ಎದುರಿನ ಚಿಕ್ಕ ಸ್ಪರ್ಶ ಸಂವೇದಿ ಪರದೆಯಲ್ಲಿ ಬ್ಯಾಟರಿ ಸ್ಥಿತಿಗತಿ, `ಜಿಪಿಎಸ್' ಮಾರ್ಗಸೂಚಿಯೂ ಲಭ್ಯ.ದರ ವ್ಯತ್ಯಾಸ

ದೆಹಲಿ ಸರ್ಕಾರ ವಿದ್ಯುತ್ ಚಾಲಿತ ಕಾರಿಗೆ ಶೇ 15ರಷ್ಟು ಸಬ್ಸಿಡಿ ನೀಡುತ್ತಿದೆ. ಕರ್ನಾಟಕದಲ್ಲಿ ವಿನಾಯ್ತಿ ಇಲ್ಲ. ಹಾಗಾಗಿ ಬೆಂಗಳೂರಿನಲ್ಲೇ `ಇ2ಒ' ತಯಾರಾದರೂ ದೆಹಲಿಗಿಂತ ರೂ.1 ಲಕ್ಷದಷ್ಟು ದುಬಾರಿಯಾಗುತ್ತದೆ ಎಂದು ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ ಅರುಣ್ ಮಲ್ಹೊತ್ರಾ ಸ್ಪಷ್ಟಪಡಿಸಿದರು.

ಗ್ರಾಹಕರು ಬೇಡಿಕೆ ಸಲ್ಲಿಸಿದರೆ `ಇ2ಒ' ಜತೆಗೇ ಸೌರಶಕ್ತಿ ಚಾರ್ಜಿಂಗ್ ಘಟಕವನ್ನೂ ಕಂಪೆನಿ ಪೂರೈಸುತ್ತದೆ. ಇದಕ್ಕೆ ರೂ.1 ಲಕ್ಷವಾಗುತ್ತದೆ. ಹಳೆಯ ರೇವಾ ಕಾರನ್ನು ಹೊಸ `ಇ2ಒ'  ಜತೆ ಬದಲಿಸಿಕೊಳ್ಳುವ ಆಯ್ಕೆಯೂ ಇದೆ.ಸದ್ಯ ಬೆಂಗಳೂರಿನಲ್ಲಿ 5 ಕಿ.ಮೀ.ಗೊಂದರಂತೆ 100 ಕಡೆ  ಬ್ಯಾಟರಿ ರಿಚಾರ್ಜ್ ಕೇಂದ್ರ ತೆರೆಯಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲೇ ಈ ಸೌಲಭ್ಯ ಕಲ್ಪಿಸಲು ತೈಲ ಕಂಪೆನಿಗಳ ಜತೆಗಿನ ಮಾತುಕತೆ ಪ್ರಾಥಮಿಕ ಹಂತದಲ್ಲಿದೆ ಎಂದು ಅರುಣ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)