ಮಾಂಜರಾ ಪ್ರವಾಹ: 15 ಹಳ್ಳಿಗಳ ಸಂಪರ್ಕ ಕಡಿತ

7

ಮಾಂಜರಾ ಪ್ರವಾಹ: 15 ಹಳ್ಳಿಗಳ ಸಂಪರ್ಕ ಕಡಿತ

Published:
Updated:
ಮಾಂಜರಾ ಪ್ರವಾಹ: 15 ಹಳ್ಳಿಗಳ ಸಂಪರ್ಕ ಕಡಿತ

ಬಸವಕಲ್ಯಾಣ: ಮಾಂಜರಾ ನದಿ ಉಕ್ಕಿ ಹರಿಯುತ್ತಿದ್ದು ತಾಲ್ಲೂಕಿನ ಹುಲಸೂರ ಸಮೀಪದ ಕೊಂಗಳಿ, ಹಲಸಿ-ತೂಗಾಂವ ಮತ್ತು ಸಾಯಗಾಂವ ಸೇತುವೆಗಳ ಮೇಲಿನಿಂದ ನೀರು ಹೋಗಿ ಗುರುವಾರ ಸುಮಾರು 15 ಗ್ರಾಮಗಳ ಜನ ಸಂಪರ್ಕ ಕಡಿತಗೊಂಡಿತ್ತು.ಮಹಾರಾಷ್ಟ್ರದ ಧನೆಗಾಂವ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನದಿಗೆ ಹೆಚ್ಚು ನೀರು ಬಂದಿದೆ. ಎರಡು ದಿನಗಳಿಂದ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಮೊದಲೇ ನದಿ ತುಂಬಿ ಹರಿಯುತ್ತಿದೆ. ಇಂಥದರಲ್ಲಿ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಸೇತುವೆಗಳು ಮುಳುಗಿ ಹೋಗಿದ್ದು ನದಿ ದಂಡೆಯಲ್ಲಿನ ಹೊಲಗಳಲ್ಲಿ ನೀರು ನುಗ್ಗಿ ಬೆಳೆಗೆ ಹಾನಿಯಾಗಿದೆ.ಬುಧವಾರದಿಂದ ನದಿಯಲ್ಲಿ ಹೆಚ್ಚು ನೀರು ಬಂದಿದೆ ಎಂದು ಜನರು ಹೇಳುತ್ತಾರೆ. ಸಾಯಗಾಂವ ಸೇತುವೆಯ ಮೇಲಿನಿಂದ ನೀರು ಹೊಗುತ್ತಿದ್ದುದರಿಂದ  ಕೊಂಗಳಿಯಿಂದ ಹೋಗೋಣವೆಂದು ಬಂದರೆ ಇಲ್ಲಿಯೂ ಅದೇ ಪರಿಸ್ಥಿತಿ ಇದೆ ಎಂದು ಸ್ಥಳಕ್ಕೆ ಭೇಟಿಕೊಟ್ಟ `ಪ್ರಜಾವಾಣಿ~ ಪ್ರತಿನಿಧಿಗೆ ಮೇಹಕರ್ ಪ್ರೌಢಶಾಲೆ ಶಿಕ್ಷಕ ಬಾಲಾಜಿ ಸಿಂಧೆ ತಿಳಿಸಿದರು.ಭಾಲ್ಕಿ ತಾಲ್ಲೂಕಿನ ಸಾಯಗಾಂವದಿಂದ ಮಹಾರಾಷ್ಟ್ರದ ಶಹಾಜಹಾನಿ ಔರಾದ್‌ವರೆಗಿನ ಮೂರು ಸೇತುವೆಗಳು ನೀರಿನಲ್ಲಿ ಮುಳುಗಿದ್ದರಿಂದ 15 ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಭಾಲ್ಕಿ ತಾಲ್ಲೂಕಿನ ಮೇಹಕರ್, ಕೊಂಗಳಿ, ಅಟ್ಟರ್ಗಾ, ಅಳವಾಯಿ, ಶ್ರೀಮಾಳಿ, ಹಲಸಿತೂಗಾಂವ, ಮಾಣಿಕೇಶ್ವರ, ಬೋಳೆಗಾಂವ, ವಲಾಂಡಿ, ವಾಂಜರಖೇಡಾಗೆ ಹೋಗುವವರು ಪರದಾಡಬೇಕಾಯಿತು.ಸಂಜೆ ನೀರು ಸ್ವಲ್ಪ ಇಳಿದಿದ್ದರಿಂದ ಕೆಲವರು ನೀರಿನಲ್ಲಿಯೇ ರಸ್ತೆ ದಾಟಿದರೆ ಬಹಳಷ್ಟು ಜನರು ಮಹಾರಾಷ್ಟ್ರದ ನಿಲಂಗಾ ಮಾರ್ಗವಾಗಿ ಪ್ರಯಾಣಿಸಿದರು ಎಂದು ತಿಳಿದುಬಂದಿದೆ.ಸೇತುವೆಗಳ ಮೇಲಿನಿಂದ ನೀರು ಹೊಗುತ್ತಿದ್ದರೂ ಯುವಕರು ಅಲ್ಲಿಂದಲೇ ರಸ್ತೆ ದಾಟುತ್ತಿದ್ದರು. ಯಾವುದೇ ಇಲಾಖೆಯವರು ಜನರಿಗೆ ಮುನ್ಸೂಚನೆ ಕೊಡುವುದಾಗಲಿ ಇಲ್ಲವೇ ಸ್ಥಳದಲ್ಲಿ ಹಾಜರಿದ್ದು ಅಲ್ಲಿಂದ ಯಾರೂ ದಾಟದಂತೆ ಎಚ್ಚರಿಕೆ ಕೊಡುವ ಕೆಲಸ ಮಾಡಿಲ್ಲ ಎಂದು ಜನರು ಅತೃಪ್ತಿ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry