ಶುಕ್ರವಾರ, ನವೆಂಬರ್ 15, 2019
23 °C

ಮಾಂಜ್ರಾ ನೀರು ತಡೆ: ಗಡಿ ಗ್ರಾಮಸ್ಥರ ಗುಳೆ

Published:
Updated:

ಔರಾದ್: ಜಿಲ್ಲಾಡಳಿತ ಕೌಠಾ ಬಳಿ ಮಾಂಜ್ರಾ ನದಿ ನೀರು ತಡೆ ಹಿಡಿದ ಪರಿಣಾಮ ಗಡಿ ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದೆ ಹಾಹಾಕಾರ ಎದ್ದಿದೆ.

ಬೇಸಿಗೆಯಲ್ಲಿ ಬೀದರ್ ನಗರದ ಜನತೆಗೆ ಕುಡಿಯುವ ನೀರಿಗೆ ಕೊರತೆಯಾಗಬಾರದು ಎಂಬ ಕಾರಣದಿಂದ ಕಳೆದ ಒಂದು ತಿಂಗಳ ಹಿಂದೆಯೇ ಕೌಠಾ ಬಳಿ ಮಾಂಜ್ರಾ ನೀರು ತಡೆಹಿಡಿಯಲಾಗಿದೆ. ಈ ಕಾರಣ ನದಿಯ ಮುಂಭಾಗದ ಪ್ರದೇಶದಲ್ಲಿ ಹನಿ ನೀರಿಲ್ಲದೆ ಪೂರ್ಣವಾಗಿ ಬತ್ತಿ ಹೋಗಿ ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ರೈತ ಸಂಘದವರು ಜಿಲ್ಲಾಡಳಿತದ ವಿರುದ್ಧ ಕಿಡಿ ಕಾರಿದ್ದಾರೆ.ನದಿಯಲ್ಲಿ ಗುಂಡಿ ಅಗೆದರೂ ಹನಿ ನೀರು ಬರುತ್ತಿಲ್ಲ. ಇದರಿಂದಾಗಿ ನದಿ ಪಾತ್ರದ ಕಂದಗೂಳ, ಖಾನಾಪುರ, ಗಡಿಕುಶನೂರ, ಹಿಪ್ಪಳಗಾಂವ್. ಚಾಂಬೋಳ, ಶ್ರೀಮಂಡಲ, ನೆಮತಾಬಾದ್, ಜಿಲ್ಲರ್ಗಿ ಸೇರಿದಂತೆ ಆಂಧ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೀಕರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ವಾರದ ಹಿಂದೆ ಜಿಲ್ಲಾಧಿಕಾರಿ ಪಿ.ಸಿ. ಜಾಫರ್ ಅವರನ್ನು ಭೇಟಿ ಮಾಡಿ ಸಮಸ್ಯೆಯ ವಾಸ್ತವ ಚಿತ್ರಣ ಮನವರಿಕೆ ಮಾಡಿಕೊಲಾಗಿದೆ. ಆದಾಗ್ಯೂ ನೀರು ಬಿಡುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ  ವಿಶ್ವನಾಥ ಪಾಟೀಲ ಕೌಠಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬೀದರ್ ನಗರದ ಜನತೆಗೆ ನೀರು ಬಿಡಲು ನಮ್ಮ ಅಭ್ಯಂತರವಿಲ್ಲ. ಆದರೆ ನೀರು ಬಿಡುವ ನೆಪದಲ್ಲಿ ಹತ್ತಾರು ಗ್ರಾಮಗಳ ರೈತರಿಗೆ ತೊಂದರೆ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳು ರೈತರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.ಕೂಡಲೇ ಎಚ್ಚೆತ್ತುಕೊಂಡು ಜನ ಜಾನುವಾರುಗಳು ಗುಳೆ ಹೋಗುವುದನ್ನು ತಪ್ಪಿಸಲು ತಕ್ಷಣ ನೀರು ಬಿಡಬೇಕು. ಇಲ್ಲವೇ ಬೀದಿಗಿಳಿದು ಯಾವುದೇ ರೀತಿಯ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ, ನಿರಂಜನಪ್ಪ ನಮೋಶಿ. ಪ್ರಕಾಶ ಬಾವಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)