ಮಾಂತ್ರಿಕ ಚಿತ್ರಗಳ ಜಾದೂಗಾರ

7

ಮಾಂತ್ರಿಕ ಚಿತ್ರಗಳ ಜಾದೂಗಾರ

Published:
Updated:
ಮಾಂತ್ರಿಕ ಚಿತ್ರಗಳ ಜಾದೂಗಾರ

ಅದ್ಭುತ ಕೈಚಳಕದಿಂದ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ರಾಷ್ಟ್ರದ ವನ್ಯಜೀವಿ ಛಾಯಾಗ್ರಹಣಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿ ಆ ಕ್ಷೇತ್ರವನ್ನು ಶ್ರೀಮಂತಗೊಳಿಸಿರುವವರಲ್ಲಿ ಎಂ.ವೈ.ಘೋರ್ಪಡೆ ಅಗ್ರಗಣ್ಯರು. ಎಂಬತ್ತಕ್ಕೂ ಹೆಚ್ಚು ಕಪ್ಪುಬಿಳುಪು ಛಾಯಾಚಿತ್ರಗಳನ್ನು ಒಳಗೊಂಡಿರುವ ಅವರ `ಸನ್‌ಲೈಟ್ ಅಂಡ್ ಶಾಡೋಸ್~ ಪುಸ್ತಕ ವನ್ಯಜೀವಿ ಛಾಯಾಗ್ರಹಣದಲ್ಲಿ ಒಂದು ಮೈಲಿಗಲ್ಲು. ಘೋರ್ಪಡೆಯವರು ತಮ್ಮ ಛಾಯಾಗ್ರಹಣಕ್ಕೆ ಕಪ್ಪು-ಬಿಳುಪು ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿರುವುದು ಅವರಲ್ಲಿರುವ ಕಲೆಗಾರನನ್ನು ಅಭಿವ್ಯಕ್ತಿಗೊಳಿಸುವಲ್ಲಿ ಯಶಸ್ವಿಯಾಗಿದೆ.

ಘೋರ್ಪಡೆಯವರದ್ದು ವಿನೂತನ ಶೈಲಿ. ಉತ್ತಮ ಚಿತ್ರಗಳನ್ನು ನೋಡುವ ದೃಷ್ಟಿ ಅವರಲ್ಲಿತ್ತು. ತೀಕ್ಷ್ಣವಾಗಿ ಗಮನಿಸಿ ತಕ್ಷಣ ಪ್ರತಿಸ್ಪಂದಿಸಿ ಸರಿಯಾದ ಸಮಯದಲ್ಲಿ ಕ್ಯಾಮೆರಾ ಕ್ಲಿಕ್ ಮಾಡುವ ಸಾಮರ್ಥ್ಯ ಅವರದಾಗಿತ್ತು. ಜೊತೆಗೆ ವನ್ಯಜೀವಿಗಳ ವರ್ತನೆಯನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ತಮ್ಮಲ್ಲಿರುವ ಸೌಂದರ್ಯ ಪ್ರಜ್ಞೆಯನ್ನು ಬಳಸುವುದು ಅವರ ಛಾಯಾಚಿತ್ರಗಳಲ್ಲಿ ಮೂಡಿಬಂದಿದೆ. ಘೋರ್ಪಡೆಯವರ ವನ್ಯಜೀವಿ ಛಾಯಾಚಿತ್ರಗಳು ವನ್ಯಜೀವಿಗಳ ಬಗ್ಗೆ ಅವರಲ್ಲಿರುವ ತತ್ವಕ್ಕೆ ಸೂಚಕ. ಛಾಯಾಗ್ರಹಣಕ್ಕೆ ಸಂಬಂಧಿಸಿದ ತಾಂತ್ರಿಕ ವಿಷಯದಲ್ಲೂ ಅವರು ಉನ್ನತ ಮಟ್ಟದ ಮೌಲ್ಯಗಳನ್ನು ಅನುಸರಿಸಿದ್ದಾರೆ. ಉತ್ತಮವಾದ 30ಗಿ40  ಬ್ಲೋಅಪ್ ಮಾಡಲು ಆಗದ ನೆಗಟಿವ್ ಅವರಿಗೆ ಇಷ್ಟವಿರಲಿಲ್ಲ. ಛಾಯಾಗ್ರಹಣ ಕ್ಷೇತ್ರದಲ್ಲಿ ಘೋರ್ಪಡೆಯವರ ಚಿತ್ರಗಳನ್ನು ಯಾವಾಗಲೂ ಕಾತುರತೆಯಿಂದ ಎದುರು ನೋಡಲಾಗುತ್ತಿತ್ತು. ಅವರ ಚಿತ್ರಗಳನ್ನು ಎಲ್ಲರೂ ಮೆಚ್ಚುತ್ತಾರೆ, ಗೌರವದಿಂದ ಕಾಣುತ್ತಾರೆ.

ಘೋರ್ಪಡೆಯವರ ವನ್ಯಜೀವಿ ಛಾಯಾಚಿತ್ರಗಳು ಇಷ್ಟೊಂದು ಮೌಲಿಕವಾಗಲು ಇತರೆ ಕಾರಣಗಳೂ ಇದೆ. ತಮ್ಮ ಚಿತ್ರಗಳನ್ನು ಸ್ವಯಂ ವಿಮರ್ಶೆಗೆ ಒಳಪಡಿಸುವುದು, ಪೂರ್ವಭಾವಿ ಸಿದ್ಧತೆ, ಉತ್ತಮ ಅವಕಾಶವನ್ನು ಕಳೆದುಕೊಳ್ಳಬಾರದೆಂಬ ಎಚ್ಚರಿಕೆ, ಹೆಗಲ ಮೇಲೆ ಕ್ಯಾಮರಾ ತೂಗು ಹಾಕಿಕೊಂಡು ಬೆಳಗಿನಿಂದ ಸಂಜೆಯತನಕ ಕಾಡುಮೇಡುಗಳನ್ನು ಅಲೆಯುವ ಸಾಹಸ ಮನೋವೃತ್ತಿ ಇತ್ಯಾದಿ ಅವರ ಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸಿದೆ. ಮೂವತ್ತು ವರ್ಷಗಳಲ್ಲಿ ಘೋರ್ಪಡೆಯವರು ಕಲೆಹಾಕಿರುವ ಉತ್ತಮವಾದ ಛಾಯಾಚಿತ್ರಗಳ ಪೈಕಿ ಕೆಲವನ್ನು ಮತ್ತೊಮ್ಮೆ ಸೆರೆ ಹಿಡಿಯಲು ಸಾಧ್ಯವಿಲ್ಲ. ಈ ಛಾಯಾಚಿತ್ರಗಳನ್ನು ಅವರ ಪುಸ್ತಕಗಳಾದ `ಸನ್‌ಲೈಟ್ ಅಂಡ್ ಶಾಡೋಸ್~ ಹಾಗೂ ಮತ್ತೆರಡು ಪುಸ್ತಕಗಳಾದ `ಎನ್ ಎಕ್ಸ್‌ಪೀರಿಯನ್ಸ್ ಆಫ್ ವೈಲ್ಡ್‌ಲೈಫ್ ಫೋಟೋಗ್ರಾಫಿ~ ಹಾಗೂ `ಎ ಫೋಟೋಗ್ರಾಫಿಕ್ ಸಫಾರಿ ಇನ್ ಈಸ್ಟ್ ಆಫ್ರಿಕಾ~ದಲ್ಲಿ ಸಂಕಲಿಸಲಾಗಿದೆ. ಇದಲ್ಲದೆ `ದಿ ಸಂಡೂರ್ ಮ್ಯೋಂಗನೀಸ್ ಐರನ್ ಓರ್ಸ್‌ ಲಿಮಿಟೆಡ್~ ಪ್ರಕಟಿಸುವ ಕ್ಯಾಲೆಂಡರ್‌ನಲ್ಲಿ ಅವರ ಚಿತ್ರಗಳನ್ನು ಬಳಸಲಾಗುತ್ತದೆ.

ಘೋರ್ಪಡೆಯವರು ತಮ್ಮ ಛಾಯಾಗ್ರಹಣಕ್ಕಾಗಿ ಅನೇಕ ಅಪಾಯಗಳನ್ನೂ ಎದುರಿಸಿದ್ದಾರೆ. ಕಾಡಾನೆಗಳು, ಹುಲಿ ಮತ್ತು ಸಿಂಹಗಳ ಚಿತ್ರಗಳನ್ನು ತೆಗೆಯುವಾಗ ಅವರು ಅನೇಕ ಅಪಾಯಗಳನ್ನು ಎದುರಿಸಿದ್ದಾರೆ. ವನ್ಯಜೀವಿಗಳ ಚಿತ್ರಗಳನ್ನು ಸೆರೆಹಿಡಿಯುವಾಗ ಇದು ಅನಿವಾರ್ಯ ಎನ್ನುವುದು ಅವರ ನಂಬಿಕೆಯಾಗಿತ್ತು. ಆದರೆ, ಆ ರೀತಿಯ ಅಪಾಯದ ಸನ್ನಿವೇಶ ಮುಗಿದ ಕೂಡಲೇ ಚಿತ್ರಗಳನ್ನು ಸೆರೆಹಿಡಿಯುವ ಕ್ರಿಯೆಯಲ್ಲಿ ಅವರು ತನ್ಮಯರಾಗುತ್ತಿದ್ದರು. ಇದಕ್ಕೆ ಬಂಧವ್‌ಗರ್‌ನ ಡ್ಯಾಡಿಯಲ್ಲಿ ನಡೆದ ಘಟನೆ ಒಂದು ಉದಾಹರಣೆ. ಬೃಹತ್ ಹುಲಿಯೊಂದು ಕೋಪಗೊಂಡು ಎತ್ತರಕ್ಕೆ ಜಿಗಿದು ಕ್ಯಾಮೆರಾ ಹಿಡಿದು ಮೇಲೆ ಕುಳಿತಿದ್ದ ಘೋರ್ಪಡೆಯವರ ಆನೆಯನ್ನು ತನ್ನ ಹರಿತವಾದ ಉಗುರಿನಿಂದ ಬಗೆಯಲು ಪ್ರಯತ್ನಿಸಿತು. ಆದರೆ ಮಾವುತನು ಆನೆಯನ್ನು ನಿಯಂತ್ರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಕೆಲವೇ ನಿಮಿಷಗಳಲ್ಲಿ ಹುಲಿ ಹಿಂದಕ್ಕೆ ಸರಿಯಿತು. ಇದೊಂದು ಮೈನವಿರೇಳಿಸುವ ಘಟನೆಯಾದರೂ, ಘೋರ್ಪಡೆಯವರು ಕೂಡಲೇ ತಮಗೆ ಪ್ರಿಯವಾದ ಛಾಯಾಗ್ರಹಣದಲ್ಲಿ ತಲ್ಲೆನರಾಗಿದ್ದರು.

ಮತ್ತೊಂದು ಘಟನೆಯಲ್ಲೂ ಅವರು ತಮ್ಮ ಸೌಮ್ಯತೆಯಿಂದಲೇ ಅಪಾಯವನ್ನು ಎದುರಿಸಿದ್ದು ಸಾಸನ್-ಗಿರ್ ಎಂಬಲ್ಲಿ. ಎರಡು ಹೆಣ್ಣು ಸಿಂಹಗಳಲ್ಲಿ ಒಂದು ಸಿಂಹ ತನ್ನ ನಾಲ್ಕು ಪರಿವಾರದೊಂದಿಗೆ ಮತ್ತೊಂದು ಐದು ಪರಿವಾರದೊಂದಿಗೆ ಇತ್ತು. ಆ ಚಿತ್ರಗಳನ್ನು ಕಾಲ್ನಡಿಗೆಯಲ್ಲೇ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಾಗ ಮರಿಸಿಂಹವೊಂದು ಭಯದಿಂದ ಓಡಿದ ಪರಿಣಾಮ ತಾಯಿ ಸಿಂಹವು ಛಾಯಾಗ್ರಾಹಕನತ್ತ ಕೋಪದಿಂದ ನುಗ್ಗಲು ಎತ್ನಿಸಿತು. ಆದರೆ ಆ ಛಾಯಾಗ್ರಾಹಕ ಒಂದಿಷ್ಟೂ ವಿಚಿಲಿತನಾಗದೆ ಸೌಮ್ಯವಾಗಿ ಅಲುಗಾಡದೆ ನಿಂತದ್ದನ್ನು ನೋಡಿ ಸಿಂಹಗಳು ಸಮೀಪದಲೇ ನಿಂತವು. ತಮ್ಮನ್ನು ದೃಷ್ಟಿಸಿದ ಛಾಯಾಗ್ರಾಹಕನನ್ನು ಭಯಪಡಿಸಲಾಗದೆ ಸಿಂಹದ ಸೈನ್ಯ ಹಿಂದಕ್ಕೆ ಸರಿಯಿತು.

ಈ ಸಂದರ್ಭದಲ್ಲಿ ಇನ್ನೊಂದು ಘಟನೆಯನ್ನು ನಾನು ನೆನಪು ಮಾಡಿಕೊಳ್ಳಬೇಕು. ಅರಣ್ಯಾಧಿಕಾರಿಗಳ ಎಚ್ಚರಿಕೆಯ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳದೆ ಘೋರ್ಪಡೆಯವರು ಒಮ್ಮೆ ಬಂಡೀಪುರದ ಕೊಲಕಾಮಲಕಟ್ಟೆಯಲ್ಲಿ ಆನೆಗಳ ಗುಂಪೊಂದು ನೀರು ಕುಡಿಯುತ್ತಿದ್ದ ಚಿತ್ರಗಳನ್ನು ಸೆರೆಹಿಡಿಯುವುದರಲ್ಲಿ ತನ್ಮಯರಾಗಿದ್ದರು. ಆನೆ ಮರಿಯೊಂದು ತೀರ ಹತ್ತಿರ ಬರುತ್ತಿದ್ದಂತೆ ಅದರ ಹಿಂದೆ ಅನೇಕ ಆನೆಗಳು ಎ್ಲ್ಲಲಾ ದಿಕ್ಕುಗಳಿಂದ ಬರಲಾರಂಭಿಸಿದವು. ಅರಣ್ಯಾಧಿಕಾರಿಯು ಅನೇಕ ರೀತಿಯ ಸಂಜ್ಞೆ ಮಾಡುತ್ತ ಘೋರ್ಪಡೆಯವರನ್ನು ಕಾರಿನತ್ತ ಧಾವಿಸಬೇಕೆಂದು ಸೂಚಿಸುತ್ತಿದ್ದ. ಇದಾವುದನ್ನೂ ಘೋರ್ಪಡೆಯವರು ಗಮನಿಸದಿದ್ದನ್ನು ಕಂಡ ಅಧಿಕಾರಿ ಅವರ ಹತ್ತಿರ ಹೋಗಿ ವಾಹನದತ್ತ ಮರಳಬೇಕೆಂದು ಹೇಳಿದ. ಆದರೆ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದ ಘೋರ್ಪಡೆ ಯಾವುದಕ್ಕೂ ಗಮನ ನೀಡದೆ ತಮ್ಮ ಕೆಲಸ ಮುಂದುವರಿಸಿದ್ದರು. ಅದೃಷ್ಟವಶಾತ್ ಸ್ವಲ್ಪ ಸಮಯದ ನಂತರ ಎಲ್ಲ ಆನೆಗಳೂ ನೀರಿನ ಹೊಂಡದಿಂದ ಹೊರಬಂದು ಕಾಡಿನಲ್ಲಿ ಮಾಯಾವಾದವು. ನಿಟ್ಟುಸಿರು ಬಿಟ್ಟ ಅರಣ್ಯಾಧಿಕಾರಿ ಘೋರ್ಪಡೆಯವರನ್ನು ಕುರಿತು, `ಸಾರ್, ಆನೆಗಳು ಅಷ್ಟೊಂದು ಅಪಾಯಕಾರಿಯಾಗಿ ನಿಮ್ಮ ಹತ್ತಿರವೇ ಇದ್ದವು. ಆದರೂ ನೀವು ವಾಹನದತ್ತ ಬರಲಿಲ್ಲ. ನಿಮ್ಮ ಸುರಕ್ಷತೆ ನನ್ನ ಜವಾಬ್ದಾರಿ~ ಎಂದರು. ಅದಕ್ಕೆ ಉತ್ತರಿಸಿದ ಘೋರ್ಪಡೆ, `ಏನಾಗುತ್ತದೆ? ಅವರು (ಸರ್ಕಾರದವರು) ಮತ್ತೊಬ್ಬ ಹಣಕಾಸು ಸಚಿವರನ್ನು ಹುಡುಕಬೇಕಾಗುತ್ತದೆ, ಅಷ್ಟೇ~ (ಆಗ ಘೋರ್ಪಡೆಯವರು ಕರ್ನಾಟಕದ ವಿತ್ತ ಮಂತ್ರಿಗಳಾಗಿದ್ದರು) ಎಂದು ಹೇಳುತ್ತ ಕಾರಿನತ್ತ ನಡೆದರು.

ಪ್ರಕೃತಿಯ ಯಾವುದೇ ವಿಕೋಪ ಘೋರ್ಪಡೆಯವರ ಛಾಯಾಚಿತ್ರ ಸೆರೆಹಿಡಿಯುವ ಹವ್ಯಾಸಕ್ಕೆ ಅಡ್ಡಿಯಾಗಲಿಲ್ಲ. ಅವರು ತಮ್ಮ ಅತಿ ಉತ್ತಮ ಛಾಯಾಚಿತ್ರವಾದ `ಟಸ್ಕರ್ ಇನ್ ರೈನ್~ ಅನ್ನು ಬಂಡೀಪುರದಲ್ಲಿ ಸುರಿಯುವ ಮಳೆಯಲ್ಲಿ ಸೆರೆಹಿಡಿದರು. ರತ್ನಾಂಬೋರ್‌ನ ಕೊರೆಯುವ ಚಳಿಯಲ್ಲಿ ಅಲ್ಲಿನ ಹುಲಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಬೇಸಿಗೆಯ ಬಿಸಿಲು ಉತ್ತುಂಗದಲ್ಲಿರುವಾಗ ಕೇರಳದ ಪೆರಿಯಾರ್‌ನಲ್ಲಿ ಕಾಡಾನೆಗಳನ್ನು, ವಿಶೇಷವಾಗಿ ಗಂಡು-ಹೆಣ್ಣು ಆನೆಗಳ ಸಂಗಮವನ್ನು ಚಿತ್ರಿಸಿದ್ದಾರೆ. ಅವರು ಯಾವಾಗಲೂ ಸರಳತೆಗೆ ಹೆಸರಾಗಿದ್ದರು. ಸ್ಪಷ್ಟ ಚಿಂತನೆ, ಯಾವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕೋ ಅದರ ಬಗ್ಗೆ ಆಳವಾದ ಜ್ಞಾನ, ಅಗತ್ಯ ಮತ್ತು ಅನಗತ್ಯಗಳನ್ನು ಬೇರ್ಪಡಿಸುವುದು, ಇರುವುದನ್ನು ಉತ್ತಮಪಡಿಸುವುದು, ಪ್ರತಿಯೊಂದು ಅಂಶಕ್ಕೂ ಪ್ರಾಶಸ್ತ್ಯ ನೀಡುವುದು, ಅಸಾಧಾರಣ ಜ್ಞಾಪಕಶಕ್ತಿಯೊಂದಿಗೆ ಸದಾ ಶ್ರೇಷ್ಠತೆಯನ್ನು ಸಾಧಿಸಬೇಕೆಂಬ ಅವರ ಛಲ- ಇವೆಲ್ಲವೂ ಅವರೊಬ್ಬ ಅಪರೂಪದ ವನ್ಯಜೀವಿ ಛಾಯಾಗ್ರಾಹಕನಾಗಲು ಕಾರಣವಾಗಿದ್ದವು.

ಘೋರ್ಪಡೆಯವರನ್ನು ಒಬ್ಬ ಉತ್ತಮ ವನ್ಯಜೀವಿ ಛಾಯಾಗ್ರಾಹಕರೆಂದು ಭಾರತ ಮತ್ತು ಇತರೆ ದೇಶಗಳಲ್ಲೂ ಗೌರವಿಸಲಾಗಿದೆ. ರಾಷ್ಟ್ರದ ಸಮಕಾಲೀನ ವನ್ಯಜೀವಿ ಛಾಯಾಗ್ರಾಹಕರಲ್ಲಿ ಅವರು ಮೇಲ್ಮಟ್ಟದಲ್ಲಿದ್ದರು, ಕ್ಯಾಮರಾ ಮತ್ತು ಬರವಣಿಗೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದರು.

ದೇಶವಿದೇಶದ ಉನ್ನತ ಸಂಸ್ಥೆಗಳು ಮತ್ತು ಸಂಘಗಳು ಅವರಿಗೆ ಪ್ರಶಸ್ತಿಯನ್ನಿತ್ತು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ `ದಿ ರಾಯಲ್ ಫೋಟೋಗ್ರಾಫಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್~, `ದಿ ಸಿಡ್ನಿ ಅಂಡ್ ಟೈವಾನ್ ಇಂಟರ್‌ನ್ಯಾಷನಲ್ಸ್~ ಪ್ರಶಸ್ತಿಗಳು ಪ್ರಮುಖವಾದವು. ಫ್ರಾನ್ಸ್‌ನಲ್ಲಿ ಅವರ ಛಾಯಾಚಿತ್ರಗಳ ಪ್ರದರ್ಶನ ಏರ್ಪಟ್ಟಿದೆ. ಆಸ್ಟ್ರೇಲಿಯಾೋಗ್ರಾಫಿಕ್ ಸೊಸೈಟಿಯು ಹೊಂದಿರುವ ಛಾಯಾಚಿತ್ರಗಳಲ್ಲಿ ಘೋರ್ಪಡೆಯವರು ಸೆರೆಹಿಡಿದಿರುವ ಚಿತ್ರಗಳು ಸೇರಿವೆ. ವನ್ಯಜೀವಿ ಛಾಯಾಗ್ರಾಹಕರ ಪಿತಾಮಹ ಎನಿಸಿರುವ ದಿವಂಗತ ಎ.ಸಿ.ಎಡ್ವರ್ಡ್ ಅವರೊಂದಿಗೆ ಘೋರ್ಪಡೆಯವರ ಶೇಕಡ ನೂರು ಛಾಯಾಚಿತ್ರಗಳನ್ನು `ದ ರಾಯಲ್ ಸಲೋನ್~ ಒಪ್ಪಿಕೊಂಡಿದೆ. ಇದೊಂದು ವಿನೂತನ ದಾಖಲೆ. `ದ ಸಿಡ್ನಿ ಇಂಟರ್‌ನ್ಯಾಷನಲ್ ಸೆಲೋನ್~ನ ನಾಲ್ಕು ಪ್ರಶಸ್ತಿಗಳಲ್ಲಿ ಘೋರ್ಪಡೆಯವರು ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ವಿಶ್ವದಾಖಲೆ ಮಾಡಿದ್ದಾರೆ. ಕಪ್ಪು ಬಿಳುಪು ಪ್ರಕೃತಿ ಛಾಯಾಗ್ರಹಣದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ಭಾರತವು ಸತತವಾಗಿ ನಾಲ್ಕು ಬಾರಿ ವಿಶ್ವಕಪ್ ಪ್ರಶಸ್ತಿ ಗಳಿಸಿದೆ. ಈ ಸ್ಪರ್ಧೆಯಲ್ಲಿ 21 ಇತರೆ ದೇಶಗಳಿದ್ದವು ಎಂಬುದು ಗಮನಾರ್ಹ.

ಇದೆಲ್ಲದರ ಮೇಲೆ ಕಿರೀಟವಿಟ್ಟಂತೆ `ಫೆಡರೇಷನ್ ಇಂಟರ್‌ನ್ಯಾಷನಲ್ ಡೆಲ್ ಆರ್ಟ್‌ ಫೋಟೋಗ್ರಾಫಿಕ್ ಸಂಸ್ಥೆ~ ನೀಡುವ ಪ್ರತಿಷ್ಠಿತ `ಮಾಸ್ಟರ್ ಫೋಟೋಗ್ರಾಫರ್~ ಪಡೆದ ಪ್ರಥಮ ಭಾರತೀಯ ವನ್ಯಜೀವಿ ಛಾಯಾಗ್ರಾಹಕ ಘೋರ್ಪಡೆ. ಸಾಮಾನ್ಯವಾಗಿ ಈ ಪ್ರಶಸ್ತಿಯನ್ನು ಅತ್ಯಂತ ಸುಂದರವಾದ ಛಾಯಾಚಿತ್ರಕ್ಕೆ ನೀಡಲಾಗುತ್ತದೆ. ಆದರೆ ಅದನ್ನು ವನ್ಯಜೀವಿ ಛಾಯಾಗ್ರಹಣಕ್ಕೆ ನೀಡಿದ್ದು ಘೋರ್ಪಡೆಯವರ ಸಾಧನೆಯೇ ಸರಿ. ಈ ಸಂಸ್ಥೆಯನ್ನು ಪ್ರತಿನಿಧಿಸುವ `ದಿ ಫಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ~ ಸಹ ಘೋರ್ಪಡೆಯವರನ್ನು ಗೌರವಿಸಿವೆ. ಅದರ `ಆನರ್ಸ್ ಪ್ಯಾನೆಲ್~ನ ಒಬ್ಬ ತೀರ್ಪುಗಾರರನ್ನಾಗಿ ಆಯ್ಕೆ ಮಾಡುವುದರ ಮೂಲಕ ಅವರನ್ನು ಸನ್ಮಾನಿಸಿದೆ. ಕರ್ನಾಟಕ ಸರ್ಕಾರವು ಘೋರ್ಪಡೆಯವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ತನ್ನ ಗೌರವ ಸೂಚಿಸಿದೆ.

ಘೋರ್ಪಡೆಯವರು ಒಬ್ಬ ಅಪರೂಪದ ವನ್ಯಜೀವಿ ಛಾಯಾಗ್ರಾಹಕ. ಅವರನ್ನು ಹತ್ತಿರದಿಂದ ಬಲ್ಲ ನಾನು ಅವರೊಟ್ಟಿಗೆ ಮೂರು ದಶಕಗಳಿಗಿಂತ ಹೆಚ್ಚು ಕಾಲ ಛಾಯಾಗ್ರಾಹಕನಾಗಿ ನಿಕಟ ಸಂಪರ್ಕ ಹೊಂದಿದ್ದು ನನ್ನ ಭಾಗ್ಯವೆಂದೇ ತಿಳಿದಿದ್ದೇನೆ.

ಲೇಖಕ ಟಿ.ಎನ್.ಎ.ಪೆರುಮಾಳ್ ನಾಡಿನ ಹೆಸರಾಂತ ಛಾಯಾಗ್ರಾಹಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry