ಸೋಮವಾರ, ಮೇ 23, 2022
30 °C

ಮಾಂತ್ರಿಕ ಬಾಲಕ ಸೋನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ಪ ಮರುದಿನದ ಕಾರ್ಯಕ್ರಮದ ತಯಾರಿ ನಡೆಸುತ್ತಿದ್ದರೆ ಎರಡು ವರ್ಷದ ತೊದಲ್ನುಡಿಯ ಆ ಪೋರನಿಗೆ ಅವರಲ್ಲಿರುವ ಕರವಸ್ತ್ರ, ಬಾಲ್, ದಂಡದ ಮೇಲೆಯೇ  ಕಣ್ಣು. ಅವನೊಳಗಿನ ಜಾದೂಗಾರನಿಗೆ ಆಗಲೇ ಸ್ಪಷ್ಟ ರೂಪ ಸಿಕ್ಕಿತ್ತು!ಎರಡೂವರೆ ವರ್ಷ ತುಂಬುವ ಹೊತ್ತಿಗಾಗಲೇ ವಯೋ ಸಹಜ ಪ್ರಶ್ನೆಗಳಿಂದ ಅಪ್ಪನ ಬೆನ್ನು ಬಿದ್ದ ಆತ ತನ್ನ ಮೂರನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಕೋರಲು ಬಂದವರಿಗೆಲ್ಲ ತೋರಿಸಿದ್ದು ಮಾತ್ರ ಬೆರಗುಗೊಳಿಸುವಂತ `ಕೈ ಚಳಕ~. ಇಂದು ಆ ಹುಡುಗ ಮಾಸ್ಟರ್ ಸೋನು ಜಾದೂಗಾರ ಎಂದೇ ಪರಿಚಿತ.  ಇಂದು ಮ್ಯಾಜಿಕ್ ಲೋಕದ ಭರವಸೆಯ ಕಿರಿಯ `ಮಾಂತ್ರಿಕ~ನಾಗಿರುವ 12ರ ಹರೆಯದ ಮಾಸ್ಟರ್ ಸೋನು ಬೆಂಗಳೂರಿನ ಪ್ರಖ್ಯಾತ ಜಾದೂಗಾರರಲ್ಲಿ  ಒಬ್ಬರಾಗಿರುವ ಕೇಶವಾಚಾರ್ ಅವರ ಪುತ್ರ. ಕರ್ನಾಟಕದ ಕಿರಿಯ ಜಾದೂ ಪ್ರತಿಭೆಗಳಲ್ಲಿ ಒಬ್ಬ.  ಬೆಂಗಳೂರಿನ ಕೆ.ಆರ್.ಪುರಂನ ಅಯ್ಯಪ್ಪನಗರದಲ್ಲಿ ವಾಸವಿರುವ ಕೇಶವಾಚಾರ್ ಕವಿತಾ ದಂಪತಿಯ ಇಬ್ಬರು ಮಕ್ಕಳಲ್ಲಿ ಸೋನು ಜ್ಯೇಷ್ಠ ಪುತ್ರ. ಸದ್ಯ ಮನೆಯ ಸಮೀಪದಲ್ಲಿರುವ  ನವದೀಪ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಈತ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಶಾಲೆಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಪ್ರತಿಭಾನ್ವಿತ `ಮಾಸ್ಟರ್~.  ಮನೆಯೇ ಮೊದಲ ಪಾಠಶಾಲೆ ಎಂಬಂತೆ ಅಪ್ಪನ ಜಾದೂ ಕಲೆಯಿಂದ ಆಕರ್ಷಿತನಾಗುತ್ತಾ ಬೆಳೆದ ಸೋನು ತನ್ನ ಮೂರನೇ ವರ್ಷದ ಹುಟ್ಟುಹಬ್ಬದ ಸಮಾರಂಭದಲ್ಲಿ ಮೊದಲ ಬಾರಿಗೆ ಅರ್ಧ ಗಂಟೆಯ ಜಾದೂ ಪ್ರದರ್ಶನ ನೀಡಿದ. ಈವರೆಗೆ ಈತ ಸುಮಾರು 500ಕ್ಕೂ ಅಧಿಕ ವೇದಿಕೆಗಳ ಮೇಲೆ ತನ್ನ `ಗಾರುಡಿ ಲೋಕ~ ಸೃಷ್ಟಿಸಿದ್ದಾನೆ.  ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವಾಗುವ ಸರ್ವಜ್ಞನ ವಚನದಂತೆ ಸೋನು ಕೂಡ ತಂದೆ ಅಷ್ಟೇ ಅಲ್ಲದೇ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಸಮರ್ಥ ಶೆಣೈ ಅವರಿಂದ ಒಂದು ವರ್ಷದಿಂದ ಮಾರ್ಗದರ್ಶನ ಪಡೆದಿದ್ದಾನೆ. ಜತೆಗೆ ಹಿರಿಯ ಜಾದೂಗಾರ ಕೆ.ಎಸ್. ರಮೇಶ್ ಅವರಿಂದ ಕೂಡ ಹಲವು `ಟ್ರಿಕ್ಸ್~ ಕಲಿತಿದ್ದಾನೆ.ಕ್ಲೋಸಪ್, ಸ್ಟೇಜ್, ಪಾರ್ಟಿ ಎಂಬ ಮೂರು ವಿಧಗಳಲ್ಲಿ ಪ್ರದರ್ಶಿಸುವ ಜಾದೂ `ಕೈ ಚಳಕ~ವನ್ನು ಕರಗತ ಮಾಡಿಕೊಂಡಿದ್ದಾನೆ. ವೃತ್ತಿಪರ ಜಾದೂಗಾರರಿಗೆ ಸಮನಾಗಿ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಸೋನು, ವೇದಿಕೆ ಮೇಲಿನ ಪ್ರದರ್ಶನದ ಪರಿಕರಗಳಿಲ್ಲದೇ ಕೂಡ ನಿಂತ ಸ್ಥಳದಲ್ಲಿಯೇ ಕೈಗೆಟಕುವ ವಸ್ತುಗಳನ್ನು ಬಳಸಿಕೊಂಡು ತೋರುವ `ವಿಸ್ಮಯ~ ಅಬಾಲವೃದ್ಧರಾದಿಯಾಗಿ ಎಂತವರಿಗೂ ಸೋಜಿಗ ಮೂಡಿಸುತ್ತವೆ.ಕೇರಳ, ಆಂಧ್ರಪ್ರದೇಶ, ತಮಿಳುನಾಡು, ರಾಜ್ಯದ ಮಂಗಳೂರು, ಮೈಸೂರು, ಚಿತ್ರದುರ್ಗ, ಹೊಸದುರ್ಗ ಸೇರಿದಂತೆ ಹಲವು ನಗರಗಳಲ್ಲಿ ತನ್ನ `ಕೌಶಲ~ ಪ್ರದರ್ಶಿಸಿರುವ ಈತ ಇತ್ತೀಚೆಗಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ `ದಿ ಗ್ರೇಟ್ ಇಂಡಿಯನ್ ಮ್ಯಾಜಿಕ್ ಫೆಸ್ಟಿವಲ್~ ಎಂಬ ಅಂತರರಾಷ್ಟ್ರೀಯ ಮಟ್ಟದ ಜಾದೂ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.

 

ಅಷ್ಟೇ ಅಲ್ಲದೇ ತನ್ನ 7ನೇ ವಯಸ್ಸಿನಲ್ಲಿ ಈ ಟಿವಿ, 9ನೇ ವಯಸ್ಸಿನಲ್ಲಿ `ಕಲರ್ಸ್‌~ ಟಿವಿ ಸೇರಿದಂತೆ ಸ್ಥಳೀಯ ಟಿವಿ ಕಾರ್ಯಕ್ರಮಗಳಲ್ಲಿ ತನ್ನ `ಯಕ್ಷಿಣಿ~ ವಿದ್ಯೆ ಪ್ರದರ್ಶಿಸಿರುವ ಸೋನು ಮಕ್ಕಳ ಟಿವಿ ಚಾನೆಲ್ `ನಿಕ್~ನ ಜಾಹೀರಾತೊಂದರಲ್ಲಿ ಕೂಡ `ಛೂ ಮಂತ್ರ~ ಹಾಕಿದ್ದಾನೆ.  ಮಗನ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುವ ಕೇಶವಾಚಾರ್ ಅವರು, ಇಂತಹ ಬಾಲ ಪ್ರತಿಭೆಗೆ ಸರ್ಕಾರ ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯಾವುದೇ ಪ್ರೋತ್ಸಾಹ ದೊರೆಯದಿರುವ ಕುರಿತು ಬೇಸರ ವ್ಯಕ್ತಪಡಿಸುತ್ತ `ಇತರೆ ಕಲೆಗಳಂತೆ ಜಾದೂ ಕಲೆಯನ್ನು ಸಹ ಸರ್ಕಾರ ಏಕೆ ಪರಿಗಣಿಸುತ್ತಿಲ್ಲ~ ಎಂದು ಪ್ರಶ್ನಿಸುತ್ತಾರೆ.ಜಾದೂ ಕಲೆಯ ಜತೆಗೆ ಸಂಗೀತ ಕೇಳುವುದು, ಕಥೆ ಬರೆಯುವುದು, ಪುಸ್ತಕ ಓದುವುದು, ಚಿತ್ರಕಲೆ, ಯೋಗ ಹಾಗೂ ಮಿಮಿಕ್ರಿಯಂತಹ ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಸೋನುಗೆ ಪ್ರಸಿದ್ಧ ಜಾದೂಗಾರನಾಗುವ ಜತೆಗೆ ಉನ್ನತ ಶಿಕ್ಷಣ ಪಡೆದು ವೈದ್ಯನಾಗಬೇಕೆಂಬ ಬಯಕೆ ಇದೆ.

 

ರಹಸ್ಯ, ಕೌಶಲ, ಮಾತುಗಾರಿಕೆ, ವೇಷಭೂಷಣ ಹಾಗೂ ನಟನೆಯ ಸಂಗಮವಾದ ಈ `ಚಮತ್ಕಾರಿ~ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ  ಈ ಬಾಲ `ಮೋಡಿಗಾರ~ನಿಗೆ ಇದೀಗ ಪ್ರೋತ್ಸಾಹದ ಅಗತ್ಯವಿದೆ.`ಸೋನು ಪಾರ್ಟಿ ಆಂಡ್ ಈವೆಂಟ್ಸ್~ ಎಂಬ ಸಂಸ್ಥೆ ಕಟ್ಟಿ ಅದರ ಮೂಲಕ ಜಾದೂ ಪ್ರದರ್ಶನ ನೀಡುವ ತಂದೆಯೊಂದಿಗೆ ಬೆಂಗಳೂರಿನಾದ್ಯಂತ ಇರುವ ಬಹುತೇಕ ಪಂಚತಾರಾ ಹೋಟೆಲ್, ಸಾಫ್ಟ್‌ವೇರ್ ಕಂಪೆನಿ ಹಾಗೂ ಮಾಲ್‌ಗಳಲ್ಲಿ ತನ್ನ `ಕಣ್ಕಟ್~ ವಿದ್ಯೆ ತೋರಿಸಿರುವ ಸೋನು ಚಿಕ್ಕ ಮಕ್ಕಳಿಗೆಲ್ಲ ಮಾಯಾ ಲೋಕದ `ಕಿಂದರಿ ಜೋಗಿ~.ಹುಟ್ಟುಹಬ್ಬ, ನಾಮಕರಣ, ಮದುವೆ ಸಮಾರಂಭಗಳು ಸೇರಿದಂತೆ ಗಣರಾಜ್ಯೋತ್ಸವ, ಗಣೇಶ ಚತುರ್ಥಿಯಂತಹ ಉತ್ಸವಗಳಲ್ಲಿ ನನಗೊಂದು ಪುಟ್ಟ ಅವಕಾಶ ನೀಡಿ ಸಹೃದಯರು ನನ್ನ ಪ್ರತಿಭೆ ಪೋಷಿಸಲಿ ಎನ್ನುವುದು ಸೋನು ಕಳಕಳಿ.ಸೋನು ಸಂಪರ್ಕಕ್ಕೆ - 98861 69083 ಇಲ್ಲವೇ www.sonuevents.in  ಗೆ ಭೇಟಿ ನೀಡಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.