ಸೋಮವಾರ, ಜೂನ್ 21, 2021
29 °C

ಮಾಂಸದಂಗಡಿ ಶುಲ್ಕ ಕಡಿತಕ್ಕೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇತ್ತೀಚೆಗೆ ಉದ್ದಿಮೆ ಪರವಾನಗಿ ಶುಲ್ಕವನ್ನು ಹೆಚ್ಚಿಸಿರುವ ನಗರಸಭೆಯ ಕ್ರಮದ ಬಗ್ಗೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಶುಲ್ಕ ಕಡಿಮೆಗೊಳಿಸುವಂತೆ ಸದಸ್ಯರು ಒತ್ತಡ ಹೇರಿದಾಗ, ಇತರ ನಗರಗಳಿಗೆ ಹೋಲಿಸಿದರೆ ನಮ್ಮಲ್ಲಿಯೇ ಅತ್ಯಂತ ಕಡಿಮೆ ಶುಲ್ಕವಿದೆ ಎಂದು ಅಧ್ಯಕ್ಷ ಎಚ್.ಎಂ. ನಂದಕುಮಾರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.ನಗರವಾಸಿಗಳಿಗೆ ವಿವಿಧ ಸೌಲಭ್ಯ ಹಾಗೂ ಸೌಕರ್ಯಗಳನ್ನು ನೀಡೇಕಾದರೆ ನಗರಸಭೆಯು ತನ್ನ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲೇಬೇಕು. ಈ ಕಾರಣಕ್ಕಾಗಿ ಕಳೆದ ಸಭೆಯಲ್ಲಿ ಎಲ್ಲ ಸದಸ್ಯರ ಒಪ್ಪಿಗೆಯನ್ನು ಪಡೆದುಕೊಂಡೇ ಉದ್ದಿಮೆ ಪರವಾನಗಿ ಶುಲ್ಕ ಹೆಚ್ಚಿಸಲಾಗಿತ್ತು ಎಂದು ಅವರು ಹೇಳಿದರು.ಸದಸ್ಯ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ನಗರದಲ್ಲಿ ಹೋಟೆಲ್ ಉದ್ದಿಮೆ ಪರವಾನಗಿ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಇದು ಸಣ್ಣ ಹಾಗೂ ಮಧ್ಯಮ ವಸತಿ ಗೃಹ ಹೊಂದಿರುವ ಮಾಲೀಕರಿಗೆ ಅನ್ಯಾಯವಾಗಲಿದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ವಸತಿ ಗೃಹ ಮತ್ತು ಹೋಟೆಲ್‌ಗಳನ್ನು ದೊಡ್ಡ ಮತ್ತು ಮಧ್ಯಮ ಎಂದು ವಿಭಾಗ ಮಾಡಿ ಅದರ ಆಧಾರದ ಮೇಲೆ ಪರವಾನಗಿ ಶುಲ್ಕ ನಿಗದಿಗೊಳಿಸಬಹುದು. ಇದರಿಂದ ಸಣ್ಣ ಹಾಗೂ ಮಧ್ಯಮ ವಸತಿಗೃಹ ಮಾಲೀಕರಿಗೂ ಅನುಕೂಲವಾಗುವುದು ಎಂದರು.ಸದಸ್ಯ ಮುನೀರ್ ಮಾತನಾಡಿ, ನಗರದಲ್ಲಿ ಮಾಂಸದ ಅಂಗಡಿಗಳ ಪರವಾನಗಿ ನವೀಕರಣ ದರ ಹೆಚ್ಚಾಗಿದ್ದು, ಇದನ್ನು ಕಡಿಮೆ ಮಾಡುವಂತೆ ಕೋರಿದರು.ಅಧ್ಯಕ್ಷ ನಂದಕುಮಾರ್ ಉತ್ತರಿಸಿ, ಜಿಲ್ಲೆಯಲ್ಲಿ ಮಾಂಸದ ಮಾರಾಟ ಮಳಿಗೆಗಳು ಹೆಚ್ಚಾಗುತ್ತಿದ್ದು, ಮಾಂಸದ ಬೆಲೆಯು ಕೂಡ ಹೆಚ್ಚಾಗುತ್ತಿದೆ. ಈ ಮಳಿಗೆ ತೆರೆಯಲು ಬೇಡಿಕೆ ಹೆಚ್ಚಾಗಿರುವುದರಿಂದ ಪರವಾನಗಿ ನವೀಕರಣ ದರವನ್ನು ಹೆಚ್ಚಳ ಮಾಡಲಾಗಿದೆ ಎಂದರು.ಮಾಂಸದ ದರ ಹೆಚ್ಚಳ ಮಾಡುವ ಬಗ್ಗೆ ಅಂಗಡಿ ಮಾಲೀಕರು ಪರವಾನಗಿ ನವೀಕರಣದ ಸಮಯದಲ್ಲಿ ನಗರಸಭೆಯ ಗಮನಕ್ಕೆ ತರುವಂತೆ  ಸೂಚಿಸಲಾಗುವುದು ಎಂದು ತಿಳಿಸಿದರು.ಮಾಂಸದ ಮಳಿಗೆಗಳ ಶುಲ್ಕವನ್ನು ಕೊಂಚವಾದರೂ ಕಡಿಮೆ ಮಾಡಲೇಬೇಕು ಎಂದು ಸದಸ್ಯರು ಪಟ್ಟು ಹಿಡಿದಾಗ ರೂ. 2,000 ದಷ್ಟು ಕಡಿಮೆ ಮಾಡಲು ಸಭೆ ತೀರ್ಮಾನಿಸಿತು.ಕಾಮಗಾರಿ ಶೀಘ್ರ ಆರಂಭ

ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕಾಲೇಜು ರಸ್ತೆಯ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಚರಂಡಿ ಕಾಮಗಾರಿಯನ್ನು ಶೀಘ್ರವೇ ಆರಂಭ ಮಾಡಲಾಗುವುದು ಎಂದು ಅಧ್ಯಕ್ಷ ನಂದಕುಮಾರ್ ಹೇಳಿದರು.ಇದಕ್ಕೂ ಮೊದಲು ಸದಸ್ಯ ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ, ನೂತನವಾಗಿ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆಯ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿಲ್ಲ. ಮಳೆಗಾಲ ಆರಂಭಕ್ಕೂ ಮುನ್ನ ಚರಂಡಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ಟಿ.ಎಂ. ಅಯ್ಯಪ್ಪ ಮಾತನಾಡಿ, ನಗರದಲ್ಲಿ ಬೇಸಿಗೆ ಕಾಲ ಹತ್ತಿರವಾಗುತ್ತಿದ್ದು ನೀರಿನ ಸಮಸ್ಯೆ ಉಂಟಾಗುತ್ತಿದೆ. ನೀರು ಪೂರೈಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಯೋಜನೆಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ನೀರು ಪೂರೈಕೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ, ನಗರದಲ್ಲಿ ಮಂಗಳಾದೇವಿ ನಗರ ಸೇರಿದಂತೆ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈಗಾಗಲೇ ನಗರದ ಹಲವು ಭಾಗಗಳಲ್ಲಿ ನೀರು ಪೂರೈಕೆ ಕಾರ್ಯವನ್ನು ಟ್ಯಾಂಕರ್ ಮೂಲಕ ಮಾಡಲಾಗುತ್ತಿದೆ. ಇನ್ನುಳಿದ ಭಾಗಗಳಿಗೂ ಪೂರೈಕೆ ಮಾಡಲು ಇಲಾಖಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.ನಗರಸಭಾ ಸದಸ್ಯ ರಜಾಕ್ ಮಾತನಾಡಿ, ನಗರದಲ್ಲಿ ನಡೆಯುತ್ತಿರುವ ಹಲವು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜಾಹೀರಾತು ಫಲಕಗಳು ಕಂಡು ಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಟೆಂಡರ್ ಪ್ರಕ್ರಿಯೆ ಮೂಲಕ ಜಾಹೀರಾತು ಫಲಕಗಳ ಪ್ರದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.ಸಭೆಯಲ್ಲಿ ಉಪಾಧ್ಯಕ್ಷೆ ವಸಂತ ಕೇಶವ, ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.