ಶನಿವಾರ, ಅಕ್ಟೋಬರ್ 19, 2019
28 °C

ಮಾಗಿದ ಬದುಕಿನ ಚಿತ್ರಗಳು

Published:
Updated:

ನೋಡಿದರೆ ಮುದ್ದು ಉಕ್ಕಿಸುವಂತಹ ಮುಖ ಭಾರ್ಗವಿ ನಾರಾಯಣ್. ಕಿರುತೆರೆ ಧಾರಾವಾಹಿ, ಸಿನಿಮಾ ಪಾತ್ರಗಳ ಮೂಲಕ ಮನೆಮಾತಾದ ಭಾರ್ಗವಿ ಅವರ ಮುದ್ದುಮುಖದ ಹಿಂದೆ ತಳಮಳಗಳ ಹೋರಾಟದ ಕಥನವಿದೆ. ಅಪ್ಪನ ಮುದ್ದಿನ ಮಗಳಾದ ಅವರು, ಆರನೇ ವಯಸ್ಸಿಗೇ ಅಪ್ಪನನ್ನು ಕಳೆದುಕೊಳ್ಳುತ್ತಾರೆ.ತಾಯಿ, ಅಣ್ಣ ಮತ್ತು ತಂದೆಯ ವಿಧವೆ ಅಕ್ಕನ ಜೊತೆ ತವಕತಲ್ಲಣಗಳ ದಾರಿಯಲ್ಲಿ ನಡೆದು ತಮ್ಮ ಬದುಕನ್ನು ರೂಪಿಸಿಕೊಂಡ ಅಗ್ಗಳಿಕೆ ಅವರದ್ದು. ಅವರೀಗ ತಮ್ಮ ಆತ್ಮಕಥೆ ಬರೆದಿದ್ದಾರೆ. `ನಾನು, ಭಾರ್ಗವಿ~ ಎನ್ನುವ ಹೆಸರೇ ಆಪ್ತವಾಗಿದೆ. ಈ ಕಥನವನ್ನು ಓದುತ್ತಿದ್ದರೆ ಓದುಗರ ಕಣ್ಣುಗಳು ತೇವಗೊಳ್ಳುತ್ತವೆ.`ಎಲ್ಲಿಯೋ ವನಸುಮದಂತೆ ಹುಟ್ಟಿ ಬೆಳೆದರೂ, ಅಯಾಚಿತವಾಗಿ ಬಂದುವು ಸಕಲ ಸೌಭಾಗ್ಯಗಳೂ. ಸುತ್ತಮುತ್ತಲ ಜನ, ಹುಟ್ಟಿದ, ಸೇರಿದ ಮನೆಯವರೆಲ್ಲರೂ ನನಗೆ ಹಿತವನ್ನು ತೋರಿದಂತವರೇ. ಅವರೆಲ್ಲರಿಗೂ ನಾನು ಋಣಿ~ ಎಂದು ಭಾರ್ಗವಿ ಬರೆಯುತ್ತಾರೆ. ಹೀಗೆ ಅಯಾಚಿತವಾಗಿ ಬಂದ ಎಲ್ಲವನ್ನೂ ಅವರು ನಿರ್ಲಿಪ್ತತೆಯಿಂದ ದಾಖಲಿಸುವ ಕ್ರಮ ಸೋಜಿಗ ಹುಟ್ಟಿಸುವಂತಿದೆ (`ತನ್ನ ಬಾಳಿನಲ್ಲಿ ಕಂಡ ನಂಜು ಅಮೃತವನ್ನೆಲ್ಲ ಬರಹದಲ್ಲಿ ಹರಿಸಿದ್ದಾರೆ ಈ ಮಹಾಲಕ್ಷ್ಮಿ ಭಾರ್ಗವಿ~ -ಸಿ.ಆರ್.ಸಿಂಹ).ಮುಚ್ಚುಮರೆಯಿಲ್ಲದ, ಆಡಂಬರ ತಂತ್ರಗಾರಿಕೆಯಿಲ್ಲದ ಬರವಣಿಗೆ ಭಾರ್ಗವಿ ಅವರದ್ದು. ಸ್ತ್ರೀ ಸಮಾಜಗಳಿಗಾಗಿ ಕೆಲವು ನಾಟಕಗಳನ್ನು ಬರೆದಿರುವ ಅನುಭವ ಅವರಿಗಿದೆಯಾದರೂ, ಆತ್ಮಕಥೆಯಂತಹ ಮಹತ್ವದ ಬರವಣಿಗೆಯನ್ನು ಅವರು ಪರಿಣಾಮಕಾರಿಯಾಗಿ ನಿಭಾಯಿಸಿರುವುದು ಕುತೂಹಲಕಾರಿಯಾಗಿದೆ.ಶಾಲೆ ಕಾಲೇಜು ದಿನಗಳಲ್ಲಿಯೇ ನಾಟಕದ ಹವ್ಯಾಸಕ್ಕೆ ಬಿದ್ದ ಭಾರ್ಗವಿ, ಬದುಕಿನ ಭಾಗವಾಗಿಯೇ ಅಭಿನಯ ಕಲೆಯನ್ನು ಸ್ವೀಕರಿಸಿದವರು. ರಂಗಭೂಮಿಯ ಮೂಲಕ ಪರಿಚಿತರಾದ ನಾಣಿ (ಮೇಕಪ್ ನಾಣಿ) ಅವರನ್ನು ಮದುವೆಯಾಗಿ, ತಮ್ಮ ಬದುಕನ್ನು ಹೊಸ ಸಾಧ್ಯತೆಗಳಿಗೆ ಒಡ್ಡಿಕೊಂಡವರು. ಅವರ ಇಡೀ ಕುಟುಂಬ ಕಲೆಯಲ್ಲಿ ತೊಡಗಿಕೊಂಡಿರುವುದರ ಹಿಂದೆ ಭಾರ್ಗವಿ ಅವರ ಪಾತ್ರ ದೊಡ್ಡದಿದೆ.ಬದುಕಿನ ಬಗೆಗಿನ ಭಾರ್ಗವಿ ಅವರ ಧೋರಣೆಗಳು ಸಾವಧಾನ ಹಾಗೂ ಕಹಿ ರಹಿತವಾದವು. ಕಳೆದುಹೋದ ಸಂಗತಿಗಳ ಬಗ್ಗೆ ವಿಷಾದವಿಲ್ಲದ, ಮಾಗಿದ ಬದುಕಿನ ನೆನಪಿನ ಚಿತ್ರಗಳು ಹೊಸ ತಲೆಮಾರಿನ ಓದುಗರಿಗೆ ಅಚ್ಚರಿ ಹುಟ್ಟಿಸುವಷ್ಟು ಸಮೃದ್ಧವಾಗಿವೆ.`ಇದು ಆತ್ಮಕಥನವೋ, ಕಳೆದ ಐದು ದಶಕಗಳ ಬೆಂಗಳೂರಿನ ಕನ್ನಡ ರಂಗಭೂಮಿಯ ಇತಿಹಾಸವೋ, ಕನ್ನಡ ಕಲಾತ್ಮಕ ಚಿತ್ರಗಳ ಆರಂಭದ ದಿವಸಗಳ ದಿನಚರಿಯೋ, ಮೂರು ದಶಕಗಳಿಗಿಂತ ಅಧಿಕ ಕಾಲ ಸರ್ಕಾರಿ ನೌಕರಿಯ ವ್ಯವಸ್ಥೆಯಲ್ಲಿದ್ದುಕೊಂಡು ನಡೆಸಿದ ಹೋರಾಟವೋ, ರಂಗಭೂಮಿಯ ಮೂಲಕ ಪರಿಚಿತರಾದ ಒಬ್ಬರ ಜತೆ ಒಪ್ಪದೆಯೇ ಒಪ್ಪಿ ಮದುವೆ ಆಗಿ ನಾಲ್ಕು ಮಕ್ಕಳ ತಾಯಿಯಾದವಳ ಜೀವನ ಚರಿತ್ರೆಯೋ ಅಥವಾ ಒಂದು ಹೆಣ್ಣಿನ ಸರ್ವೇಸಾಮಾನ್ಯ ಎನಿಸುವ ದುಸ್ತರ ಬಾಳಿನ ವರ್ಣನೆಯೋ... ಈ ಎಲ್ಲ ಅಂಕಗಳೂ ಒಂದರೊಳಗೊಂದು ಸುಸೂತ್ರವಾಗಿ ಹಾಸುಹೊಕ್ಕಿವೆ~ ಎಂದು ಮುನ್ನುಡಿಯಲ್ಲಿ ಅನಂತನಾಗ್ ಹೇಳಿರುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.ಕನ್ನಡದ ಎಳೆಯ ನಟಿಯರು `ಮುಕ್ತ ಮುಕ್ತ~ ಎಂದು ಅಂಗಾಂಗ ಪ್ರದರ್ಶನದಲ್ಲಿ ತೊಡಗಿರುವ ಹಾಗೂ ಅದನ್ನು ಕಲೆಯೆಂದು ಬಿಂಬಿಸುತ್ತಿರುವ ಸಂದರ್ಭದಲ್ಲಿ ಹಿರಿಯ ಕಲಾವಿದೆಯ ಆತ್ಮಕಥನ ಪ್ರಕಟಗೊಂಡಿದೆ. ಇದು ಹೊಸ ಕಲಾವಿದೆಯರಿಗೆ ಪಾಠದಂತಿದೆ.

 

ನಾನು, ಭಾರ್ಗವಿ

(ಭಾರ್ಗವಿ ನಾರಾಯಣ್ ಆತ್ಮಕಥನ)

ಪು: 416; ಬೆ: 250

ಪ್ರ: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 004.


 

Post Comments (+)