ಶನಿವಾರ, ಮೇ 21, 2022
25 °C

ಮಾಜಿ ಕ್ರಿಕೆಟಿಗ ಹನೀಫ್‌ಗೆ ಕ್ಯಾನ್ಸರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಟಿಂಗ್ ಹ್ಯಾಂ (ಎಎಫ್‌ಫಿ): ಪಾಕಿಸ್ತಾನದ ಖ್ಯಾತ ಮಾಜಿ ಕ್ರಿಕೆಟಿಗ ಹನೀಫ್ ಮಹಮ್ಮದ್ ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಬುಧವಾರ ಲಂಡನ್‌ನ ಬ್ರಿಡ್ಜ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು.`ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ನಿಧಾನವಾಗಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ವಾರ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ' ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 1952ರಲ್ಲಿ ಭಾರತದ ಎದುರು ನವದೆಹಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಹನೀಫ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 55 ಪಂದ್ಯಗಳಿಂದ 3915 ರನ್‌ಗಳನ್ನು ಗಳಿಸಿದ್ದಾರೆ. 1969ರಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್ ಎದುರು ಆಡಿದ್ದೇ ಕೊನೆಯ ಟೆಸ್ಟ್ ಪಂದ್ಯವಾಗಿತ್ತು.1957-58ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ 970 ನಿಮಿಷ (16 ಗಂಟೆ 10 ನಿ.) ಕ್ರಿಸ್‌ನಲ್ಲಿದ್ದು, ದೀರ್ಘ ಹೊತ್ತು ಕ್ರೀಡಾಂಗಣದಲ್ಲಿದ್ದ ದಾಖಲೆ ಹೊಂದಿದ್ದಾರೆ. ಈ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಹನೀಫ್ ಟೆಸ್ಟ್‌ನಲ್ಲಿ 337 ರನ್ ಗಳಿಸಿದ್ದರು. ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರು ಎನಿಸಿದೆ.ವಿಕೆಟ್ ಕೀಪರ್ ಸಹ ಆಗಿದ್ದ ಹನೀಫ್  238 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, ಒಟ್ಟು 17059 ರನ್ ಕಲೆ ಹಾಕಿದ್ದಾರೆ. 499 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಳಿಸಿದ ವೈಯಕ್ತಿಕ ಹೆಚ್ಚು ಮೊತ್ತವಾಗಿದೆ. ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಬ್ರಯನ್ ಲಾರಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಔಟಾಗದೆ 501 ರನ್ ಗಳಿಸಿದ್ದು ಇದುವರಗಿನ ಶ್ರೇಷ್ಠ ಸಾಧನೆ ಎನಿಸಿದೆ.`ಕ್ರೀಡಾ ಕುಟುಂಬ'ವನ್ನೇ ಹೊಂದಿರುವ ಹನೀಫ್ ಅವರ ಮೂವರು ಸಹೋದರರೂ ಕ್ರಿಕೆಟಿಗರು. ಹನೀಫ್ ಸಹೋದರರಾದ ವಾಜಿರ್, ಮುಷ್ತಾಕ್ ಮತ್ತು ಸಾಧಿಕ್ ಅವರೂ ಪಾಕ್ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.