ಶುಕ್ರವಾರ, ಮಾರ್ಚ್ 5, 2021
28 °C

ಮಾಜಿ ನಾಯಕರ ಹಾಲಿ ಪಾತ್ರ

ಡಿ.ಗರುಡ Updated:

ಅಕ್ಷರ ಗಾತ್ರ : | |

ಮಾಜಿ ನಾಯಕರ ಹಾಲಿ ಪಾತ್ರ

ನಲ್ಮೆಯ ಗೆಳತಿಯಂತೆ ಕೈಹಿಡಿದು ಸಾಗಿದೆ ಕ್ರಿಕೆಟ್ ಪ್ರೀತಿ. ಯಶಸ್ಸಿನ ಅಪ್ಪುಗೆ ನೀಡಿದ್ದ ಆಟದ ಆಸಕ್ತಿ ಈಗಲೂ ನಿರಾಸೆಗೊಳಿಸಿಲ್ಲ. ಮತ್ತೆ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ತಂಡವೊಂದನ್ನು ಮುನ್ನಡೆಸುವ ತಾಕತ್ತು ಕೂಡ ಕುಂದಿಲ್ಲ. ದೇಶದ ತಂಡಕ್ಕೆ ನಾಯಕರಾಗಿದ್ದ ಕಾಲದ ನೆನಪುಗಳನ್ನು ಮತ್ತೆ ಮೆಲುಕು ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ.ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಸೌರವ್‌ಗೆ ಪುಣೆ   ವಾರಿಯರ್ಸ್ ನೇತೃತ್ವ. ರಾಹುಲ್‌ಗೆ ರಾಜಸ್ತಾನ್ ರಾಯಲ್ಸ್ ನಾಯಕತ್ವ. ಇಬ್ಬರೂ ತಮ್ಮೂರಿನ ತಂಡದಲ್ಲಿ ಅವಕಾಶ ಗಿಟ್ಟಿಸದಿದ್ದರೂ, ನಿರಾಸೆಯಲ್ಲಿ ಮುಳುಗಲಿಲ್ಲ.

 

`ದಾದಾ~ ಕೋಲ್ಕತ್ತ ನೈಟ್‌ರೈಡರ್ಸ್‌ನಲ್ಲಿಯೇ ಇರಬೇಕು ಎನ್ನುವ ಆಶಯವು ಪಶ್ಚಿಮ ಬಂಗಾಳದ ಕ್ರಿಕೆಟ್ ಪ್ರೇಮಿಗಳದ್ದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಶಾರೂಖ್ ಖಾನ್ ಒಡೆತನದ ತಂಡ ಅವರನ್ನು ಕೈಬಿಟ್ಟಿತು. `ಗೋಡೆ~ ಎನ್ನುವ ಖ್ಯಾತಿ ಪಡೆದ ಬ್ಯಾಟ್ಸ್‌ಮನ್ ದ್ರಾವಿಡ್ ಕೂಡ ಚಾಲೆಂಜರ್ಸ್ ದೂರ ಸರಿದು ರಾಯಲ್ಸ್ ಪಾಲಾದರು.ಗಟ್ಟಿ ಮನಸ್ಸಿನ ಈ ಇಬ್ಬರೂ ದಿಟ್ಟ ಕ್ರಿಕೆಟಿಗರು ತಮ್ಮ ಸತ್ವಯುತ ನಾಯಕತ್ವದ ಗುಣದಿಂದ ಮತ್ತೆ ಗಮನ ಸೆಳೆಯುವಲ್ಲಿಯಂತೂ ಯಶಸ್ವಿಯಾಗಿದ್ದಾರೆ. ತಂಡವೊಂದರ ಆಟಗಾರರ ವಿಶ್ವಾಸವನ್ನು ಸಂಕಷ್ಟಗಳ ನಡುವೆಯೂ ಎತ್ತಿ ಹಿಡಿಯುವ ಶಕ್ತಿ ತಮ್ಮಲ್ಲಿದೆ ಎನ್ನುವುದನ್ನೂ ಸಾಬೀತುಪಡಿಸಿದ್ದಾರೆ.

 

ಐಪಿಎಲ್ ಐದನೇ ಅವತರಣಿಕೆಯಲ್ಲಿ ಈವರೆಗೆ (ಏ.20ರವರೆಗೆ) ಆಡಿದ ಪಂದ್ಯಗಳಲ್ಲಿ ಪಡೆದ ಫಲಿತಾಂಶ ಉತ್ಸಾಹದಾಯಕ. ಅದಕ್ಕೆ ಕಾರಣ ಇವರಿಬ್ಬರ ಸಮರ್ಥ ಮುಂದಾಳತ್ವ.ವಿಶೇಷವೆಂದರೆ ದೇಶದ ತಂಡವನ್ನು ನಡೆಸುತ್ತಿದ್ದಾಗಿನ ತಮ್ಮ ಸಹಜ ಗತ್ತನ್ನು ಇಬ್ಬರೂ ಬಿಟ್ಟಿಲ್ಲ. ಬದಲಾಗದೇ ಉಳಿದಿರುವ ಗಂಗೂಲಿಯನ್ನು ಈಗಲೂ ಅಂಗಳದಲ್ಲಿ ನೋಡಿದಾಗ ಹಿಂದೆ ಭಾರತ ತಂಡಕ್ಕೆ ನಾಯಕರಾಗಿದ್ದಾಗ ತೋರುತ್ತಿದ್ದ ವರ್ತನೆಗಳಿವು ಎನಿಸುತ್ತವೆ.

 

ತಕ್ಷಣ ಕೋಪದಿಂದ ಕ್ಷೇತ್ರ ರಕ್ಷಕರ ಕಡೆಗೆ ಹಾಗೂ ಬೌಲರ್‌ಗಳತ್ತ ನೋಡುವ ಅವರ ಭಂಗಿಯಲ್ಲಿ ವ್ಯತ್ಯಾಸವೇ ಇಲ್ಲ. ರಾಹುಲ್ ಮಾತ್ರ ಎಂದಿನಂತೆ ತಣ್ಣಗೆ ಇರುತ್ತಾರೆ. ಅವರ ಮುಖದಲ್ಲಿ ನೆಲೆಸಿರುವ ಏಕಪ್ರಕಾರ ಭಾವ ಬದಲಾಗುವುದೇ ಇಲ್ಲ ಎನ್ನುವುದು ಬೆಂಬಲಿಗರಿಗೂ ಗೊತ್ತು.ಶೇನ್ ವಾರ್ನ್ ನಂತರ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ನಾಯಕರಾದ ದ್ರಾವಿಡ್ ತಮ್ಮ ಮೇಲಿನ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಕರ್ನಾಟಕದ ಈ ಆಟಗಾರನ ಮಾರ್ಗದರ್ಶನದಲ್ಲಿ ಉತ್ತಮ ಫಲವನ್ನು ಪಡೆಯುತ್ತ ಸಾಗಿದೆ ರಾಯಲ್ಸ್. ಮೊದಲ ಆರು ಪಂದ್ಯಗಳಲ್ಲಿ ಸಿಕ್ಕಿದ್ದು ನಾಲ್ಕು ವಿಜಯ.ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತ್ತ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಹಾಗೂ ಡೆಕ್ಕನ್ ಚಾರ್ಜರ್ಸ್ ಎದುರು ಗೆಲುವಿನ ಸಿಹಿ. ಆದ್ದರಿಂದ ವಾರ್ನ್ ನಂತರ ತಂಡಕ್ಕೆ ಒಳ್ಳೆಯ ನಾಯಕನೇ ಸಿಕ್ಕ ಎನ್ನುವ ತೃಪ್ತಿ ರಾಜಸ್ತಾನ್ ರಾಯಲ್ಸ್ ಮಾಲೀಕರಿಗೆ.2005ರಿಂದ ಸುಮಾರು ಎರಡು ವರ್ಷ ಕಾಲ ಭಾರತ ತಂಡದ ನೇತೃತ್ವ ವಹಿಸಿದ್ದ ದ್ರಾವಿಡ್ ವಿಶಿಷ್ಟವಾದ ಸಾಧನೆಯ ಶ್ರೇಯಕ್ಕೆ ಪಾತ್ರರಾಗಿದ್ದರು. ಮೂವತ್ತು ವರ್ಷಗಳ ಸುದೀರ್ಘ ಅಂತರದ ನಂತರ ಕೆರಿಬಿಯನ್ ನಾಡಿನಲ್ಲಿ ಟೆಸ್ಟ್ ಸರಣಿ ವಿಜಯಕ್ಕೆ ಕೂಡ ಇವರೇ ಕಾರಣ. ಆದರೂ ದೇಶಕ್ಕಾಗಿ ಹೆಚ್ಚು ಕಾಲ ನಾಯಕರಾಗಿದ್ದುಕೊಂಡು ಆಡುವುದು ಮಾತ್ರ ಸಾಧ್ಯವಾಗಲಿಲ್ಲ.ಹಾಗೆಂದು ಅವರ ನಾಯಕತ್ವದ ಗುಣವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಸ್ಥಿತಪ್ರಜ್ಞರಾದ ಅವರು ಕ್ಷೇತ್ರದಲ್ಲಿ ತಮ್ಮ ಆಟಗಾರರನ್ನು ಪ್ರಭಾವಿಯಾಗಿ ಪ್ರಯೋಗಿಸಬಲ್ಲರು. ರಾಯಲ್   ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ರೂಪಿಸಿದ ತಂತ್ರವಂತೂ ಅದಕ್ಕೆ ತಾಜಾ ಸಾಕ್ಷಿ.

 

ಜೊತೆಗಿರುವ ಯುವ ಆಟಗಾರರಿಗೆ ಆಪ್ತ ಗೆಳೆಯನಂತೆ ಸಲಹೆ ನೀಡುವ ಗುಣವೂ ಅವರ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಿದೆ.

ಆದರೆ ಗಂಗೂಲಿ ಹಾಗಲ್ಲ. ಅವರನ್ನು ನೋಡಿದರೆ ಯುವ ಆಟಗಾರರಿಗೆ ಭಯ-ಭಕ್ತಿ. ಅದಕ್ಕೆ ಕಾರಣ ಮೊದಲಿನಿಂದಲೂ `ದಾದಾ~ ಬೆಳೆಸಿಕೊಂಡಿರುವ ವ್ಯಕ್ತಿತ್ವ.ಅಧಿಕಾರಯುತವಾಗಿ ಇರುವುದು ಅವರ ಸಹಜ ಗುಣ. ದೇಶದ ತಂಡಕ್ಕೆ ನಾಯಕರಾಗಿದ್ದು 21 ಟೆಸ್ಟ್ ಹಾಗೂ 73 ಏಕದಿನ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಶ್ರೇಯ ಹೊಂದಿರುವ ಸೌರವ್ ಹೇಗೆ ಎನ್ನುವುದು ಎಲ್ಲರಿಗೂ ಗೊತ್ತು. ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಆದರೂ ಅಷ್ಟೇ ಮೃದು ಮನಸ್ಸು. ಇದು ಅವರೊಂದಿಗೆ ಆಡುವ ಯುವ ಆಟಗಾರರಿಗೂ ಗೊತ್ತು.ಆದ್ದರಿಂದ ಪಂದ್ಯದಲ್ಲಿ ಆಡುವಾಗ ನಾಯಕನ ನಿರ್ದೇಶನವನ್ನು ಚಾಚುತಪ್ಪದೇ ಪಾಲಿಸುವ ಪ್ರಯತ್ನ ಮಾಡುತ್ತಾರೆ. ಇದು ಒಂದು ರೀತಿಯಲ್ಲಿ ಪ್ರಯೋಜನಕಾರಿಯೂ ಹೌದು. ಈ ಬಾರಿಯ ಐಪಿಎಲ್‌ನಲ್ಲಿ ಗಂಗೂಲಿ ಮುಂದಾಳತ್ವದಲ್ಲಿ ಆಡಿದ ಮೊದಲ ಆರು ಪಂದ್ಯಗಳಲ್ಲಿ ಹೆಚ್ಚೇನು ನಿರಾಸೆ ಕಾಡಲಿಲ್ಲ. ಮೂರು ಸೋಲು; ಅಷ್ಟೇ ಗೆಲುವು!ಸೌರವ್ ಪುಣೆ ವಾರಿಯರ್ಸ್ ತಂಡದೊಂದಿಗೆ ಇದ್ದರೂ, ಅವರ ಮನಸ್ಸು ಇನ್ನೂ ಕೋಲ್ಕತ್ತ ನೈಟ್ ರೈಡರ್ಸ್ ಕಡೆಗಿದೆ ಎನ್ನುವುದಂತೂ ಸ್ಪಷ್ಟ. ಏಕೆಂದರೆ `ಕೆಕೆಆರ್~ ಜೊತೆಗೆ ಇದ್ದಾಗ ಸಿಗುತ್ತಿದ್ದ ಪಶ್ಚಿಮ ಬಂಗಾಳದ ಕ್ರಿಕೆಟ್ ಪ್ರೇಮಿಗಳ ಬೆಂಬಲ ಈಗ ಇಲ್ಲವಾಗಿದೆ. ಆದರೂ ತಮ್ಮ ಹಾಲಿ ಜವಾಬ್ದಾರಿಯನ್ನು ಸೌರವ್ ಅಷ್ಟೇ ಶ್ರದ್ಧೆಯಿಂದ ನಿಭಾಯಿಸುತ್ತಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.