ಭಾನುವಾರ, ಆಗಸ್ಟ್ 1, 2021
26 °C

ಮಾಜಿ ಯೋಧರಿಗೆ ಉತ್ತಮ ಜೀವನ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ಯೋಧರಿಗೆ ಉತ್ತಮ ಜೀವನ ಕಲ್ಪಿಸಿ

ಬೆಂಗಳೂರು: ‘ದೇಶದ ಸುರಕ್ಷತೆಗಾಗಿ ಪ್ರಾಣವನ್ನೇ ಮುಡುಪಾಗಿಟ್ಟು ಹೋರಾಡಿದ ಮಾಜಿ ಯೋಧರಿಗೆ ಉತ್ತಮ ಜೀವನ ಕಲ್ಪಿಸಿಕೊಡುವ ಜವಾಬ್ದಾರಿ ಸರ್ಕಾರಗಳ ಮೇಲಿದೆ’ ಎಂದು ನಿವೃತ್ತ ಏರ್‌ಮಾರ್ಷಲ್ ಬಿ.ಯು. ಚೆಂಗಪ್ಪ ಹೇಳಿದರು.

ನಗರದಲ್ಲಿರುವ ಭಾರತೀಯ ವಾಯು ಪಡೆಯ ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ‘ವಿಜಯ ದಿವಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1971ರಲ್ಲಿ ಪಾಕಿಸ್ತಾನದ ಜೊತೆ ನಡೆದ ಯುದ್ಧದಲ್ಲಿ ಅಮರರಾದ ಭಾರತೀಯ ಯೋಧರಿಗೆ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

‘ಯೋಧರು ತಮ್ಮ ಜೀವನದ ಬಹುಮುಖ್ಯವಾದ ಸಮಯವನ್ನು ದೇಶದ ಸುರಕ್ಷತೆಗಾಗಿ ಅರ್ಪಿಸಿರುತ್ತಾರೆ. ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಅವರನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಬಳಸಿಕೊಳ್ಳಬೇಕು. ಅವರಿಗೆ ಯೋಗ್ಯವಾದ ಉದ್ಯೋಗ ನೀಡಿ, ಅವರ ಕುಟುಂಬವನ್ನು ಸಲಹಬೇಕಾಗಿದೆ’ ಎಂದರು.

ಮತ್ತೊಬ್ಬ ನಿವೃತ್ತ ಮೇಜರ್ ಜನರಲ್ ಎಂ.ಸಿ. ನಂಜಪ್ಪ ಮಾತನಾಡಿ, ‘ಸರ್ಕಾರಗಳು ಮಾಜಿ ಯೋಧರಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಆದರೆ, ಇವುಗಳ ಲಾಭ ಕೆಳಹಂತದ ಯೋಧರಿಗೆ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಮಾಜಿ ಸೈನಿಕರೊಬ್ಬರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಯೋಧರಿಗೆ ಸಲ್ಲಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಬೇಕು ಎಂದರು. ವಾಯು ಪಡೆಯ ಏರ್ ಮಾರ್ಷಲ್ ರಾಜೇಂದರ್ ಸಿಂಗ್ ಯೋಧರ ಸ್ಮಾರಕಕ್ಕೆ ಹೂಗುಚ್ಛ ಇಟ್ಟು ಗೌರವ ಸಲ್ಲಿಸಿದರು. ಕ್ಯಾಪ್ಟನ್ ರಾಠೋಡ್, ಮೇಜರ್ ಜನರಲ್ ಎ.ಕೆ. ಪ್ರಧಾನ್ ಹಾಗೂ ಸೇನಾಧಿಕಾರಿಗಳಾದ ಪಂಕಜ್ ತ್ಯಾಗಿ, ಖಜೂರಿಯಾ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.