ಮಂಗಳವಾರ, ಏಪ್ರಿಲ್ 20, 2021
25 °C

ಮಾಜಿ ಶಾಸಕ ಬಸವರಾಜು ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ವಿರುದ್ಧ  ವಾಗ್ದಾಳಿ ನಡೆಸಿದ್ದ ಮಾಜಿ ಶಾಸಕ ಎ.ಎಸ್. ಬಸವರಾಜು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ಶಿಸ್ತು ಸಮಿತಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಬಿ.ಆರ್. ಗುರುದೇವ್ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಗುರುದೇವ್, ‘ಬಸವರಾಜು ಅವರು ಪಕ್ಷದ ವೇದಿಕೆಯಲ್ಲಿ ಈ ವಿಚಾರವನ್ನು ಮೊದಲು ಚರ್ಚಿಸಬೇಕಾಗಿತ್ತು. ಯಾವುದೇ ಸಮಿತಿಯ ಮುಂದೆಯಾಗಲಿ, ಪಕ್ಷದ ಮುಖಂಡರ ಮುಂದೆಯಾಗಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳದೆ ನೇರವಾಗಿ ಮಾಧ್ಯಮಗಳೊಂದಿಗೆ ಚರ್ಚಿಸಿರುವುದು ಸರಿಯಲ್ಲ. ಉಸ್ತುವಾರಿ ಸಚಿವರ ವಿರುದ್ಧ ಹೇಳಿಕೆ ನೀಡಿರುವುದರಿಂದ ಜಿಲ್ಲೆಯ ಎಲ್ಲ ಕಾರ್ಯಕರ್ತರಿಗೆ ಬೇಸರವಾಗಿದೆ’ ಎಂದರು.‘ಹಿಂದೆ ಜಿಲ್ಲೆಯಿಂದ ಪಕ್ಷದ ನಾಲ್ಕು ಮಂದಿ ಶಾಸಕರಿದ್ದಾಗಲೂ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮವರು ಅವಕಾಶ ಪಡೆದಿರಲಿಲ್ಲ. ಈಗ ತಾಲ್ಲೂಕು ಪಂಚಾಯಿತಿಗಳಲ್ಲಿ 13 ಹಾಗೂ ಜಿಲ್ಲಾ ಪಂಚಾಯಿತಿಗೆ 5 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ. ಇದಕ್ಕೆ ಸೋಮಣ್ಣ ಅವರೇ ಕಾರಣ. ಯಡಿಯೂರಪ್ಪ ಅವರು ಘೋಷಿಸಿದ್ದ 50ಕೋಟಿ ರೂಪಾಯಿ ವಿಶೇಷ ಅನುದಾನ ಇನ್ನೂ ಬಂದಿಲ್ಲ ಎಂಬುದು ನಿಜ. ಅವರು ಹಾಸನಕ್ಕೆ ಬಂದು ಹೋದ ಬಳಿಕ ಪ್ರತಿ ನಿತ್ಯವೂ ಒಂದಿಲ್ಲೊಂದು ಗೊಂದಲದಲ್ಲಿ ಸಿಲುಕಿದ್ದರು. ಅದರಿಂದಾಗಿ ವಿಳಂಬವಾಗಿದೆ. ಈ ಅನುದಾನವನ್ನು ತಂದು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಾರೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.‘ಬಿಜೆಪಿ ಸರ್ಕಾರ ಬಂದ ಬಳಿಕ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬಂದಿರುವ ಹಣದಲ್ಲಿ ಜಿಲ್ಲಾ ಕೇಂದ್ರ ಹಾಸನಕ್ಕಿಂತ ಹೆಚ್ಚು ಹಣ ಖರ್ಚಾಗಿರುವುದು ಹೊಳೆನರಸೀಪುರ ಕ್ಷೇತ್ರದಲ್ಲಿ. ಈಗ ಹಾಗಾಗುತ್ತಿಲ್ಲ. ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸಮಾನವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ತಮ್ಮ ಸ್ವಾರ್ಥದ ಬೇಡಿಕೆಗೆ ಸ್ಪಂದಿಸಿಲ್ಲ ಎಂದಾಗ ಪಕ್ಷದ ಮುಖಂಡರ ವಿರುದ್ಧ ಧ್ವನಿ ಎತ್ತುವುದು ಸರಿಯಲ್ಲ. ತಾನು ಪಕ್ಷದ ಶಿಸ್ತಿನ ಹದ್ದು ಮೀರಿ ಹೋಗುತ್ತಿದ್ದೇನೆ ಎಂಬ ಅರಿವು ಬಸವರಾಜು ಅವರಿಗೂ ಇದೆ’ ಎಂದರು.ನಗರಸಭೆ ಸದಸ್ಯ ಕೆ.ಟಿ. ಪ್ರಕಾಶ್ ಮಾತನಾಡಿ, ‘ಜಿಲ್ಲೆಯಲ್ಲಿ ಜೆಡಿಎಸ್ ಹೆಮ್ಮರವಾಗಿ ಬೆಳೆದಿದೆ. ಅದನ್ನು ತಡೆದು ನಮ್ಮ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ಬಸವರಾಜು ಅವರ ಮೇಲೂ ಇದೆ. ಆದರೆ ಅವರೇ ಈ ರೀತಿ ಮಾತನಾಡಿರುವುದು ಕಾರ್ಯಕರ್ತರಿಗೆ ಬೇಸರ ಮೂಡಿಸಿದೆ. ತೂಕದ ವ್ಯಕ್ತಿತ್ವದ ಅವರು ತೂಕದ ಮಾತುಗಳನ್ನೇ ಆಡಬೇಕಿತ್ತು’ ಎಂದರು.

ಜಿ.ಪಂ. ಸದಸ್ಯೆ ಜ್ಯೋತಿ ಗುರುದೇವ್ ಮಾತನಾಡಿ, ‘ಬಸವರಾಜು ಅವರು ಸೋಮಣ್ಣ ಮೇಲೆ ಮಾಡಿರುವ ಆರೋಪ ನಿರಾಧಾರವಾದುದು. ಹಿರಿಯ ಮುಖಂಡರಾದ ಬಸವರಾಜು ಯಾಕೆ ಹದ್ದು ಮೀರಿ ವರ್ತಿಸಿದ್ದಾರೆ ಎಂದು ಅರ್ಥವಾಗುತ್ತಿಲ್ಲ’ ಎಂದರು.ಪಕ್ಷದ ನಗರ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್, ಲೋಹಿತ್  ಕುಂದೂರು ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.