ಮಾಡಿದ್ದೀರಾ ಜಿಗಣೆಗೆ ರಕ್ತದಾನ?!

7

ಮಾಡಿದ್ದೀರಾ ಜಿಗಣೆಗೆ ರಕ್ತದಾನ?!

Published:
Updated:

ನಿಂದೊಳ್ಳೆ ಜಿಗಣೆ ಕಾಟವಾಯ್ತಲ್ಲ ಮಾರಾಯ!~ ಎಂಬ ಮಾತನ್ನು ಸಹಿಸಿಕೊಳ್ಳುವುದು ಸುಲಭ. ಆದರೆ ನಿಜವಾದ ಜಿಗಣೆ ಕಾಟವನ್ನು ಅನುಭವಿಸುವುದಿದೆಯಲ್ಲ... ಅನುಭವಿಸಿದವರಿಗೇ ಗೊತ್ತು ಆ `ಮಧುರ~ ಯಾತನೆ!ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಗೂ ಹಾಸನ ಜಿಲ್ಲೆಗಳು ಜಿಗಣೆಗಳ ತವರು. ಚಳಿ, ಬೇಸಿಗೆ ಕಾಲದಲ್ಲಿ ಸಮಾಧಿ ಸ್ಥಿತಿಯಲ್ಲಿರುವ ಇವು, ಮಳೆಗಾಲದಲ್ಲಿ `ತಲೆ ಎತ್ತಿ ನಡೆಯೋಣ, ಸಿಕ್ಕಿದವರ ರಕ್ತ ಹೀರೋಣ~ ಎಂಬಂತೆ ಜೀವ ತಳೆಯುವುದೇ ಒಂದು ಅದ್ಭುತ ಕೌತುಕ.

 

ಇಂಬಳ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಜಿಗಣೆಗಳು ಹಲಸಿನ ಮರದ ಕರಗಿದ ಎಲೆ ಪಾಕದಿಂದ ಉತ್ಪತ್ತಿಯಾಗುತ್ತವೆ ಎಂಬ ಅಭಿಪ್ರಾಯ ಹಿರಿಯರದು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ನಡೆಯುವ ಕಡ್ಡಿ!, ಹಾರುವ ಎಲೆ (ಹುಳುಗಳ ವಿಸ್ಮಯ ಕೋಶ-1)  ಪುಸ್ತಕ ಕೂಡ ಸಸ್ಯಜನ್ಯ ಜೀವಿಗಳ ಬಗೆಗೆ ಬೆಳಕು ಚೆಲ್ಲುವುದನ್ನು ಗಮನಿಸಿದರೆ ಈ ಅಂಶ ಮಹತ್ವ ಪಡೆದುಕೊಳ್ಳುತ್ತದೆ.ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ. ಗೆಳತಿಯ ಬಿಳಿ ಸಮವಸ್ತ್ರದ ಸೂಕ್ಷ್ಮ ಭಾಗದಲ್ಲಿ ರಕ್ತದ ಕಲೆಗಳು. ಗೆಳತಿಯರೆಲ್ಲ ಮುಸಿಮುಸಿ ನಗುತ್ತಾ `ಇವಳು ದೊಡ್ಡವಳಾದ್ಲು ಕಣ್ರೇ~ ಎಂದು ಸಂಭ್ರಮಿಸುತ್ತಿದ್ದರು. ಟೀಚರ್ ಶೌಚಾಲಯಕ್ಕೆ ಕರೆದೊಯ್ದು `ಇದೆಲ್ಲ ಜಿಗಣೆ ಅವಾಂತರ ಛೆ! ಪಾಪ, ಹೇಗೆ ಕಚ್ಚಿ ಹಿಡ್ಕೊಂಡಿತ್ತು ಗೊತ್ತಾ?~ ಎಂದು ಮೇಷ್ಟ್ರ ಬಳಿ ಮಂದಸ್ಮಿತರಾಗಿ ನುಡಿಯುತ್ತಿದ್ದುದನ್ನು ಮುಗ್ಧನಂತೆ ಕದ್ದು ಆಲಿಸಿದ್ದೆ.ಇನ್ನೊಂದು ಪ್ರಸಂಗ: ನಮ್ಮ ಮನೆಗೆ ಹಬ್ಬಕ್ಕೆಂದು ಬಂದ ನೆಂಟರೊಬ್ಬರು ಕಕ್ಕಸ್ಸಿಗೆಂದು ಕಾಫಿ ತೋಟಕ್ಕೆ ಹೋಗಿದ್ದರು. ಕುಕ್ಕರಗಾಲಿನಲ್ಲಿ ಕುಳಿತು ವಿಸರ್ಜನೆ ಮಾಡುವಾಗ ಜಿಗಣೆ ಮೂಲಸ್ಥಾನಕ್ಕೆ ಕಚ್ಚಿ ಅಂಟಿಕೊಂಡಿದ್ದು ಅವರ ಅರಿವಿಗೇ ಬರಲಿಲ್ಲ. ಹಾಗೇ ನಿಕ್ಕರ‌್ರೇರಿಸಿ ಬಿಳಿ ಪಂಚೆ ಬಿಗಿದು ಕಟ್ಟಿಕೊಂಡಿದ್ದಾರೆ. ನೋಡಿದರೆ ಆ ಜಾಗದಲ್ಲೇ ರಕ್ತದ ಹನಿಗಳ ಚುಕ್ಕೆ ಕಲೆಗಳು! `ಭಾವನಿಗೆ ಮೂಲವ್ಯಾಧಿಯೇನ್ರಿ, ಛೇ!~ ಎಂಬ ಅಪ್ಪನ ಮಾತಿಗೆ ಮಾವ ಬೆಚ್ಚಿ ಬಿದ್ದು ನಿಕ್ಕರ‌್ರಿಳಿಸಿ ನೋಡಿದರೆ ಜಿಗಣೆರಾಯನ ಕಿತಾಪತಿ!ಸೊಳ್ಳೆಯಂತೆಯೇ ರಕ್ತ ಹೀರುವ ಜಿಗಣೆ ಮಹರಾಯ, ಹಾವಿನಂತ ವಿಷ ಜಂತುವಿನಿಂದ ಮೊದಲುಗೊಂಡು ಆನೆಯಂತ ಹಿರಿಯ ಜೀವವನ್ನೂ ಬಿಡದ ಪುಟ್ಟ ಚರ್ಮದ ಚೀಲ. `ಒಳ್ಳೆ ಜಿಗಣೆ ಹಿಡ್ಕೊಂಡಂಗೆ ಹಿಡ್ಕೊಳ್ತಾನೆ ಮಾರಾಯ!~ ಎಂದು ಮಾತಿನ ಮಲ್ಲರನ್ನು ಜರಿಯುವವರು ಒಮ್ಮೆಯಾದರೂ ಜಿಗಣೆಗೆ ರಕ್ತದಾನ ಮಾಡಿ ಅವುಗಳ `ಪ್ರೀತಿ~ಗೆ ಪಾತ್ರರಾಗಿ. ಆಗ ನೋಡಿ ಮಾತಿನ ಮಲ್ಲರೂ ನಿಮಗೆ ಪ್ರಿಯರಾಗಬಹುದು!

 

ವೈಶಿಷ್ಟ್ಯಗಳು

1. ರಕ್ತ ಹೀರಿದ ಜಿಗಣೆಗಳಿಗೆ ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲದಿರುವುದು ಸೋಜಿಗ. ಹೊಟ್ಟೆ ತುಂಬಿಸಿಕೊಂಡ ರಕ್ತ ಹೆಪ್ಪುಗಟ್ಟುವ ಮುಂಚೆಯೇ ಕಕ್ಕುವ ಮೂಲಕ ಅದನ್ನು ವಿಸರ್ಜಿಸುತ್ತವೆ. ಇಲ್ಲದಿದ್ದರೆ ಅವು ಉಸಿರು ಕಟ್ಟಿ ಸಾಯುತ್ತವೆ.2. ಜಿಗಣೆಯನ್ನು ತುಂಡರಿಸಿದರೆ ಸಾಯದು. ಕತ್ತರಿಸಿದ ಅದರ ಎರಡು ಭಾಗಗಳು ಸ್ವತಂತ್ರ ಪ್ರತ್ಯೇಕ ಜೀವಿಗಳಾಗಿ ರೂಪು ತಳೆಯುವ ಸಾಧ್ಯತೆ ಇರುತ್ತದೆ.3. ಜಿಗಣೆಗಳಿಗೆ ಹಲ್ಲಿಲ್ಲ, ಮೂಳೆಗಳಿಲ್ಲ. ಚರ್ಮದ ಕಡ್ಡಿಗಳಂತಿರುವ ಇವು ಎರಡು ಬದಿಗಳಲ್ಲೂ ಅಂಟಿನ ಗುಣ ಪಡೆದಿವೆ.4. ನವಿಲುಗಳಿಗೆ ಜಿಗಣೆ ಬಹಳ ಇಷ್ಟದ ಅಹಾರ! ಹೀಗಾಗಿ ಜಿಗಣೆಗಳಿದ್ದಲ್ಲಿ ನವಿಲುಗಳು ಹಾಜರ್.5. ಜಿಗಣೆಗಳನ್ನು ಇತ್ತೀಚಿನ ದಿನಗಳಲ್ಲಿ ಹೋಮಿಯೋಪತಿ, ಆಯುರ್ವೇದ, ಪ್ರಕೃತಿ ಚಿಕಿತ್ಸೆಯಲ್ಲಿ ದೇಹದಲ್ಲಿನ ಕೀವು, ಕಲುಷಿತ ರಕ್ತವನ್ನು ಹೀರಿಸಲು ಬಳಸಲಾಗುತ್ತಿದೆ. 

ಜಿಗಣೆ ಜಗತ್ತು ಸೃಷ್ಟಿಯ ಅದ್ಭುತ ರಹಸ್ಯ. ಗರಿಕೆಯ ಬೆಳವಣಿಗೆಯಂತೆ ಜಿಗಣೆಗಳ ಹುಟ್ಟಿನ ಗುಣವೂ ನಿಗೂಢ.

 

ಕಡಿತದ ಪರಿಣಾಮಗಳು

1. ಹಾವಿನಂತ ವಿಷ ಜಂತುಗಳನ್ನು ಕಚ್ಚಿದ ಜಿಗಣೆ ಮಾನವರಿಗೆ ಕಚ್ಚಿದರೆ ಆ ಭಾಗದಲ್ಲಿ ನಂಜು ಉಂಟಾಗುತ್ತದೆ. ಬಹಳ ದಿನಗಳವರೆಗೂ ವಾಸಿಯಾಗದೆ ನೀರು ತುಂಬಿದ ಕಜ್ಜಿ ಅಥವಾ ಗಾಯವಾಗುತ್ತದೆ.2. ಜಿಗಣೆ ಅಂಟಿ ಹಿಡಿದು ರಕ್ತ ಹೀರಿದ ಭಾಗದಲ್ಲಿ ಚರ್ಮ ಸಂಪೂರ್ಣ ಕಿತ್ತು ಬರುವುದಲ್ಲದೆ, ಹಲವು ದಿನಗಳವರೆಗೂ ಗುಣವಾಗದ ಕೆರೆತ ಇರುತ್ತದೆ.3. ಜಿಗಣೆ ದಾಳಿಯ ಸ್ಪರ್ಶದ ಅರಿವು ಬೇಗ ಗೋಚರವಾಗದೇ ಇರುವುದರಿಂದ ಅಧಿಕ ರಕ್ತ ಸೋರಿಕೆ ತಲೆಸುತ್ತು, ಪ್ರಜ್ಞಾಹೀನಾ ಸ್ಥಿತಿ ತಲುಪುವ ಅಪಾಯ ಇರುತ್ತದೆ.4. ಆನೆಯ ಸೊಂಡಿಲು, ದನದ ಮೂಗಿನ ಹೊಳ್ಳೆಯೊಳಗೆ ಜಿಗಣೆಗಳು ಸೇರಿಕೊಂಡು ಮಾರಣಾಂತಿಕವಾಗಿ ಕಾಡಿದ ಉದಾಹರಣೆಗಳಿವೆ.5. ಮಲೆನಾಡಿನ ಕೆರೆಗಳಲ್ಲಿ ಕಾಣಸಿಗುವ `ಹಟುಕು ಜಿಗಣೆ~ ಎಂಬ ವಿಷಕಾರಿಯು ಗುದ, ಜನನಾಂಗದ ಭಾಗಗಳಿಗೆ ಅಂಟಿ ಹಿಡಿದು ರಕ್ತ ಹೀರಿದರೆ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸಮಸ್ಯೆ ನಿವಾರಣೆ ಹೇಗೆ?

1. ಹೊಲ, ಗದ್ದೆ, ತೋಟಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು,  ಹರಳು ಉಪ್ಪನ್ನು  ಜತೆಗೆ ಒಯ್ದರೆ ಒಳಿತು. ಉಪ್ಪಿನ ಹರಳಿನಿಂದ ತಿಕ್ಕಿದರೆ ಜಿಗಣೆ ಕರಗುತ್ತದೆ.2. ಮುಂಜಾಗ್ರತಾ ಕ್ರಮವಾಗಿ ಅಂಟುವಾಳ, ಕಾಡುಸಸ್ಯ ಸುಂಡೆಕಾಯಿಯ ರಸವನ್ನು ಕೈ, ಕಾಲಿನ ಭಾಗಗಳಿಗೆ ಲೇಪಿಸಿಕೊಳ್ಳುವುದರಿಂದ ಜಿಗಣೆ ದಾಳಿಯಿಂದ ರಕ್ಷಣೆ ಪಡೆಯಬಹುದು.3. ದನದ ಮೂಗಿನ ಹೊಳ್ಳೆಗಳಿಗೆ ಸೀನು ಬರಿಸುವ ದ್ರವ ಔಷಧಿಗಳನ್ನು ಸುರಿದು ಜಿಗಣೆಯನ್ನು ಹೊರ ತೆಗೆಯಬಹುದು.4. ಬೇಸಿಗೆ ಕಾಲದಲ್ಲಿ ಹಿತ್ತಿಲು, ತೋಟ, ಗದ್ದೆಗಳಿಗೆ ಸುಣ್ಣವನ್ನು ಹಾಕುವುದರಿಂದ ಮಳೆಗಾಲದಲ್ಲಿ ಉತ್ಪತ್ತಿಯಾಗುವ ಜಿಗಣೆ ಜೀವಕಾರಕಗಳನ್ನು ನಾಶ ಪಡಿಸಬಹುದು.5. ನಿಂಬೆ ಅಥವಾ ಯಾವುದೇ ಹುಳಿರಸವನ್ನು ಸುರಿಯುವುದರಿಂದಲೂ ಜಿಗಣೆಯನ್ನು ನಿಯಂತ್ರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry