ಗುರುವಾರ , ನವೆಂಬರ್ 21, 2019
21 °C

ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಕಾಂಗ್ರೆಸ್

Published:
Updated:

ಸುಳ್ಯ: ಪಶ್ಚಿಮ ಘಟ್ಟದ ತಪ್ಪಲಿನ ಪ್ರಶಾಂತ ವಾತಾವರಣ. ಸಮುದ್ರ ಮಟ್ಟದಿಂದ ಸುಮಾರು 300 ಮೀಟರ್ ಎತ್ತರದಲ್ಲಿದೆ ಸುಳ್ಯ. ಜಿಲ್ಲಾ ಕೇಂದ್ರದಿಂದ 85 ಕಿ.ಮೀ. ದೂರದಲ್ಲಿದೆ. ಅತ್ತ ಕರಾವಳಿಯೂ ಅಲ್ಲದ ಇತ್ತ ಮಲೆನಾಡೂ ಅಲ್ಲದ ವಾತಾವರಣ. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಸಮೃದ್ಧ ಭೂಮಿ. ಅಡಿಕೆ, ರಬ್ಬರ್ ಮುಂತಾದ ತೋಟಗಾರಿಕಾ ಮತ್ತು ವಾಣಿಜ್ಯ ಬೆಳೆಗಳಿಂದ ಆರ್ಥಿಕವಾಗಿಯೂ ಸಾಕಷ್ಟು ಸದೃಢವಾಗಿದೆ. ಸುಳ್ಯದ ವರೊಬ್ಬರು ರಾಜ್ಯದ ಮುಖ್ಯಮಂತ್ರಿ ಯಾಗಿಯೂ 11 ತಿಂಗಳು ಆಡಳಿತ ನಡೆಸುವ ಮೂಲಕ ರಾಜಕೀಯ ವಾಗಿಯೂ ಸಾಕಷ್ಟು ಹೆಸರು ಮಾಡಿದೆ.ಇಷ್ಟೆಲ್ಲಾ ಇದ್ದರೂ ಕಳೆದ 50 ವರ್ಷಗಳಿಂದ ಇದು ಕಾಯಂ ಮೀಸಲು ಕ್ಷೇತ್ರ. ಹೀಗಾಗಿ ಇಲ್ಲಿ ವ್ಯಕ್ತಿ ರಾಜಕಾರಣಕ್ಕಿಂತ ಹೆಚ್ಚು ಪಕ್ಷ ರಾಜಕಾರಣ ಕೆಲಸ ಮಾಡುತ್ತದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಸುಳ್ಯ ಕ್ಷೇತ್ರ 1989ರಿಂದ ಬಿಜೆಪಿ ತೆಕ್ಕೆಗೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲೂ ಇದು ಬಿಜೆಪಿ ಭದ್ರಕೋಟೆಯಾಗಿಯೇ ಉಳಿದಿದೆ. ಆದರೆ ಗೆಲುವಿನ ಅಂತರ ಮಾತ್ರ ಇಳಿಮುಖವಾಗುತ್ತಾ ಸಾಗಿದೆ. ಕಳೆದ ಎರಡು ಬಾರಿ ಕ್ಯಾನ್ಸರ್ ತಜ್ಞ ಡಾ.ರಘು ಅವರಿಗೆ ಟಿಕೆಟ್ ನೀಡಿ ಸೋಲು ಕಂಡಿರುವ ಕಾಂಗ್ರೆಸ್ ಈ ಬಾರಿ ಮತ್ತೆ ಅವರಿಗೇ ಟಿಕೆಟ್ ನೀಡಿದ್ದು, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇಳಿದಿದೆ.ವರ್ಷದ ಹಿಂದಿನಿಂದಲೇ ಚುನಾವಣೆಗೆ ಸಾಕಷ್ಟು ತಯಾರಿ ನಡೆಸಿರುವ ಕಾಂಗ್ರೆಸ್, ಪಕ್ಷನ್ನು ಸಂಘಟಿಸಲು ಬಿಜೆಪಿ ಮಾದರಿಯನ್ನು ಅನುಸರಿಸುತ್ತಿದೆ. ಮೊದಲು ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತಿದ್ದ ಪಕ್ಷ ಈಗ ಸಾಮಾನ್ಯ ಕಾರ್ಯಕರ್ತರಿಗೂ ಗೌರವ ನೀಡಲು ಆರಂಭಿಸಿದೆ. ಹಾಗಾಗಿ ಪ್ರತಿ ಗ್ರಾಮಗಳ, ಬೂತ್ ಮಟ್ಟದಲ್ಲೂ ಕಾರ್ಯಕರ್ತರನ್ನು ನೋಂದಣಿ ಮಾಡಿ ನಿರಂತರ ಸಭೆಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಮೊದಲ ಸುತ್ತಿನ ಮನೆ-ಮನೆ ಪ್ರಚಾರವನ್ನೂ ಮುಗಿಸಿದೆ.ಬಿಜೆಪಿ ಪ್ರಚಾರದಲ್ಲಿ ಎಂದಿನಂತೆ ಈಗಲೂ ಮುಂದೆ ಇದೆ. ಚುನಾವಣೆ ಇರಲಿ, ಇಲ್ಲದಿರಲಿ ನಿರಂತರ ಕಾರ್ಯಕರ್ತರ ಸಭೆ ನಡೆಸಿ ಅವರ ಮೂಲಕ ಸಂಘಟನೆ ಬಲಗೊಳಿಸಿರುವ ಅದು ಈ ಬಾರಿ ಅಭಿವೃದ್ಧಿಯನ್ನು ಮುಂದಿಟ್ಟು ಮತಯಾಚನೆಗೆ ತೊಡಗಿದೆ. ಸಾರ್ವಜನಿಕ ಕಾಮಗಾರಿ ಗಳನ್ನು ನಡೆಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಮಹತ್ವ ನೀಡಿದ್ದರೂ, ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಸವಲತ್ತುಗಳನ್ನು ತಲುಪಿಸುವಲ್ಲಿ ವಿಫಲವಾಗಿದ್ದು, ಕಾರ್ಯಕರ್ತರು ಮತಯಾಚನೆಗೆ ಹೋಗಲು ಹಿಂದೇಟು ಹಾಕುವ ಸ್ಥಿತಿ ಎದುರಾಗಿದೆ.ಕಾರ್ಯಕರ್ತರ ಸಮಾವೇಶದಲ್ಲಿ ಸ್ವತಃ ಹಾಲಿ ಶಾಸಕ ಹಾಗೂ ಪಕ್ಷದ ಅಭ್ಯರ್ಥಿ ಎಸ್.ಅಂಗಾರ ಅವರೇ ಇದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಕ್ರಮ-ಸಕ್ರಮ, ವಸತಿ ಯೋಜನೆಗಳು, ಪಡಿತರ ಚೀಟಿ, ಮಾಶಾಸನಗಳು ಸೇರಿದಂತೆ ಹಲವು ಅರ್ಹರು ಇನ್ನೂ ಸವಲತ್ತು ಪಡೆದಿಲ್ಲ. ಪ್ರಚಾರಕ್ಕೆ ಹೋದಾಗ ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನೀವು ಸ್ವಾಭಿಮಾನ ಬಿಟ್ಟು ಮತಯಾಚನೆಗೆ ಹೋಗಬೇಕು ಎಂದು ಅಂಗಾರ ಅವರೇ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.ರಾಜ್ಯದಲ್ಲಿ ಅಥವಾ ಕ್ಷೇತ್ರದಲ್ಲಿ ಅಧಿಕಾರದಲ್ಲಿ ಇಲ್ಲದೇ ಇದ್ದರೂ ಸ್ಥಳೀಯವಾಗಿ ಪಂಚಾಯಿತಿಗಳಲ್ಲಿ ಎಲ್ಲೆಲ್ಲಾ ಕಾಂಗ್ರೆಸ್ ಜನಪ್ರತಿನಿಧಿಗಳು ಇದ್ದಾರೋ ಅವರೆಲ್ಲಾ ತಮ್ಮ ವ್ಯಾಪ್ತಿಯ ಮನೆ ಮನೆಗೆ ಹೋಗಿ ಅರ್ಹರನ್ನು ವಿವಿಧ ಯೋಜನೆಗಳ ಫಲಾನುಭವಿಗಳಾ ಗುವಂತೆ ಮಾಹಿತಿ ನೀಡಿ, ನೆರವು ನೀಡಿದ್ದಾರೆ. ಯಾವ ಪಂಚಾಯಿತಿಯಲ್ಲಿ ಕಾಂಗ್ರೆಸ್ ಆಡಳಿತವಿದೆಯೋ ಅಲ್ಲೆಲ್ಲಾ ಅರ್ಹರಿಗೆ ವೈಯಕ್ತಿಕ ಸೌಲಭ್ಯಗಳು ಸಿಕ್ಕಿವೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ನಿರ್ಭಯವಾಗಿ ಮತಯಾಚನೆಗೆ ತೊಡಗಿದ್ದಾರೆ.

ಸಮಸ್ಯೆಗಳೇ ಕಾಂಗ್ರೆಸ್‌ಗೆ ವರ:

ಕ್ಷೇತ್ರಕ್ಕೆ ಅಗತ್ಯವಾಗಿ ಆಗಬೇಕಾದ 110 ಕೆ.ವಿ. ವಿದ್ಯುತ್ ಸ್ಟೇಶನ್, ಸುಳ್ಯ, ಸುಬ್ರಹ್ಮಣ್ಯಗಳಲ್ಲಿ ಬಸ್ ಡಿಪೋ, ಅಡಿಕೆ ಹಳದಿ ರೋಗದಿಂದ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರ, ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು, ಹೊಸ್ಮಠ ಹಾಗೂ ಸುಬ್ರಹ್ಮಣ್ಯಗಳಲ್ಲಿರುವ ಮುಳುಗು ಸೇತುವೆಗಳನ್ನು ಸರ್ವಋತು ಸೇತುವೆಗಳನ್ನಾಗಿಸುವುದು, ತಮಿಳು ಕಾರ್ಮಿಕರಿಗೆ ಜಾತಿ ದೃಢೀಕರಣ ನೀಡಲು ಕ್ರಮ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಅಸ್ತ್ರವಾಗಿ ಬಳಸಿ ಕಾಂಗ್ರೆಸ್ ಸ್ಥಳೀಯವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.ಅಭಿವೃದ್ಧಿಯೇ ಬಿಜೆಪಿ ಮಂತ್ರ:50 ವರ್ಷಗಳಿಂದ ಅಭಿವೃದ್ಧಿ ಕಾಣದೇ ನಡೆದಾಡಲೂ ಕಷ್ಟವಾಗಿದ್ದ ಗ್ರಾಮೀಣ ರಸ್ತೆಗಳಿಗೆ ಸೇತುವೆಗಳನ್ನು ನಿರ್ಮಿಸಿ ಡಾಂಬರೀಕರಣ ಮಾಡಿದ್ದು, ಸರ್ವ ಋತು ರಸ್ತೆಗಳ ನಿರ್ಮಾಣ. ಅನೇಕ ಕಡೆ ತೂಗು ಸೇತುವೆಗಳ ನಿರ್ಮಾಣ. ಕುಡಿಯುವ ನೀರಿನ ವ್ಯವಸ್ಥೆ, ರೈತರ ಸಾಲ ಮನ್ನಾ, ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಹೊಸ ಸರ್ಕಾರಿ ಕಾಲೇಜು, ವಸತಿ ನಿಲಯಗಳ ಆರಂಭ. ಸುಳ್ಯ ಹಾಗೂ ಸುಬ್ರಹ್ಮಣ್ಯಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ, ಬೆಳ್ಳಾರೆ, ಗುತ್ತಿಗಾರು, ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡ, ಮಿನಿ ವಿಧಾನ ಸೌಧ ನಿರ್ಮಾಣ. ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್, ದೇವಸ್ಥಾನಗಳಿಗೆ 50 ಕೋಟಿ ಅನುದಾನ, ಸುಳ್ಯ-ಸುಬ್ರಹ್ಮಣ್ಯ, ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಗಳ ಅಭಿವೃದ್ಧಿಯನ್ನು ಮುಂದಿಟ್ಟು ಮತದಾರರ ಬಳಿಗೆ ಹೋಗಲು ಬಿಜೆಪಿ ನಿರ್ಧರಿಸಿದೆ.ಜೆಡಿಎಸ್‌ಗೆ ಕುಮಾರಸ್ವಾಮಿಯೇ ಬಲ: ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ನಂದರಾಜ್ ಸಂಕೇಶ್ ಇಲ್ಲಿ ಜೆಡಿಎಸ್ ಅಭ್ಯರ್ಥಿ. ಸಮಾಜಸೇವಾ ಸಂಸ್ಥೆಗಳ, ಬಳಕೆದಾರರ ವೇದಿಕೆ ಸದಸ್ಯರಾಗಿ, ಚಲನಚಿತ್ರ ಕಲಾವಿದರಾಗಿಯೂ, ದಲಿತ ಮುಖಂಡ ರಾಗಿಯೂ ಜನರೊಂದಿಗೆ ಗುರುತಿಸಿ ಕೊಂಡಿದ್ದ ಅವರು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಇಳಿದಿದ್ದಾರೆ. ಇವರಿಗೆ ತಮ್ಮ ವರ್ಚಸ್ಸಿನೊಂದಿಗೆ ಕುಮಾರ ಸ್ವಾಮಿ ಯವರು ಮುಖ್ಯಮಂತ್ರಿಯಾಗಿ 20 ತಿಂಗಳು ಆಡಳಿತ ನಡೆಸಿದ ಸಂದರ್ಭದಲ್ಲಿ ಆದ ಅಭಿವೃದ್ಧಿ ಕಾರ್ಯಗಳು, ಜಾರಿಗೊಂಡ ಯೋಜ ೆಗಳೇ ಶ್ರೀರಕ್ಷೆ. ಬಿಜೆಪಿ ಸಂಘ ಪರಿವಾರದ ಕೈಗೊಂಬೆಯಾಗಿದೆ ಎಂದು ಆರೋಪಿಸಿ ಪಕ್ಷ ತೊರೆದ ಹಲವು ಯುವಕರು ಜೆಡಿಎಸ್ ಸೇರಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.ಕೆಜೆಪಿಯಿಂದ ಚಂದ್ರಾವತಿ, ಎಸ್‌ಡಿಪಿಐನಿಂದ ಕೂಸಪ್ಪ ಹಾಗೂ ಪಕ್ಷೇತರರು ಕಣದಲ್ಲಿದ್ದಾರೆ. ಇವರದು ಇಲ್ಲಿ ನಾಮಮತ್ರ ಸ್ಪರ್ಧೆ ಎನ್ನಿಸಿದರೂ ಮೂರು ಪಕ್ಷಗಳ ತೀವ್ರ ಹಣಾಹಣಿಯಿಂದ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವೂ ಇವರಿಗಿದೆ.ಕ್ಷೇತ್ರದ ಇತಿಹಾಸ

5 ವರ್ಷಗಳ ಹಿಂದೆ ಸುಳ್ಯ ತಾಲ್ಲೂಕಿನ 41 ಗ್ರಾಮಗಳು ಮತ್ತು ಕಡಬ ಹೋಬಳಿಯ 26 ಗ್ರಾಮಗಳು ಮಾತ್ರವಿದ್ದವು. 2008ರಲ್ಲಿ ಕ್ಷೇತ್ರ ಪುನರ್ವಿಂಗ ಡಣೆಯಾದಾಗ ಉಪ್ಪಿನಂಗಡಿ ಹೋಬಳಿಯ 9 ಗ್ರಾಮಗಳೂ ಸುಳ್ಯ ಕ್ಷೇತ್ರಕ್ಕೆ ಸೇರಿದವು. ಸಂಪಾಜೆಯಿಂದ ನೆಲ್ಯಾಡಿ- ಕೌಕ್ರಾಡಿಯವರೆಗೆ ವಿಶಾಲವಾಗಿ ಚಾಚಿಕೊಂಡಿರುವ ಸುಳ್ಯ ಕ್ಷೇತ್ರದಲ್ಲಿ ಸರಿಸುಮಾರು 1 ಲಕ್ಷ 76 ಸಾವಿರ ಮತದಾರರಿದ್ದಾರೆ.ಇವರಲ್ಲಿ 1 ಲಕ್ಷದ 1 ಸಾವಿರ ಮಂದಿ ಸುಳ್ಯ ತಾಲ್ಲೂಕಿನಲ್ಲಿದ್ದರೆ, 75 ಸಾವಿರ ಮಂದಿ ಪುತ್ತೂರು ತಾಲ್ಲೂಕಿನಲ್ಲಿದ್ದಾರೆ.

1962ರ ಸಮಯಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಹೊಸದಾಗಿ ರಚನೆಗೊಂಡ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಎಸ್.ಟಿ. ಕ್ಷೇತ್ರವನ್ನಾಗಿಸಲಾಯಿತು. ಅದರಂತೆ 1962ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗಿ ಎಸ್.ಸುಬ್ಬಯ್ಯ ನಾಯ್ಕರು ಆಯ್ಕೆ ಯಾದರು. ಸುಳ್ಯ ಜಟ್ಟಿಪಳ್ಳದ ಬೊಳಿಯಮಜಲು ನಿವಾಸಿಯಾಗಿರುವ ಸುಬ್ಬಯ್ಯ ನಾಯ್ಕರಿಗೆ ಈಗ 99 ವರ್ಷ ವಯಸ್ಸು.

-ಚೇತನರಾಂ ಇರಂತಕಜೆ.

ಪ್ರತಿಕ್ರಿಯಿಸಿ (+)