ಗುರುವಾರ , ಮಾರ್ಚ್ 4, 2021
18 °C

ಮಾಡೆಲಿಂಗ್ ಭಂಗುರತೆ ಸಿನಿಮಾದ್ದು ಬೇರೆ ಕತೆ!

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಮಾಡೆಲಿಂಗ್ ಭಂಗುರತೆ ಸಿನಿಮಾದ್ದು ಬೇರೆ ಕತೆ!

ಚಿತ್ರರಂಗ ಎನ್ನುವುದು ದೀರ್ಘಕಾಲಿಕ ವೃತ್ತಿ ಇದ್ದಂತೆ. ಆದರೆ ಮಾಡೆಲಿಂಗ್‌ ಹಾಗಲ್ಲ. ರ್‍್ಯಾಂಪ್‌ ಏರಿದ ದಿನವೇ ಒಂದು ಎಕ್ಸ್‌ಪೈರಿ ಡೇಟ್‌ ನಮ್ಮ ಬೆನ್ನಿಗೆ ಅಂಟಿಕೊಳ್ಳುತ್ತದೆ’ ಎನ್ನುವುದು ವಿಭಿಂತಾ ವರ್ಮಾ ದಾಸ್‌ ಅವರ ಅಭಿಪ್ರಾಯ.ಬೆಂಗಳೂರಿಗರೇ ನಿರ್ಮಿಸಿದ ‘ಸ್ಟೇಷನ್‌’ ಎಂಬ ಹಿಂದಿ ಚಿತ್ರದಲ್ಲಿ ನಾಯಕಿ ಆಗುವುದಕ್ಕೂ ಮುನ್ನ ರೂಪದರ್ಶಿ, ಸಿನಿಮಾ ನಟಿ, ಇಮೇಜ್‌ ಕನ್ಸಲ್ಟೆಂಟ್‌ ಆಗಿದ್ದವರು. 2006ರ ಮಿಸ್‌ ಇಂಡಿಯಾದ ಅಂತಿಮ ಸುತ್ತಿಗೆ ಆಯ್ಕೆ, 2004ರ ಎಲೈಟ್‌ ಮಾಡೆಲ್‌ ಲುಕ್‌ ಇಂಡಿಯಾದ ವಿಜೇತೆ ಹೀಗೆ ಇವರ ಬಯೋಡೇಟ ಪಟ್ಟಿ ಮಾಡುತ್ತಾ ಹೋದರೆ, ಅದು ಬೆಳೆಯುತ್ತಲೇ ಹೋಗುತ್ತದೆ.‘ಕ್ಲೋಸಪ್‌, ಪ್ಯಾರಶೂಟ್‌, ಸೊನಾಟಾ ಕೈಗಡಿಯಾರ ಹಾಗೂ ಸೆಂಟರ್‌ ಫ್ರೆಶ್‌ ಜಾಹೀರಾತುಗಳ ಮೂಲಕ ಇಲ್ಲಿನ ಹಲವರಿಗೆ ನನ್ನ ಮುಖ ಪರಿಚಯವಿದೆ. ಜತೆಗೆ ಐರೋಪ್ಯ ರಾಷ್ಟ್ರಗಳ ಒಂದಷ್ಟು ಕಿರು ಚಿತ್ರಗಳಲ್ಲಿ ನಟಿಸಿದ ಅನುಭವ ನನಗೆ ಸಹಕಾರಿಯಾಯಿತು. ಫ್ರೆಂಚ್‌, ಇಂಗ್ಲಿಷ್‌ ಭಾಷೆಯ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರಿಂದ ‘ಸ್ಟೇಷನ್‌’ ಚಿತ್ರದಲ್ಲಿ ಕ್ಯಾಮೆರಾ ಎದುರಿಸುವ ಕಷ್ಟ ಎದುರಾಗಲಿಲ್ಲ’ ಎಂದೆನ್ನುತ್ತಾರೆ ವಿಭಿಂತಾ.ಎಕನಾಮಿಕ್ಸ್‌ನಲ್ಲಿ ಪದವಿ. ನಂತರ ನಿಫ್ಟ್‌ನಲ್ಲಿ ಫ್ಯಾಷನ್‌ ವಿಷಯದಲ್ಲಿ ಡಿಪ್ಲೊಮಾ. ಆನಂತರ ಇಮೇಜ್‌ ಕನ್ಸಲ್ಟಿಂಗ್‌ ಕೋರ್ಸ್ ಮುಗಿಸಿದರು. ಉತ್ತರ ಭಾರತದ ಈ ಬೆಡಗಿ ಫ್ಯಾಷನ್‌ ಜಗತ್ತಿನ ಅತೀವ ಆಕರ್ಷಣೆಯಿಂದಾಗಿ ಬೆಂಗಳೂರನತ್ತ ಮುಖ ಮಾಡಿದರು. ಸತತ ಎಂಟು ವರ್ಷ ಫ್ಯಾಷನ್‌ ಜಗತ್ತಿನೊಂದಿಗೆ ಗುರುತಿಸಿಕೊಂಡರು. ಆನಂತರ ನಗರದ ಸೆಂಟರ್‌ ಸ್ಟೇಜ್‌ನೊಂದಿಗಿನ ನಂಟು ಇವರ ಸಿನಿಮಾ ಯಾನದ ಹಾದಿಯನ್ನು ಸುಗಮವಾಗಿಸಿತು.‘ಮಾಡೆಲಿಂಗ್‌ ಕ್ಷೇತ್ರದಲ್ಲಿದ್ದಾಗ ರ್‍ಯಾಂಪ್‌ ಏರುವುದೇ ಒಂದು ಸೊಗಸಾಗಿತ್ತು. ಶಾಪಿಂಗ್‌ ಮಾಡುವುದು, ಹೆಚ್ಚು ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರ ತವಕ, ಫ್ಯಾಷನ್‌ ಸಪ್ತಾಹಗಳಲ್ಲಿ ಮಿಂಚುವ ಸಂಭ್ರಮ ಇಷ್ಟವಾಗುತ್ತಿತ್ತು.ನಂತರ ಈ ಕ್ಷೇತ್ರ ಪ್ರವೇಶಿಸಿದವರಿಗೆ ಬಹುಮುಖ್ಯವಾಗಿ ಕೊರತೆ ಎಂದೆನಿಸುವ ಇಮೇಜ್‌ ಕಾಪಾಡಿಕೊಳ್ಳುವ ಕಲೆಯನ್ನು ನಾನೂ ಕಲಿತು ಇತರರಿಗೆ ಕಲಿಸಬೇಕೆಂದುಕೊಂಡೆ. ಆಗ ಇಮೇಜ್ ಕನ್ಸಲ್ಟೇಷನ್‌ ಕೇಂದ್ರ (vvic.co.in) ತೆರೆಯುವ ಮನಸ್ಸು ಮಾಡಿದೆ. ಇದರ ಜತೆಗೇ ಫ್ಯಾಷನ್‌, ಜಾಹೀರಾತು ಹಾಗೂ ಸಿನಿಮಾ ಮಂದಿಯೊಂದಿಗಿನ ಉತ್ತಮ ಬಾಂಧವ್ಯದಿಂದಾಗಿ ಅವಕಾಶಗಳು ಹೆಚ್ಚಾದವು’ ಎಂದು ಮುಖ ಅರಳಿಸಿದರು ವಿಭಿಂತಾ.ಕಳೆದ ಹದಿನೈದು ವರ್ಷಗಳಿಂದ ಫ್ಯಾಷನ್‌ ಜಗತ್ತಿನೊಂದಿಗಿರುವ ವಿಭಿಂತಾ, ಅತಿ ಎನಿಸುವಷ್ಟು ವರ್ಕ್‌ಔಟ್‌ ಮಾಡುವುದಿಲ್ಲವಂತೆ. ಜಿಮ್‌ ಕಡೆ ಆಗಾಗ ಮುಖ ಮಾಡುವ ಅವರು, ಕಾರ್ಡಿಯೋ, ಯೋಗ, ಬಾಡಿ ಬ್ಯಾಲೆನ್ಸಿಂಗ್ ಹಾಗೂ ಎಬಿಟಿ ತರಗತಿಗಳನ್ನೇ ನೆಚ್ಚಿಕೊಂಡಿದ್ದಾರೆ.ತಮಗಿಷ್ಟವೆನಿಸಿದ್ದನ್ನು ತಿನ್ನುವಾಗ ಹೊಟ್ಟೆಯ ಅಳತೆಯನ್ನು ಮೀರುವುದಿಲ್ಲವಂತೆ. ಜತೆಗೆ ಆರೋಗ್ಯಯುತವಾದ ಎಲ್ಲವೂ ತನ್ನಿಷ್ಟದ್ದು ಎಂಬ ಹೆಮ್ಮೆ ಕೂಡ ಅವರದ್ದು.‘ಹೆಚ್ಚು ನೀರು ಕುಡಿಯುವುದು, ಬೆಳಿಗ್ಗೆ, ಸಂಜೆ ತ್ವಚೆಗೆ ಮಾಯಿಶ್ಚರೈಸರ್‌ ಲೇಪಿಸುವುದು, ಉತ್ತಮ ಗುಣಮಟ್ಟದ ಲಿಪ್‌ ಬಾಮ್‌ ಬಳಸುವುದು, ವಾರಕ್ಕೊಮ್ಮೆ ಮುಖಕ್ಕೆ ಕಡಲೆ ಹಿಟ್ಟು ಹಾಗೂ ಹಳದಿ ಮಿಶ್ರಣ ಪ್ಯಾಕ್‌ ಮಾಡಿಕೊಳ್ಳುವುದು ನಾನು ಬೆಳೆಸಿಕೊಂಡಿರುವ ಅಭ್ಯಾಸ’ ಎಂದೆನ್ನುವ ವಿಭಿಂತಾ, ಕ್ಯಾಮೆರಾ ಎದುರು ನಿಲ್ಲುವುದಿಲ್ಲವೆಂದಾದರೆ ಮೇಕಪ್‌ ಬಳಸುವುದೇ ಇಲ್ಲ.‘ನಿಫ್ಟ್‌’ನಲ್ಲಿ ಫ್ಯಾಷನ್‌ ಕೋರ್ಸ್‌ ಮಾಡಿರುವ ಹಾಗೂ ರೂಪದರ್ಶಿಯಾಗಿರುವ ವಿಭಿಂತಾ ಅವರಿಗೆ ತಮಗೆ ಒಪ್ಪುವ ಉಡುಪನ್ನಷ್ಟೇ ತೊಡುತ್ತಾರಂತೆ. ಬದಲಾಗುವ ಯಾವುದೇ ಟ್ರೆಂಡ್‌ಗಳ ಮೋಹಕ್ಕೆ ಒಳಗಾಗದ ಅವರಿಗೆ ಅತಿಯಾದ ಫ್ಯಾಷನ್‌ ಪರಿಕರಗಳನ್ನು ಬಳಸುವುದೆಂದರೆ ಅಲರ್ಜಿ.ಇಮೇಜ್‌ ಕನ್ಸಲ್ಟೆಂಟ್‌ ವೃತ್ತಿಯನ್ನೇ ನೆಚ್ಚಿಕೊಂಡಿರುವ ಅವರಿಗೆ ಬಿಡುವು ಸಿಕ್ಕಾಗ ಸಿನಿಮಾದಲ್ಲಿ ನಟಿಸುವ ಮನಸ್ಸು. ಉಳಿದಂತೆ ಮತ್ತೊಬ್ಬರನ್ನು ಆಕರ್ಷಿಸುವ ವ್ಯಕ್ತಿತ್ವ ಹೊಂದುವವರಿಗೆ ನೆರವಾಗುವುದರಲ್ಲೇ ಅವರು ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.