ಮಾತನಾಡದ ಮಮ್ಮುಟ್ಟಿ ಸುತ್ತ...

7

ಮಾತನಾಡದ ಮಮ್ಮುಟ್ಟಿ ಸುತ್ತ...

Published:
Updated:
ಮಾತನಾಡದ ಮಮ್ಮುಟ್ಟಿ ಸುತ್ತ...

ಮಲಯಾಳಂ ಸಿನಿಮಾವೊಂದರ ಚಿತ್ರೀಕರಣಕ್ಕೆಂದು ಈಚೆಗೆ ನಗರಕ್ಕೆ ಬಂದಿದ್ದ ಮೆಗಾಸ್ಟಾರ್ ಮಮ್ಮುಟ್ಟಿ ಅವರನ್ನು ನೋಡಲೆಂದೇ ಬೆಂಗಳೂರಿನ ಸಾವಿರಾರು ಅಭಿಮಾನಿಗಳು ನೂಕು ನುಗ್ಗಲಿನಲ್ಲಿ ಕಾಯುತ್ತಿದ್ದರು.ಮಮ್ಮುಟ್ಟಿ ಮುಖ ನೋಡಿದರೆ ಸಾಕೆಂದು ಒದ್ದಾಡುತ್ತಾ ನಿಂತಿದ್ದ ಮಂದಿ ಒಂದೆಡೆ. ಅವರು ಒಂದು ಮಾತನಾಡಿದರೆ ಸಾಕೆಂದು ಮೈಕ್ ಹಿಡಿದು ನಿಂತಿದ್ದ ಮಾಧ್ಯಮದವರು ಮತ್ತೊಂದೆಡೆ. ಇವರೆಲ್ಲರ ನಿರೀಕ್ಷೆಗೆ ತಣ್ಣೀರು ಎರಚುವಂತೆ ಮಮ್ಮುಟ್ಟಿ ಮಾತ್ರ ಒಂದಿನಿತೂ ತುಟಿ ಬಿಚ್ಚಲಿಲ್ಲ.ತಮ್ಮದೇ ವ್ಯಾನಿಟಿ ವ್ಯಾನ್ ನಲ್ಲಿ ಬಂದಿದ್ದ ಮಮ್ಮುಟ್ಟಿ, ಶಾಟ್ ಮುಗಿದ ತಕ್ಷಣ ವ್ಯಾನ್ ಸೇರಿಕೊಳ್ಳುತ್ತಿದ್ದರು. ಬ್ರೇಕ್ ಸಿಕ್ಕಾಗಲೂ ಮಾತಿಗಿಳಿಯದೇ ಮತ್ತೆ ವ್ಯಾನ್ ಒಳಹೋಗುತ್ತಿದ್ದರು. ಜನರ ಕಣ್ತಪ್ಪಿಸಿಕೊಳ್ಳಲು ಪದೇ ಪದೇ ಪ್ರಯತ್ನಿಸುತ್ತಲೇ ಇದ್ದರು. ಆದರೂ ಅಭಿಮಾನಿಗಳು ಮಾತ್ರ ಮಮ್ಮುಟ್ಟಿ ಅವರ ಮುಖ ನೋಡಲು ಇಣುಕುತ್ತಿದ್ದುದು ನಿಲ್ಲಲೇ ಇಲ್ಲ.

ಶಾಟ್ ಸಿದ್ಧವಾಗಿದ್ದೇ ತಡ, ಚಿತ್ರೀಕರಣಕ್ಕೆ ತೆರಳಿದ ಮಮ್ಮುಟ್ಟಿ ಅವರನ್ನು ದೂರದಿಂದಲೇ ನೋಡಲು ಮಾತ್ರ ಸಾಧ್ಯವಾಗಿತ್ತು.ಇನ್ನೂ ಹೆಸರಿಡದ ಮಲಯಾಳಂ ಚಿತ್ರದಲ್ಲಿ ಯುವ ನ್ಯಾಯಾಧೀಶನಾಗಿ ನಟಿ ಪಲ್ಲವಿ ಜೊತೆ ಮಮ್ಮುಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಪಾತ್ರಕ್ಕೆ ಮಮ್ಮುಟ್ಟಿ ಗೆಟಪ್ ಕೂಡ ವಿಭಿನ್ನವಾಗೇ ಇತ್ತು. ಕಪ್ಪು ಮೀಸೆಯ ತುದಿಗೆ ಕಂದು ಬಣ್ಣ ಬಳಿದುಕೊಂಡು, ಸೈಡ್‌ಬರ್ನ್ ಅನ್ನು ಬಿಳಿ ಮಾಡಿಕೊಂಡಿದ್ದರು.ಈ ಚಿತ್ರದಲ್ಲಿ ಮಮ್ಮುಟ್ಟಿಗೆಂದೇ ಅತಿ ವಿಶೇಷವಾಗಿ ಈ ಲುಕ್ ನೀಡಲಾಗಿದೆ, ಗಂಭೀರ ಪಾತ್ರವಾದ್ದರಿಂದ ವಿಭಿನ್ನವಾಗಿ ಕಾಣಿಸಿಕೊಳ್ಳುವುದು ಅಗತ್ಯ ಎಂದು ಮಮ್ಮುಟ್ಟಿ ಮೇಕಪ್ ಕುರಿತು ಮಾಹಿತಿ ನೀಡಿದರು ಈ ಪ್ರಾಜೆಕ್ಟ್ ನ ನಿರ್ದೇಶಕ ವಿ.ಕೆ ಪ್ರಕಾಶ್.ವ್ಯಕ್ತಿಯೊಬ್ಬ ಅತಿ ಚಿಕ್ಕ ವಯಸ್ಸಿಗೇ ನ್ಯಾಯಾಧೀಶನಾಗುವುದು ಈ ಕತೆಯ ವಸ್ತು. ಈ ಸಂದರ್ಭದಲ್ಲಿ ಆತನನ್ನು ಆವರಿಸಿಕೊಳ್ಳುವ ವಿವಾದ, ಅವನನ್ನು ಸುತ್ತುವರಿಯುವ ಸಮಸ್ಯೆಗಳ ನಡುವೆಯೇ ಕತೆ  ಬೆಳೆಯುತ್ತದಂತೆ. ವಿಭಿನ್ನ ಕಥಾಹಂದರ ಇದಾಗಿದ್ದು, ಈ ಸಿನಿಮಾ ಹಿಂದೆ ಮೂರು ವರ್ಷಗಳ ಶ್ರಮವಿದೆಯಂತೆ.‘ಮಮ್ಮುಟ್ಟಿ ಇದುವರೆಗೂ ವಕೀಲನ ಪಾತ್ರದಲ್ಲಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಅಲ್ಲದೇ ಅವರು ವೃತ್ತಿಯಲ್ಲೂ ವಕೀಲರು. ಈ ದೃಷ್ಟಿಯಲ್ಲಿ ಈ ಪಾತ್ರ ಮಮ್ಮುಟ್ಟಿ ಅವರ ಅಭಿರುಚಿಯೊಂದಿಗೂ ಹೊಂದಿಕೊಂಡು ಅದ್ಭುತವಾಗಿ ಮೂಡಿಬರುತ್ತದೆ ಎಂದು ನಂಬಿದ್ದೇವೆ’ ಎಂದು ಪಾತ್ರದ ಹಿಂದಿನ ಉದ್ದೇಶ ಬಿಡಿಸಿಟ್ಟರು ಪ್ರಕಾಶ್.ಚಿತ್ರದಲ್ಲಿ ಮಮ್ಮುಟ್ಟಿಯ ಜೂನಿಯರ್ ಅಡ್ವೊಕೇಟ್ ಪಾತ್ರದಲ್ಲಿ ಕಿರುತೆರೆ ನಟಿ ಹಾಗೂ ನಿರೂಪಕಿ  ಕವಿತಾ ನಾಯರ್ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಕವಿತಾ ಅವರನ್ನು ಮಾತನಾಡಿಸಿದಾಗ, ‘ಮಮ್ಮುಟ್ಟಿ ಅವರೊಂದಿಗೆ ನಾನು ಸಿನಿಮಾಗೆ ಪದಾರ್ಪಣೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಇದು ನನ್ನ ಅದೃಷ್ಟವೇ ಎನ್ನಬಹುದು. ಅವರು ಸ್ವಲ್ಪ ರಿಸರ್ವ್ ಆಗಿರುವ ವ್ಯಕ್ತಿ. ಆದರೆ ಹೊಸಬರಿಗೆ ಆತ್ಮವಿಶ್ವಾಸ ತುಂಬುತ್ತಾರೆ. ಅವರ ಪಕ್ಕದಲ್ಲಿ ನಿಂತಾಗ ಭಯದಿಂದ ನಡುಗುತ್ತೇನೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು’ ಎಂದು ನಗುತ್ತಾ ಉತ್ತರಿಸಿದರು ಕವಿತಾ.ಇನ್ನು, ಅತ್ತ ಪೂರ್ಣ ಮಲಯಾಳಿಯೂ ಅಲ್ಲದ, ಪೂರ್ಣ ಕನ್ನಡತಿಯೂ ಅಲ್ಲದ ನಟಿ ಪಲ್ಲವಿ ಮಮ್ಮುಟ್ಟಿ ಹೆಂಡತಿ ಪಾತ್ರ ವಹಿಸಲಿದ್ದಾರೆ. ಅವರ ಬಾಯಲ್ಲೂ ಮಮ್ಮುಟ್ಟಿ ತುಂಬಾ ರಿಸರ್ವ್ಡ್ ಎನ್ನುವ ಉತ್ತರವೇ ಬಂತು.‘ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ, ಜನ ಮೆಚ್ಚುಗೆ ಪಡೆದಿರುವ ಮಮ್ಮುಟ್ಟಿ ಅವರೊಂದಿಗೆ ನಾನು ನಟಿಸಲಿದ್ದೇನೆ ಎಂಬುದನ್ನು ನಂಬಲಿಕ್ಕೇ ಸಾಧ್ಯವಾಗಿರಲಿಲ್ಲ. ಇದೊಂಥರ ಕನಸಿನಂತಿದೆ. ಸೆಟ್‌ನಲ್ಲಿ ಅವರೊಂದಿಗೆ ಅಭಿನಯಿಸಿದಾಗಲೇ ನನಗೆ ಅದು ನಿಜ ಎನಿಸಿದ್ದು. ಆಗಲೂ ನಾನು ನನ್ನನ್ನೇ ಚಿವುಟಿಕೊಂಡು ನಟಿಸಲು ಆರಂಭಿಸುತ್ತಿದ್ದೆ.’ ಎಂದು ಉತ್ಸುಕರಾಗಿ ಹೇಳಿದರು ಪಲ್ಲವಿ. ಅವರಿಗೆ ಮಮ್ಮುಟ್ಟಿಯೊಂದಿಗೆ ನಟಿಸುತ್ತಿರುವುದು ಜೀವಮಾನದ ಅಪೂರ್ವ ಅವಕಾಶವಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry