ಮಾತನಾಡುವ ಕುರ್ಚಿ

7

ಮಾತನಾಡುವ ಕುರ್ಚಿ

Published:
Updated:

ಅಂದು ಭಾನುವಾರ. ಹೊರಗೆ ಜೋರಾಗಿ ಮಳೆ ಬರುತ್ತಿತ್ತು. ಪ್ರೀತಮ್‌ನ ಅಪ್ಪ, ಅಮ್ಮ ಪೇಟೆಗೆ ಹೋಗಿದ್ದರು. ಅವನ ಅಕ್ಕ ಸಹನಾ ಇನ್ನೊಂದು ಕೋಣೆಯಲ್ಲಿ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಳು. ಪ್ರೀತಮ್‌ಗೆ ಓದಿಕೊಳ್ಳಲು ಇಷ್ಟವಿರಲಿಲ್ಲ. ಹಾಗೆಂದು ಅವನು ದಡ್ಡನಲ್ಲ. ಆದರೆ ಅವನ ಗಮನವೆಲ್ಲ ಆಟದ ಮೇಲೆಯೇ. ಅಪ್ಪ ಅಮ್ಮ ಇಲ್ಲದ್ದೇ, ಅವನಿಗೆ ತುಂಟಾಟ ಮಾಡಲು ಅವಕಾಶ ಸಿಕ್ಕಂತಾಗಿತ್ತು.ಆಟವಾಡಲು ಹೊರಗೆ ಹೊರಟ. ಜೋರಾಗಿ ಮಳೆ ಬರುತ್ತಿತ್ತು. ನಿರಾಶೆಯಿಂದ ಒಳಗೆ ಬಂದ. ಬಹಳ ಹೊತ್ತು ಕಿಟಕಿಯ ಪಕ್ಕ ಕುಳಿತುಕೊಂಡು ಹೊರಗಿನ ಮಳೆ, ಹೊಲ-ಗದ್ದೆ ನೋಡಿದ. ಬೇಸರ ಕಳೆಯದಿದ್ದಕ್ಕೆ ಅಡುಗೆ ಮನೆಗೆ ಹೋದ. ಅಮ್ಮ ಮಾಡಿಟ್ಟಿದ್ದ ಕಜ್ಜಾಯದ ಡಬ್ಬಿ ಕಂಡಿತು. ಮೆಲ್ಲನೆ ಹತ್ತಿರವಿದ್ದ ಸ್ಟೂಲ್ ಇಟ್ಟುಕೊಂಡು ಅದರ ಮೇಲೆ ಹತ್ತಿ ಕಜ್ಜಾಯ ಇಟ್ಟಿದ್ದ ಡಬ್ಬಿ ತೆಗೆದ. ಸುವಾಸನೆಯ ಕಜ್ಜಾಯಗಳನ್ನು ಕಂಡದ್ದೇ ಅವನ ಬಾಯಲ್ಲಿ ನೀರೂರಿತು. ಅಕ್ಕ ಎಲ್ಲಿ ಬಂದಾಳೋ ಎನ್ನುವ ಭಯದಲ್ಲೇ ನಾಲ್ಕೈದು ಕಜ್ಜಾಯಗಳನ್ನು ಜೇಬಿನಲ್ಲಿ ತುರುಕಿಕೊಂಡ. ಅಡಗಿ ತಿನ್ನುವುದೆಲ್ಲಿ? ದೂಳಿನ ಅಟ್ಟ ನೆನಪಾಯ್ತು. ಅಟ್ಟವೇರಿದ.ಅಟ್ಟದ ಮೇಲೆ ತುಂಬಾ ಕತ್ತಲೆ. ಹಳೆಯ, ಅನುಪಯುಕ್ತ ಸಾಮಾನುಗಳೇ ತುಂಬಿದ್ದವು. ಅಟ್ಟದ ಮೂಲೆಯಲ್ಲಿದ್ದ ಸಣ್ಣ ಕಿಟಕಿಯ ಬಳಿ ಕುಳಿತು ಮಳೆಯನ್ನು ನೋಡುತ್ತಾ ಕಜ್ಜಾಯವನ್ನು ತಿನ್ನುವ ಆಸೆಯಾಯಿತು. ಅತ್ತ ಅವಸರವಾಗಿ ನಡೆದ. ದಾರಿಯಲ್ಲಿದ್ದ ಹಳೆಯ ಕುರ್ಚಿಗೆ ಅವನ ಕಾಲು ತಾಗಿ ಅವನು ಬಿದ್ದ. ದೂಳಾದ ಮೈಕೈ ಕೊಡವಿಕೊಂಡ. ಹೆಚ್ಚೇನೂ ಪೆಟ್ಟಾಗಲಿಲ್ಲ. ಅವನ ಗಮನವೆಲ್ಲಾ ಜೇಬಿನಲ್ಲಿದ್ದ ಕಜ್ಜಾಯದ ಕಡೆಗೇ ಇತ್ತಲ್ಲವೇ? ಮೂಲೆಗೆ ಹೋಗಿ ಬಿಗಿಯಾಗಿ ಮುಚ್ಚಿಕೊಂಡಿದ್ದ ಕಿಟಕಿ ತೆಗೆದ. ಆ ಬೆಳಕಿಂದ ಅಟ್ಟದ ಮೇಲಿನ ಎಲ್ಲಾ ವಸ್ತುಗಳೂ ಕಾಣಿಸಿದವು. ಈ ಅಟ್ಟವನ್ನು ಕ್ಲೀನ್ ಮಾಡಿಕೊಂಡರೆ ನನಗೆ ಆಡಿಕೊಳ್ಳಲು ಒಳ್ಳೆಯ ಜಾಗವೆಂದು ಯೋಚಿಸಿದ.ತಾನು ಎಡವಿ ಬಿದ್ದು ಹಳೆಯ ಕುರ್ಚಿ ಕಾಲು ಮುರಿದು ಹೋಗಿದ್ದನ್ನು ಗಮನಿಸಿದ. ಆ ಕುರ್ಚಿಯ ಮೇಲೆ ಅವನ ಅಜ್ಜ ಕೂರುತ್ತಿದ್ದುದು ನೆನಪಾಯ್ತು. ಹೊಸ ಪ್ಲಾಸ್ಟಿಕ್ ಕುರ್ಚಿ ಬಂದ ಮೇಲೆ ಹಳೆಯ ಮರದ ಕುರ್ಚಿ, ಟೀಪಾಯಿಗಳು ಅಟ್ಟವೇರಿದ್ದವು. ಕುರ್ಚಿ ನೋಡಿ ಅವನಿಗೆ ಬೇಸರವಾಯಿತು. ಅದರ ಹತ್ತಿರ ಹೋಗಿ ಸೂಕ್ಷ್ಮವಾಗಿ ಗಮನಿಸಿದ. ಅಲ್ಲೇ ಒಂದು ಮೊಳೆಯನ್ನು ಹುಡುಕಿ ತೆಗೆದು ಮುರಿದ ಭಾಗವನ್ನು ಜೋಡಿಸಿ ಹೊಡೆದ. ಅದರ ಕುಂಟುವ ಕಾಲು ಸರಿಯಾಯಿತು. ಕಿಟಕಿಯ ಪಕ್ಕ ಕುರ್ಚಿ ಹಾಕಿಕೊಂಡು ಕುಳಿತ. ಮಳೆಗೆ ಹೊರಗಿನ ದೃಶ್ಯ ಇನ್ನಷ್ಟು ಸುಂದರವಾಗಿ ಕಾಣುತ್ತಿತ್ತು. ಮಳೆ ನೋಡುತ್ತಲೇ ಸ್ವಲ್ಪ ಸ್ವಲ್ಪವೇ ಕಜ್ಜಾಯವನ್ನು ಗುಳುಂ ಮಾಡತೊಡಗಿದ.‘ತುಂಬಾ ಧನ್ಯವಾದಗಳು ಮಗು’ ಎಂಬ ಧ್ವನಿ ಕೇಳಿಸಿತು. ಪ್ರೀತಮ್ ಬೆಚ್ಚಿಬಿದ್ದ. ಸುತ್ತಲೂ ನೋಡಿದ. ಯಾರೂ ಇರಲಿಲ್ಲ. ಅವನಿಗೆ ಭಯವಾಯಿತು. ಅಳಲು ಪ್ರಾರಂಭಿಸಿದ.‘ಅಳಬೇಡ ಮಗು. ನಾನು... ನೀನು ಕುಳಿತಿರುವ ಕುರ್ಚಿ ಮಾತನಾಡುತ್ತಿದ್ದೇನೆ’ ಅನ್ನುವ ಧ್ವನಿಗೆ ಹೆದರಿ, ಕುರ್ಚಿ ಬಿಟ್ಟು ಮೇಲೆ ಎದ್ದ.

‘ಹೆದರಬೇಡ ಮಗು... ನಾನು ನಿನಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ನೀನು ತುಂಬಾ ಒಳ್ಳೆಯ ಹುಡುಗ’ ಅಂದಿತು ಹಳೆಯ ಕುರ್ಚಿ.ಪ್ರೀತಮ್‌ಗೆ ನಂಬಲಾಗಲಿಲ್ಲ. ಆದರೂ ಧೈರ್ಯ ತಂದುಕೊಂಡು, ‘ಕುರ್ಚಿ ಮಾತನಾಡುವುದಿಲ್ಲ.. ಕುರ್ಚಿಗೆ ಜೀವವಿರುವುದಿಲ್ಲ, ಅದು ನಿರ್ಜೀವ ವಸ್ತುವೆಂದು ನಮ್ಮ ವಿಜ್ಞಾನದ ಶಿಕ್ಷಕಿ ಹೇಳಿದ್ದಾರೆ’ ಅಂದ.‘ಹ್ಹ ಹ್ಹ ಹ್ಹ... ಹೌದು, ಕುರ್ಚಿ ಒಂದು ನಿರ್ಜೀವ ವಸ್ತು. ಆದರೆ ನಾನು ಹಿಂದೆ ಒಂದು ಜೀವಂತ ಮರವಾಗಿದ್ದೆ. ಗಿಡ-ಮರಗಳಿಗೆ ಜೀವವಿದೆ ಎಂಬುದನ್ನಾದರೂ ನಂಬುತ್ತೀಯಲ್ಲವೇ?’ ಎಂದು ಪ್ರಶ್ನಿಸಿತು ಕುರ್ಚಿ.ಪ್ರೀತಮ್ನಿಗೆ ಮಾತನಾಡುವ ಕುರ್ಚಿ ನೋಡಿ ಮೋಜು ಎನಿಸಿತು. ‘ಹೌದು! ನನಗೂ ಗೊತ್ತು. ಸಸ್ಯಗಳಿಗೂ ಜೀವವಿದೆ ಎಂದು ಜಗದೀಶ್‌ಚಂದ್ರ ಬೋಸರು ಜಗತ್ತಿಗೆ ತೋರಿಸಿಕೊಟ್ಟರು’ ಅಂದ ಜಂಬದಲ್ಲಿ.‘ನೀನು ಬಹಳ ಜಾಣ’ ಅಂದಿತು ಕುರ್ಚಿ.

‘ಇಲ್ಲ.. ಇಲ್ಲ... ನಾನು ದಡ್ಡ. ಎಲ್ಲರೂ ಹೇಳುತ್ತಾರೆ’ ಅಂದು ಅಳುಮೋರೆ ಮಾಡಿದ.‘ಅಳಬೇಡ ಮಗು. ಮುರಿದಿದ್ದ ನನ್ನ ಕಾಲನ್ನು ಸರಿಮಾಡಿ ಮತ್ತೆ ಉಪಯೋಗಿಸುವಂತೆ ಮಾಡಿದೆಯಲ್ಲವೇ? ನಿನ್ನ ಈ ಒಳ್ಳೆಯ ಗುಣಕ್ಕೇ ನಾನು ನಿನ್ನ ಬಳಿ ಮಾತನಾಡುತ್ತಿದ್ದೇನೆ. ಆದರೆ ಇತ್ತೀಚೆಗೆ ನೀನು ದಡ್ಡನಾಗುತ್ತಿದ್ದೀಯ. ಅನೇಕ ತಪ್ಪು ಮಾಡುತ್ತಿದ್ದೀಯ’ ಎಂದಿತು.‘ಇಲ್ಲ, ನಾನು ತಪ್ಪು ಮಾಡಿಲ್ಲ’ ಎಂದ ಪ್ರೀತಮ್ ಹಟದಲ್ಲಿ.‘ಅಕ್ಕನಿಗೆ ಕೇಳಿದ್ದರೆ ಅವಳು ಕಜ್ಜಾಯ ತೆಗೆದುಕೊಡುತ್ತಿದ್ದಳು. ಆದರೆ ನೀನು ಕದ್ದು ತಿಂದೆ. ಇದು ತಪ್ಪಲ್ಲವೇ?’ ಕುರ್ಚಿಯ ಪ್ರಶ್ನೆಗೆ, ಪ್ರೀತಮ್ ಹೌದೆನ್ನುವಂತೆ ತಲೆ ಅಲ್ಲಾಡಿಸಿದ.‘ಅಂದಿನ ಪಾಠವನ್ನು ಅಂದೇ ಕಲಿತುಕೊಳ್ಳಬೇಕು ಎಂದು ಗೊತ್ತಿದ್ದರೂ ನೀನು ಪಾಠ ನಿರ್ಲಕ್ಷಿಸಿ ಆಟಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದೀಯ. ಶಾಲೆಯಲ್ಲಿ ದಿನವೂ ಬೈಸಿಕೊಳ್ಳುತ್ತೀಯ. ಇದೂ ತಪ್ಪಲ್ಲವೇ?’ ಕುರ್ಚಿಯ ಮಾತಿಗೆ ಅವನಿಗೆ ತನ್ನ ತಪ್ಪಿನ ಅರಿವಾಯಿತು.‘ಹೌದು. ನನ್ನ ತಪ್ಪು ಅರ್ಥವಾಯಿತು. ಇನ್ನು ಮುಂದೆ ನಾನು ಮೈಗಳ್ಳತನ ಮಾಡುವುದಿಲ್ಲ. ಕಳ್ಳತನ ಮಾಡುವುದಿಲ್ಲ...’ ಎಂದ.

‘ಜಾಣ ಮಗು’ ಎಂದಿತು ಕುರ್ಚಿ. 

... ... ...

‘ಪುಟ್ಟ ಏಳೋ... ಏನೋ ಇಲ್ಲಿ ಮಲಗಿದ್ದೀಯ?’ ಎಂದು ಅಮ್ಮ ಬಂದು ಎಬ್ಬಿಸಿದಾಗ ಪ್ರೀತಮ್ನಿಗೆ ಎಚ್ಚರವಾಯಿತು. ಕಜ್ಜಾಯ ತಿಂದು ಮಳೆ ನೋಡುತ್ತಲೇ ಅವನು ದುರಸ್ತಿ ಮಾಡಿದ್ದ ಕುರ್ಚಿ ಮೇಲೆ ಕುಳಿತೇ ನಿದ್ದೆ ಹೋಗಿದ್ದ. ಕನಸಿನಲ್ಲಿ ಕುರ್ಚಿ ಹೇಳಿದಂತೆ ಒಳ್ಳೆಯ ಹುಡುಗ ಆಗಲು ನಿರ್ಧರಿಸಿದವನಿಗೆ ಅಮ್ಮ ಪೇಟೆಯಿಂದ ತಂದಿದ್ದ ಕ್ರಿಕೆಟ್ ಬ್ಯಾಟ್ ಬಳುವಳಿಯಾಗಿ ಸಿಕ್ಕಿತ್ತು. ಸಂತಸದಲ್ಲಿ ಬ್ಯಾಟ್ ಹಿಡಿದು ತಿರುಗಿಸುತ್ತಾ ಅಮ್ಮನ ಜೊತೆ ಕೆಳಗಿಳಿದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry