ಗುರುವಾರ , ನವೆಂಬರ್ 21, 2019
26 °C
ನೂರು ಕಣ್ಣು ಸಾಲದು

ಮಾತನಾಡುವ ಚಲನಚಿತ್ರಗಳು

Published:
Updated:
ಮಾತನಾಡುವ ಚಲನಚಿತ್ರಗಳು

ಮಾತಿಲ್ಲದ ಚಿತ್ರಗಳ ಮೋಡಿಗೆ ಜನ ಒಳಗಾದರು. ಎಡ್ವಿನ್ ಆರ್ನಾಲ್ಡ್‌ನ ಶ್ರೇಷ್ಠ ಕವಿತೆಯನ್ನು ಆಧಾರವಾಗಿಟ್ಟು ಲಾಹೋರ್‌ನ `ದಿ ಗ್ರೇಟ್ ಈಸ್ಟರ್ನ್ ಕಾರ್ಪೊರೇಷನ್' ತಯಾರಿಸಿದ ಬುದ್ಧನ ಜೀವನ ಚಿತ್ರ `ದಿ ಲೈಟ್ ಆಫ್ ಏಷ್ಯಾ' ಮೂಕಿ ಚಿತ್ರ ಭಾರತೀಯರನ್ನು ಮಾತ್ರವಲ್ಲದೆ ವಿದೇಶಿಯರ ಗಮನವನ್ನೂ ಸೆಳೆಯಿತು. ಹಿಮಾಂಶು ರಾಯ್ ಬುದ್ಧನ ಪಾತ್ರ ವಹಿಸುವುದರೊಂದಿಗೆ ಈ ಚಿತ್ರಕ್ಕೆ ಸಹನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.ರವೀಂದ್ರನಾಥ ಟ್ಯಾಗೋರ್, ಶರತ್‌ಚಂದ್ರ ಚಟರ್ಜಿ ಅವರ ಕಥೆ ಆಧಾರಿತ ಮೂಕಿ ಚಿತ್ರಗಳು, ಧರ್ಮ ಸಾಮರಸ್ಯ ಸಾರುವ ಚಿತ್ರಗಳು, ಮಹಾತ್ಮ ಗಾಂಧಿ ಜೀವನಾದರ್ಶ ಪರಿಚಯಿಸುವ ಚಿತ್ರಗಳು ತೆರೆಗೆ ಬಂದವು. ಅದೇ ಸಂದರ್ಭಕ್ಕೆ ಕನ್ನಡದ ಖ್ಯಾತ ನಾಟಕ `ವಸಂತ ಸೇನಾ' ಆಧರಿಸಿ (ಮೃಚ್ಛಕಟಿಕ ನಾಟಕಾಧರಿತ) ಅದೇ ಹೆಸರಿನ ಚಿತ್ರವನ್ನು ಟಿ.ಪಿ. ಕೈಲಾಸಂ ನೇತೃತ್ವದಲ್ಲಿ ಮೋಹನ್ ಭವನಾನಿ ತಯಾರಿಸಿದರು. ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಚಿತ್ರೀಕರಣಗೊಂಡ `ವಸಂತ ಸೇನಾ'ದಲ್ಲಿ ಕನ್ನಡದ ಬರಹಗಾರರು, ಕಲಾವಿದರು, ನೃತ್ಯಪಟುಗಳು ಪಾತ್ರವಹಿಸಿದರು.

 ಈ ಚಿತ್ರ ಭಾರತವಲ್ಲದೆ ಜರ್ಮನಿ, ಫ್ರಾನ್ಸ್‌ನಲ್ಲೂ ಹೆಸರು ಮಾಡಿತು. ಇಂಗ್ಲೆಂಡ್, ಫ್ರಾನ್ಸ್‌ಗಳಲ್ಲಿ ಉದಯಿಸಿದ ಚಲನಚಿತ್ರ ಉದ್ಯಮ ಅಮೆರಿಕದ ಹಾಲಿವುಡ್ಡಿನಲ್ಲಿ ಗಟ್ಟಿಯಾಗಿ ನೆಲೆಯೂರಿತು. ನಾಟಕ ಕ್ಷೇತ್ರವನ್ನು ಮಂದವಾಗಿಸಿದ ಮಾತಿಲ್ಲದ ಚಿತ್ರಗಳು ಮುಂದಿನ ಬೆಳವಣಿಗೆಗೆ ಸಂಶೋಧಕರನ್ನು ನಂಬಿಕೊಂಡಿದ್ದವು.ಲೀ ಡಿ ಫಾರೆಸ್ಟ್ ಎಂಬ ವಿಜ್ಞಾನಿ 1923ರ ಸುಮಾರಿಗೆ ಚಲನಚಿತ್ರಕ್ಕೆ ಶಬ್ದಜೋಡಣೆ ಸಾಧ್ಯವಾಗಿಸಿದ. ಈ ಪ್ರಯೋಗ ಅಡೆತಡೆಗಳ ಮೀರಿ ಯಶ ಪಡೆಯುವ ವೇಳೆಗೆ ಹಾಲಿವುಡ್‌ನ ವಾರ್ನರ್ ಸಹೋದರರು ವಿಟಾಫೋನ್ ಎಂಬ ಕಂಪನಿಯನ್ನು ಸ್ಥಾಪಿಸಿ ಟಾಕಿ ಚಿತ್ರ ತಯಾರಿಕೆಗೆ ಮುಂದಾದರು. ನೃತ್ಯ, ಸಂಗೀತ, ದೃಶ್ಯಗಳಿದ್ದ ಮೊದಲ ಟಾಕಿ ಚಿತ್ರವನ್ನು 1926ರ ಆಗಸ್ಟ್ 6ರಂದು ವಾರ್ನರ್ ಸಹೋದರರು ಪ್ರದರ್ಶಿಸಿದರು. ಚಿತ್ರಕ್ಕೆ ಶಬ್ದ ಸೇರಿಸುವ ಪ್ರಕ್ರಿಯೆ ಅಷ್ಟೇನು ಸುಲಭವಾಗಿರಲಿಲ್ಲ. ಅಭಿನಯದಿಂದಲೇ ಮೂಕಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟನಟಿಯರು ಸಂಭಾಷಣೆ ಹೇಳುವಾಗ ಇಕ್ಕಟ್ಟಿಗೆ ಸಿಕ್ಕಿದರು.ಚಿತ್ರಜಗತ್ತು ಮತ್ತೆ ನಾಟಕ ವಲಯವನ್ನೇ ಅವಲಂಬಿಸಬೇಕಾದ ಅನಿವಾರ್ಯತೆಗೆ ಸಿಲುಕಿತು. ಶಬ್ದಚಿತ್ರಗಳಿಗೆ ನಾಟಕಗಳೇ ವಸ್ತುಗಳಾದವು. ರಂಗಭೂಮಿಯನ್ನು ಚಿತ್ರರಂಗ ತನ್ನ ವರ್ತುಲಕ್ಕೆ ಸೇರಿಸಿಕೊಳ್ಳುವಾಗಲೇ ಸಂಗೀತ ಕೂಡ ಅದರೊಟ್ಟಿಗೆ ಬಂದಿತು. ಪ್ರತಿ ಚಿತ್ರವೂ ಸಂಗೀತವನ್ನು ಒಳಗೊಳ್ಳುವಂತಾಯಿತು. ದೃಶ್ಯಕಲೆಯಾಗಿದ್ದ ಚಲನಚಿತ್ರ ಶಬ್ದ ಪಡೆದುಕೊಂಡ ಶುರುವಿನಲ್ಲಿ ಸಂಗೀತವನ್ನು ಹೆಚ್ಚು ನೆಚ್ಚಿಕೊಂಡರೂ ಬೆಳವಣಿಗೆಯ ಹಂತದಲ್ಲಿ ಅದನ್ನು ಹಿನ್ನೆಲೆಯಾಗಿ ಬಳಸಿಕೊಳ್ಳಲು ಸೀಮಿತಗೊಳಿಸಿತು.ಅಮೆರಿಕದ ಹಾಲಿವುಡ್‌ನಲ್ಲಿ ಇನ್ನಷ್ಟು ಸಿನಿಮಾ ತಯಾರಿಕಾ ಕಂಪನಿಗಳು ಹುಟ್ಟಿಕೊಂಡವು. ಟಾಕಿ ಚಿತ್ರಗಳ ನಿರ್ಮಾಣ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಅಮೆರಿಕದ ಯುನಿವರ್ಸಲ್ ಕಂಪನಿ  `ಮೆಲೋಡಿ ಆಫ್ ಲವ್' ಎಂಬ ವಾಕ್ಚಿತ್ರವನ್ನು ಭಾರತದಲ್ಲಿ ಪ್ರಪ್ರಥಮ ಬಾರಿಗೆ 1929ರಲ್ಲಿ ಪ್ರದರ್ಶಿಸಿತು.ಕಲ್ಕತ್ತಾದ `ಮದನ್ ಥಿಯೇಟರ್ಸ್'ಗೆ ಭಾರತದಲ್ಲಿ ಮೊಟ್ಟ ಮೊದಲಿಗೆ ಚಿತ್ರಕ್ಕೆ ಶಬ್ದ ಜೋಡಿಸಿದ ಹೆಗ್ಗಳಿಕೆ. `ಮದನ್ ಥಿಯೇಟರ್ಸ್' ಎರಡು ಪುಟ್ಟ ಶಬ್ದಚಿತ್ರಗಳನ್ನು ಮುಂಬೈನ `ಎಂಪೈರ್' ಚಿತ್ರಮಂದಿರದಲ್ಲಿ 1931ರ ಫೆಬ್ರುವರಿ 4ರಂದು ಪ್ರದರ್ಶಿಸಿತು. ಈ ಚಿತ್ರಗಳು ನೃತ್ಯಗಳನ್ನೂ, ನಾಟಕಗಳನ್ನೂ ಒಳಗೊಂಡಿದ್ದವು. ತಬಲಾ, ಸಿತಾರ್ ವಾದ್ಯಗಳ ಬಳಕೆಯೂ ಆಗಿದ್ದ ಈ ಚಿತ್ರಗಳಲ್ಲಿ ಹಾಡುಗಳೂ ಇದ್ದವು. ಆಕಾಲದ ಹೆಸರಾಂತ ಗಾಯಕಿ ಮುನ್ನಿಬಾಯಿ, ಮಾಸ್ಟರ್ ಮೋಹನ್, ಮಾಸ್ಟರ್ ನಿಸ್ಸಾರ್ ಹಾಡಿದ ಹಾಡುಗಳನ್ನು ಈ ಶಬ್ದ ಚಿತ್ರಗಳಿಗೆ ಅಳವಡಿಸಲಾಗಿತ್ತು. ಮಾತಿನ ಚಿತ್ರಗಳು ಹಿಂದೆಂದಿಗಿಂತಲೂ ಹೆಚ್ಚಿನ ಜನ ಮನ್ನಣೆಗೆ ಪಾತ್ರವಾದವು. ಹಲವಾರು ಚಿತ್ರ ತಯಾರಿಕಾ ಸಂಸ್ಥೆಗಳು ಭಾರತದ ಉದ್ದಗಲದಲ್ಲೂ ಸ್ಥಾಪನೆಗೊಂಡವು.ಭಾರತದಲ್ಲಿ ಪೂರ್ಣ ಉದ್ದದ ಮಾತುಳ್ಳ ಚಲನಚಿತ್ರವನ್ನು ತಯಾರಿಸಿ ಪ್ರದರ್ಶಿಸಿದ ಕೀರ್ತಿ ಮುಂಬೈನ `ಇಂಪೀರಿಯಲ್ ಫಿಲಂ ಸ್ಟುಡಿಯೊ'ಕ್ಕೆ ಸಲ್ಲುತ್ತದೆ. ಚಿತ್ರಕ್ಕೆ ಧ್ವನಿ ಕೊಡುವ ಆಧುನಿಕ ಪರಿಕರ `ವೆಸ್ಟರ್ನ್ ಎಲೆಕ್ಟ್ರಿಕ್ ಸೌಂಡ್ ಸಿಸ್ಟಮ್' ಬಳಸಿದ ಇಂಪೀರಿಯಲ್ ಸಂಸ್ಥೆ ಮೊದಲಿಗೆ ನಿರ್ಮಿಸಿದ `ಆಲಂ ಆರಾ' 1931ರ ಮಾರ್ಚ್ 14ರಂದು ಮುಂಬೈನ ಮೆಜೆಸ್ಟಿಕ್ ಸಿನಿಮಾ ಹಾಲ್‌ನಲ್ಲಿ ತೆರೆಕಂಡಿತು.

ಆದಿ ಇರಾನಿ ಛಾಯಾಗ್ರಹಣ ಮಾಡಿದ್ದ `ಆಲಂ ಆರಾ' ಚಿತ್ರಕ್ಕೆ ಆರ್ದೇಶಿರ್ ಇರಾನಿ ಶಬ್ದ ಸಂಯೋಜನೆ ನಿರ್ವಹಿಸಿದ್ದರು. ಜುಬೇದ, ಪೃಥ್ವೀರಾಜ್, ಜಗದೀಶ ಶೇಠಿ, ಮಾಸ್ಟರ್ ವಿಠ್ಠಲ್ ಮೊದಲಾದವರು ಅಭಿನಯಿಸಿದ್ದ `ಆಲಂ ಆರಾ' ಚಿತ್ರದಲ್ಲಿ ಗಟ್ಟಿಯಾದ ಕಥೆ ಇರಲಿಲ್ಲ. ಶಬ್ದ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದ್ದ ಇರಾನಿ `ಆಲಂ ಆರಾ'ದಲ್ಲಿ ಕೇವಲ ಹಾಡು-ದೃಶ್ಯಗಳನ್ನು ಅಳವಡಿಸಿದ್ದರೂ ಜನ ಮನ್ನಣೆಗೆ ಪಾತ್ರವಾಯಿತು. ಅಪಾರವಾದ ಹಣವನ್ನು ಮಾಡಿಕೊಟ್ಟಿತು. ಸ್ವದೇಶದಲ್ಲಿ ಮಾತ್ರವಲ್ಲ ಹೊರ ರಾಷ್ಟ್ರಗಳಲ್ಲೂ ಪ್ರದರ್ಶನಗೊಂಡು ಹಣ ಮಾಡಿತು.ಚಲನಚಿತ್ರಗಳ ನಿರ್ಮಾಣ, ಹೊಸ ತಂತ್ರಜ್ಞಾನಗಳ ಅಳವಡಿಕೆಗಳಲ್ಲಿ ಪೈಪೋಟಿ ಜೋರಾಗಿದ್ದ ಈ ಕಾಲದಲ್ಲಿ ಇನ್ನೊಂದು ಪೂರ್ಣ ಪ್ರಮಾಣದ ವಾಕ್ಚಿತ್ರ `ಕ್ಷಿರಿನ್ ಫಹ್ರದ್' ಬೆಳ್ಳಿತೆರೆಗೆ ಬಂದಿತು. `ಮದನ್ ಥಿಯೇಟರ್ಸ್' ತಯಾರಿಸಿದ್ದ `ಕ್ಷಿರಿನ್ ಫಹ್ರದ್' ಪರ್ಷಿಯಾದ ಪ್ರೇಮಕಥೆಯನ್ನು ಆಧರಿಸಿತ್ತು. ಜಹಾ ನರಾ ಕಜ್ಜನ್ ಹಾಗು ಮಾಸ್ಟರ್ ನಿಸ್ಸಾರ್ ನಟಿಸಿದ್ದ ಈ ಚಿತ್ರ ಉತ್ತಮ ತಾಂತ್ರಿಕ ಮೌಲ್ಯವನ್ನು ಹೊಂದಿತ್ತು. ಇದಾದ ಬಳಿಕ ಮಾತಿನ ಚಿತ್ರಗಳ ಭರಾಟೆ ಆರಂಭ. ಪ್ರಾದೇಶಿಕ ಭಾಷೆಗಳಲ್ಲೂ ಟಾಕಿ ಚಿತ್ರಗಳ ಬೆಳೆ ಚೆನ್ನಾಗಿ ಬೆಳೆಯಿತು.

 

ಪ್ರತಿಕ್ರಿಯಿಸಿ (+)