ಮಾತಾಜಿಗೆ ಬೆಂಬಲಿಸಿ: ಮಂಜುಳಾ ನಾಯ್ಡು

7

ಮಾತಾಜಿಗೆ ಬೆಂಬಲಿಸಿ: ಮಂಜುಳಾ ನಾಯ್ಡು

Published:
Updated:

ಬಸವಕಲ್ಯಾಣ: ಮಾತೆ ಮಹಾದೇವಿಯವರು 12 ನೇ ಶತಮಾನದಲ್ಲಿ ಬಸವಣ್ಣನವರು ಕೊಟ್ಟಿರುವ ಸಮಾನತೆಯ ವಿಚಾರಗಳನ್ನು ಎಲ್ಲೆಡೆ ಬಿತ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಕ್ರಾಂತಿಕಾರಿ ಕ್ರಮಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ನಾಯ್ಡು ಕೇಳಿಕೊಂಡರು.

ಇಲ್ಲಿನ ಬಸವಮಹಾಮನೆ ಆವರಣದಲ್ಲಿ ಭಾನುವಾರ ಸಂಜೆ ನಡೆದ 10 ನೇ ಕಲ್ಯಾಣಪರ್ವದ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಮಾತಾಜಿಯವರು ಬಸವಣ್ಣನವರ ವಚನಾಂಕಿತ ತಿದ್ದಿರುವುದು ಅಪರಾಧವಲ್ಲ. ಅದೊಂದು ಸಂಶೋಧನೆಯಾಗಿದೆ. ಅಂಥದಕ್ಕೆ ನಾವೆಲ್ಲ ವಿರೋಧಿಸುವುದು ಸರಿಯಲ್ಲ. ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದರೂ ದಿಟ್ಟ ನಿಲುವು ತಾಳಿರುವ ಮಾತಾಜಿಯವರ ತಾಳ್ಮೆ ಮತ್ತು ಧೈರ್ಯ ಮೆಚ್ಚುವಂತದ್ದು ಎಂದರು. ಬಸವಣ್ಣನವರು ಪ್ರಗತಿಪರವಾದ ಧರ್ಮ ಕೊಟ್ಟಿದ್ದಾರೆ. ಅವರ ತತ್ವಗಳನ್ನು ಎಲ್ಲರೂ ಪಾಲಿಸಬೇಕಾದ ಅಗತ್ಯವಿದೆ ಎಂದರು.ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಮಾತನಾಡಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಾರಾಯಿ ಕುಡಿದು ಹೆಂಡಂದಿರನ್ನು ಹೊಡೆಯುವ ಪ್ರವೃತ್ತಿ ಹೋಗಬೇಕು ಎಂದರು.ತಾವು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಒಂದುವೇಳೆ ಆಯ್ಕೆಯಾದರೆ ವಿಧಾನಸೌಧದಲ್ಲಿ ಬಸವತತ್ವದ ಅನುಸಾರ ಕೆಲಸ ನಡೆಯುವಂತೆ ಮಾಡುತ್ತೇನೆ ಎಂದರು.ಗುಲ್ಬರ್ಗದ ಡಾ.ಇಂದುಮತಿ ಪಾಟೀಲ, ಬಳ್ಳಾರಿ ಜಿಲ್ಲಾ ರಾಷ್ಟ್ರೀಯ ಬಸವದಳದ ಅಧ್ಯಕ್ಷೆ ಶಾರದಾಬಾಯಿ, ಶ್ರೀದೇವಿ ತಡಕೋಡ ಮಾತನಾಡಿದರು. ಮಾತೆ ಜ್ಞಾನೇಶ್ವರಿ ಧ್ವಜಾರೋಹಣ ನೆರವೆರಿಸಿದರು. ಮಾತೆ ಮಹಾದೇವಿ ಸಾನಿಧ್ಯ ವಹಿಸಿದ್ದರು. ನೀಲಾಂಬಿಕಾ ಇಂಗಳಳ್ಳಿ ಸ್ವಾಗತಿಸಿದರು. ಚಂದ್ರಮ್ಮ ಸ್ವಾಮಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry