ಮಾತಿಗೆ ತಪ್ಪಿದರೆ ನಿರಶನ: ಅಣ್ಣಾ ಹಜಾರೆ ಎಚ್ಚರಿಕೆ

ಸೋಮವಾರ, ಜೂಲೈ 22, 2019
24 °C

ಮಾತಿಗೆ ತಪ್ಪಿದರೆ ನಿರಶನ: ಅಣ್ಣಾ ಹಜಾರೆ ಎಚ್ಚರಿಕೆ

Published:
Updated:

ನವದೆಹಲಿ: `ಲೋಕಪಾಲ ಮಸೂದೆ ಕರಡು ಸಿದ್ಧತಾ ಸಮಿತಿ~ಯ ಬುಧವಾರದ ಸಭೆಯು ಭಿನ್ನಾಭಿಪ್ರಾಯಗಳಿಂದ ವಿಫಲವಾದ ಬಳಿಕ ಯುಪಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಅಧಿಕಾರದಲ್ಲಿರುವ ಜನ ಕೊಟ್ಟಿರುವ ಮಾತು ಉಳಿಸಿಕೊಳ್ಳದಿದ್ದರೆ ಆಗಸ್ಟ್ 16ರಿಂದ ಮತ್ತೆ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಪುನಃ ಎಚ್ಚರಿಕೆ ನೀಡಿದ್ದಾರೆ.ಇದೇ 20 ಮತ್ತು 21ರಂದು ನಡೆಯುವ ಲೋಕಪಾಲ ಮಸೂದೆ ಕರಡು ಸಿದ್ಧತಾ ಸಮಿತಿಯ ಎಂಟನೇ ಸಭೆ ನಂತರವೂ ನಾಗರಿಕ ಸಂಘಟನೆಗಳು ಮತ್ತು ಸರ್ಕಾರದ ಪ್ರತಿನಿಧಿಗಳ ನಡುವೆ ಸಹಮತ ಏರ್ಪಟ್ಟು, ಒಂದು ಕರಡು ಮಸೂದೆ ಸಿದ್ಧವಾಗದಿದ್ದರೆ ಆ.16ರಿಂದ ಆಮರಣ ಉಪವಾಸ ಕೈಗೊಳ್ಳುವುದಾಗಿ ಅಣ್ಣಾ ಹಜಾರೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.`ಭ್ರಷ್ಟಾಚಾರ ತೊಲಗಿಸುವುದು ಸರ್ಕಾರಕ್ಕೆ ಬೇಕಿಲ್ಲ. ಏಪ್ರಿಲ್‌ನಲ್ಲಿ ಜಂತರ್ ಮಂತರ್ ಬಳಿ ನಾನು ಐದು ದಿನ ಆಮರಣ ಉಪವಾಸ ನಡೆಸಿದಾಗ ನಮ್ಮ ಎಲ್ಲ ಬೇಡಿಕೆಯನ್ನು ಒಪ್ಪಿಕೊಳ್ಳುವುದಾಗಿ ಭರವಸೆ ಕೊಟ್ಟ ಸರ್ಕಾರ ಈಗ ಹಿಂದಕ್ಕೆ ಸರಿಯುತ್ತಿದೆ. ಇದು ನಿಜಕ್ಕೂ ಆತಂಕದ ವಿಷಯ. ಎರಡೆರಡು ಕರಡು ಮಸೂದೆ ಸಿದ್ಧಪಡಿಸಿ ಸಂಪುಟಕ್ಕೆ ಕಳುಹಿಸುವುದಾದರೆ. ಜಂಟಿ ಸಮಿತಿ ಏಕೆ ಬೇಕಿತ್ತು. ಇಷ್ಟೆಲ್ಲ ಸಭೆಗಳನ್ನು ಏಕೆ ನಡೆಸಬೇಕಿತ್ತು~ ಎಂದು ಅಣ್ಣಾ ಪ್ರಶ್ನಿಸಿದರು.ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ, ಒಂದು ಕರಡು ಮಸೂದೆ ಮಾತ್ರ ಸಂಪುಟಕ್ಕೆ ಹೋಗಲಿದೆ ಎಂದು ಹೇಳಿರುವ ಕುರಿತು ಅಣ್ಣಾ ಅವರ ಗಮನ ಸೆಳೆದಾಗ, `ನಾವು 20 ಮತ್ತು 21ರ ಸಭೆವರೆಗೂ ಕಾಯುತ್ತೇವೆ. ಈ ಸಭೆಗಳಲ್ಲಿ ಒಮ್ಮತ ಮೂಡದಿದ್ದರೆ ಮುಂದಿನ ಕ್ರಮ ಆರಂಭವಾಗಲಿದೆ~ ಎಂದು ವಿವರಿಸಿದರು.`ನಮ್ಮ ಚಳವಳಿ ಹತ್ತಿಕ್ಕಲು ಸರ್ಕಾರ ಬಲ ಪ್ರಯೋಗಿಸಿದರೆ ಜಗ್ಗುವುದಿಲ್ಲ. ಪೊಲೀಸರ ಲಾಠಿ ಮತ್ತು ಗುಂಡುಗಳಿಗೆ ಹೆದರುವುದಿಲ್ಲ. ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ. ಆದರೆ, ನಮ್ಮ ಹೋರಾಟ ಅಹಿಂಸಾತ್ಮಕವಾಗಿರುತ್ತದೆ~ ಎಂದು ಗಾಂಧಿವಾದಿಯಾದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್, `ಇದುವರೆಗೆ ನಡೆದಿರುವ ಸಭೆಗಳು ಬರೀ ಕಣ್ಣೊರೆಸುವ ನಾಟಕ. ಮಹತ್ವದ ವಿಷಯಗಳ ಮೇಲೆ ಶೇ. 20ರಷ್ಟು  ಕೂಡ ಚರ್ಚೆ ಆಗಿಲ್ಲ. ಸರ್ಕಾರದ ಪ್ರತಿನಿಧಿಗಳು ತಮ್ಮ ತೀರ್ಮಾನಗಳನ್ನು ಚರ್ಚೆಯೇ ಇಲ್ಲದೆ ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕಾನೂನು ಅವರಿಗೆ ಬೇಕಿಲ್ಲ. ಲೋಕಪಾಲ ಮಸೂದೆ ಜಾರಿಗೆ ಬಂದರೆ ಅರ್ಧದಷ್ಟು ಸಚಿವರು ಜೈಲಿಗೆ ಹೋಗುತ್ತಾರೆ. ಆತ್ಮಹತ್ಯೆ ಟಿಪ್ಪಣಿಗೆ ಸಹಿ ಹಾಕಲು ಯಾರು ಬಯಸುತ್ತಾರೆ~ ಎಂದು ಲೇವಡಿ ಮಾಡಿದರು.ಈ ಸರ್ಕಾರದಲ್ಲಿ ಮತ್ತಷ್ಟು ರಾಜಾ ಮತ್ತು ಕನಿಮೊಳಿ ಇದ್ದಾರೆ. ಇವರೆಲ್ಲರಿಗೂ ತಿಹಾರ್ ಜೈಲಿಗೆ ಹೋಗುವ ಭಯ ಕಾಡುತ್ತಿದೆ ಎಂದು ಹಿರಿಯ ವಕೀಲ ಶಾಂತಿ ಭೂಷಣ್ ಚುಚ್ಚಿದರು. ಸಂಸದರು ಜನರಿಗಿಂತ ದೊಡ್ಡವರಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.ಲೋಕಪಾಲ ಮಸೂದೆ ಕರಡು ಸಿದ್ಧತಾ ಸಮಿತಿಯ ಬುಧವಾರದ ಸಭೆಯಲ್ಲೂ ನಾಗರಿಕ ಸಂಘಟನೆಗಳು ಮತ್ತು ಸರ್ಕಾರದ ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಬಳಿಕ ಎರಡು ಕರಡು ಮಸೂದೆ ಸಿದ್ಧಪಡಿಸಿ ಸಂಪುಟ ಸಭೆಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಕೊನೆಯ ಪ್ರಯತ್ನವಾಗಿ ಈ ತಿಂಗಳ 20 ಮತ್ತು 21ರಂದು ಸಭೆ ನಡೆಸಲು ನಿರ್ಧರಿಸಿರುವುದನ್ನು ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry