ಮಾತಿನ ಚಕಮಕಿ, ಕುಸಿದು ಬಿದ್ದ ಅಧಿಕಾರಿ

7

ಮಾತಿನ ಚಕಮಕಿ, ಕುಸಿದು ಬಿದ್ದ ಅಧಿಕಾರಿ

Published:
Updated:

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಿರ್ಮಿಸಿರುವ ಸಾಮರ್ಥ್ಯ ಸೌಧ ಉದ್ಘಾಟನೆಗೆ ತಾಲ್ಲೂಕು ಪಂಚಾಯಿತಿ ವಿರೋಧ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಬಿ.ಡಿ.ರಾಜೇಂದ್ರ ಅವರ ಮೇಲೆರಗಿದಾಗ ಬಿ.ಡಿ.ರಾಜೇಂದ್ರ ಕುಸಿದು ಬಿದ್ದ ಘಟನೆ ಶುಕ್ರವಾರ ಬೆಳಿಗ್ಗೆ ನಡೆಯಿತು.ಸಾಮರ್ಥ್ಯ ಸೌಧ ಉದ್ಘಾಟನೆಗೆ ಕೆಲವೇ ನಿಮಿಷಗಳ ಮುನ್ನ ಈ ಪ್ರಸಂಗ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಮರೀಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪುಟ್ಟಸ್ವಾಮಿ, ಜಯರಾಂ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರಲ್ಲದೆ ರಾಜೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು. ಸಾಮರ್ಥ್ಯ ಸೌಧ ಉದ್ಘಾಟನೆಯ ಬಗ್ಗೆ ಸಭೆಯಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಅವಕ್ಕಾಗ ರಾಜೇಂದ್ರ ಬೆವರಿ ನೆಲಕ್ಕೆ ಕುಸಿದು ಬಿದ್ದರು. ಅವರನ್ನು ತಕ್ಷಣ ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು. `ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಂದ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ರಕ್ತದ ಒತ್ತಡದಲ್ಲಿ ತುಸು ವ್ಯತ್ಯಾಸವಾಗಿದೆ. ಹೆಚ್ಚಿನ ಅಪಾಯ ಇಲ್ಲ~ ಎಂದು ಆಸ್ಪತ್ರೆಯ ವೈದ್ಯರು ದೃಢಪಡಿಸಿದರು. ಸಂಜೆ ವೇಳೆಗೆ ರಾಜೇಂದ್ರ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯಲಾಯಿತು.`ಕಾಂಗ್ರೆಸ್ ಸದಸ್ಯರು ವಿನಾಕಾರಣ ಗೊಂದಲ ಮೂಡಿಸುತ್ತಿದ್ದಾರೆ. ಎಲ್ಲ ಸದಸ್ಯರಿಗೆ ಆಹ್ವಾನ ನೀಡಿದ್ದೇವೆ. ರಾಜಕೀಯ ಕಾರಣಗಳಿಂದ ಕಾಂಗ್ರೆಸ್ ಸದಸ್ಯರು ಈ ರೀತಿ ವರ್ತಿಸಿದ್ದಾರೆ. ಇದು ಶೋಭೆ ತರುವುದಿಲ್ಲ~ ಎಂದು ತಾ.ಪಂ. ಅಧ್ಯಕ್ಷೆ ನಿರ್ಮಿತಾ ಲೋಕೇಶ್ ತಿರುಗೇಟು ನೀಡಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ತಾ.ಪಂ. ಸದಸ್ಯ ಟಿ.ಶ್ರೀಧರ್ ವಿರೋಧ ಪಕ್ಷದ ಸದಸ್ಯರ ಜತೆ ಮಾತುಕತೆ ನಡೆಸಿ ಸಮಾಧಾನಪಡಿಸಿದರು.ಮತ್ತೊಂದೆಡೆ ಸಾಮರ್ಥ್ಯ ಸೌಧ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಮಹದೇವಪುರ ಬಸವರಾಜು ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಸಿ.ಸ್ವಾಮಿಗೌಡ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ಚಳವಳಿಯಲ್ಲಿ ಭಾಗವಹಿಸದ ನೀವು ಇಂತಹ ಕಾರ್ಯಕ್ರಮಗಳಿಗೂ ಬರಬಾರದು ಎಂದರು. ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಚಳವಳಿಯಲ್ಲಿ ಹಲವು ಬಾರಿ ಪಾಲ್ಗೊಂಡಿದ್ದೇನೆ ಎಂದು ಬಸವರಾಜು ಸಮಜಾಯಿಷಿ ನೀಡಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಬಸವರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ರಾಜೇಶ್ವರಿ ನಂದೀಶ್ ಕುಮಾರ್, ಸಜ್ಜೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry