ಮಂಗಳವಾರ, ನವೆಂಬರ್ 19, 2019
26 °C
ಅಭ್ಯರ್ಥಿಗಳು, ಬೆಂಬಲಿಗರ ಪರಸ್ಪರ ನಿಂದನೆ; ಪ್ಯಾರಾಮಿಲಿಟರಿ ಹದ್ದಿನ ಕಣ್ಣು

ಮಾತಿನ ಚಕಮಕಿ, ಬಂದೋಬಸ್ತ್ ಮಧ್ಯೆ ನಾಮಪತ್ರ ಸಲ್ಲಿಕೆ

Published:
Updated:

ಭದ್ರಾವತಿ: ಅಭ್ಯರ್ಥಿಗಳ ಪರಸ್ಪರ ಮಾತಿನ ಚಕಮಕಿ, ಅಧಿಕಾರಿಗಳ ಜತೆ ಜಟಾಪಟಿ, ತಾಲ್ಲೂಕು ಕಚೇರಿ ಸುತ್ತಾ ಬಿಗಿ ಪ್ಯಾರಮಿಲಿಟರಿ ಬಂದೋಬಸ್ತು, ಬೆಂಬಲಿಗರ ನಿಯಂತ್ರಣಕ್ಕೆ ಲಾಠಿ ಎತ್ತಿದ ಪೊಲೀಸರು, ಇವಿಷ್ಟು ಬುಧವಾರ ನಾಮಪತ್ರ ಸಲ್ಲಿಕೆ ಕಡೆಯ ದಿನದ ಝಲಕ್.ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಉತ್ಸಾಹದಲ್ಲಿ ನೂರಾರು ಬೆಂಬಲಿಗರ ಜತೆ ನಾಮಪತ್ರ ಸಲ್ಲಿಕೆ ಮಾಡಿದರು. ಇವರು ಕೇಂದ್ರದಿಂದ ಹೊರ ಬರುತ್ತಿದ್ದಂತೆ ಮಾತಿನ ಚಕಮಕಿ ಪ್ರಹಸನ ನಡೆಯಿತು.ಕೇಂದ್ರದ ಹೊರಗೆ ಮಾಧ್ಯಮದವರ ಮುಂದೆ ಇಬ್ರಾಹಿಂ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಬಿ.ಕೆ. ಸಂಗಮೇಶ್ವರ ಬೆಂಬಲಿಗರ ಘೋಷಣೆ ಪರಾಕ್, ಇಬ್ರಾಹಿಂ ಬೆಂಬಲಿಗರ ದನಿಯನ್ನು ಹೆಚ್ಚು ಮಾಡಿತು. ಈ ವೇಳೆ ಪರಸ್ಪರ ನಿಂದನೆಯ ಬ್ರಹ್ಮಾಸ್ತ್ರ ಪ್ರಯೋಗವಾಯಿತು.ಇದರ ಬಿಸಿ ಅರಿತ ಪೊಲೀಸರು ಏರುದನಿಯ ಪ್ರಯೋಗ ನಡೆಸಿದರೂ ಪರಿಸ್ಥಿತಿ ತಹಬದಿಗೆ ಬರಲಿಲ್ಲ. ಆಗ ಸಿಟ್ಟಾದ ಪೊಲೀಸ್ ಅಧಿಕಾರಿಗಳು ಲಾಠಿ ಎತ್ತುವ ಹಂತ ತಲುಪಿದಾಗ ಗುಂಪು ಚದುರಿತು.ಇನ್ನು ಇಬ್ರಾಹಿಂ ನಾಮಪತ್ರ ಸಲ್ಲಿಕೆ ಕಾರಣ ನೂರಾರು ಸಂಖ್ಯೆಯ ಬೆಂಬಲಿಗರ ಜತೆ ಆಗಮಿಸಿದ ಕೆಜೆಪಿ ಅಭ್ಯರ್ಥಿ ವಿ. ಕದಿರೇಶ್ ಅವರನ್ನು 100 ಮೀಟರ್ ಅವರಣದೊಳಗೆ ಬಿಡಲು ಪೊಲೀಸರು ನಿರಾಕರಣೆ ಮಾಡಿದರು.ಈ ಹಂತದಲ್ಲಿ ಕೆಜೆಪಿ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇಷ್ಟು ದಿನ ಇಲ್ಲದ ಬಂದೋಬಸ್ತು ಇಬ್ರಾಹಿಂ ಬಂದ ಕೂಡಲೇ ಯಾಕೆ ಬದಲಾಯಿತು ಎಂದು ಮುಖಂಡರು ಮುಗಿಬಿದ್ದರು.ಇದರಿಂದ ಕಂಗಾಲಾದ ಪೊಲೀಸರು ಅಭ್ಯರ್ಥಿ ಸೇರಿ ನಾಲ್ಕೈದು ಮಂದಿಯನ್ನು ಕಚೇರಿ ತನಕ ಬಿಡುವಲ್ಲಿ ಮುಂದಾದರು. ಇವರು ನಾಮಪತ್ರ ಸಲ್ಲಿಕೆಗೆ ಒಳ ಹೋದ ಸಂದರ್ಭದಲ್ಲಿ ಸಂಗಮೇಶ್ವರ ಗೇಟಿನ ಹೊರಗೆ ಸುಮಾರು ಅರ್ಧ ತಾಸು ಕಾಯುವಂತಾಯಿತು.

ಈ ಎಲ್ಲಾ ಬೆಳವಣಿಗೆ ನಡುವೆ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಬಾಲಕೃಷ್ಣ, ಬಿಎಸ್‌ಪಿ ಅಭ್ಯರ್ಥಿಯಾಗಿ ಸುರೇಶ್, ಪಕ್ಷೇತರರಾಗಿ ಬಿ.ಕೆ. ಮೋಹನ್, ಹನುಮಂತಪ್ಪ, ಕುರುಬರ ಹನುಮಂತಪ್ಪ, ಗಂಗಾಚಾರಿ, ಶಶಿಕುಮಾರ್, ಬಿಜಿಎಲ್ ಮೋಹನ್ ಸೇರಿದಂತೆ ಇನ್ನು ಹಲವು ಮಂದಿ ನಾಮಪತ್ರ ಸಲ್ಲಿಕೆ ಮಾಡಿದರು.ನಿಮ್ಮ ಥ್ಯಾಂಕ್ಸ್ ಬೇಕಿಲ್ಲ...

ಪತ್ರಿಕಾಗೋಷ್ಠಿ ಮುಗಿದ ನಂತರ ಹೊರಬಂದ ಸಿ.ಎಂ. ಇಬ್ರಾಹಿಂ ತಮಗೆ ಎದುರಾದ ಬಿ.ಕೆ. ಸಂಗಮೇಶ್ವರ ಅವರಿಗೆ ಕೈ ಕುಲುಕಲು ಮುಂದಾದಾಗ ಗರಂ ಆಗಿ `ನಿಮ್ಮ ಥ್ಯಾಂಕ್ಸ್ ಬೇಕಿಲ್ಲ' ಎಂದು ಸಂಗಮೇಶ್ವರ ಗುಡುಗಿದ ಪ್ರಸಂಗ ನಡೆಯಿತು.ಈ ಪ್ರತಿಕ್ರಿಯೆಗೆ ದಂಗಾದ ಇಬ್ರಾಹಿಂ, ಸಂಗಮೇಶ್ ಬೆನ್ನ ಮೇಲೆ ತಟ್ಟಿ ಮುಂದೆ ಸಾಗಿದರೆ, ಅವರ ಬೆಂಬಲಿಗರು ಸಾರ್, ಈ ರೀತಿ ತಾವು ಮಾಡಬಾರದಿತ್ತು. ರಾಜ್ಯ, ರಾಷ್ಟ್ರದ ಲೀಡ್ರು ಆದ ತಾವು ಬೇರೆ ಕಡೆ ಹೋಗಬಹುದಿತ್ತು,,, ಎಂದು ರಾಗ ಎಳೆದರೆ, ಹುಸಿನಗೆ ಚೆಲ್ಲಿದ ಇಬ್ರಾಹಿಂ ವಾಹನದತ್ತ ತೆರಳಿದರು.ಇದೇ ಸಂದರ್ಭದಲ್ಲಿ ಇಷ್ಟು ದಿನ ನಮ್ಮ ಜತೆ ಇದ್ದ ಜನರು ಈಗ ಅವರ ಕಡೆ ಹೋಗಿದ್ದಾರೆ, ಇದು ಸರೀನಾ ಎಂದು ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರನ್ನು ಹಿಡಿದು ಸಂಗಮೇಶ್ ಬೆಂಬಲಿಗರು ಹಿಡಿದು ಕೂಗಾಡಿದ ಘಟನೆ ಸಹ ನಡೆಯಿತು.

ಪ್ರತಿಕ್ರಿಯಿಸಿ (+)