ಮಾತಿನ ಚಾಟಿ ಮಡಚಿಟ್ಟು ಹೋದ ಎಲ್.ಬಿ.

7

ಮಾತಿನ ಚಾಟಿ ಮಡಚಿಟ್ಟು ಹೋದ ಎಲ್.ಬಿ.

Published:
Updated:
ಮಾತಿನ ಚಾಟಿ ಮಡಚಿಟ್ಟು ಹೋದ ಎಲ್.ಬಿ.

`ಸಾರ್, ನಿಮ್ಮಂತಹವರು ಇನ್ನೂ ಹತ್ತಾರು ವರ್ಷ ನಮ್ಮ ಮುಂದಿರಬೇಕು... ನೀವು ಹೀಗೆ ಹೊಟ್ಟೆಗೆ ತಿನ್ನೋಕೆ ಹಟ ಮಾಡಿದ್ರೆ ನಿಜಕ್ಕೂ ಕಷ್ಟವಾಗುತ್ತೆ... ನಮ್ಮಂತಹವರಿಗೆ ಸ್ಫೂರ್ತಿ ತುಂಬಲು ನೀವು ಚೆನ್ನಾಗಿ ಓಡಾಡಿಕೊಂಡಿರಬೇಕು...~ನಾನು ಸಾಧ್ಯವಾದಷ್ಟು ಗಟ್ಟಿಯಾಗಿ ಅವರಿಗೆ ಕೇಳಿಸುವಂತೆ, ಅವರ ಮುಖದ ಹತ್ತಿರ ನಿಂತು ಹೇಳಿದೆ. ಏನನ್ನೋ ಹೇಳಲು ಪ್ರಯತ್ನಿಸಿದರು. ಅದು ಏನೆಂಬುದು ಸ್ಪಷ್ಟವಾಗಲಿಲ್ಲ. ಸುಮ್ಮನೆ ನಕ್ಕರು. ಆ ನಗುವಿನಲ್ಲಿ ವಿಷಾದವಿತ್ತೇ? ನನಗೇನೋ ಅಲ್ಲಿದ್ದುದು ವಿಷಾದವೇ ಅನ್ನಿಸಿತು.

ಜನರು ಸಿಕ್ಕಾಗಲೆಲ್ಲ `ಅರಳು ಹುರಿದಂತೆ~ ಮಾತಿಗೆ ತೊಡಗುತ್ತಿದ್ದ ಎಲ್.ಬಿ. ಹದಿನೈದು ದಿನಗಳ ಹಿಂದೆ ಮೈಸೂರಿನ ಬಿ.ಎಂ. ಆಸ್ಪತ್ರೆಯ ಹಾಸಿಗೆಯಲ್ಲಿ ಮಾತು ಬಿಟ್ಟವರಂತೆ ಮಲಗಿದ್ದರು. ನಾನು ಮತ್ತು ನನ್ನ ಸ್ನೇಹಿತರಿಬ್ಬರು ಸುಮ್ಮನೆ ಅವರನ್ನು ನೋಡಿದೆವು. ನಮ್ಮನ್ನು ಕರೆದೊಯ್ದಿದ್ದ ಪ್ರೊಫೆಸರರು ಮೊದಲು ನನ್ನನ್ನು ಪರಿಚಯಿಸಿದರು.ಗುರುತಿಸಿದವರಂತೆ ಮೊದಲಿಗೆ ನಕ್ಕರು; ಹಿಂದೆಯೇ ಎಂತಹುದೋ ಖಿನ್ನತೆಯಲ್ಲಿದ್ದವರಂತೆ ನರಳಿದರು. ನಿಜವಾಗಿಯೂ ಅವರು ಲೋಕದೊಂದಿಗೆ ಮಾತು ಬಿಟ್ಟಿದ್ದಾರೆನ್ನಿಸಿತು.

`ಅವರು ಮನೆಯಲ್ಲಿ ಕಾಲುಜಾರಿ ಬಿದ್ದದ್ದು ಒಂದು ನೆಪವಷ್ಟೇ. ಈಗ ಅದೆಲ್ಲ ವಾಸಿಯಾಗಿದೆ, ವೈದ್ಯರು ಕೂಡ ಗುಣಮುಖರಾಗುತ್ತಾರೆಂದು ಹೇಳಿದ್ದಾರೆ. ಆದರೆ ಇವರೇ ಊಟ ತಿನ್ನದೆ ಮಗುವಿನಂತೆ ಹಟ ಮಾಡುತ್ತಿದ್ದಾರೆ... ಬಹುಶಃ ಅವರು ಯಾವುದೋ ಕಠಿಣ ನಿರ್ಧಾರಕ್ಕೆ ಬಂದಂತಿದೆ...~ ಎಂದರು ಪ್ರೊಫೆಸರರು.ತಕ್ಷಣವೇ ನನಗೆ ಎಲ್.ಬಿ. ಅವರು ಬರೆದಿರುವ `ಅಲ್ಲಮನು ಮೈಮೇಲೆ ಬಂದಾಗ~ ಎನ್ನುವ ಪುಸ್ತಕದ ಶೀರ್ಷಿಕೆಯ ಜೊತೆಗೆ ಜೈನ ಫಿಲಾಸಫಿಯಲ್ಲಿ ಬರುವ `ಸಲ್ಲೇಖನ ವ್ರತ~ದ ನೆನಪಾಯಿತು. ಆದರೆ ಅವರ ಈ `ಹಟ~ ಅಧ್ಯಾತ್ಮ-ಮೋಕ್ಷಗಳ ಹಂಗಿನದ್ದಲ್ಲವೆಂದು ನನಗೆ ಅನ್ನಿಸಿತು. `ಅಲ್ಲಮನು ಮೈಮೇಲೆ ಬಂದಾಗ~ ಎನ್ನುವ ಶೀರ್ಷಿಕೆಯೇ ಕಳೆದ ಎರಡು ದಶಕಗಳೀಚೆಗಿನ ಅವರ ಒಟ್ಟು ವ್ಯಕ್ತಿತ್ವವನ್ನು ರೂಪಕಗೊಳಿಸುವಂತಿದ್ದು; ಇದೀಗ ಅದರ ಪರಾಕಾಷ್ಠೆಯನ್ನು ಅವರು ಆವಾಹಿಸಿಕೊಂಡಿದ್ದಾರೆನ್ನಿಸಿತು. ತೊಂಬತ್ತು ವರ್ಷಗಳ ತುಂಬುಜೀವವೊಂದು ಹೀಗೆ ಸಮಾಜದ ವಿಷಮಸ್ಥಿತಿಗೆ, `ಕಲ್ಯಾಣ ಕೆಟ್ಟ~ ಕಾರಣಕ್ಕೆ ನೊಂದುಕೊಂಡು ಜಿಗುಪ್ಸೆ ತಾಳಿದ್ದು ನನ್ನೊಳಗೆ ಅಚ್ಚರಿ, ವಿಚಿತ್ರವಾದ ಸಂಕಟ, ತಳಮಳಗಳನ್ನೆಲ್ಲ ಹುಟ್ಟುಹಾಕತೊಡಗಿತು.ಎಲ್.ಬಿ. ಅವರು ಈ ಹೊತ್ತಿನ ಸುತ್ತಮುತ್ತಲ ಮನುಷ್ಯರ ಕಪಟಗಳ ಕುರಿತು ಜಿಗುಪ್ಸೆಗೊಂಡಿದ್ದರೆ? ಆಷಾಢಭೂತಿ ಮಠಾಧೀಶರ, ಜನನಾಯಕರ, ವಿದ್ವಾಂಸರ ಕುರಿತು ಅಸಹ್ಯ ತಳೆದಿದ್ದರೆ? `ಕಲಿಗಾಲದ ಕೇಡನ್ನು ನಾ ನೋಡಲಾರೆ... ಪಾತಾಳಲೋಕ ಸೇರಿಕೊಳ್ಳುವೆ~ನೆಂದು ಹಲುಬುವ `ಮಂಟೇಸ್ವಾಮಿ ಕಾವ್ಯ~ದ ಧರೆಗೆ ದೊಡ್ಡವರಂತೆ ಒಳಗೊಳಗೇ ನವೆಯುತ್ತಿದ್ದರೆ?ಕಳೆದ ಇಪ್ಪತ್ತು ವರ್ಷಗಳಿಂದಲೂ ಅವರ ನಡೆ-ನುಡಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನನಗೆ ಇವೆಲ್ಲವೂ ನಿಜವೆನ್ನಿಸಿತು. ಯಾವೊಂದು ಸಾರ್ವಜನಿಕ ವೇದಿಕೆಯಲ್ಲಿಯೂ ಅವರು `ಘನ-ಗಂಭೀರ ವಿದ್ವಾಂಸ~ರ ಹಾಗೆ ನಡೆದುಕೊಂಡಿದ್ದನ್ನೇ ನಾನು ಕಾಣಲಿಲ್ಲ. ಅದು ಸಾಹಿತ್ಯಿಕ ಕಾರ್ಯಕ್ರಮವಾಗಿರಲಿ, ವಿದ್ವಜ್ಜನರ ಸಮಾವೇಶವಾಗಿರಲಿ, ಎಲ್ಲೆಡೆಯೂ ಅವರು ನಮ್ಮ ನಡುವಿನ ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ, ಹೃದಯಶೂನ್ಯತೆಗಳ ಬಗ್ಗೆ ತಳಮಳಿಸುತ್ತಿದ್ದರು, ಆಕ್ರೋಶಭರಿತರಾಗಿ ಮಾತನಾಡುತ್ತಿದ್ದರು.

 

ಪ್ರಾಚೀನ ಕೃತಿಗಳ ಗ್ರಂಥ ಸಂಪಾದನೆಯಂತಹ, ಛಂದಸ್ಸು-ವ್ಯಾಕರಣ ಶಾಸ್ತ್ರಗಳಂತಹ ಗಂಭೀರ ಕೃಷಿಯಲ್ಲಿ ತೊಡಗಿಕೊಂಡ ವಿದ್ವಾಂಸರಲ್ಲಿ ನಾವು ಅಷ್ಟಾಗಿ ಕಾಣದ ಸಾಮಾಜಿಕ ಕಳಕಳಿಯನ್ನು ಅವರು ಸದಾ ವ್ಯಕ್ತಪಡಿಸುತ್ತಿದ್ದರು.ಅದು ಕೇವಲ ಅವರ ವೇದಿಕೆಯ ಮೇಲಿನ ಕಳಕಳಿಯಾಗಿರಲಿಲ್ಲ ಎನ್ನುವುದಕ್ಕೆ, ಅವರು 2009ರಲ್ಲಿ ಚಿತ್ರದುರ್ಗದಲ್ಲಿ ನಡೆದ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾಗ ಬಂದ ಗೌರವಧನವನ್ನು ಸಾಹಿತ್ಯ ಪರಿಷತ್ತಿಗೇ ಮರಳಿಸಿ `ಅದನ್ನು ದಲಿತ ಸಮುದಾಯದಿಂದ ಬಂದ ಯುವ ಲೇಖಕರನ್ನು ಪ್ರೋತ್ಸಾಹಿಸಲು ಬಳಸಿ~ ಎಂದು ಹೇಳಿದ ಸಂದರ್ಭವೇ ಸಾಕ್ಷಿ.                                                   * * *

ಆರಂಭದಲ್ಲಿ ವಚನಗಳ ಸಂಪಾದನಾ ಕಾರ್ಯದಲ್ಲಿ ತೊಡಗಿಕೊಂಡಂದಿನಿಂದ ಮೊನ್ನೆಮೊನ್ನೆ ತಾನೇ ಅವರು ಮುಗಿಸಿಕೊಟ್ಟ `ಕಡಕೋಳ ಮಡಿವಾಳಪ್ಪನ ಮಹಂತ ನಿಜಲೀಲಾನುಭವ ವಚನ~ದವರೆಗಿನ ಅವರ ವಿದ್ವತ್ತಿನ ಪಯಣದಲ್ಲಿ ಅವರು ಎಲ್ಲವನ್ನೂ `ಸಮಾಜಮುಖಿ ಚಿಂತನೆ~ಯಾಗಿಯೇ ಪರಿಭಾವಿಸಿದರು.

 

ಕೇವಲ ಶಾಸ್ತ್ರೀಯ ರೀತಿಯಲ್ಲಿ ಗ್ರಂಥ ಸಂಪಾದನೆಯಲ್ಲಿ ತೊಡಗುವ ಇತರೆ ವಿದ್ವಾಂಸರಿಗೂ ತಾವು ಶೋಧಿಸಿದ ಆಕರಗಳಲ್ಲೆಲ್ಲ ತಮ್ಮ ಜನಪರ ಕಾಳಜಿಯನ್ನು ಹುಡುಕಿ ಸಮಾಜದ ಮುಂದೆ ಹಿಡಿಯುವ ಎಲ್.ಬಿ. ಅವರಂತಹ ವಿದ್ವಾಂಸರಿಗೂ ವ್ಯತ್ಯಾಸವಿರುವುದೇ ಇಲ್ಲಿ. ಅವರ ಈ ತುಡಿತವೇ `ಶೂನ್ಯ ಸಂಪಾದನೆಗಳು~ ತಲುಪಿದ್ದ ವೀರಶೈವೀಕರಣದ ಚೌಕಟ್ಟನ್ನು ಒಡೆದು ಅವುಗಳನ್ನು ಮರುವ್ಯಾಖ್ಯಾನಿಸಲು ಸಾಧ್ಯವಾಗಿಸಿದ್ದು.ಪಂಪನ `ವಿಕ್ರಮಾರ್ಜುನ ವಿಜಯ~ವನ್ನು ಸರಳಗೊಳಿಸಲು, ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ `ಸರಳ ಪಂಪಭಾರತ~ವಾಗಿ ಕಟ್ಟಿಕೊಡಲು ಸಾಧ್ಯವಾಗಿಸಿದ್ದು ಅವರ ಈ ಚಿಂತನೆಯೇ. ತಮ್ಮ ಇಂತಹ ಪ್ರಯತ್ನಗಳಿಗೆ ವಿದ್ವಾಂಸವಲಯ ನಕಾರಾತ್ಮಕವಾಗಿ ಸ್ಪಂದಿಸಿದ್ದರ ಬಗ್ಗೆ ಅವರಿಗೆ ಕೊನೆಯವರೆಗೂ ಅಸಹನೆಯಿತ್ತು. ಹಳಗನ್ನಡದ ಶಾಸ್ತ್ರೀಯ ಕೃತಿಗಳನ್ನು ಛಂದಸ್ಸಿನ ಹಂಗಿಲ್ಲದೆ ಮುಕ್ತವಾಗಿ ನೋಡಬೇಕೆನ್ನುವ ಪ್ರಯೋಗಶೀಲ ಮನಸ್ಸು ಅವರದಾಗಿತ್ತು.ನನ್ನ ಗ್ರಹಿಕೆಯ ಮಿತಿಯಲ್ಲಿ ನಾನು ಗಮನಿಸಿದಂತೆ ಶಾಸ್ತ್ರೀಯ ಗ್ರಂಥಗಳ ಹುಡುಕಾಟದಲ್ಲಿ ಕಳೆದುಹೋದ ಅನೇಕ ವಿದ್ವಾಂಸರು ಈ ಹೊತ್ತಿನ ಸಾಹಿತ್ಯ ಚಟುವಟಿಕೆಗಳತ್ತ ಆಸಕ್ತಿ ತೋರುವುದು ಬಹಳ ಕಡಿಮೆ. ಬಸವರಾಜು ಅವರು ಇದಕ್ಕೆ ಅಪವಾದ.ಇತ್ತೀಚೆಗೆ ಬರೆಯುತ್ತಿರುವ ಆಧುನಿಕ ಬರಹಗಾರರ ಕಾಳಜಿ, ಧೋರಣೆಗಳ ಕುರಿತು ಮೆಚ್ಚುಗೆ, ಹೊಸದಾಗಿ ಪ್ರಕಟಗೊಳ್ಳುವ ಸಾಹಿತ್ಯಿಕ-ಸಾಂಸ್ಕೃತಿಕ ಪತ್ರಿಕೆಗಳ ಬಗೆಗಿನ ಮಾತುಕತೆ- ಇಂತಹವುಗಳ ಕುರಿತು ಅವರು ಕೊನೆಯವರೆಗೂ ಆಸಕ್ತಿ ಉಳಿಸಿಕೊಂಡಿದ್ದರು. ತಮ್ಮ ದೃಷ್ಟಿ ಮಂದವಾಗಿ ಹಲವಾರು ದಿನಗಳಾಗಿದ್ದರೂ ತಮ್ಮ ಟೇಬಲ್ ಮೇಲೆ ಯಾವಾಗಲೂ ಇಟ್ಟುಕೊಂಡಿರುತ್ತಿದ್ದ ದೊಡ್ಡ ಮಸೂರವನ್ನು ಪುಸ್ತಕದುದ್ದಕ್ಕೂ ಓಡಾಡಿಸುತ್ತ ಅದರ ಮೂಲಕವೇ ಎಲ್ಲವನ್ನೂ ಓದುತ್ತಿದ್ದರು, ಬರೆಯುತ್ತಿದ್ದರು.ಆಗೆಲ್ಲ ನನಗೆ ಅವರು ಈಗಲೂ ಏನನ್ನೋ ಹುಡುಕುವ ಹೊಸ ಸಂಶೋಧಕನ ಹಾಗೆಯೇ ಕಾಣುತ್ತಿದ್ದರು.ಆಧುನಿಕ ಬರಹಗಳ ಕುರಿತು ಅವರಿಗಿದ್ದ ಅತ್ಯಾಸಕ್ತಿಗೆ ಇನ್ನೊಂದು ಉದಾಹರಣೆ `ಕುಸುಮಬಾಲೆ~ಯ ರೂಪಾಂತರ. ಐದು ವರ್ಷಗಳ ಹಿಂದೆ ದೇವನೂರ ಮಹಾದೇವ ಅವರ ಬಹುಚರ್ಚಿತ ಕಾದಂಬರಿ `ಕುಸುಮಬಾಲೆ~ಯನ್ನು ಅವರು `ಪ್ರಜಾವಾಣಿ~ ಬಳಗದ `ಸುಧಾ~ ವಾರಪತ್ರಿಕೆಗಾಗಿ `ಲಯಾಕಾರ ವಿನ್ಯಾಸ~ ಎಂಬ ಪ್ರಕಾರದಲ್ಲಿ ಪುನರ್ ರೂಪಿಸಿಕೊಟ್ಟಿದ್ದರು.

 

ಮೂಲತಃ ಗದ್ಯ-ಪದ್ಯಗಳೆರಡರ ಚಂಪೂ ಶೈಲಿಯಲ್ಲಿದ್ದ `ಕುಸುಮಬಾಲೆ~ಯನ್ನು ಅವರು ಅಲ್ಲಿನ ಲಯಕ್ಕನುಗುಣವಾಗಿ ಸಂಪೂರ್ಣವಾಗಿ ಪದ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು. ಆ ಸಂದರ್ಭದಲ್ಲಿ ಬಂದ `ಇದು ಪ್ರಸ್ತುತವಿತ್ತೇ?~ ಎಂಬ ಪ್ರಶ್ನೆಗೆ- `ಇದೇ ಪ್ರಸ್ತುತ; ಉಳಿದವುಗಳೆಲ್ಲ ಅಪ್ರಸ್ತುತ~ ಎಂದಷ್ಟೇ ಹೇಳಿದ್ದರು. ನನಗೆ ಅವರ ಈ ಮಾತು ಸಾವಿರಾರು ಪುಟಗಳ `ಮಹಾಕಾವ್ಯ~ಗಳನ್ನು ತಿಂಗಳಿಗೊಂದರಂತೆ `ಲೀಲಾಜಾಲ~ವಾಗಿ ಬರೆದು ಓದುಗರನ್ನು ಬೆಚ್ಚಿಬೀಳಿಸುವ ನಮ್ಮ ನಡುವಿನ ಅನೇಕ ಕವಿ-ಕವಯತ್ರಿಯರಿಗೆ ಕೊಟ್ಟ ಚಾಟಿಯೇಟಿನಂತೆ ಕಂಡಿತ್ತು.ಅಂತಹ ಮಾತಿನ ಚಾಟಿ ಹಿಡಿದುಕೊಂಡೇ ಇರುತ್ತಿದ್ದ ಎಲ್.ಬಸವರಾಜು ಅವರು ಈಗ ಎಲ್ಲ ಮಾತುಗಳನ್ನೂ ತೀರಿಸಿಹೋಗಿದ್ದಾರೆ. ಈಗ ಕೇಳಿಸುತ್ತಿರುವುದು ಅವರ ಮಾತಿನ ಸಪ್ಪಳ ಮಾತ್ರ...

 ಮಾನವೀಯ ಕಾಳಜಿಯ ವಿದ್ವಾಂಸ

ಎಲ್.ಬಿ. ಎಂದೇ ಪ್ರಸಿದ್ಧರಾದ ಎಲ್.ಬಸವರಾಜು ಅವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಇಡಗೂರಿನಲ್ಲಿ, 1919ರ ಅಕ್ಟೋಬರ್ 5ರಂದು. ಪ್ರಾಥಮಿಕ ಶಿಕ್ಷಣ ಇಡಗೂರಿನಲ್ಲಿಯೇ ನಡೆಯಿತು. ತುಮಕೂರಿನ ಸಿದ್ಧಗಂಗೆಯಲ್ಲಿ ಪ್ರೌಢಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಮೈಸೂರು ವಿ.ವಿ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ದೇವರ ದಾಸಿಮಯ್ಯ ಮತ್ತಿತರ ವಚನಕಾರರ ವಚನಗಳನ್ನು, ಮೊದಲನೆಯ ಶೂನ್ಯಸಂಪಾದನೆಕಾರನಾದ ಶಿವಗಣಪ್ರಸಾದಿಯ ಶೂನ್ಯ ಸಂಪಾದನೆಯನ್ನು ಅವರು ಸಂಪಾದಿಸಿಕೊಟ್ಟಿದ್ದಾರೆ. ಅಶ್ವಘೋಷನ `ಬುದ್ಧಚರಿತೆ~ಯನ್ನು ಕನ್ನಡಕ್ಕೆ ತಂದಿದ್ದಾರೆ. ಸರ್ವಜ್ಞನ ವಚನಗಳನ್ನು `ಪಾರಮಾರ್ಥ~ ಎನ್ನುವ ಅಂಕಿತದಲ್ಲಿ ಸಂಪಾದಿಸಿದ್ದಾರೆ. ಪಂಪನ ಆದಿಪುರಾಣ ಮತ್ತು ಪಂಪಭಾರತವನ್ನು ಸರಳವಾಗಿ ಸಂಪಾದಿಸಿಕೊಟ್ಟಿದ್ದಾರೆ.`ನಾಟಕಾಮೃತ ಬಿಂದುಗಳು~, `ಅಲ್ಲಮನು ಮೈಮೇಲೆ ಬಂದಾಗ~, `ಭಾರತರೂಪಕ~, `ರಾಮಾಯಣ ನಾಟಕ ತ್ರಿವೇಣಿ~, `ಶಿವದಾಸ ಗೀತಾಂಜಲಿ~, `ಶೃಂಗಾರ ನಿದರ್ಶನ~, `ಬಸವಪೂರ್ವ ವಚನಕಾರರು~, `ಮಹಾದೇವನ ಮಹಾಲಿಂಗೇಂದ್ರ ವಿಜಯ~, `ಸೌಂದರನಂದ~, `ಕನ್ನಡ ಛಂದಸ್ಸಂಪುಟ~, `ತೊರವೆ ರಾಮಾಯಣ ಸಂಗ್ರಹ~ ಇವರ ಕೆಲವು ಪ್ರಮುಖ ಕೃತಿಗಳು. `ರಾಕ್ಷಸರಿಗೆ ಕತ್ತಲೆಯೇ ಬೆಳಕು~ ಅಂಕಣ ಬರಹಗಳ ಸಂಕಲನ. `ಠಾಣಾಂತರ~, `ಜಾಲಾರಿ~, `ಡೊಂಕು ಬಾಲದ ನಾಯಕರು~ ಅವರ ಕವನ ಸಂಕಲನಗಳು.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಚಿದಾನಂದ ಪ್ರಶಸ್ತಿ. ಪ್ರೊ. ಸಂ.ಶ. ಭೂಸನೂರಮಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ಪಂಪ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಬಸವ ಪುರಸ್ಕಾರ ರಾಷ್ಟ್ರೀಯ ಸನ್ಮಾನ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ ಪ್ರಶಸ್ತಿ, ರಾಷ್ಟ್ರಕವಿ ಎಂ.ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ, ಮೈಸೂರು ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದ ಎಲ್.ಬಿ. ಎಪ್ಪತ್ತೈದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry