ಮಾತಿನ ಮನೆ, ಹೇಳುವುದೆಲ್ಲ ಸುಮ್ಮನೆ

ಮಂಗಳವಾರ, ಜೂಲೈ 16, 2019
25 °C

ಮಾತಿನ ಮನೆ, ಹೇಳುವುದೆಲ್ಲ ಸುಮ್ಮನೆ

Published:
Updated:

ನಮ್ಮಲ್ಲಿ ವಸತಿ ಯೋಜನೆಗಳಿಗೆ ಕೊರತೆ ಇಲ್ಲ. ಗ್ರಾಮೀಣ ಮತ್ತು ನಗರ ಆಶ್ರಯ (ಈಗ ಬಸವ ಮತ್ತು ವಾಜಪೇಯಿ ವಸತಿ), ಅಂಬೇಡ್ಕರ್, ಇಂದಿರಾ ಆವಾಸ್ ಸೇರಿದಂತೆ ಹಲವು ಯೋಜನೆಗಳಿವೆ.ನಿರ್ವಸಿತರಿಗೆ ವಸತಿ ಕಲ್ಪಿಸಿಕೊಡುವುದಕ್ಕಾಗಿಯೇ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ, ಕರ್ನಾಟಕ ಗೃಹ ಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿಯನ್ನು ಸ್ಥಾಪಿಸಲಾಗಿದೆ.ಪ್ರತ್ಯೇಕವಾದ ವಸತಿ ಇಲಾಖೆಯೂ ಇದೆ. ಇಷ್ಟೆಲ್ಲ ಇದ್ದರೂ ಸೂರು ಕಲ್ಪಿಸಿಕೊಡುವ ಕಾರ್ಯದಲ್ಲಿ ಇನ್ನೂ ಯಶಸ್ವಿಯಾಗಿಲ್ಲ.  ಕರ್ನಾಟಕವನ್ನು `ಗುಡಿಸಲು ಮುಕ್ತ~ ರಾಜ್ಯವನ್ನಾಗಿ ಮಾಡುವ ಸರ್ಕಾರದ ನಿರ್ಧಾರ ಘೋಷಣೆಯಾಗಿಯೇ ಉಳಿದಿದೆ.  2009-10ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 10.50 ಲಕ್ಷ ಗುಡಿಸಲು ವಾಸಿಗಳಿದ್ದಾರೆ.ವಸತಿ ಯೋಜನೆಗಳಲ್ಲಿ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ಬಂದ `ಆಶ್ರಯ~ ಯೋಜನೆಯೇ ಹೆಚ್ಚು ಜನಪ್ರಿಯ. 2010ರವರೆಗೂ ಅಸ್ತಿತ್ವದಲ್ಲಿದ್ದ ಆಶ್ರಯ ಯೋಜನೆಗೆ ಬಿಜೆಪಿ ಸರ್ಕಾರ  `ಬಸವ ವಸತಿ ಯೋಜನೆ~ ಎಂದು ಮರು ನಾಮಕರಣ ಮಾಡಿತು. ರಾಜಕೀಯ ಕಾರಣಗಳಿಗಾಗಿ ಸರ್ಕಾರ ಯೋಜನೆಯ ಹೆಸರು ಬದಲಾವಣೆ ಮಾಡಿರುವುದು ಬಿಟ್ಟರೆ, ಮನೆಗಳ ನಿರ್ಮಾಣ ಕಾರ್ಯದಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. 2010-11ರಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ತಲಾ ನಾಲ್ಕು ಸಾವಿರದಂತೆ ಒಟ್ಟು 8.12 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು.ನಂತರದ ದಿನಗಳಲ್ಲಿ ಕೇಳಿಬಂದ ಬೇಡಿಕೆಗಳ ಹಿನ್ನೆಲೆಯಲ್ಲಿ  ಹೆಚ್ಚುವರಿಯಾಗಿ 4.58 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯೊಂದಿಗೆ ಒಟ್ಟು ಮನೆಗಳ ನಿರ್ಮಾಣ ಸಂಖ್ಯೆಯನ್ನು 12.70 ಲಕ್ಷಕ್ಕೆ ಏರಿಸಲಾಯಿತು.ಆದರೆ ಎರಡು ವರ್ಷಗಳ ಪ್ರಗತಿ ನಿರಾಶಾದಾಯಕವಾಗಿದೆ. ವಸತಿ ಇಲಾಖೆಯ ಮಾಹಿತಿ ಪ್ರಕಾರ ಇದುವರೆಗೆ ಆರು ಲಕ್ಷ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಮಂಜೂರಾತಿ ನೀಡಲಾಗಿದೆ.ಆದರೆ ನಿರ್ಮಾಣವಾಗಿರುವ ಮನೆಗಳ ಸಂಖ್ಯೆ ಬರಿ 67 ಸಾವಿರ! 1.82 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದರೆ, 3.54 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಶುರುವಾಗಿಲ್ಲ. ಒಟ್ಟಾರೆ ಇದುವರೆಗಿನ ಪ್ರಗತಿ ಶೇ 11ರಷ್ಟು ಮಾತ್ರ.  2010-11ರಲ್ಲಿ ಇಟ್ಟುಕೊಂಡಿದ್ದ ಗುರಿ ಮುಟ್ಟಲು ಫಲಾನುಭವಿಗಳ ಆಯ್ಕೆ ಪಟ್ಟಿಯೇ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿಲ್ಲ.ಇನ್ನು ಮನೆಗಳನ್ನು ನಿರ್ಮಿಸುವುದು ಯಾವಾಗ?

ವಿಳಂಬ ಯಾಕೆ?:
ಕಾನೂನು ಪ್ರಕಾರ ವಸತಿ ಯೋಜನೆಯ ಫಲಾನುಭವಿಗಳನ್ನು ಕಡ್ಡಾಯವಾಗಿ ಗ್ರಾಮ ಸಭೆಯಲ್ಲಿಯೇ ಆಯ್ಕೆ ಮಾಡಬೇಕು. ಆದರೆ ಸರ್ಕಾರದ ಈ ಕ್ರಮಕ್ಕೆ ಶಾಸಕರಿಂದ ವಿರೋಧ ವ್ಯಕ್ತವಾದುದರಿಂದ, ಅವರನ್ನು ಸಮಾಧಾನಪಡಿಸುವುದಕ್ಕಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಜಾಗೃತ ಸಮಿತಿಗಳನ್ನು ರಚಿಸಲಾಯಿತು.

 

ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಪಟ್ಟಿ ಸಿದ್ಧವಾದ ನಂತರ ಅದನ್ನು ಅನುಮೋದನೆಗಾಗಿ ಜಾಗೃತ ಸಮಿತಿಗೆ ಕಳುಹಿಸಲಾಗುತ್ತದೆ. ಗ್ರಾಮ ಪಂಚಾಯಿತಿ ಮತ್ತು ಜಾಗೃತ ಸಮಿತಿ ನಡುವೆ ಸಮನ್ವಯತೆ ಇದ್ದರೆ ಈ ಪಟ್ಟಿಗೆ ಬೇಗನೇ ಅನುಮೋದನೆ ಸಿಗುತ್ತದೆ. ಸಮನ್ವಯತೆ ಇಲ್ಲದೆ ಇದ್ದರೆ ಸಂಘರ್ಷ ಶುರುವಾಗುತ್ತದೆ.ಗ್ರಾಮ ಸಭೆಯಿಂದ ಬಂದ ಪಟ್ಟಿಯನ್ನು ಜಾಗೃತ ಸಮಿತಿ ಬದಲಾವಣೆ ಮಾಡಿರುವ, ತಿರಸ್ಕರಿಸಿರುವ ಉದಾಹರಣೆಗಳಿವೆ. ಜಾಗೃತ ಸಮಿತಿಯ ಈ ಕ್ರಮಕ್ಕೆ ಗ್ರಾಮ ಪಂಚಾಯಿತಿಗಳಿಂದ ವಿರೋಧ ವ್ಯಕ್ತವಾದರೆ ಪಟ್ಟಿ ನೆನೆಗುದಿಗೆ ಬೀಳುತ್ತದೆ. ಕೆಲವೆಡೆ ಗ್ರಾಮ ಪಂಚಾಯಿತಿ ಮತ್ತು ಜಾಗೃತ ಸಮಿತಿ ನಡುವೆ ಸಂಘರ್ಷ ಉಂಟಾಗಿ ನ್ಯಾಯಾಲಯದ ಮೊರೆ  ಹೋಗಲಾಗಿದೆ.

 

ಕೋಲಾರ, ಬೀದರ್, ವಿಜಾಪುರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಶಾಸಕರು ಕಾಳಜಿ ವಹಿಸಿ, ಗ್ರಾಮ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಇದಾದ ಕೂಡಲೇ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಬೇಕು.

 

ಆ ರೀತಿ ಮಾಡಿದಾಗ ಮಾತ್ರ ಕಾಲಮಿತಿಯಲ್ಲಿ ಮನೆಗಳನ್ನು ನಿರ್ಮಿಸಲು ಸಾಧ್ಯ ಎಂಬುದು ವಸತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

ರಾಜಕೀಯ ಅಥವಾ ಮತ್ಯಾವುದೋ ಕಾರಣಕ್ಕಾಗಿ ಕೆಲವೊಮ್ಮೆ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಲಾಗುತ್ತದೆ.

 

ಪರಿಶೀಲನೆ ನಂತರ ನಕಲಿ ಫಲಾನುಭವಿ ಎಂಬುದು ಗೊತ್ತಾದರೆ ಹಣ ಬಿಡುಗಡೆ ಮಾಡುವುದಿಲ್ಲ. ಅಂತಹ ಸಂದರ್ಭದಲ್ಲಿ ಮತ್ತೊಬ್ಬ ಫಲಾನುಭವಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ರೀತಿಯ ಕಾರಣಗಳಿಂದಾಗಿ ನಿಗದಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ.ಘಟಕ ವೆಚ್ಚ: ಪ್ರತಿ ಮನೆ ನಿರ್ಮಾಣ ವೆಚ್ಚವನ್ನು ಕಳೆದ ವರ್ಷದವರೆಗೆ 75 ಸಾವಿರ ರೂಪಾಯಿಗೆ ನಿಗದಿಗೊಳಿಸಲಾಗಿತ್ತು. ಈಗ ಅದನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.  ಈ ಪೈಕಿ 75 ಸಾವಿರ ರೂಪಾಯಿಯನ್ನು ಸರ್ಕಾರ ಸಹಾಯಧನದ ರೂಪದಲ್ಲಿ ನೀಡುತ್ತದೆ.ಉಳಿದ 25 ಸಾವಿರ ರೂಪಾಯಿಯನ್ನು ಫಲಾನುಭವಿ ಭರಿಸಬೇಕು. ಫಲಾನುಭವಿಗೆ ಅಷ್ಟೊಂದು ಹಣ ಭರಿಸಲು ಸಾಧ್ಯವಾಗದಿದ್ದರೆ ಬ್ಯಾಂಕಿನಿಂದ 20 ಸಾವಿರ ರೂಪಾಯಿ ಸಾಲ ಪಡೆಯಲು ಸರ್ಕಾರವೇ ಖಾತರಿ ನೀಡುತ್ತದೆ.ತಾಳೆ ಇಲ್ಲದ ಲೆಕ್ಕ:
ರಾಜ್ಯದಲ್ಲಿ 2003-04ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 12 ಲಕ್ಷ ಕುಟುಂಬಗಳು ಹಾಗೂ ನಗರ ಪ್ರದೇಶದಲ್ಲಿ 73 ಸಾವಿರ ಕುಟುಂಬಗಳು ವಸತಿ ಹೀನವಾಗಿದ್ದವು.2000ನೇ ಇಸವಿಯಲ್ಲಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ಅಸ್ತಿತ್ವಕ್ಕೆ ಬಂದ ನಂತರ ಗ್ರಾಮೀಣ ಆಶ್ರಯ ಯೋಜನೆಯಡಿ 14.07 ಲಕ್ಷ ಮನೆಗಳನ್ನು ಹಾಗೂ ನಗರ ಆಶ್ರಯ ಯೋಜನೆಯಡಿ 1.40 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.ಇದಲ್ಲದೆ ಅಂಬೇಡ್ಕರ್ (ಗ್ರಾಮೀಣ) ಯೋಜನೆಯಡಿ 1.50 ಲಕ್ಷ ಹಾಗೂ ನಗರ ಯೋಜನೆಯಡಿ 5.28 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.  ಈ ಅಂಕಿ ಅಂಶಗಳನ್ನು ನೋಡಿದರೆ ಈ ವೇಳೆಗಾಗಲೇ ಎಲ್ಲರಿಗೂ ವಸತಿ ಭಾಗ್ಯ ದೊರೆಯಬೇಕಿತ್ತು. ಆದರೆ ವಾಸ್ತವ ಸ್ಥಿತಿ ಹಾಗಿಲ್ಲ ಎನ್ನುವುದೇ ಯೋಜನೆಯಲ್ಲಿ ಅವ್ಯವಹಾರ ನಡೆದಿರಬಹುದೆಂಬ ಗುಮಾನಿಗೆ ಕಾರಣ.ವರದಾನವಾದ ಜಿಪಿಎಸ್ ತಂತ್ರಜ್ಞಾನ:
ಕಳೆದ ವರ್ಷದವರೆಗೆ ಮನೆಗಳ ನಿರ್ಮಾಣದ ಪ್ರಗತಿ ಬಗ್ಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನೀಡುವ ಭಾವಚಿತ್ರ ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಅನೇಕ ಕಡೆ ಒಂದೇ ರೀತಿಯ ಭಾವಚಿತ್ರ ತೋರಿಸಿ, ಪ್ರಗತಿ ಆಗದಿದ್ದರೂ ಹಣ ಪಡೆದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ರೀತಿಯ ಅವ್ಯವಹಾರಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮವು 2010-11ನೇ ಸಾಲಿನಿಂದ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಜಿಪಿಎಸ್ ಮುಖಾಂತರ ಮನೆಗಳ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸಿ ಫಲಾನುಭವಿಗಳಿಗೆ ನೇರವಾಗಿ ನಾಲ್ಕು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದೆ.ಇದರಿಂದ ಪಾರದರ್ಶಕತೆಯ ಪಾಲನೆಯಾಗುತ್ತಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಿಗಮವು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ, ಅವರಿಗೆ ಕ್ಯಾಮರಾ ನೀಡಿದೆ. ಅವರು ಮನೆ ನಿರ್ಮಾಣದ ಭಾವಚಿತ್ರ ತೆಗೆದು ಜಿಪಿಎಸ್ ತಂತ್ರಜ್ಞಾನದ ಮೂಲಕ ನಿಗಮಕ್ಕೆ ಮಾಹಿತಿ ನೀಡುತ್ತಾರೆ.ಅದನ್ನು ಆಧರಿಸಿ ಹಣ ಬಿಡುಗಡೆ ಮಾಡುವುದರಿಂದ ಅವ್ಯವಹಾರಕ್ಕೆ ಕಡಿವಾಣ ಬಿದ್ದಿದೆ ಎನ್ನುತ್ತಾರೆ ನಿಗಮದ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಮಹದೇವ ಪ್ರಸಾದ್. ನಿಗಮದ ಸಿಬ್ಬಂದಿಯೇ ಇದಕ್ಕೆ ಬೇಕಾದ ಸಾಫ್ಟ್‌ವೇರ್ ಸಿದ್ಧಪಡಿಸುವ ಮೂಲಕ ಸುಮಾರು ಆರು ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ. ಇದಕ್ಕಾಗಿ ನಿಗಮವು ಇ-ಆಡಳಿತ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry