ಮಾತಿನ ಹಂಗು ನಟನೆಯ ಚುಂಗು

7

ಮಾತಿನ ಹಂಗು ನಟನೆಯ ಚುಂಗು

Published:
Updated:
ಮಾತಿನ ಹಂಗು ನಟನೆಯ ಚುಂಗು

ಮಾತೆಂಬುದು ಜೀವನದ ಹಲವು ಪ್ರಶ್ನೆಗಳಿಗೆ ಉತ್ತರ ಮತ್ತು ಕೆಲವು ಉತ್ತರಗಳಿಗೆ ಪ್ರಶ್ನೆಯಂತಿರುತ್ತದೆ. ಕಲೆಯನ್ನು ನಂಬಿಕೊಂಡಿರುವವರಿಗೆಲ್ಲ ಮಾತೇ ಜೀವಾಳ. ನನ್ನ ಮಟ್ಟಿಗೆ ಮಾತೆಂಬುದು ಪ್ರತಿ ಹಂತದಲ್ಲಿ ಜೀವಚೈತನ್ಯ ಹೆಚ್ಚಿಸುವ ವಿಸ್ಮಯ. ಕೇಳುವ ಕಿವಿಗಳಿದ್ದರೆ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಮಾತನಾಡಲು ನನಗಂತೂ ಯಾವ ಅಡ್ಡಿಯಿಲ್ಲ.ಹುಟ್ಟಿ ಬೆಳೆದಿದ್ದು ದಾವಣಗೆರೆಯಾದರೂ, ಹಿರೀಕರ ನಂಟಿರುವುದು ಕಡಲೂರು ಮಂಗಳೂರಿನಲ್ಲಿ. ಪದವಿ ಮುಗಿಸಿದಾಕ್ಷಣ ಕೆಲಸ ಅರಸಿ ಬೆಂಗಳೂರಿಗೆ ಬಂದೆ. ಶಾಲೆ ಹಾಗೂ ಕಾಲೇಜುಗಳಲ್ಲಿಯೇ ನೃತ್ಯದ ಮೂಲಕ ಮಾತನಾಡುತ್ತಿದ್ದರಿಂದ ಸಭಾಕಂಪನವೆಂಬುದು ದೂರ ಉಳಿದಿತ್ತು. ಇದು ಬಣ್ಣಹಚ್ಚಿ ಕ್ಯಾಮೆರಾ ಮುಂದೆ ನಿರೂಪಣೆ ಮಾಡುವ ಅವಕಾಶವನ್ನು ನೀಡಿತ್ತು.ನೃತ್ಯ ಅದರಲ್ಲೂ ಭರತನಾಟ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದರಿಂದ ಅದನ್ನೇ ಮಕ್ಕಳಿಗೆ ಹೇಳಿಕೊಡುವ ಮೂಲಕ ವೃತ್ತಿ ಜೀವನವನ್ನು ಆರಂಭಿಸುವ ಕನಸು ಕಂಡಿದ್ದೆ. ಆದರೆ ಇದೇ ಸಂದರ್ಭದಲ್ಲಿ ಚಿತ್ರರಂಗದಲ್ಲಿರುವ ಹತ್ತಿರದ ಸಂಬಂಧಿಯೊಬ್ಬರು `ನಿರೂಪಣೆ ಮಾಡ್ತೀಯಾ?' ಅಂತ ಕೇಳಿದರು. ಮರುದಿನವೇ ಬಣ್ಣ ಹಚ್ಚಿ ಆಡಿಷನ್ ಕೊಟ್ಟೆ. ಅದರಲ್ಲೂ ಆಯ್ಕೆಯಾದೆ.ಅದು ವಿಭಿನ್ನ ಪರಿಕಲ್ಪನೆ ಹೊಂದಿದ್ದ `ಚೌ ಚೌ ಬಾತ್' ಕಾರ್ಯಕ್ರಮ. ನೃತ್ಯಗಾರ್ತಿಗೆ ನಟನೆ ಸಾಧ್ಯವಿದೆಯೇ ಎಂಬ ಸವಾಲು ರಾತ್ರಿ ಕಂಡ ಕನಸನ್ನು ಅಣಕಿಸಿತ್ತು. ಪ್ರತಿನಿತ್ಯ ವಿವಿಧ ವೇಷ ತೊಟ್ಟು ಏಕಪಾತ್ರಾಭಿನಯ ಮಾಡಿ, ಜನರನ್ನು ನಗಿಸುವ ಕಾರ್ಯಕ್ರಮ ಅದಾಗಿತ್ತು.ನೃತ್ಯದ ಮೂಲಕ ಭಾವಾಭಿವ್ಯಕ್ತಿ ಮಾಡಿ ತಿಳಿದಿದ್ದ ನನಗೆ ನಟನೆಯನ್ನು ಅರಗಿಸಿಕೊಂಡು ನಗಿಸುವ ಯತ್ನ ಮಾಡಬೇಕಾಗಿತ್ತು. ಆದರೆ ಶ್ರದ್ಧೆಯಿಂದ ಕಲಿತರೆ ಕಲಾ ಸರಸ್ವತಿ ಒಲಿಯುತ್ತಾಳೆ ಎಂಬುದಕ್ಕೆ ಆ ಕಾರ್ಯಕ್ರಮದ ಯಶಸ್ಸೇ ಸಾಕ್ಷಿ. ಇದು ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿತು.ಮಾತಿನ ಓಘ, ವಿಶೇಷ ಮ್ಯಾನರಿಸಂ, ದಿನಕ್ಕೊಂದು ವೇಷದ ಮೂಲಕ ನನ್ನೊಳಗೆ ಅಡಗಿದ್ದ ನಟಿ ಕಲಾಪ್ರಂಪಚಕ್ಕೆ ಕಾಲಿಟ್ಟಳು. ಆಗೊಮ್ಮೆ `ಭಿಕ್ಷುಕಿಯ' ವೇಷದಲ್ಲಿದ್ದಾಗ ಚಾನೆಲ್‌ನ ಯಾವ ಸಿಬ್ಬಂದಿಯೂ ಗುರುತು ಹಿಡಿಯದೆ ಭಿಕ್ಷೆ ಹಾಕಲು ಬಂದಿದ್ದು ಇಂದಿಗೂ ನನೆಪಿನಲ್ಲಿ ಉಳಿದಿದೆ. ಅಲ್ಲಿಂದ ಧಾರಾವಾಹಿಗಳತ್ತ ಮುಖ ಮಾಡಿದೆ. `ಎಸ್ಸೆಸ್ಸೆಲ್ಸಿ ನನ್ಮಕ್ಕಳು' ಹಾಸ್ಯ ಧಾರವಾಹಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಗಯ್ಯಾಳಿಯ ಪಾತ್ರಕ್ಕೆ ಹೊಂದುವಂತಿದ್ದ ನನ್ನ ಅಭಿನಯ, ಏಕಾಏಕಿ `ಫೈನಲ್ ಕಟ್' ಪ್ರೊಡಕ್ಷನ್‌ನ `ಪಾರ್ವತಿ ಪರಮೇಶ್ವರ' ಧಾರವಾಹಿಯಲ್ಲಿ ಮುಗ್ಧ ಪಾರ್ವತಿ ಪಾತ್ರವನ್ನು ನಿರ್ವಹಿಸುವ ಅವಕಾಶ ದೊರಕಿಸಿಕೊಟ್ಟಿತು. ಈಗಾಗಲೇ ಪಾರ್ವತಿಯ ಪಾತ್ರದ ನಟಿಯರು ಬದಲಾಗಿದ್ದರಿಂದ ಅವರ ಜಾಗವನ್ನು ತುಂಬುವ ಮತ್ತು ಪಾತ್ರ ಬೇಡುವ ಮ್ಯಾನರಿಸಂ ಅನ್ನು ಅಳವಡಿಸಿಕೊಳ್ಳುವ ಅಗತ್ಯ ಎದ್ದು ಕಂಡಿತು.`ತ್ರೀ ಈಡಿಯಟ್ಸ್', `ಕುರುಕ್ಷೇತ್ರ', `ಪಾಂಡುರಂಗ ವಿಠಲ'ದಂತಹ ಹಾಸ್ಯಧಾರಾವಾಹಿಯಲ್ಲದೆ `ಬೆಳಕು', `ಇದ್ದರೂ ಇರಬೇಕು ನಿನ್ನ ಹಾಂಗ', `ರಂಗೋಲಿ' ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದೆ. ಇಂದಿಗೂ ಹೊರಗೆ ಹೋದರೆ ಜನ ಧ್ವನಿಯಿಂದಲೇ ನನ್ನ ಪಾತ್ರವನ್ನು ಗುರುತಿಸುತ್ತಾರೆ. ಇದು ನನ್ನ ಖುಷಿಯನ್ನು ಇಮ್ಮಡಿಗೊಳಿಸುತ್ತದೆ.ಶಿಲೆಗಳ ನಡುವೆ ಮಾತನಾಡುವ ನನ್ನೂರಿನ ಮೂಡುಬಿದಿರೆಯ ವಾತಾವರಣವೇ ಚಂದ. ಈ ಮಧ್ಯೆ ಅಕ್ಷರ ಪ್ರೀತಿಯನ್ನು ಹಾಗೇ ಉಳಿಕೊಂಡಿದ್ದೇನೆ. ಇಂದಿಗೂ ತ್ರಿವೇಣಿ, ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳು ಇಷ್ಟ. ಆದರೆ ನಿತ್ಯ ವೃತ್ತಪತ್ರಿಕೆಗಳ ಪ್ರತಿ ಸಾಲನ್ನು ತಪ್ಪದೇ ಓದುತ್ತೇನೆ.ಕನಸಿನ ಹುಡುಗ ಕನಸಿನಲ್ಲಿದ್ದರಷ್ಟೆ ಚಂದ. ದಟ್ಟ ಜನರ ನಡುವೆಯೂ ಅವನ ಬೇಟೆ ಸಾಗಿದೆ.ಎಲ್ಲ ಹಳೆಯ ಕನ್ನಡ ಚಿತ್ರಗಳು ನಟಿಯಾಗಿ ನನ್ನನ್ನು ತೀಡುವಲ್ಲಿ ಸಹಕರಿಸಿವೆ. ಯಾರೂ ಶತ್ರುವಲ್ಲ, `ಯಾರೂ ಮಿತ್ರರಲ್ಲ ಎಂಬ ಪಾಠವನ್ನು' ಈ ಬಣ್ಣದ ಬದುಕು ಕಲಿಸಿದೆ. ಬರ್ಗರ್, ಸ್ಯಾಂಡ್‌ವಿಚ್, ಇಡ್ಲಿ ಅಂದರೆ ಎಲ್ಲಿಲ್ಲದ ಪ್ರೀತಿ. ವ್ಯಾನಿಟಿ ಬ್ಯಾಗ್‌ನಲ್ಲಿ ಏನಿಲ್ಲವೆಂದರೂ ತಲೆನೋವಿನ ಮಾತ್ರೆ ಅಂತೂ ಇದ್ದೆ ಇರುತ್ತೆ!. ಎಂತಹುದೇ ಗಾಸಿಪ್ ಬಂದಾಗಲೂ ದಿಟ್ಟತನದಿಂದ ಎದುರಿಸಬೇಕೆಂಬ ಮನೋಸ್ಥೆರ್ಯ ಬಂದಿದೆ.ಇದೇ ಕಲಾಪ್ರಪಂಚಲ್ಲಿದ್ದುಕೊಂಡೇ `ಮಾನಸ ಸರೋವರದ' ಪದ್ಮಾವಾಸಂತಿ ಮಾಡಿದ `ಹುಚ್ಚಿ'ಯ ಪಾತ್ರವನ್ನು ನಿರ್ವಹಿಸಿ, ವೃತ್ತಿ ಬದುಕಿನಲ್ಲೇ ಸೈ ಅನ್ನಿಸಿಕೊಳ್ಳಬೇಕೆಂಬ ತುಡಿತ ಇದೆ.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry