ಮಂಗಳವಾರ, ಫೆಬ್ರವರಿ 18, 2020
28 °C
ಭಾರತದ ಮೀನುಗಾರರ ಸಮಸ್ಯೆಗೆ ಅಲ್ಪಾವಧಿ, ದೀರ್ಘಾವಧಿ ಪರಿಹಾರ

ಮಾತುಕತೆ ಮುಂದುವರಿಕೆ- ಶ್ರೀಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಐಎಎನ್ಎಸ್): ಭಾರತದ ಮೀನುಗಾರರ ಸಮಸ್ಯೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿಯ ಪರಿಹಾರ­ವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತ­ದೊಂದಿಗೆ ಮಾತುಕತೆಯನ್ನು ಮುಂದು­­­­ವ­ರಿ­­ಸಲಾಗುವುದು ಎಂದು ಶ್ರೀಲಂಕಾ ಸೋಮವಾರ ಇಲ್ಲಿ ಹೇಳಿದೆ.

ಮೀನುಗಾರರ ಸಮಸ್ಯೆ ನಿವಾರಿಸುವ ಸಂಬಂಧ ಭಾರತ ಮುಂದಿಟ್ಟಿದ್ದ ಪ್ರಸ್ತಾವ­­ವನ್ನು ಶ್ರೀಲಂಕಾದ ಮೀನು­ಗಾರಿಕೆ ಸಚಿವರು ತಿರಸ್ಕರಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದೂ ವಿದೇಶಾಂಗ ಸಚಿವಾಲಯ ತಿಳಿಸಿರುವು­ದಾಗಿ ‘ಕ್ಸಿನ್ಹುವಾ’ ವರದಿ ಮಾಡಿದೆ.

‘ಉತ್ತರ ಶ್ರೀಲಂಕಾ ಮೀನು­ಗಾರರು ಹಲವು ವರ್ಷಗಳ ಸಂಘರ್ಷದ ನಂತರ ತಮ್ಮ ಬದುಕನ್ನು ಪುನರ್‌­ರೂಪಿಸಿ­ಕೊಂ­ಡಿ­ದ್ದಾರೆ. ಹಾಗಾಗಿ ಅವರ ಬಗ್ಗೆ ವಿಶೇಷ­ ಕಾಳಜಿ ವಹಿಸ­ಬೇ­ಕಾದ ಅಗತ್ಯವಿದೆ’ ಎಂದು ಸಚಿವಾಲಯ ತಿಳಿಸಿದೆ.

ಆಳಸಾಗರ ಮೀನುಗಾರಿಕೆಯನ್ನು  ಗಮನದಲ್ಲಿಟ್ಟುಕೊಂಡರೆ ಮೀನುಗಾರರ ಸಮಸ್ಯೆಯನ್ನು  ಪ್ರಾಕೃತಿಕ ಪರಿಣಾಮದ ದೃಷ್ಟಿಯಿಂದಲೂ ಪರಿಗಣಿಸಬೇಕಾಗಿದೆ. ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಮೀನುಗಾರಿಕೆ ನಡೆಸುವ ಭಾರತೀಯ ಮೀನುಗಾರರ  ಬದುಕಿನ ಹಿತದೃಷ್ಟಿಯ ಕಾರಣಕ್ಕೆ ಮಾನವೀಯತೆಯಿಂದ ನೋಡು­ತ್ತಿದ್ದೇವೆ. ಇದೇ ಕಾರಣದಿಂ­ದಾಗಿ ಈ ಸಮಸ್ಯೆಯನ್ನು ತ್ವರಿತವಾಗಿ ಬಗೆ­ಹರಿಸಲು ಎಲ್ಲಾ ಪ್ರಯತ್ನಗಳು ನಡೆದಿವೆ’ ಎಂದು ಸಚಿವಾಲಯ ಹೇಳಿದೆ.

ಈ ವಿಷಯವಾಗಿ ಉಭಯ ಸರ್ಕಾರ­ಗಳ ನಡುವೆ ಬಹಳ ದಿನಗಳಿಂದಲೂ ವಿವಿಧ ಹಂತದ ಮಾತುಕತೆಗಳು ನಡೆ­ದಿದ್ದು ಚರ್ಚೆ ಮುಂದುವರಿದಿದೆ ಎಂದೂ ಸಚಿವಾಲಯ ತಿಳಿಸಿದೆ. ಶ್ರೀಲಂಕಾದ ಸಮುದ್ರ ಭಾಗದಲ್ಲಿ ವರ್ಷಕ್ಕೆ 83 ದಿನಗಳ ಕಾಲ ಮೀನು­ಗಾರಿಕೆ  ನಡೆಸಲು ತಮ್ಮ ಮೀನುಗಾರರಿಗೆ ಅವಕಾಶ ನೀಡಬೇಕು ಎಂಬ ಭಾರತದ ಮನವಿಗೆ ಈ ಹಿಂದೆ ಒಪ್ಪಿದ್ದ  ಶ್ರೀಲಂಕಾ ನಂತರ ತಿರಸ್ಕರಿಸಿತ್ತು.

ಮೈತ್ರಿಕೂಟಕ್ಕೆ ಮುಂದಾದ 3 ತಮಿಳು ಪಕ್ಷಗಳು
ಕೊಲಂಬೊ (ಪಿಟಿಐ): ತಮಿಳು ಪ್ರತಿ­ನಿಧಿ­ಗಳನ್ನು ಒಳಗೊಂಡ ಮೂರು ರಾಜಕೀಯ ಪಕ್ಷಗಳು ಶ್ರೀಲಂಕಾದಲ್ಲಿ ಹೊಸ ಮೈತ್ರಿ ಕೂಟ ರಚಿಸಲು ಪರಸ್ಪರ  ಕೈಜೋಡಿಸಿವೆ.

ಪ್ರಮುಖ ತಮಿಳು ರಾಷ್ಟ್ರೀಯ ಮೈತ್ರಿಕೂಟವು ದೇಶದ ಪೂರ್ವ ಮತ್ತು ಉತ್ತರ ಭಾಗದ ತಮಿಳು ಸಮು­ದಾ­ಯದ  ಸದಸ್ಯರನ್ನಷ್ಟೇ ಪ್ರತಿನಿಧಿಸುತ್ತದೆ ಎಂದು ಈ ಪಕ್ಷಗಳು ಹೇಳಿವೆ.

ಕೇಂದ್ರ ಗುಡ್ಡಗಾಡು ಪ್ರದೇಶದ ಇತರ ಎರಡು ಪಕ್ಷಗಳು ಮೈತ್ರಿಕೂಟ­ದೊಂದಿಗೆ ಕೈಜೋಡಿಸಲಿವೆ ಎಂದು ಪಶ್ಚಿಮ ತಮಿಳು ಪ್ರಾಂತ್ಯದ ಅಲ್ಪಸಂಖ್ಯಾತ ಪಕ್ಷವಾದ ಡೆಮಾಕ್ರಟಿಕ್‌ ಪೀಪಲ್ಸ್‌ ಫ್ರಂಟ್‌ನ ನಾಯಕ ಮಾನೊ ಗಣೇಶನ್‌ ತಿಳಿಸಿದ್ದಾರೆ.

ತಮಿಳರು ಉತ್ತರ ಮತ್ತು ಪೂರ್ವ ಭಾಗದಲ್ಲಷ್ಟೇ ನೆಲೆಸಿಲ್ಲ. ಪಶ್ಚಿಮ, ವಾಯವ್ಯ, ಕೇಂದ್ರ ಮತ್ತು ಈಶಾನ್ಯ ಪ್ರಾಂತ್ಯಗಳಲ್ಲೂ ತಮಿಳರಿದ್ದಾರೆ. ಪ್ರಮುಖ ತಮಿಳು ರಾಷ್ಟ್ರೀಯ ಮೈತ್ರಿ­ಕೂಟವು (ಟಿಎನ್ಎ) ಪೂರ್ವ ಮತ್ತು ಉತ್ತರ ಪ್ರಾಂತ್ಯದ ತಮಿಳರನ್ನು ಒಳಗೊಂಡಿದೆ.

ಒಟ್ಟು 30.2 ಲಕ್ಷ ತಮಿಳರ ಪೈಕಿ ಅರ್ಧಕ್ಕಿಂತಲೂ ಅಧಿಕ ಮಂದಿ ಉತ್ತರ ಮತ್ತು ಪೂರ್ವ ಪ್ರಾಂತ್ಯದಾಚೆ ನೆಲೆಸಿ­ದ್ದಾರೆ. ಆದ್ದರಿಂದ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಟಿಎನ್ಎಗೆ ಸಾಧ್ಯವಿಲ್ಲ ಎಂದು ಗಣೇಶನ್‌ ವಿಶ್ಲೇಷಿಸಿದ್ದಾರೆ. ಭಾರತ ಮೂಲದ ತಮಿಳರನ್ನು ಒಳಗೊಂಡಿರುವ ನ್ಯಾಷನಲ್‌ ಯೂನಿ­ಯನ್‌ ಆಫ್‌ ವರ್ಕರ್ಸ್‌ ಮತ್ತು ಅಪ್‌ ಕಂಟ್ರಿ ಪೀಪಲ್ಸ್‌ ಫ್ರಂಟ್‌, ಗಣೇಶನ್‌ ಪಕ್ಷ ಸೇರು­ವುದು ಖಚಿತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)