ಭಾನುವಾರ, ಜನವರಿ 26, 2020
28 °C
ಬಸ್ ಕತೆ

ಮಾತುಗಾರ ಮುದುಕ!

–ಸ್ವಾಮಿ ಕೆ.ವಿ. Updated:

ಅಕ್ಷರ ಗಾತ್ರ : | |

ವಾರದ ರಜೆ, ನೆತ್ತಿ ಮೇಲೆ ಮಧ್ಯಾಹ್ನ 12ರ ಬಿಸಿಲು. ಕೆಂಗೇರಿಯಿಂದ ಯಶವಂತಪುರಕ್ಕೆ ಹೋಗಲು ಬಿಎಂಟಿಸಿ ಬಸ್ ಹತ್ತಿದೆ. ಬಸ್‌ನಲ್ಲಿ ಪ್ರಯಾಣಿಕರು ಕಡಿಮೆ ಇದ್ದುದರಿಂದ ಹಿರಿಯ ನಾಗರಿಕರ ಮೀಸಲು ಆಸನದಲ್ಲಿ ಕೂತು, ಆಯಾಸವಿಲ್ಲದ ಪ್ರಯಾಣವೆಂದು ನಿದ್ರೆಗೆ ಜಾರಿದೆ. ಸ್ವಲ್ಪ ಹೊತ್ತಿನಲ್ಲೆ  ದಪ್ಪ ಮೀಸೆಯ ಹಿರಿಯ ನಾಗರಿಕರೊಬ್ಬರು ನನ್ನ ಪಕ್ಕ ಬಂದು ಕುಳಿತರು. ತಮ್ಮ ದಪ್ಪನೆ ಮೀಸೆಯನ್ನು ತಿರುಗಿಸುತ್ತ ತಮ್ಮ ವಯಸ್ಸಿನವರು ಯಾರಾದರೂ ಮಾತಿಗೆ ಸಿಗುವರೇನೊ ಎಂದು ಸುತ್ತಲೂ ದೃಷ್ಟಿ ಹರಿಸಿದರು.ಯಾರೂ ಕಾಣದಿದ್ದರಿಂದ ಪಕ್ಕದ ಸೀಟಿನ ಹೆಂಗಸಿನೊಂದಿಗೆ ಮಾತಿಗಿಳಿದರು. ಅವರ ಊರು, ಮನೆ, ಮಕ್ಕಳು  ಆಸ್ತಿ ಎಲ್ಲವನ್ನು ಪರಸ್ಪರ ತಿಳಿದುಕೊಂಡರು. ಅಷ್ಟರಲ್ಲಿ ಅವರ ಮಾತು ಹುಡುಗಿಯರ ಫ್ಯಾಶನ್‌ನತ್ತ ಹೊರಳಿತು. ಆಗ ತಾತನ ಹಾಸ್ಯದ ಧಾಟಿಗೆ ಬಿಸಿಲ ಬೇಗೆಯೂ ತಣ್ಣನೆ ತಂಗಾಳಿ ತಂದಂತೆ ಬಸ್ಸಿನಲ್ಲಿದ್ದವರು ಮುಗುಳ್ನಕ್ಕರು. ಮಾತಿನ ಮಧ್ಯೆ ಅವರ  ಯೌವನದ ಸಾಹಸ ಕಥನವನ್ನು ಹರಿಬಿಟ್ಟರು. ಇತ್ತ ಸನಿಹದಲ್ಲೇ ಕೂತ ಹುಡುಗಿಯೊಬ್ಬಳು ನೋಟ್ ಬುಕ್ ಮುಚ್ಚಿ ಬೊಗಸೆ ಕಣ್ಣರಳಿಸಿ ಒಮ್ಮೆ ಅವರತ್ತ ನೋಡಿದಳು. ಮುಂದಿನ ಸರದಿ ಆ ಹುಡುಗಿಯದೇ. ಎಂದಿನಂತೆ ಆ ಹುಡುಗಿಯ ಊರು, ಮನೆ, ತಂದೆ ಹೆಸರು ಕೇಳಿದೊಡನೆಯೇ ಅವರ ಮುಖದಲ್ಲಿ ಮಂದಹಾಸ. ‘ನೀನು ನಮ್ಮ ರಾಮೇಗೌಡರ ಮಗಳೇ?’ ನೀನು ನಮಗೆ ಹಳೆ ಸಂಬಂಧ. ಸಂಬಂಧದಲ್ಲಿ ನೀನು ನನಗೆ ಸೊಸೆಯಾಗಬೇಕು ಎಂದರು. ಆ ಹುಡುಗಿ ತಕ್ಷಣ ‘ನಾನೇನಾದರೂ ನಿನಗೆ ಸೊಸೆಯಾದರೆ ಮೊದಲು ನಿನ್ನನ್ನು ಮನೆಯಿಂದ ಹೊರಹಾಕುತ್ತೇನೆ’ ಎಂದಳು. ಆ ಕ್ಷಣ ತಾತನ ಮುಖದ ಮೇಲಿನ ತೇಜಸ್ಸು ಕ್ಷಣ ಮಾತ್ರದಲ್ಲಿ ಇಳಿದುಹೋಯಿತು. ನಗೆಯ ಅಲೆಯಲ್ಲಿ ತೇಲುತ್ತಿದ್ದ ಪ್ರಯಾಣಿಕರು ಎರಡು ನಿಮಿಷ ಮೌನವಾದರು.ಅಷ್ಟರಲ್ಲಿ ಕಾಮಾಕ್ಷಿ ಪಾಳ್ಯ ಬಂದು ಆ ಹುಡುಗಿಯು ಇಳಿಯಲು ಮುಂದಾದಾಗ ಅವಳ ಕಾಲಿನ ಕಾಲುಂಗುರ ಕಂಡ ಅಜ್ಜ ಈಕೆಗಾಗಲೇ ಮದುವೆಯಾಗಿದೆ, ಬದುಕಿತು ಬಡ ಜೀವ  ಎಂದಾಗ ಅವಳ ನಗು,  ಸಹ ಪ್ರಯಾಣಿಕರ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿತು. ತಾತನಿಗೊಂದು ಮುಗುಳುನಗೆಯ ನೋಟವನ್ನು ಬೀರಿ ಇಳಿದು ಹೋದ ಆಕೆಯನ್ನು ತೆರೆದ ಬಾಯಿ ಮುಚ್ಚದಂತೆ ನೋಡುತ್ತ ಕೂತ ನನಗೆ ಯಶವಂತಪುರ ಬಂದದ್ದು ಗೊತ್ತಾಗಲೇ ಇಲ್ಲ. ಆ ಅಜ್ಜ ಯಾವ ನಿಲ್ದಾಣದಲ್ಲಿ ಇಳಿದು ಹೋದರೋ, ಅದೂ ಗೊತ್ತಾಗಲಿಲ್ಲ.

 

ಪ್ರತಿಕ್ರಿಯಿಸಿ (+)