ಗುರುವಾರ , ಫೆಬ್ರವರಿ 25, 2021
25 °C
ಸಕಾರ

ಮಾತು ಬಂಗಾರ ಮೌನ ಬೆಳ್ಳಿ

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

ಮಾತು ಬಂಗಾರ ಮೌನ ಬೆಳ್ಳಿ

‘ಅಪ್ಪಯ್ಯಾ, ನೀನು ಮಾಡಿದ್ದು ಸರಿ. ನಾವು ಇಷ್ಟು ದಿನ ಸುಮ್ನೆ ನೋಡಿಕೊಂಡು ಇರ್ತಾ ಇದ್ವಿ. ಮೊದ್ಲೆ ನಾವೂ ಮಾತನಾಡಿದ್ರೆ ಇವತ್ತು ಆ ಎಳೆ ಹುಡುಗ ಅಳೋ ಸ್ಥಿತಿ ಬರ್ತಾ ಇರಲಿಲ್ಲ...’ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಿ ನಿಧಾನವಾಗಿ ಚಲಿಸುತ್ತಿದ್ದ ಬಸ್‌ನಿಂದ ಇಳಿದ ಹಿರಿಯರೊಬ್ಬರು ಯುವಕನ ಕೈ ಹಿಡಿದು ಇಷ್ಟು ಹೇಳಿದ್ದು ಕಿವಿಗೆ ಬಿತ್ತು.

ಬಸ್‌ನಲ್ಲಿ ಅಂಥದ್ದೇನಾಯಿತು? ಇನ್ನೂ ಸರಿಯಾಗಿ ಮೀಸೆಯೂ ಮೂಡದ ಈ ಹರೆಯದ ಯುವಕ ಅದೆಂಥ ಸಾಹಸ ಮಾಡಿದ್ದಾನು? ಕುತೂಹಲ ತಡೆಯದೇ ಅದೇ ಹಿರಿಯರ ಬೆನ್ನಟ್ಟಿದೆ.ತಮ್ಮನ್ನು ಸೈಯದ್ ಪಾಷ ಎಂದು ಪರಿಚಯಿಸಿಕೊಂಡ ಆ ಹಿರಿಯರು ಹೇಳಿದ್ದಿಷ್ಟು...  ಬೆಳಿಗ್ಗೆ ಹೊತ್ತು ಮೆಜೆಸ್ಟಿಕ್‌ಗೆ ಹೋಗುವ ಬಿಎಂಟಿಸಿ ಬಸ್‌ಗಳಲ್ಲಿ ಒಂದಿಷ್ಟು ಪುಂಡರು ಇರುತ್ತಾರೆ. ಕಾಲೇಜು ಹುಡುಗೀರನ್ನು ಇಂಪ್ರೆಸ್‌ ಮಾಡೋಕೆ ಅಂತ ಬಸ್‌ಗಳಲ್ಲಿ ಬರುವ ಸ್ಕೂಲ್ ಮಕ್ಕಳನ್ನು ಗೋಳು ಹೊಯ್ಕೊಳ್ತಾರೆ. ಆ ಹೆಣ್ಣು ಮಕ್ಕಳೂ ಇಂಥವನ್ನು ನೋಡಿ ನೆಗೆದುನೆಗೆದು ನಗ್ತಾವೆ.ಇವನು ಇದೇ ಮೊದಲ ಸಲ ಆ ಬಸ್‌ನಲ್ಲಿ ಬಂದಿದ್ದು. ಪುಟ್ಟ ಮಕ್ಕಳಿಗೆ ತೀಟೆ ಮಾಡೋದು ಕಂಡು ಸಿಟ್ಟಾಗಿ ಮಾತನಾಡಿದ. ಪುಂಡರು ಇವನ ಮೇಲೆ ಬೀಳಲು ಬಂದಾಗ ಉಳಿದವರು ಬೆಂಬಲಕ್ಕೆ ಬಂದರು.ವಿಷಯ ಅದಲ್ಲಾ ಸ್ವಾಮಿ, ‘ಆ ಹುಡುಗ ನಿನಗೆ ಏನಾಗಬೇಕು?’ ಅಂತ ಪುಂಡನೊಬ್ಬ ಕೇಳಿದ ತಕ್ಷಣ ಈ ಯುವಕ ತಕ್ಷಣ ‘ನನ್ನ ತಮ್ಮ ಕಣಯ್ಯಾ’ ಅಂತ ಹೇಳಿಬಿಟ್ಟ. ನನಗೆ ಇಬ್ಬರು ಮೊಮ್ಮಕ್ಕಳಿದ್ದರೂ ಕಂಡೋರ ಮಕ್ಕಳನ್ನು ನಮ್ಮ ಮಕ್ಕಳು ಅಂತ ಭಾವಿಸೋಕೆ ಆಗಲ್ಲ. ಆ ಹುಡುಗನ್ನ ನೋಡಿ, ಇನ್ನೂ ಮೀಸೆ ಕೂಡ ಬಂದಿಲ್ಲ. ಎಷ್ಟು ಚೆನ್ನಾಗಿ ಎಲ್ಲರೂ ನನ್ನೋರು ಅಂದ್ಕೊಳ್ತಾನೆ. ದೇವರು ದೊಡ್ಡೋನು, ಇದನ್ನು ನೋಡಿ ತುಂಬಾನೆ ಖುಷಿ ಆಯ್ತು. ಇನ್ಮುಂದೆ ಯಾರಾದ್ರೂ ಪುಟ್ಟ ಮಕ್ಕಳಿಗೆ ತೀಟೆ ಮಾಡಿದ್ರೆ ಸುಮ್ಮನಿರಬಾರ್ದು ಅಂದ್ಕೊಂಡಿದ್ದೀನಿ.***

ಬನಶಂಕರಿ ನಿಲ್ದಾಣದಿಂದ ಹೊರಡುವ ಬಿಎಂಟಿಸಿ ಬಸ್‌ ಎಂದಿನಂತೆ ಕಿಕ್ಕಿರಿದಿತ್ತು. ಹೊಸದಾಗಿ ಕೆಲಸ ಸಿಕ್ಕ ಖುಷಿಯಲ್ಲಿದ್ದ, ಬೆಂಗಳೂರಿಗೆ ಹೊಸಬಳಾದ ಕಲ್ಪನಾಳಿಗೆ ಸೀಟ್ ಸಿಕ್ಕಿರಲಿಲ್ಲ. ಹಿಂದಿನ ಬಾಗಿಲಿನಲ್ಲಿ ಜೋಡಿ ಕಂಬಿಗೆ ತೆಕ್ಕೆ ಬಿದ್ದು ಜೋತಾಡುತ್ತಿದ್ದ ಒಂದಿಷ್ಟು ಯುವಕರು ಆಕೆಯನ್ನೇ ನೋಡಿ ಕೆಟ್ಟ ಸನ್ನೆ ಮಾಡುತ್ತಿದ್ದರು, ಅಸಭ್ಯವಾಗಿ ಮಾತನಾಡುತ್ತಿದ್ದುದು ಕಿವಿಗೆ ಬೀಳುತ್ತಿತ್ತು.ಸೈರಣೆ ಕಳೆದುಕೊಂಡ ಆಕೆ ವಿಷಯವನ್ನು ಲೇಡಿ ಕಂಡಕ್ಟರ್ ಗಮನಕ್ಕೆ ತಂದಳು. ‘ನನ್ನ ಬಗ್ಗೆಯೂ ಹಾಗೇ ಮಾತಾಡ್ತಾರೆ ಕಣಮ್ಮಾ. ಇದು ಬೆಂಗಳೂರು ಅನುಸರಿಸಿಕೊಂಡು ಹೋಗಬೇಕು’ ಎಂದು ಕಂಡಕ್ಟರಮ್ಮ ಕಿವಿಯ ಹತ್ತಿರ ಬಂದು ಹಿತೋಪದೇಶ ಮಾಡಿದರು.ಕಂಡಕ್ಟರ್ ಮಾತು ಮುಗಿಸುವ ಮುನ್ನವೇ ಆ ಯುವತಿ, ‘ಏಯ್ ಬಾಯ್ಮುಚ್ರೋ...’ ಎಂದು ಅಪ್ಪಟ ಕೊರಟಗೆರೆಯ ಹಳ್ಳಿ ಭಾಷೆಯಲ್ಲಿ ಏಕ್‌ದಂ ಜೋರಾಗಿ ಬೈಯಲು ಶುರು ಮಾಡಿದಳು. ಸಿದ್ದರಬೆಟ್ಟ ಸಾಲಿನಲ್ಲಿ ಚಿರತೆ– ಕರಡಿ ಎದುರಿಸಿ ದನ–ಕುರಿ ಮೇಯಿಸಿ ರೂಢಿ ಇದ್ದ ಆಕೆಯ ಗಂಟಲು ಅಬ್ಬರಿಸಿದ್ದು ಕೇಳಿಯೇ ಪುಂಡರ ಬಾಯಿ ಕಟ್ಟಿತು.ಅಸಭ್ಯ ಮಾತು, ವರ್ತನೆಯಿಂದ ರೋಸಿ ಹೋಗಿದ್ದ ಹಲವು ಯುವತಿಯರು ಆಕೆಯ ಬೆಂಬಲಕ್ಕೆ ಬಂದರು. ಬಸ್ ಕಾಮಣ್ಣರು ಕೆಳಗಿಳಿದು ಪೇರಿ ಕಿತ್ತರು.***

ಬ್ರಿಗೇಡ್ ಜಂಕ್ಷನ್ ಬಳಿ ಪಾದಚಾರಿಗಳಿಗೆ ರಸ್ತೆ ದಾಟಲು ಸಂಕೇತಿಸಿ ಮನುಷ್ಯನ ಚಿತ್ರವಿರುವ ಹಸಿರು ದೀಪ ಬೆಳಗುತ್ತಿತ್ತು. ಆದರೆ ವಾಹನಗಳ ಓತಪ್ರೋತ ಪ್ರವಾಹಕ್ಕೆ ಮಾತ್ರ ಬ್ರೇಕ್ ಬಿದ್ದಿರಲಿಲ್ಲ. ಚೌಕಿಯಲ್ಲಿದ್ದ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಮಗೆ ಇದು ಸಂಬಂಧವೇ ಇಲ್ಲವೆಂಬಂತೆ ಸಿಗರೇಟ್ ಸೇದುತ್ತಿದ್ದರು.ಕಾವೇರಿ ಎಂಪೋರಿಯಂ ಕಡೆಯಿಂದ ರಸ್ತೆ ದಾಟಲೆಂದು ಬಂದ ಹಿರಿಯರೊಬ್ಬರು ಅವೆಂಜರ್ ಬೈಕ್‌ನಿಂದ ಗುದ್ದಿಸಿಕೊಳ್ಳುವುದರಲ್ಲಿದ್ದರು. ಪಕ್ಕದಲ್ಲಿದ್ದವರು ಹಿಡಿದುಕೊಂಡಿದ್ದರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದರು. ಹಿಟ್ ಅಂಡ್ ರನ್ ಕೇಸ್‌ ಸ್ವಲ್ಪದರಲ್ಲಿ ಮಿಸ್ ಆಗಿತ್ತು.

ರಸ್ತೆ ದಾಟಿದ ಆ ಹಿರಿಯರು ಸಿಗರೇಟ್‌ ಸೇದುತ್ತಿದ್ದ ಪೊಲೀಸಪ್ಪನಿಗೆ ಪಾಠ ಹೇಳಲು ಶುರು ಮಾಡಿದರು. ‘ಯ್ಯೋ ಸುಮ್ನೆ ಹೋಗಯ್ಯಾ ಕಂಡಿದ್ದೀನಿ’ ಎಂದು ಪೊಲೀಸಪ್ಪ ಗಂಟು ಮೋರೆ ಮಾಡಿದ. ಇವರಿಗೂ ಪಿತ್ಥ ನೆತ್ತಿಗೆ ಹತ್ತಿತು.‘ಅಷ್ಟು ಹೊತ್ತಿನಿಂದ ಟ್ರಾಫಿಕ್ ಸಿಗ್ನಲ್‌ಗಾಗಿ ಕಾದಿದ್ದೀನಿ. ಸಿಗ್ನಲ್ ಸಿಕ್ಕ ನಂತರವೇ ರಸ್ತೆ ದಾಟಲು ಬಂದೆ. ರೆಡ್ ಲೈಟ್ ಇದ್ರೂ ಆ ಕಡೆಯಿಂದ ಗಾಡಿಗಳು ಬರ್ತಾನೇ ಇವೆ, ನೀವು ಸುಮ್ನೆ ಇರ್ತೀರಿ ಅಂದ್ರೆ ಏನರ್ಥ. ಮೊದಲೇ ನಾನು ಮುದುಕ. ಮೂಳೆ ಮುರಿದ್ರೆ ಕೂಡೋಕೆ ಎಷ್ಟು ತಿಂಗಳು ಬೇಕು ಗೊತ್ತಿದ್ಯಾ?’ ಎಂದು ಗಂಟಲು ಜೋರು ಮಾಡಿದರು.‘ಇದೇನ್ ಸಾರ್ ಗಲಾಟೆ’ ಅಂತ ಕೇಳಿದವರಿಗೆಲ್ಲಾ ತಾವು ಹಿಟ್‌ ಅಂಡ್ ರನ್‌ನಿಂದ ಪಾರಾದ ಬಗ್ಗೆ ವಿವರಿಸುತ್ತಿದ್ದರು. ಜನ ಗುಂಪುಗೂಡುವುದಕ್ಕೂ– ಪೊಲೀಸಪ್ಪನ ಕರ್ತವ್ಯ ಪ್ರಜ್ಞೆ ಜಾಗೃತವಾಗುವುದಕ್ಕೂ–  ಕೈಲಿದ್ದ ಸಿಗರೇಟ್ ಬೆರಳು ಸುಡುವುದಕ್ಕೂ ಸರಿ ಹೋಗಿತ್ತು.ಪೊಲೀಸಪ್ಪ ಚೌಕಿ ಬಿಟ್ಟು ಹೊರ ಬಂದರು. ಬಿಳಿ ಟೋಪಿಯ ಪೊಲೀಸರನ್ನು ನೋಡಿದ ಮೇಲೆ ಬೈಕ್ ಸವಾರರಿಗೂ ಅಗಾಧ ತಾಳ್ಮೆ ಒತ್ತರಿಸಿತ್ತು. ಕೆಂಪು ದೀಪ ಕಂಡ ತಕ್ಷಣ ಫಕ್ಕನೆ ನಿಂತು ಬಿಡುತ್ತಿದ್ದರು.ಸುಮ್ಮನೆ ಇರಬೇಕೆ?

ಮೇಲೆ ಉಲ್ಲೇಖಿಸಿದ ಮೂರೂ ಉದಾಹರಣೆಗಳು ಅನುದಿನದ ಬದುಕಿನಲ್ಲಿ ‘ಸಾಮಾನ್ಯ ಮನುಷ್ಯ’ರಾಗಿ ನಾವು ಮಾಡಬೇಕಿದ್ದ ಕರ್ತವ್ಯ ನೆನಪಿಸುವುದಿಲ್ಲವೇ? ನನ್ನೊಬ್ಬನಿಂದ ಏನಾದೀತು ಎನ್ನುವ ಅಸಹಾಯಕರಿಗಿಂತ ಕೈಲಾದಷ್ಟನ್ನು ಮಾಡಿಯೇ ತೀರುವೆ ಎಂದು ದನಿ ಎತ್ತಿದವರಿಂದಲೇ ಸಮಾಜಕ್ಕೆ ಒಂದಿಷ್ಟು ಒಳಿತಾಗಿದೆ.

ನಾವು ದನಿಯೆತ್ತಿ ಮಾತನಾಡುವುದರಿಂದ ಹತ್ತು ಜನರಿಗೆ ಒಳಿತಾಗುತ್ತೆ ಎಂದಾಗ ಸುಮ್ಮನಿರುವುದು ಸಹನೆ ಎನಿಸಿಕೊಂಡೀತೆ? ಅದು ಸಭ್ಯತೆಯ ಲಕ್ಷಣವಾದೀತೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.